ಬಂಗಾಳಕ್ಕೆ ಸುವೇಂದು ಅಧಿಕಾರಿ ಮೊದಲ ಬಿಜೆಪಿ ಸಿಎಂ! ದೀದಿ ಆಳ್ವಿಕೆಗೆ ಅಂತ್ಯ, ದಾದಾ ಸಾಮ್ರಾಜ್ಯ ಆರಂಭ!

Kannadaprabha News   | Kannada Prabha
Published : May 09, 2026, 06:09 AM IST
Suvendu adhikari fir bjp CM in west bengal

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದು, ಸುವೇಂದು ಅಧಿಕಾರಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಅವರು ಶನಿವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಮೂಲಕ ದಶಕಗಳ ಕಾಲದ ಮಮತಾ ಬ್ಯಾನರ್ಜಿ ಆಳ್ವಿಕೆಗೆ ತೆರೆಬಿದ್ದಿದೆ.

ಕೋಲ್ಕತಾ (ಮೇ.9) : ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೇರುವ ಐತಿಹಾಸಿಕ ಮುಹೂರ್ತಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸುವೇಂದು ಅಧಿಕಾರಿ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಗಿದೆ.

ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನು ‘ದೀದಿ ಆಳ್ವಿಕೆಯ ಬಳಿಕ ಇನ್ನು ದಾದಾ ಸಾಮ್ರಾಜ್ಯ’ ಎಂದು ಬಣ್ಣಿಸಲಾಗುತ್ತಿದೆ.ಅಧಿಕಾರಿ ಅವರು ಶನಿವಾರ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು, ಘಟಾನುಘಟಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಬಂಗಾಳಕ್ಕೆ ಸಿಎಂ ಆಯ್ಕೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಅಮಿತ್‌ ಶಾ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಸಂಜೆ, ನೂತನ ಶಾಸಕರು ಮತ್ತು ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿ ಆಯ್ಕೆಯನ್ನು ಅಮಿತ್‌ ಶಾ ಘೋಷಿಸಿದರು.‘ಶಾಸಕಾಂಗ ಸಭೆಯಲ್ಲಿ ಸಲ್ಲಿಸಲಾಗಿದ್ದ 8 ಪ್ರಸ್ತಾವನೆಗಳಲ್ಲೂ ಒಂದೇ ಹೆಸರಿತ್ತು (ಸುವೇಂದು ಅಧಿಕಾರಿ). 2ನೇ ಅವಕಾಶ ಕೊಟ್ಟರೂ ಯಾರೂ ಅದನ್ನು ಬದಲಿಸಲು ಬಯಸಲಿಲ್ಲ.

ಹಾಗಾಗಿ ಸುವೇಂದು ಅವರನ್ನೇ ಅಂತಿಮವಾಗಿ ಬಂಗಾಳದ ಸಿಎಂ ಆಗಿದೆ ಆಯ್ಕೆ ಮಾಡಲಾಗಿದೆ’ ಎಂದು ಶಾ ಹೇಳಿದರು.ಅಧಿಕಾರಿ ಆರ್‌ಎಸ್‌ಎಸ್‌ ಹಿನ್ನೆಲೆ ಇಲ್ಲದಿದ್ದರೂ (ಮೂಲತಃ ಟಿಎಂಸಿಯವರು- ನಂತರ ಬಿಜೆಪಿಗೆ ಬಂದಿದ್ದರು) ಆಯ್ಕೆ ಆಗಿರುವುದು ವಿಶೇಷ. ಅಧಿಕಾರಿ ಅವರ ಜತೆ ಸಿಎಂ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ದಿಲೀಪ್‌ ಘೋಷ್‌, ಅಗ್ನಿಮಿತ್ರಾ ಪೌಲ್‌, ರೂಪಾ ಗಂಗೂಲಿ ಇದ್ದರು. ಅವರನ್ನೆಲ್ಲ ಹಿಂದಿಕ್ಕಿ ಸುವೇಂದು ಆಯ್ಕೆಯಾಗಿದ್ದಾರೆ.

ಈ ನಡುವೆ, ಅಗ್ನಿಮಿತ್ರಾ ಹಾಗೂ ಶಾಸಕ ಶಂಕರ್‌ ಘೋಷ್ ಅವರಿಗೆ ಡಿಸಿಎಂ ಹುದ್ದೆ ಒಲಿಯುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ದೀದಿ ಬಳಿಕ ದಾದಾ:

ದಶಕದ ಹಿಂದೆ ರಾಜ್ಯದಲ್ಲಿ ನೆಲೆಯನ್ನೇ ಹೊಂದಿರದ ಬಿಜೆಪಿಯು ಇಂದು ಸರ್ಕಾರ ರಚಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅತ್ತ ಸತತ 15 ವರ್ಷಗಳ ಕಾಲ ಬಂಗಾಳವನ್ನಾಳಿದ್ದ ಟಿಎಂಸಿಯ ಮಮತಾ ಬ್ಯಾನರ್ಜಿ ಅವರನ್ನು ಕೊನೆಗೂ ಸಿಎಂ ಕುರ್ಚಿಯಿಂದ ಕೆಳಗಿಳಿಸಲಾಗಿದೆ. 2021ರ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿ, ಎದುರಾಳಿ ಮಮತಾರನ್ನು ಮಣಿಸಿದ್ದರು. ಈ ಬಾರಿಯೂ ನಂದಿಗ್ರಾಮವನ್ನು ಗೆಲ್ಲುವುದರ ಜತೆಗೆ, ಭವಾನಿಪುರ ಕ್ಷೇತ್ರದಲ್ಲಿ ಮತ್ತೆ ಪ್ರತಿಸ್ಪರ್ಧಿಯಾಗಿದ್ದ ದೀದಿಗೆ ಮತ್ತೊಮ್ಮೆ ಸೋಲಿನ ರುಚಿ ಉಣಿಸಿದವರು ಅಧಿಕಾರಿ.ಭದ್ರತೆ ಬಿಗಿ:ಅಧಿಕಾರಿಯವರ ಶಪಥಕ್ಕೆ ಘಾಟಾನುಘಟಿ ನಾಯಕರ ಆಗಮನವಾಗಲಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮ ನಡೆಯುವ ಮೈದಾನ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಂಚಾರಿ ನಿಯಮಗಳಲ್ಲೂ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದ್ದು, ಬೆಳಗ್ಗೆ 4 ಗಂಟೆಯಿಂದ ರಾತ್ರಿ 8ರ ವರೆಗೆ ಸರಕು ಸಾಗಣೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಒಂದು ಸ್ಥಾನ ಮಹಿಳೆ ಪಾಲು? ಕೊಟ್ಟ ಎಲ್ಲಾ ಭರವಸೆ ಈಡೇರಿಸ್ತೇವೆ

ಬಂಗಾಳದ ಜನ ನಮಗೆ ಐತಿಹಾಸಿಕ ಜನಾದೇಶ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ರಾಜ್ಯದಲ್ಲೀಗ ಭಯವು ಹೋಗಿ ಭರವಸೆ ಬಂದಿದೆ. ನಮ್ಮ ಪ್ರಣಾಳಿಕೆಯಲ್ಲಿದ್ದ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸುತ್ತೇವೆ. ಬಂಗಾಳ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಕೆಲಸ ಮಾಡುವುದು ಅತ್ಯಗತ್ಯ.

- ಸುವೇಂದು ಅಧಿಕಾರ, ಬಂಗಾಳ ನಿಯೋಜಿತ ಸಿಎಂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತೆಲಂಗಾಣ: ಶಾಲಾ ನಿರ್ಮಾಣಕ್ಕಾಗಿ 800 ವರ್ಷಗಳ ಪುರಾತನ ಕಾಕತೀಯ ಶಿವ ದೇಗುಲ ಧ್ವಂಸ, ಭುಗಿಲೆದ್ದ ಆಕ್ರೋಶ!
ಕಾಂಗ್ರೆಸ್ಸಿಂದ ನಮ್ಮನ್ನು ದೂರ ಕೂರಿಸಿ; ಸ್ಪೀಕರ್‌ಗೆ ಡಿಎಂಕೆ ಮನವಿ, ಇಂಡಿ ಕೂಟಕ್ಕೂ ವಿದಾಯ ಸಂಭವ