
ಚೆನ್ನೈ: ಟಿವಿಕೆ ಜತೆ ಕಾಂಗ್ರೆಸ್ ಪಕ್ಷದ ಮೈತ್ರಿ ಬಹುಕಾಲದ ಮಿತ್ರ ಡಿಎಂಕೆಯನ್ನು ಸಿಟ್ಟಿಗೆಬ್ಬಿಸಿದ್ದು ರಾಷ್ಟ್ರದಲ್ಲೇ ಮೈತ್ರಿ ಕಡಿತಕ್ಕೆ ಮುಂದಾದಂತಿದೆ. ಇದರ ಮೊದಲ ಸಂಕೇತವಾಗಿ ಗುರುವಾರ ನಡೆದ ಡಿಎಂಕೆ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇನ್ನೊಂದು ಕಡೆ, ‘ಲೋಕಸಭೆಯಲ್ಲಿ ಕಾಂಗ್ರೆಸ್ ಜತೆ ಇನ್ನು ನಾವು ಕೂರಲ್ಲ. ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿ’ ಎಂದು ಸದನದ ಸ್ಪೀಕರ್‌ಗೆ ಡಿಎಂಕೆ ಸಂಸದೆ ಕನಿಮೋಳಿ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಜತೆ ಡಿಎಂಕೆ ಮೈತ್ರಿ ಕಡಿದುಕೊಂಡರೆ ವಿಪಕ್ಷಗಳ ಇಂಡಿಯಾ ಕೂಟದಿಂದ ಕೂಡ ಅದು ಹೊರಬಂದಂತೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ನಡೆ ಬಗ್ಗೆ ಮಾತನಾಡಿದ ಡಿಎಂಕೆ ನಾಯಕರೊಬ್ಬರು, ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ತೀವ್ರ ಬೇಸರಗೊಂಡಿದ್ದಾರೆ ಎಂದಿದ್ದಾರೆ. ‘ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕಾಗಿ ಅವರನ್ನು ನೀವು (ರಾಹುಲ್ ಗಾಂಧಿ) ದೇಶದ್ರೋಹಿ ಎಂದು ಕರೆದಿದ್ದೀರಿ. ಈಗ ಇದನ್ನು ಪರಿಗಣಿಸಿ. ಮಂಗಳವಾರ ಮಧ್ಯಾಹ್ನ ನೀವು ಎಂ.ಕೆ. ಸ್ಟಾಲಿನ್‌ಗೆ ಕರೆ ಮಾಡಿ, ‘ನಾನು ನಿಮ್ಮೊಂದಿಗಿದ್ದೇನೆ’ ಎಂದು ಹೇಳಿದ್ದಿರಿ. ಮರುದಿನ ಬೆಳಿಗ್ಗೆ, ನೀವು ಮೈತ್ರಿಕೂಟದಿಂದ ಪಕ್ಷಾಂತರಗೊಂಡು ನಿಮ್ಮ ವಿರುದ್ಧ ಸಡ್ಡು ಹೊಡೆದಿದ್ದ ಪಕ್ಷಕ್ಕೆ ಹಾರಿದ್ದೀರಿ. ಇದು ಅವಕಾಶವಾದಿ ಮತ್ತು ರಾಜಕೀಯವಾಗಿ ಅನೈತಿಕ’ ಎಂದರು.
‘ನಾವು ನಿಮಗೆ 28 ಸೀಟು ಬಿಟ್ಟವು. 5ರಲ್ಲಿ ಗೆದ್ದಿರಿ. ನಮ್ಮಿಂದಾಗಿ ಈ ಸೀಟು ಬಂದವು ಎಂಬುದನ್ನೂ ಮರೆತಿದ್ದೀರಿ’ ಎಂದು ಕಿಡಿಕಾರಿದ್ದಾರೆ.
ಈ ನಡುವೆ, ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿರುವ ಸಂಸದೆ ಕನಿಮೋಳಿ, ‘ಲೋಕಸಭೆಯಲ್ಲಿ ಡಿಎಂಕೆಗೆ ಸಂಸದರ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ವಿನಂತಿಸುತ್ತೇನೆ. ಕಾಂಗ್ರೆಸ್ ಜತೆಗಿನ ನಮ್ಮ ಮೈತ್ರಿ ಮುರಿದುಬಿದ್ದಿರುವ ವೇಳೆ ಸದನದಲ್ಲಿ ಅವರೊಂದಿಗೆ ಕೂರುವುದು ಸರಿಯಾಗದು’ ಎಂದಿದ್ದಾರೆ. ಈತನಕ ಲೋಕಸಭೆಯಲ್ಲಿ ಕಾಂಗ್ರೆಸ್ ಜತೆಗೇ ಡಿಎಂಕೆ ಸಂಸದರು ಕೂರುತ್ತಿದ್ದರು.
ಬಹುಮತ ಪಡೆದು ಸರ್ಕಾರ ರಚಿಸಲು ಟಿವಿಕೆಗೆ 10 ಸೀಟುಗಳ ಆವಶ್ಯಕತೆ ಇದೆ. ಹೀಗಾಗಿ 5 ಸೀಟು ಪಡೆದಿರುವ ಕಾಂಗ್ರೆಸ್, ವಿಜಯ್‌ರನ್ನು ಬೆಂಬಲಿಸಿದೆ. ‘ಇದು ನಮಗೆ ಬಗೆದ ದ್ರೋಹ. ಕಾಂಗ್ರೆಸ್‌ಗೆ ಅಷ್ಟು ಸೀಟು ದಕ್ಕಿರುವುದೂ ನಮ್ಮಿಂದಲೇ’ ಎಂದು ಡಿಎಂಕೆ ಇತ್ತೀಚೆಗೆ ಹೇಳಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ