ಬಂಗಾಳದ ಹಿಂಸಾಚಾರಕ್ಕೆ ಅಮಿತ್ ಶಾ ಕಾರಣ ಎಂದ ಮಮತಾ ಬ್ಯಾನರ್ಜಿ!

By Suvarna NewsFirst Published Apr 10, 2021, 5:59 PM IST
Highlights

ಪಶ್ಚಿಮ ಬಂಗಾಳದ 4ನೇ ಹಂತದ ಮತದಾನದ ವೇಳೆ ನಡೆದ ಹಿಂಸಾಚಾರದಲ್ಲಿ ನಾಲ್ವರು ಬಲಿಯಾಗಿದ್ದಾರೆ. ರಾಜಕೀಯ ಮೇಲಾಟದಿಂದ ನಡೆದ ಈ ಘಟನೆ ಇದೀಗ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದೆ. ಬಂಗಾಳ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಸಾ ಕಾರಣ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೋಲ್ಕತಾ(ಏ.10):  ಪಶ್ಚಿಮ ಬಂಗಾಳ ಚುನಾವಣೆ ಇದೀಗ ಆಯೋಗಕ್ಕೆ ಅತ್ಯಂತ ಸವಾಲಿನ ಚುನಾವಣೆಯಾಗಿ ಪರಿಣಮಿಸಿದೆ. 2ನೇ ಹಂತದ ಮತದಾನದ ವೇಳೆ ವ್ಯಾಪಕ ಹಿಂಸಾಚಾರ ನಡೆದಿತ್ತು. ಇದೀಗ ನಾಲ್ಕನೇ ಹಂತದ ಮತದಾನದಲ್ಲೂ ಹಿಂಸಾಚಾರ ನಡೆದಿದ್ದು, ನಾಲ್ವರು ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಘಟನೆ ಇದೀಗ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಸಮರಕ್ಕೂ ಕಾರಣವಾಗಿದೆ. ಇದೀಗ ಈ ಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ಮತದಾನದ ವೇಳೆ ಹಿಂಸಾಚಾರ: ಟಿಎಂಸಿ, ಬಿಜೆಪಿಗರ ಸಂಘರ್ಷ, ಗುಂಡಿನ ದಾಳಿಗೆ 4 ಬಲಿ!.

ಕೂಚ್ ಬಿಹಾರ್ ಜಿಲ್ಲೆಯ ಸಿತಾಲ್‌ಕುಚಿ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಅಮಿತ್ ಶಾ ನೇರ ಹೊಣೆಯಾಗಿದ್ದಾರೆ. ಹೀಗಾಗಿ ತಕ್ಷಣವೇ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಕೇಂದ್ರ ಭದ್ರತಾ ಪಡೆಗಳು ಅಮಿತ್ ಶಾ ಆದೇಶದಂತೆ ಕಾರ್ಯನಿರ್ಹಸುತ್ತದೆ. ಹೀಗಾಗಿ ಭದ್ರತಾ ಪಡೆ ವಿರುದ್ಧ ನಾನು ಮಾತನಾಡುವುದಿಲ್ಲ. ಆದರೆ ಈ ಹಿಂಸಾಚಾರ ಹಾಗೂ ನಾಲ್ವರ ಮರಣಕ್ಕೆ ಕಾರಣವಾಗಿರುವ ಅಮಿತ್ ಶಾ, ಹೊಣೆ ಹೊರಬೇಕು ಎಂದು ಮಮತಾ ಹೇಳಿದ್ದಾರೆ.  ಇಷ್ಟೇ ಅಲ್ಲ ಸಿಬಿಐ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದಾರೆ.

ಪ್ರಶಾಂತ್‌ ಕಿಶೋರ್ ಆಡಿಯೋ ವೈರಲ್‌: ಮೋದಿ ಮೋಡಿ, ಬಿಜೆಪಿ ಎದುರು ಮಂಡಿಯೂರಿತಾ ಟಿಎಂಸಿ?

ಮತದಾನ ವೇಳೆ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಟಾಪಟಿ ನಡೆದಿದೆ. ಉದ್ರಿಕ್ತರ ಗುಂಪೊಂದು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿದೆ. ಈ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟ ಭದ್ರತಾ ಪಡೆ ಕೊನೆಗೆ ಗುಂಡಿನ ಮೂಲಕ ಉತ್ತರ ನೀಡಿದೆ. ಈ ವೇಳೆ ನಾಲ್ವರು ಬಲಿಯಾಗಿದ್ದಾರೆ. ಘಟನೆ ಬೆನ್ನಲ್ಲೇ ಸಿತಾಲ್‌ಕುಚಿಯಲ್ಲಿ ಮತದಾನವನ್ನು ಆಯೋಗ ಮುಂದೂಡಿದೆ. 

ಪಶ್ಚಿ ಬಂಗಾಳದ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 8 ಹಂತದಲ್ಲಿ ಮತದಾನ ನಡೆಯಲಿದೆ. ಇದೀಗ ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಇನ್ನು 4 ಹಂತದ ಮತದಾನ ಬಾಕಿ ಇದೆ. ಮೇ.02ರಂದು ಫಲಿತಾಂಶ ಹೊರಬೀಳಲಿದೆ.

click me!