
ನವದೆಹಲಿ: ಭಾರತದ ವಿರುದ್ಧ ದಾಳಿಗೆ ಶಸ್ತ್ರಾಸ್ತ್ರ, ಸೈನಿಕರನ್ನು ಪೂರೈಸಿ ಭಾರತದಿಂದ ಬಾಯ್ಕಾಟ್ ಅಭಿಯಾನ ಎದುರಿಸುತ್ತಿದ್ದರೂ ಟರ್ಕಿ ಮಾತ್ರ ಪಾಕ್ ಗೆ ಬೆಂಬಲ ಮುಂದುವರೆಸಿದೆ. ಸ್ವತಃ ಟರ್ಕಿ ಪ್ರಧಾನಿ ಎರ್ಡೋಗನ್ ಅವರೇ ಇದನ್ನು ಪುನರುಚ್ಚರಿಸಿದ್ದಾರೆ. ನಮ್ಮ ದೇಶ ಒಳ್ಳೆಯ ಮತ್ತು ಕೆಟ್ಟದ್ದು ಎರಡೂ ಸಂದರ್ಭದಲ್ಲಿಯೂ ಪಾಕಿಸ್ತಾನ ಪರ ನಿಲ್ಲಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್‌ಗೆ ಟರ್ಕಿ ಪ್ರಧಾನಿ ಭರವಸೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎರ್ಡೋಗನ್ ಪಾಕ್ ಜೊತೆಗಿನ ಸ್ನೇಹ ಅಚಲ ಎಂದಿದ್ದಾರೆ. ಹಿಂದಿನಂತೆ ಭವಿಷ್ಯದಲ್ಲಿಯೂ ಒಳ್ಳೆಯ ಸಮಯಗಳಲ್ಲಿ ಮತ್ತು ಕೆಟ್ಟ ಸಂದರ್ಭದಲ್ಲಿಯೂ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಟರ್ಕಿ- ಪಾಕಿಸ್ತಾನವು ಸಹೋದರತ್ವ ನಿಜವಾದ ಸ್ನೇಹದ ಅತ್ಯುತ್ತಮ ಉದಾಹರಣೆ, ನಾವುಪಾಕಿಸ್ತಾನದ , ಶಾಂತಿ ನೆಮ್ಮದಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ. ಈ ಸ್ನೇಹ ಹೀಗೆ ಇರಲಿ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಶೆಹಬಾಜ್ ಷರೀಫ್ ಪ್ರತಿಕ್ರಿಯಿಸಿದ್ದು, ಈ ಸಹೋದರ ಸಂಬಂದಧ ಬಗ್ಗೆ ಹೆಮ್ಮೆಯಿದೆ. ಎರ್ಡೋಗನ್ ಬೆಂಬಲ, ಪಾಕಿಸ್ತಾನದ ಜೊತೆಗೆ ಸ್ನೇಹ ಮನಸ್ಸು ಮುಟ್ಟಿದೆ' ಎಂದಿದ್ದಾರೆ.
ಭೂಕಂಪ ವೇಳೆ ನೆರವು ನೀಡಿದ್ದ ಭಾರತಕ್ಕೇ ಟರ್ಕಿ ಧೋಖಾ
2023ರಲ್ಲಿ ಟರ್ಕಿ ಭೀಕರ ಭೂಕಂಪಕ್ಕೆ ತುತ್ತಾದಾಗ ಅದಕ್ಕೆ ಮೊತ್ತಮೊದಲ ನೆರವು ನೀಡಿದ ದೇಶಗಳ ಪೈಕಿ ಭಾರತ ಕೂಡ ಒಂದು. ಆಪರೇಷನ್ ದೋಸ್ತ್ (ಮಿತ್ರ) ಹೆಸರಲ್ಲಿ ಭಾರತವು ಟರ್ಕಿಗೆ ಸಾಮಗ್ರಿಗಳನ್ನು ರವಾನಿಸಿತ್ತು. ಎನ್‌ಡಿಆರ್‌ಎಫ್ ತಂಡ, ಶ್ವಾನಪಡೆಗಳನ್ನೂ ಕಳುಹಿಸಿಕೊಟ್ಟಿತ್ತು.
ಭಾರತದ ದಾಳಿಯಿಂದ ಸ್ವಲ್ಪದರಲ್ಲೇ ಮಿಸ್ ಆದ ಜೈಷ್ ಬಾಸ್ ಮಸೂದ್
ಇಸ್ಲಾಮಾಬಾದ್: ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂದೂರ್' ದಾಳಿಯಲ್ಲಿ ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕೂದಲೆಳೆಯಲ್ಲಿ ಪಾರಾಗಿದ್ದಾನೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಆಪರೇಷನ್ ಸಿಂಧೂರ್ ಮೂಲಕ ಪಾಕ್ ಉಗ್ರ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದ ಭಾರತ ಬಹಾವಲ್ಪುರದ ಜೈಷ್ ಪ್ರಧಾನ ಕಚೇರಿ ಸೇರಿದಂತೆ 9 ಉಗ್ರ ನೆಲೆಗಳನ್ನು ಉಡೀಸ್ ಮಾಡಿತ್ತು. ಆ ವೇಳೆ ಜೈಷ್ ಕೇಂದ್ರ ಕಚೇರಿಯಲ್ಲಿದ್ದ ಅಜರ್ ಕುಟುಂಬದ 14 ಮಂದಿ ಸಾವನ್ನಪ್ಪಿದ್ದರು. ಆಗ ಅಜರ್ ಅದರ ಪಕ್ಕದ ಕಟ್ಟಡದಲ್ಲಿ ವಾಸವಿದ್ದ. ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಎಂದು ಮೂಲಗಳು ತಿಳಿಸಿವೆ. ಈತ ಉಗ್ರ ಸಂಘಟನೆ ಜೈಷ -ಎ-ಮೊಹಮ್ಮದ್ ಮುಖ್ಯಸ್ಥ. 1994ರಲ್ಲಿ ಭಾರತದಲ್ಲಿ ಬಂಧನಕ್ಕೊಳಗಾಗಿದ್ದ. ಆದರೆ, ಏರ್‌ಇಂಡಿಯಾ ಐಸಿ 814 ವಿಮಾನ ಅಪಹರಣದ ನಂತರ ಆತನನ್ನು ಬಿಡುಗಡೆ ಮಾಡಲಾಗಿತ್ತು.
ಪಾಕ್‌ನ ಪರಮಾಣು ಘಟಕಗಳಲ್ಲಿ ವಿಕಿರಣ ಸೋರಿಕೆ ಇಲ್ಲ: ಐಎಇಎ
ನವದೆಹಲಿ: ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ 'ಆಪರೇಷನ್ ಸಿಂದೂರ್' ಬಳಿಕ ಪಾಕಿಸ್ತಾನದಲ್ಲಿರುವ ಯಾವುದೇ ಪರಮಾಣು ಸ್ಥಾವರದಿಂದ ಯಾವುದೇ ವಿಕಿರಣ ಸೋರಿಕೆ ಅಥವಾ ಬಿಡುಗಡೆಯಾಗಿಲ್ಲ ಎಂದು ಜಾಗತಿಕ ಪರಮಾಣು ಕಾವಲು ಸಂಸ್ಥೆಯಾಗಿರುವ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಸ್ಪಷ್ಟಪಡಿಸಿದೆ.
ಭಾರತೀಯ ವಾಯುಪಡೆ ನಡೆಸಿದ ಕಾರ್ಯಾಚರಣೆ ಬಳಿಕ ಪಾಕಿಸ್ತಾನದ ಕಿರಾನಾ ಬೆಟ್ಟಗಳಲ್ಲಿ ವಿಕಿರಣಗಳು ಸೋರಿಕೆಯಾಗುತ್ತಿವೆ ಎನ್ನುವ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೆ ಐಎಇಎ ಹೇಳಿಕೆ ಬಿಡುಗಡೆ ಮಾಡಿದೆ. 'ಐಎಇಎಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಪಾಕಿಸ್ತಾನದ ಯಾವುದೇ ಪರಮಾಣು ಸ್ಥಾವರದಿಂದ ಯಾವುದೇ ವಿಕಿರಣ ಸೋರಿಕೆ ಅಥವಾ ಬಿಡುಗಡೆಯಾಗಿಲ್ಲ ಎಂದು ಐಎಇಎ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ