*ದುಃಖಿಸದೆ ಪತಿಯ ಬೀಳ್ಕೊಡುವೆ : ಗೀತಿಕಾ ಲಿಡ್ಡರ್
*ಹುತಾತ್ಮ ಬ್ರಿಗೇಡಿಯರ್ ಲಿಡ್ಡರ್ ಪತ್ನಿ ಭಾವುಕ ನುಡಿ
*ಪತಿಯ ಶವಪೆಟ್ಟಿಗೆಗೆ ಮುತ್ತಿಕ್ಕಿದ ಗೀತಿಕಾ
*ಸಕಲ ಸೇನಾ ಗೌರವಗಳೊಂದಿಗೆ ಬ್ರಿ. ಲಿಡ್ಡರ್ ಅಂತ್ಯಕ್ರಿಯೆ
ನವದೆಹಲಿ(ಡಿ. 11): ಸೇನಾ ಹೆಲಿಕಾಪ್ಟರ್ ದುರಂತದಲ್ಲಿ (IAF Chopper Crash) ಸಾವಿಗೀಡಾದ ಬ್ರಿಗೇಡಿಯರ್ ಲಕ್ವಿಂದರ್ ಸಿಂಗ್ ಲಿಡ್ಡರ್ (Brigadier LS Lidder) ಅವರ ಅಂತ್ಯಕ್ರಿಯೆ ದೆಹಲಿಯ ಬ್ರಾರ್ ಚೌಕದಲ್ಲಿರುವ (Brar Square) ಚಿತಾಗಾರದಲ್ಲಿ ಸಕಲ ಸೇನಾಗೌರವದೊಂದಿಗೆ ಶುಕ್ರವಾರ ನಡೆಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ, ಅಜಿತ್ ದೋವಲ್ ಸೇರಿದಂತೆ ಅನೇಕ ಗಣ್ಯರು ಅಂತಿಮನಮನ ಸಲ್ಲಿಸಿದರು.
ಅವರ ಪತ್ನಿ ಗೀತಿಕಾ ಲಿಡ್ಡರ್ (Geetika Lidder) ಶವಪೆಟ್ಟಿಗೆಗೆ ಮುತ್ತನ್ನಿಟ್ಟರು. ನಂತರ ಮಾತನಾಡಿದ ಅವರು ‘ಲಿಡ್ಡರ್ ಅವರಿಗೆ ಖುಷಿಯ ವಿದಾಯ ಹೇಳಬೇಕು. ನಗುತ್ತಲೇ ಅವರನ್ನು ಬೀಳ್ಕೊಡಬೇಕು. ಅವರ ಸಾವಿನಿಂದ ಗೌರವಕ್ಕಿಂತ ಹೆಚ್ಚಾಗಿ ನನಗೆ ದುಃಖವಾಗಿದೆ. ಆದರೆ ಇದು ವಿಧಿ, ಇದರೊಂದಿಗೆ ನಾವು ಬದುಕಬೇಕು’ ಎಂದು ಭಾವುಕರಾಗಿ ಹೇಳಿದರು.
ನಮ್ಮದು ಯೋಧರ ಕುಟುಂಬ. ಧೈರ್ಯ ಇರುವವರು ನಾವು
ಅವರ ಪುತ್ರಿ ಆಶಾನಾ ಲಿಡ್ಡರ್ ಶೀಘ್ರ 17ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ತಂದೆಯ ಬಗ್ಗೆ ಮಾತನಾಡಿದ ಅವರು, ‘17 ವರ್ಷ ತಂದೆಯೊಂದಿಗೆ ಇದ್ದ ನೆನಪನ್ನು ಇಡೀ ಜೀವನಕ್ಕೆ ಕಾಪಿಟ್ಟುಕೊಳ್ಳುತ್ತೇನೆ. ನನಗೆ ಅವರು ಕೇಳಿದ್ದನ್ನು ತಂದುಕೊಡುತ್ತಿದ್ದರು. ಆದರೆ ನಾನು ಈ ಬಗ್ಗೆ ಹೆಚ್ಚು ಮರುಕಪಡದೇ ಮುಂದೆ ಸಾಗುವೆ. ಏಕೆಂದರೆ ನಮ್ಮದು ಯೋಧರ ಕುಟುಂಬ. ಧೈರ್ಯ ಇರುವವರು ನಾವು. ಆದರೆ ಅವರ ಸಾವು ದೇಶಕ್ಕೆ ಬಹುದೊಡ್ಡ ನಷ್ಟ’ ಎಂದು ಹೇಳಿದರು.ಬ್ರಿಗೇಡಿಯರ್ ಹುದ್ದೆಯಿಂದ ಲಿಡ್ಡರ್ ಅವರಿಗೆ ಮೇಜರ್ ಜನರಲ್ ಆಗಿ ಬಡ್ತಿ ದೊರೆತಿತ್ತು. ಆದರೆ ಅಧಿಕಾರ ವಹಿಸಿಕೊಳ್ಳುವ ಮೊದಲೇ ನಡೆದ ದುರಂತದಲ್ಲಿ ಅವರು ಸಾವನ್ನಪ್ಪಿದರು.
ಶಾ, ರಾಹುಲ್, ಕೇಜ್ರಿ, ಖರ್ಗೆ ಸೇರಿದಂತೆ ಹಲವು ಗಣ್ಯರಿಂದ ಅಂತಿಮ ನಮನ!
ನವದೆಹಲಿ: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಜ. ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರಿಗೆ ಕುಟುಂಬದವರೂ ಸೇರಿ ಅನೇಕ ಗಣ್ಯರು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದರು. ಬಿಪಿನ್ ರಾವತ್ ಅವರ ಪುತ್ರಿಯರು ಮತ್ತು ಮೊಮ್ಮಕ್ಕಳು ಸಹ ಅಂತಿಮ ನಮನ ಸಲ್ಲಿಸಿದರು.
Bipin Rawat Funeral: ಒಂದೇ ಚಿತೆಯಲ್ಲಿಟ್ಟು ರಾವತ್ ದಂಪತಿ ಅಂತ್ಯಸಂಸ್ಕಾರ: ಚಿತೆಗೆ ಪುತ್ರಿಯರಿಂದ ಅಗ್ನಿಸ್ಪರ್ಶ
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬ್ರಿಟಿಷ್ ರಾಯಭಾರಿ ಅಲೆಕ್ಸಾಂಡರ್ ಎಲ್ಲೀಸ್, ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ, ಡಿಎಂಕೆ ನಾಯಕಿ ಕನಿಮೋಳಿ, ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಮುಂತಾದ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ರಾವತ್ ನಿವಾಸದಿಂದ ಚಿತಾಗಾರದವರೆಗೆ ಮೆರವಣಿಗೆ
ಜ. ಬಿಪಿನ್ ರಾವತ್ (General Bipin Rawat) ಅವರ ನಿವಾಸದಿಂದ ಬ್ರಾರ್ ಚೌಕದಲ್ಲಿರುವ (Brar Square) ಚಿತಾಗಾರದವರೆಗೆ ನಡೆದ ಅಂತಿಮ ಯಾತ್ರೆಯುದ್ದಕ್ಕೂ ಅಮರವಾಗಿ, ಭಾರತ್ ಮಾತಾ ಕಿ ಜೈ ಘೋಷಣೆಗಳೂ ಮೊಳಗುತ್ತಿದ್ದವು. ರಾಷ್ಟ್ರೀಯ ಧ್ವಜ ಹಿಡಿದ (National Flag) ಜನ ರಾವತ್ ಅವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ವಾಹನದ ಹಿಂದೆ ಓಡಿದರು. ರಾಷ್ಟ್ರಧ್ವಜ ಸುತ್ತಿದ್ದ ಅವರ ಪಾರ್ಥಿವ ಶರೀರವನ್ನು ಹೂಗಳಿಂದ ಅಲಂಕರಿಸಿ ವಾಹನದಲ್ಲಿ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು. ದಾರಿಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಮಡಿದ ಮೊದಲ ಸಿಡಿಎಸ್ ಅವರಿಗೆ ಹೂವು ಅರ್ಪಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.
IAF Chopper Crash: ಸಾವು ಸಂಭ್ರಮಿಸಿ ಬೇಕಾಬಿಟ್ಟಿ ಪೋಸ್ಟ್ ಹಾಕಿದವರಿಗೆ ಸಿಎಂ ಖಡಕ್ ಎಚ್ಚರಿಕೆ
ಎಲ್ಲೆಡೆಯೂ ಭಾರತ್ ಮಾತಾಕಿ ಜೈ, ಜನರಲ್ ರಾವತ್ ಅಮರ್ ರಹೇ, ಸೂರ್ಯ ಇರುವವರೆಗೂ ರಾವತ್ ಅವರ ಹೆಸರು ಅಮರವಾಗಿರುತ್ತದೆ ಎಂಬ ಘೋಷಣೆಗಳು ಮೊಳಗುತ್ತಿದ್ದವು. ರಾಷ್ಟ್ರಧ್ವಜ ಹಿಡಿದ ಜನರು ಶವಯಾತ್ರೆ ವಾಹನದ ಜತೆಜತೆಗೇ ಓಡುತ್ತಿದ್ದರು. ಒಂದು ನಾಯಿ ಕೂಡ ಶವಯಾತ್ರೆ ವಾಹನದ ಜತೆಗೇ ಸಾಹಿ ಗಮನ ಸೆಳೆಯಿತು.ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾನೂನು ಸಚಿವ ಕಿರಣ್ ರಿಜಿಜು, ಫ್ರಾನ್ಸ್ ರಾಯಭಾರಿ ಇಮ್ಯಾನುಯಲ್ ಲೆನಿನ್, ಬ್ರಿಟನ್ ರಾಯಭಾರಿ ಅಲೆಕ್ಸ್ ಎಲಿಸ್ ಸೇರಿದಂತೆ ಹಲವು ಗಣ್ಯರು ಹಾಗೂ 800 ಸೈನಿಕರು ಈ ಅಂತಿಮಯಾತ್ರೆಯಲ್ಲಿ ಭಾಗವಹಿಸಿದ್ದರು.