ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದ 58 ಮಂದಿಗೆ ಯಾವುದೇ ಕಾನೂನುಬದ್ಧ ವಾರಸುದಾರರಿಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ. ಈ ದುರಂತದಲ್ಲಿ ಮೃತಪಟ್ಟವರ ಅವಲಂಬಿತರಿಗೆ ಸರ್ಕಾರದ ಪರಿಹಾರವನ್ನು ಪಡೆಯಲು ಯಾರೂ ಮುಂದೆ ಬಂದಿಲ್ಲ. ಸರ್ಕಾರವು ಈಗ ಅಪ್ರಾಪ್ತ ಅವಲಂಬಿತರಿಗೆ ಪರಿಹಾರವನ್ನು ಹಸ್ತಾಂತರಿಸುವ ಮಾನದಂಡವನ್ನು ನಿರ್ಧರಿಸಬೇಕಾಗಿದೆ.
ವಯನಾಡ್ (ಆ.29): ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲಾ ಗ್ರಾಮಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ ಬೀಕರ ಭೂಕುಸಿತದಲ್ಲಿ ಹಲವಾರು ಕುಟುಂಬಗಳು ಸಂಪೂರ್ಣವಾಗಿ ನಿರ್ವಂಶವಾಗಿದೆ. ಯಾವುದೇ ಕಾನೂನು ವಾರಸುದಾರರು ಕೂಡ ಈ ಕುಟುಂಬಕ್ಕೆ ಇಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ. ಅಂದಾಜು 58 ಮೃತ ವ್ಯಕ್ತಿಗಳ ಇಡೀ ವಂಶವನ್ನು ವಯನಾಡ್‌ನ ಭೂಕುಸಿತ ನಿರ್ವಂಶ ಮಾಡಿದೆ. ಭೂಕುಸಿತದಲ್ಲಿ ಸಾವು ಕಂಡ ಕುಟುಂಬದವರ ಅವಲಂಬಿತರಿಗೆ ಸರ್ಕಾರ ಘೋಷಣೆ ಮಾಡಿರುವ ಆರ್ಥಿಕ ನೆರವನ್ನು ಪಡೆಯಲು ಈ 58 ವ್ಯಕ್ತಿಗಳ ಕುಟುಂಬಗಳ ಯಾರೂ ಕೂಡ ಮುಂದೆ ಬಂದಿಲ್ಲ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಮೃತರ ಹತ್ತಿರದ ಸಂಬಂಧಿ ರಾಜ್ಯ ಸರ್ಕಾರದಿಂದ 6 ಲಕ್ಷ ಮತ್ತು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಆದಾಗ್ಯೂ, ದೃಢಪಡಿಸಿದ 270 ಸಾವುಗಳಲ್ಲಿ, 58 ಮೃತ ವ್ಯಕ್ತಿಗೆ ಯಾವುದೇ ಕಾನೂನು ವಾರಸುದಾರರು ಉಳಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಸಂತ್ರಸ್ತರ ಅವಲಂಬಿತರಲ್ಲಿ ಮೂವರು ಅಪ್ರಾಪ್ತರಾಗಿದ್ದಾರೆ. ಈ ಅಪ್ರಾಪ್ತರಿಗೆ ಪರಿಹಾರವನ್ನು ಹಸ್ತಾಂತರಿಸುವ ಮಾನದಂಡವನ್ನು ನಿರ್ಧರಿಸುವ ಹೊಸ ಆದೇಶವನ್ನು ಸರ್ಕಾರವು ಈಗ ಹೊರಡಿಸಬೇಕಾಗಿದೆ.
ಈ ಎರಡು ಗ್ರಾಮಗಳನ್ನು ನಾಶಪಡಿಸಿದ ಭೀಕರ ಭೂಕುಸಿತ ಸಂಭವಿಸಿ ಒಂದು ತಿಂಗಳಾಗಿದೆ. ಇಲ್ಲಿಯವರೆಗೆ, ದುರಂತದಲ್ಲಿ ಸಾವನ್ನಪ್ಪಿದ 93 ವ್ಯಕ್ತಿಗಳ ಅವಲಂಬಿತರಿಗೆ ಸರ್ಕಾರ ಪರಿಹಾರವನ್ನು ನೀಡಿದೆ. ಆದಾಗ್ಯೂ, 12 ಪ್ರಕರಣಗಳಲ್ಲಿ ಹತ್ತಿರದ ಸಂಬಂಧಿಯನ್ನು ನಿರ್ಧರಿಸುವಲ್ಲಿ ವಿವಾದಗಳು ಎದುರಾಗಿದೆ. ಹೆಚ್ಚುವರಿಯಾಗಿ, ಇತರ ರಾಜ್ಯಗಳ ಏಳು ಸಂತ್ರಸ್ತರ ಅವಲಂಬಿತರಿಗೆ ಸರ್ಕಾರ ಇನ್ನೂ ಪರಿಹಾರವನ್ನು ವಿತರಿಸಬೇಕಾಗಿದೆ.
ಕ್ಲೈಮ್ ಪ್ರಮಾಣಪತ್ರವನ್ನು ಪಡೆಯುವ ಪ್ರಕ್ರಿಯೆಯು ದೀರ್ಘವಾಗಿರುತ್ತದೆ, ಕನಿಷ್ಠ ಮೂರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಅಧಿಕಾರಿಗಳು ಇಬ್ಬರು ನೆರೆಹೊರೆಯವರು ಮತ್ತು ಸಂಬಂಧಪಟ್ಟ ವಾರ್ಡ್ ಸದಸ್ಯರಿಂದ ಹೇಳಿಕೆಗಳನ್ನು ಸಂಗ್ರಹಿಸಬೇಕು. ಕಾನೂನು ವಾರಸುದಾರರು ಬೇರೆ ಗ್ರಾಮದಲ್ಲಿ ವಾಸವಿದ್ದರೆ ಗ್ರಾಮಾಧಿಕಾರಿಯಿಂದ ವಿಚಾರಣೆ ನಡೆಸಬೇಕು. ವರದಿ ಸಿದ್ಧಪಡಿಸಿದ ನಂತರ ಅದನ್ನು ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟಿಸಬೇಕು. 30 ದಿನಗಳಲ್ಲಿ ಯಾವುದೇ ವಿವಾದಗಳಿಲ್ಲದಿದ್ದರೆ, ಮರುದಿನ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದರ ನಡುವೆ ಈ ಪ್ರಕ್ರಿಯೆಯ ಸಂಕೀರ್ಣತೆಗಳನ್ನು ತಪ್ಪಿಸಲು ವಿಶೇಷ ವಿನಾಯಿತಿಗಾಗಿ ಹೆಚ್ಚುತ್ತಿರುವ ಬೇಡಿಕೆಯಿದೆ.
Wayanad landslide: ಸಂತ್ರಸ್ತರ ಪರಿಹಾರ ಹಣವನ್ನು EMI ರೀತಿಯಲ್ಲಿ ಸಾಲಕ್ಕೆ ಜಮೆ ಮಾಡಿದ ಬ್ಯಾಂಕ್!
ಡಿಎನ್‌ಎ ಪರೀಕ್ಷೆ ಮೂಲಕ 60 ಜನರ ಗುರುತಿಸುವಿಕೆ: ಮುಂಡಕ್ಕೈ-ಚೂರಲ್ಮಲಾ ಭೂಕುಸಿತದಲ್ಲಿ ಸಾವನ್ನಪ್ಪಿದ ಸಂತ್ರಸ್ತರಲ್ಲಿ 60 ಮಂದಿಯನ್ನು ಕಣ್ಣೂರಿನ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ ಡಿಎನ್‌ಎ ಪರೀಕ್ಷೆಯ ಮೂಲಕ ಗುರುತಿಸಲಾಗಿದೆ. ಕೇರಳ ಪೊಲೀಸ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಯೋಗಾಲಯಕ್ಕೆ ಅಪರಿಚಿತ ದೇಹಗಳಿಂದ ಒಟ್ಟು 421 ಡಿಎನ್‌ಎ ಮಾದರಿಗಳನ್ನು ತರಲಾಯಿತು. ಅಧಿಕಾರಿಗಳು 100 ಕ್ಕೂ ಹೆಚ್ಚು ಸಂಬಂಧಿಕರ ರಕ್ತದ ಮಾದರಿಗಳನ್ನು ಸಂಗ್ರಹಿಸಿದರು. ಇದಲ್ಲದೆ, 117 ಅಪರಿಚಿತ ದೇಹಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ತರಲಾಯಿತು. ಪ್ರಯೋಗಾಲಯದ ಜಂಟಿ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ಹಗಲಿರುಳು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.