ರಕ್ಷಣಾ ತಂಡದ ಜೊತೆ 10 ಕಿ.ಮೀ ಸಾಗಿದ ನಾಯಿಯೊಂದು ತನಗೆ ಅನ್ನ ಹಾಕಿ ಸಾಕಿದ ಒಡತಿಯ ಮೃತದೇಹ ತೋರಿಸಿಕೊಟ್ಟಿದೆ. ಆರಂಭದಲ್ಲಿ ನಾಯಿ ಸೂಚನೆ ನಿರ್ಲಕ್ಷಿಸಿದ್ದ ರಕ್ಷಣಾ ತಂಡ ಬಳಿಕ ನಾಯಿ ಕಾಲಿನಿಂದ ಕೆರೆಯುತ್ತಿದ್ದ ಜಾಗದಲ್ಲಿ ಶೋಧ ಕಾರ್ಯ ನಡೆಸಿದಾಗ ತುಂಡಾದ ಮೃತದೇಹ ಪತ್ತೆಯಾಗಿದೆ.
ವಯನಾಡು(ಆ.05) ವಯನಾಡು ದುರಂತದಲ್ಲಿ ನಾಪತ್ತೆಯಾದವರ ಪತ್ತೆಗಾಗಿ ಶೋಧಕಾರ್ಯ 7ನೇ ದಿನವೂ ಮುಂದುವರಿದಿತ್ತು. ಈ ವೇಳೆ ಹಲವು ಘಟನೆಗಳು ಮನ ಕಲುಕುವಂತಿದೆ. ಇತ್ತೀಚೆಗೆ ನಾಯಿ ತನ್ನ ಒಡತಿ ಮಡಿಲು ಸೇರಿದ ಘಟನೆ ನಡೆದಿತ್ತು. ಇದೀಗ ನಾಯಿಯೊಂದು ತನಗೆ ಅನ್ನ ಹಾಕಿ ಸಾಕಿದ ಒಡತಿ ಮಣ್ಣಿನಡಿ ಹೂತು ಹೋಗಿರುವ ಮಾಹಿತಿಯನ್ನು ರಕ್ಷಣಾ ತಂಡಕ್ಕೆ ನೀಡಿದ ವಿಶೇಷ ಘಟನೆ ನಡೆದಿದೆ. ರಕ್ಷಣಾ ತಂಡದ ಜೊತೆಗೆ ಸಾಗುತ್ತಿದ್ದ ಈ ನಾಯಿ 10 ಕಿ.ಮೀ ದೂರದಲ್ಲಿ ಕಾಲಿನಿಂದ ನೆಲ ಕೆರೆಯಲು ಆರಂಭಿಸಿದೆ. ಈ ವೇಳೆ ರಕ್ಷಣಾ ತಂಡ ಈ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದಾಗ ಮಹಿಳೆಯ ಕೈ ಪತ್ತೆಯಾಗಿದೆ. ಬಳಿಕ ತುಂಡಾದ ಮೃತದೇಹ ಪತ್ತೆಯಾಗಿದೆ.
ವಯನಾಡಿನ ಮುಂಡಕೈ, ಮೆಪ್ಪಾಡಿ ಸೇರಿದಂತೆ ದುರಂತ ಸಂಭವಿಸಿದ ಸ್ಥಳಗಲ್ಲಿ ಹಲವು ಮನೆಗಳ ನಾಯಿಗಳು ಅನಾಥವಾಗಿ ತಿರುಗಾಡುತ್ತಿದೆ. ಈ ನಾಯಿಗಳಿಗೆ ಸ್ವಯಂ ಸೇವಕರು ಆಹಾರ ಒದಗಿಸುತ್ತಿದ್ದಾರೆ. ತನ್ನ ಮಾಲೀಕರಿಗಾಗಿ ನಾಯಿಯೂ ಹುಡುಕಾಟ ನಡೆಸುತ್ತಿದೆ. 7ನೇ ದಿನ ಇದೇ ರೀತಿ ನಾಯಿಯ ಹುಡುಕಾಟದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ವಯನಾಡಿನಲ್ಲಿ 6 ದಿನಗಳ ಬಳಿಕ ಮಾಲೀಕನ ಪತ್ತೆ ಹಚ್ಚಿದ ನಾಯಿ, ಹೃದಯಸ್ಪರ್ಶಿ ವಿಡಿಯೋ!
ಚೆಲಿಯಾರ್ ನದಿ ಸಮೀಪ ಅಗ್ನಿಶಾಮಕ ದಳ ನಾಪತ್ತೆಯಾದವರಿಗೆ ಶೋಧ ಕಾರ್ಯ ನಡೆಸುತ್ತಿತ್ತು. ಕಳೆದ ಕೆಲ ದಿನಗಳಿಂದ ಈ ನಾಯಿ ಇದೇ ಪ್ರದೇಶದಲ್ಲಿ ತಿರುಗಾಡುತ್ತಿತ್ತು. ಅಗ್ನಿಶಾಮಕ ದಳ ಚೆಲಿಯಾರ್ ನದಿ ಮತ್ತೊಂದು ಭಾಗದಲ್ಲಿ ಶೋಧಕಾರ್ಯಕ್ಕೆ ಮುಂದಾಗಿತ್ತು. ಈ ವೇಳೆ ಈ ನಾಯಿ ಕೂಡ ಅಗ್ನಿಶಾಮಕ ದಳದ ಜೊತೆ ತೆರಳಿದೆ. ಚಿಲಿಯಾರ್ ನದಿಯನ್ನು ಅಗ್ನಿಶಾಮಕ ದಳ ದಾರದ ಸಹಾಯದಿಂದ ದಾಟಿದೆ. ಈ ನಾಯಿ ಈಜಿಕೊಂಡು ದಾಟಿ ರಕ್ಷಣಾ ತಂಡದ ಜೊತೆ ಸಾಗಿದೆ. ಬರೋಬ್ಬರಿ 10 ಕಿಲೋಮೀಟರ್ ದೂರ ಈ ನಾಯಿ ರಕ್ಷಣಾ ತಂಡದ ಜೊತೆ ಹೆಜ್ಜೆ ಹಾಕಿದೆ.
ಈ ಘಟನೆ ಕುರಿತು ಅಗ್ನಿಶಾಮಕ ದಳ ಸಿಬ್ಬಂದಿ ವಿವರಿಸಿದ್ದಾರೆ. ಇಂದು ಬೆಳಗ್ಗೆಯಿಂದಲೇ ನಾಯಿಯೊಂದು ನಮ್ಮ ಜೊತೆಗಿತ್ತು. ನಾವು ಎಲ್ಲೋ ಹೋದರು ನಾಯಿ ನಮ್ಮ ಜೊತೆಗೆ ಇರುತ್ತಿತ್ತು. ಭಾರಿ ಶೋಧಕಾರ್ಯದ ಬಳಿಕ ನಾವು ಕೆಲ ಹೊತ್ತು ವಿರಾಮಕ್ಕೆ ಜಾರಿದ್ದೆವು. ಈ ವೇಳೆ ನಮ್ಮ ಜೊತೆಗಿದ್ದ ನಾಯಿಗೆ ನಾವು ತಿನ್ನುತ್ತಿದ್ದ ಬಿಸ್ಕೆಟ್ ಹಾಕಿದ್ದೆ. ಈ ಬಿಸ್ಕೆಟ್ ತಿಂದ ನಾಯಿ ನನ್ನ ಜೊತೆ ಆತ್ಮೀಯವಾಯಿತು.
ಬಳಿಕ ನಾವು ಶೋಧ ಕಾರ್ಯಕ್ಕಾಗಿ ನದಿಯಿಂದ ಕೆಲ ದೂರದ ಪ್ರದೇಶಕ್ಕೆ ತೆರಿದೆವು. ಈ ವೇಳೆ ನಾಯಿ ಒಂದು ಜಾಗದಲ್ಲಿ ನಿಂತು ಬೊಗಳಲು ಆರಂಭಿಸಿತು. ನಾವು ಹೆಚ್ಚಿನ ಗಮನ ನೀಡಲಿಲ್ಲ. ಆದರೆ ನಾಯಿ ಪದೇ ಪದೇ ಬೊಗಳಲು ಆರಂಭಿಸಿತು. ನಾವೆಲ್ಲರೂ ಇತರ ಜಾಗದಲ್ಲಿ ಶೋಧಕಾರ್ಯ ನಡೆಸುತ್ತಿದ್ದೇವು. ಹಲವು ಬಾರಿ ಬೊಗಳಿದ ನಾಯಿ ಕಾಲು ಕೈಗಳಿಂದ ನೆಲ ಕೊರೆಯಲು ಆರಂಭಿಸಿತು.
ನಾಯಿಯ ನಡೆ ನೋಡಿದ ನಮ್ಮ ತಂಡ, ಈ ನಾಯಿ ಏನೋ ಸೂಚಿಸುತ್ತಿದೆ. ಈ ಸ್ಥಳ ಕೆರೆಯುತ್ತಿದೆ. ಹೀಗಾಗಿ ಇಲ್ಲೊಮ್ಮೆ ಶೋಧ ಕಾರ್ಯ ಮಾಡಿ ನೋಡೋಣ ಎಂದು ನಿರ್ಧರಿಸಿದೆವು. ಬಳಿಕ ನಾಯಿ ಕೆರೆದ ಜಾಗದಲ್ಲಿ ಶೋಧಕಾರ್ಯ ಆರಂಭಿಸಿದಾಗ ಮೊದಲು ಮಹಿಳೆಯ ಕೈಯೊಂದು ಪತ್ತೆಯಾಯಿತು. ಅತ್ತ ನಾಯಿ ಕುತೂಹಲದಿಂದ ನಮ್ಮ ಕಾರ್ಯಾಚರಣೆ ನೋಡುತ್ತಿತ್ತು. ಕೆಲವೇ ಹೊತ್ತಲ್ಲಿ ಮಹಿಳೆಯ ತಲೆ ಪತ್ತೆಯಾಗಿತ್ತು. ಮತ್ತೆ ಶೋಧಕಾರ್ಯ ನಡೆಸಿದಾಗ ಮಹಿಳೆಯ ದೇಹ ಪತ್ತೆಯಾಗಿತ್ತು.
ವಯನಾಡು ದುರಂತದಲ್ಲಿ ಎಲ್ಲರನ್ನೂ ಕಳೆದುಕೊಂಡು ಏಕಾಂಗಿಯಾದ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ!
ಇದು ನಾಯಿಗೆ ಅನ್ನ ಹಾಕಿದ ಒಡತಿ ಆಗಿರುವ ಸಾಧ್ಯತೆ ಇದೆ. ನಾಯಿಯ ಸೂಚನೆಯಿಂದ ಮಹಿಳೆ ಮೃತದೇಹ ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಅಗ್ನಿಶಾಮಕ ದಳದ ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.