ನನ್ನ ಗರ್ಭಿಣಿ ಮಾಡುವ ಗಂಡು ಬೇಕು: ಜಾಹೀರಾತು ನಂಬಿ ವೀರ್ಯದಾನದ ಆಸೆಯಲ್ಲಿದ್ದವನಿಗೆ ಆಘಾತ: 11 ಲಕ್ಷ ಖೋತಾ

Published : Oct 31, 2025, 11:23 AM IST
Pune Man lost 11 Lakh For Pregnent Job Scam

ಸಾರಾಂಶ

Pregnant Job Scam: ನನಗೆ ತಾಯ್ತನದ ಸುಖ ನೀಡುವ ನನ್ನ ಗರ್ಭಿಣಿ ಮಾಡುವ ಪುರುಷ ಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿನ ನಕಲಿ  ಜಾಹೀರಾತನ್ನು ನಂಬಿ ಮೋಸದ ಜಾಲಕ್ಕೆ ಬಲಿಯಾದ ವ್ಯಕ್ತಿಯೊಬ್ಬರು ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ ಬಲೆಗೆ ಕೆಡವುತ್ತಿದ್ದ ಖದೀಮರು

ಪುಣೆ: ಪ್ರತಿ ಕೆಲಸಕ್ಕೂ ಇಂಟರ್‌ನೆಟ್‌ನ್ನೇ ಅವಲಂಬಿಸಿರುವಂತಹ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದು, ದಿನೇ ದಿನೇ ಸೈಬರ್‌ ಕ್ರೈಂಗಳು ಜಾಸ್ತಿಯಾಗುತ್ತಿವೆ. ಮೋಸಗಾರರು ಹೊಸ ಹೊಸ ವೇಷ ತೊಟ್ಟು ಅಖಾಡಕ್ಕಿಳಿಯುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿನ ಮೋಸದ ಜಾಲಕ್ಕೆ ಬಲಿಯಾಗಿ ವ್ಯಕ್ತಿಯೊಬ್ಬರು ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಹಾಗಿದ್ದಾರೆ ನಡೆದಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ..

ತಾಯ್ತನದ ಸುಖ ನೀಡುವ ಗಂಡು ಬೇಕು ಎಂದು ಜಾಹೀರಾತು

ಮಹಾರಾಷ್ಟ್ರದ ಪುಣೆಯ 44 ವರ್ಷದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತೊಂದನ್ನು ನೋಡಿದ್ದಾರೆ. ಅದರಲ್ಲಿ ತನ್ನನ್ನು ಗರ್ಭಿಣಿಯಾಗಿಸುವ ಪುರುಷನೋರ್ವ ಬೇಕು, ಆತನಿಂದ ಗರ್ಭಿಣಿಯಾದಲ್ಲಿ ಆತನಿಗೆ 25 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂಬ ಆಮಿಷದೊಂದಿಗೆ ಜಾಹೀರಾತು ನೀಡಲಾಗಿತ್ತು. ಇದನ್ನು ನಂಬಿ ಹೋದ ವ್ಯಕ್ತಿಯೊಬ್ಬರನ್ನು ಖದೀಮರು ಹಲವು ನೆಪಗಳನ್ನು ಹೇಳಿ ದೋಚಿದ್ದು, ಬರೋಬ್ಬರಿ 11 ಲಕ್ಷ ರೂಪಾಯಿಗಳನ್ನು ಆತನಿಂದ ವಸೂಲಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯಿಂದ ವೀಡಿಯೋ

ಘಟನೆಗೆ ಸಂಬಂಧಿಸಿದಂತೆ ಬನೇರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಆನ್‌ಲೈನ್ ಜಾಹೀರಾತಿನಿಂದ ಮೋಸ ಹೋದ ಗುತ್ತಿಗೆದಾರರು ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ, ಈ ರೀತಿಯ 'ಪ್ರಗ್ನೆಂಟ್‌ ಜಾಬ್‌' ಜಾಹೀರಾತನ್ನು ನೋಡಿದ್ದರು. ಅದರಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡುವ ಮಹಿಳೆಯೊಬ್ಬರ ವಿಡಿಯೋ ಇತ್ತು. ವೀಡಿಯೋದಲ್ಲಿ ಮಹಿಳೆಯೊಬ್ಬರು ನನ್ನನ್ನು ಅಮ್ಮನನ್ನಾಗಿ ಮಾಡುವ ನನಗೆ ತಾಯ್ತನದ ಖುಷಿ ನೀಡುವ ಪುರುಷನೋರ್ವ ಬೇಕು. ನಾನು ಆತನಿಗೆ 25 ಲಕ್ಷ ರೂಪಾಯಿಯನ್ನು ನೀಡುತ್ತೇನೆ. ಆತ ಅನಕ್ಷರಸ್ಥನಾದರೂ ಪರವಾಗಿಲ್ಲ, ಆತ ಯಾವ ಜಾತಿಯವನಾದರೂ ಪರವಾಗಿಲ್ಲ ನೋಡುವುದಕ್ಕೆ ಚೆನ್ನಾಗಿಲ್ಲದಿದ್ದರೂ ಪರವಾಗಿಲ್ಲ ಎಂದು ಹೇಳಿದ್ದು, ಈ ಕೆಲಸ ಮಾಡಲು ಆಸಕ್ತಿ ಇರುವವರು ಸಂಪರ್ಕಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋದ ಜೊತೆಗೆ ಅವರ ದೂರವಾಣಿ ಸಂಖ್ಯೆಯನ್ನು ಕೂಡ ನೀಡಲಾಗಿತ್ತು.

ಈ ದೂರವಾಣಿ ಸಂಖ್ಯೆಗೆ ಈ ಕಂಟ್ರಾಕ್ಟರ್ ಕರೆ ಮಾಡಿದ್ದಾರೆ. ಈ ವೇಳೆ ತಾನು ಪ್ರಗ್ನೆಂಟ್ ಜಾಬ್ ಸಂಸ್ಥೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಕರೆ ಸ್ವೀಕರಿಸಿದ್ದಾರೆ. ನಂತರ ಮಹಿಳೆಯ ಜೊತೆ ವಾಸ ಮಾಡಬೇಕಾದರೆ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು ಎಂದು ಕಂಟ್ರಾಕ್ಟರ್‌ಗೆ ಹೇಳಿದ್ದಾರೆ. ಕಂಪನಿಯ ಜೊತೆ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಕಂಪನಿಯ ಗುರುತಿನ ಚೀಟಿಯನ್ನು ಪಡೆಯಬೇಕು ಎಂದು ಸೂಚಿಸಿದ್ದಾರೆ.

ಇದಾದ ನಂತರದ ಕೆಲ ದಿನಗಳಲ್ಲಿ ದೂರುದಾರನಿಂದ ಈ ಆರೋಪಿಗಳು, ರಿಜಿಸ್ಟೇಷನ್ ಶುಲ್ಕ, ಗುರುತಿನ ಚೀಟಿಯ ಶುಲ್ಕ, ಪರಿಶೀಲನಾ ಶುಲ್ಕ, ಜಿಎಸ್‌ಟಿ, ಟಿಡಿಎಸ್‌, ಪ್ರೊಸೆಸಿಂಗ್ ಶುಲ್ಕ ಎಂದು ಹೇಳಿಕೊಂಡು ಹಣ ವಸೂಲಿ ಮಾಡುತ್ತಲೇ ಬಂದಿದ್ದಾರೆ ಎಂದು ದೂರುದಾರರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರುದಾರರಿಗೆ ಎಷ್ಟು ಆಮಿಷವೊಡ್ಡಲಾಗಿತ್ತೆಂದರೆ ಸೆಪ್ಟೆಂಬರ್ ಮೊದಲ ವಾರದಿಂದ ಅಕ್ಟೋಬರ್ 23 ರವರೆಗೆ ಅವರು ಒಟ್ಟು 11 ಲಕ್ಷ ರೂ.ಗಳವರೆಗೆ 100 ಕ್ಕೂ ಹೆಚ್ಚು ಸಣ್ಣ ಹಣ ವರ್ಗಾವಣೆಗಳನ್ನು ಮಾಡಿದ್ದಾರೆ. ಇಷ್ಟೊಂದು ಮೊತ್ತದ ಹಣವನ್ನು ಅವರು ಯುಪಿಐ ಹಾಗೂ ಐಎಂಪಿಎಸ್‌ ಮೂಲಕವೇ ಮಾಡಿದ್ದಾರೆ.

ಆದರೆ ಯಾವಾಗ ದೂರುದಾರರು ಅವರ ಬಳಿ ತಿರುಗಿ ಪ್ರಶ್ನೆ ಕೇಳುವುದಕ್ಕೆ ಆರಂಭಿಸಿದರೋ ಈ ಮೋಸಗಾರರು ಅವರ ನಂಬರ್‌ನ್ನು ಬ್ಲಾಕ್ ಮಾಡಿದ್ದಾರೆ. ಇದಾದ ನಂತರವೇ ಅವರಿಗೆ ತಾನು ಮೋಸಕ್ಕೆ ಬಲಿಯಾಗಿರುವುದು ತಿಳಿದು ಬಂದಿದೆ. ಇದಾದ ನಂತರ ಅವರು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ. ಈ ಮೋಸದ ಜಾಲದಲ್ಲಿ ಬಳಕೆಯಾದ ಮೊಬೈಲ್ ಫೋನ್‌ಗಳು, ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ವಂಚನೆ ಮಾಡುವವವರು ಹಾಗೂ ಮೋಸ ಹೋಗಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. 2022ರ ಅಂತ್ಯದಿಂದಲೂ ಭಾರತದ ವಿವಿಧೆಡೆ ಈ ಮೋಸದ ಜಾಲಕ್ಕೆ ಅನೇಕರು ಬಲಿಯಾಗಿದ್ದಾರೆ. ಎಂದು ಪುಣೆಯ ಸೈಬರ್ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ಸೈಬರ್ ವಂಚಕರು ಗರ್ಭಿಣಿ ಉದ್ಯೋಗ ಸೇವೆಯಂತಹ (Pregnant Job Service)ಸಂಸ್ಥೆಗಳ ಹೆಸರಿನಲ್ಲಿ ಮಹಿಳೆಯರ ವೀಡಿಯೊಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಾರೆ. ಮಹಿಳೆಯರನ್ನು ಗರ್ಭಿಣಿಯಾಗಿಸಲು ನೇಮಕಗೊಂಡ ಪುರುಷರಿಗೆ ಲಕ್ಷಗಟ್ಟಲೆ ದೊಡ್ಡ ಮೊತ್ತವನ್ನು ನೀಡುವ ಆಮಿಷ ಒಡ್ಡುತ್ತಾರೆ. ಈ ದೊಡ್ಡ ಮೊತ್ತದ ಹಣದ ಆಸೆಗೆ ಈ ಮೋಸದ ಜಾಹೀರಾತುಗಳಿಂದ ಆಕರ್ಷಿತರಾಗುವ ಬಲಿಪಶುಗಳು ನೋಂದಣಿ ಶುಲ್ಕಕ್ಕಾಗಿ ಹಣವನ್ನು ಪಾವತಿಸಲು ಮತ್ತು ನಂತರ ವೈದ್ಯಕೀಯ ಪರೀಕ್ಷೆಗಳು, ಕಾನೂನು ವಿಧಿವಿಧಾನಗಳು ಅಥವಾ ಭದ್ರತಾ ಠೇವಣಿಗಳ ನೆಪದಲ್ಲಿ ದೊಡ್ಡ ಮೊತ್ತವನ್ನು ಪಾವತಿಸಲು ಕೇಳುತ್ತಾರೆ. ಜನರಿಂದ ಹಣ ಪಡೆದ ನಂತರ ವಂಚಕರು ಕಣ್ಮರೆಯಾಗುತ್ತಾರೆ. ಬಿಹಾರ ಮತ್ತು ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಪೊಲೀಸರು ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಮಾಡಿದ್ದಾರೆ ಎಂದು ಸೈಬರ್ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದನ್ನೂ ಓದಿ: ಟೋಲ್ ಕೇಳಿದ ಟೋಲ್ ಸಿಬ್ಬಂದಿಗೆ ನನ್ನ ಅಪ್ಪ ಯಾರು ಗೊತ್ತಾ ಎಂದು ಕೇಳಿ ಹೊಡೆದ ಯುವಕ

ಇದನ್ನೂ ಓದಿ: ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣದ ವಿಚಾರದಲ್ಲೂ ಕೇರಳ ಸರ್ಕಾರದ ರಾಜಕೀಯ: ಪಿಎಂಶ್ರೀ ಯೋಜನೆಗೆ ಬ್ರೇಕ್

ಈ ಮೋಸದ ಜಾಲದ ವೀಡಿಯೋ ಇಲ್ಲಿದೆ ನೋಡಿ: ವೀಡಿಯೋ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ