
ಹೈದರಾಬಾದ್ [ಜ.21]: ಚುನಾವಣಾ ಆಯೋಗ ಎಷ್ಟೆಲ್ಲಾ ಕ್ರಮ ಕೈಗೊಂಡರೂ ನಕಲಿ ಮತದಾರರ ಹಾವಳಿ ಪರಿಪೂರ್ಣವಾಗಿ ನಿವಾರಣೆಯಾಗದ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯ ಚುನಾವಣಾ ಆಯೋಗ ವಿಶಿಷ್ಟಪ್ರಯೋಗವೊಂದನ್ನು ಮಾಡಲು ಮುಂದಾಗಿದೆ. ‘ಫೇಸ್ ರೆಕಗ್ನಿಷನ್’ (ಮುಖಚಹರೆ ಮೂಲಕ ಗುರುತು ಪತ್ತೆ) ಆ್ಯಪ್ ಬಳಸಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ನಕಲಿ ಮತದಾರರನ್ನು ಪತ್ತೆ ಹಚ್ಚಲು ಹೊರಟಿದೆ. ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಗುರುತು ಪತ್ತೆಗೆ ಫೇಸ್ ರೆಕಗ್ನಿಷನ್ ತಂತ್ರಜ್ಞಾನ ಬಳಸುತ್ತಿರುವುದು ಇದು ಮೊದಲ ಬಾರಿ.
ತೆಲಂಗಾಣದ 120 ನಗರಸಭೆ ಹಾಗೂ 9 ನಗರಪಾಲಿಕೆಗಳಿಗೆ 22ರಂದು ಚುನಾವಣೆ ನಡೆಯಲಿದ್ದು, 25ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಪೈಕಿ ಮೇದಛಲ ಮಲ್ಕಾಜ್‌ಗಿರಿ ಜಿಲ್ಲೆಯ ಕೋಂಪಲ್ಲಿ ನಗರಸಭೆಯ 10 ವಾರ್ಡುಗಳಲ್ಲಿ ಪ್ರಾಯೋಗಿಕವಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಆಯೋಗ ನಿರ್ಧರಿಸಿದೆ.
ಈ ಪ್ರಕಾರ, ಮತಗಟ್ಟೆಯಲ್ಲಿ ಹೆಚ್ಚುವರಿ ಅಧಿಕಾರಿಯೊಬ್ಬರು ಸ್ಮಾರ್ಟ್‌ಫೋನ್ ಹಿಡಿದು ನಿಂತಿರುತ್ತಾರೆ. ಮತದಾರ ಬರುತ್ತಿದ್ದಂತೆ ದಾಖಲೆಗಳನ್ನು ಪರಿಶೀಲಿಸಿ, ಸ್ಮಾರ್ಟ್‌ಫೋನ್‌ನಲ್ಲಿ ಆತ/ಆಕೆಯ ಫೋಟೋ ಸೆರೆ ಹಿಡಿಯುತ್ತಾರೆ. ಬಳಿಕ ಅದನ್ನು ಫೇಸ್ ರೆಕಗ್ನಿಷನ್ ಆ್ಯಪ್‌ಗೆ ಅಪ್‌ಲೋಡ್ ಮಾಡುತ್ತಾರೆ. ಈ ಫೋಟೋ ಚುನಾವಣಾ ಆಯೋಗದ ಸರ್ವರ್‌ನಲ್ಲಿರುವ ಮತದಾರರ ಫೋಟೋ ಜತೆ ತನ್ನಿಂತಾನೆ ತುಲನೆಯಾಗುತ್ತದೆ. ಬಳಿಕ ಅಧಿಕಾರಿಯ ಮೊಬೈಲ್‌ಗೆ ಮತದಾರ ಅಸಲಿಯೋ? ನಕಲಿಯೋ ಎಂಬ ಸಂದೇಶ ಬರುತ್ತದೆ. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಚುನಾವಣಾ ಆಯೋಗದ ಅಧಿಕಾರಿ ಸಂಗ್ರಹಿಸಿದ ಫೋಟೋಗಳು ಡಿಲೀಟ್ ಆಗುತ್ತವೆ.
ದೇಶದ ಶೇ.1 ಶ್ರೀಮಂತರ ಬಳಿ ಶೇ.70 ಮಂದಿಯ ನಾಲ್ಕು ಪಟ್ಟು ಸಂಪತ್ತು!...
ಮೊದಲ ಬಾರಿಗೆ ಈ ಪ್ರಯೋಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ತುಸು ವಿನಾಯಿತಿ ನೀಡಲು ಆಯೋಗ ನಿರ್ಧರಿಸಿದೆ. ಹೀಗಾಗಿ ‘ಮತದಾರ ನಕಲಿ’ ಎಂಬ ಸಂದೇಶ ಫೇಸ್ ರೆಕಗ್ನಿಷನ್ ಸಹಾಯದಿಂದ ಬಂದರೂ ಬೇರೆ ದಾಖಲೆ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲು ಅಧಿಕಾರಿಗಳು ಉದ್ದೇಶಿಸಿದ್ದಾರೆ.
ಚುನಾವಣಾ ಆಯೋಗವು ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ಇದೇ ತಂತ್ರಜ್ಞಾನ ಬಳಸಲು ನಿರ್ಧರಿಸಿದೆ. ಆ ಚುನಾವಣೆ ಫೆ.8ಕ್ಕೆ ನಿಗದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ