*₹15 ಕೋಟಿ ವೆಚ್ಚದ ಚಿತ್ರ ಈಗ ಬ್ಲಾಕ್‌ಬಸ್ಟರ್!
*ನಿರ್ದೇಶಕ ವಿವೇಕ್‌ಗೆ ‘ವೈ’ ಶ್ರೇಣಿ ಭದ್ರತೆ
*24 ತಾಸೂ 8 ಸಿಆರ್‌ಪಿಎಫ್ ಯೋಧರ ಕಾವಲು
ಮುಂಬೈ (ಮಾ. 19): ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಬಹುನಿರೀಕ್ಷಿತ ‘ಕಾಶ್ಮೀರ ಫೈಲ್ಸ್’ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸುತ್ತಿದೆ. ಬಿಡುಗಡೆಯಾದ ಒಂದು ವಾರದಲ್ಲೇ ಭರ್ಜರಿ 100 ಕೋಟಿ ರು. ಗಳಿಕೆ ಮಾಡಿದೆ. 15 ಕೋಟಿ ರು. ಖರ್ಚು ಮಾಡಿ ನಿರ್ಮಿಸಲಾಗಿರುವ ಈ ಚಿತ್ರವು 7ನೇ ದಿನವಾದ ಶುಕ್ರವಾರ ಜಗತ್ತಿನಾದ್ಯಂತ ಸುಮಾರು 20 ಕೋಟಿ ರು. ಗಳಿಕೆ ಮಾಡಿದ್ದು, ಕೋವಿಡ್ ಸೋಂಕಿನ ಆರಂಭದ ನಂತರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ.
ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿರುವ ನಟ ಅನುಪಮ್ ಖೇರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಕಾಶ್ಮೀರ್ ಫೈಲ್ಸ್ 100 ಕೋಟಿ ರು. ಗಡಿ ದಾಟಿದ್ದು, 106.8 ಕೋಟಿ ರು. ಗಳಿಸಿದೆ’ ಎಂದು ಹರ್ಷಿಸಿದ್ದಾರೆ. ಕಳೆದ ಶುಕ್ರವಾರ ತೆರೆಕಂಡ ಚಿತ್ರವು ಮೊದಲನೇ ದಿನ 4 ಕೋಟಿ ರು. ಗಳಿಸಿತ್ತು. ಶನಿವಾರ ದಿನ 9 ಕೋಟಿ ರು., ಭಾನುವಾರ 10 ಕೋಟಿ ರು., ಸೋಮವಾರ 15 ಕೋಟಿ ರು., ಮಂಗಳವಾರ 18 ಕೋಟಿ ರು. ಹಾಗೂ ಬುಧವಾರ 19 ಕೋಟಿ ರು. ಹಾಗೂ ಗುರುವಾರ 19 ಕೋಟಿ ರು. ಗಳಿಕೆ ಮಾಡಿದೆ. ಹಲವಾರು ಚಿತ್ರಮಂದಿರಗಳು ಹೌಸ್‌ಫುಲ್ ಆಗಿದ್ದು, 2ನೇ ವಾರವೂ ಭಾರೀ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: The Kashmir Files: ಪಂಡಿತರನ್ನು ಕಗ್ಗೊಲೆ ಮಾಡಿದವನಿಗೆ ಹಸ್ತಲಾಘವ ಮಾಡಿದ್ದರು ಅಂದಿನ ಪ್ರಧಾನಿ..!
1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯದ ಕಥಾ ಹಂದರವನ್ನು ಒಳಗೊಂಡ ಚಿತ್ರವಾಗಿದೆ. ಚಿತ್ರದಲ್ಲಿ ಅನುಪಮ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್, ಚಿನ್ಮಯ ಮಾಂಡ್ಲೇಕರ್, ಭಾಷಾ ಸುಂಬಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ‘ವೈ’ ಶ್ರೇಣಿ ಭದ್ರತೆ: ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿಯವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ‘ವೈ’ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ.
‘ವೈ’ ಶ್ರೇಣಿಯ ಭದ್ರತೆಯು ದೇಶದ ಭದ್ರತಾ ವ್ಯವಸ್ಥೆಯಲ್ಲಿ ಮೂರನೇ ಅತ್ಯುನ್ನತ ಭದ್ರತಾ ವ್ಯವಸ್ಥೆಯಾಗಿದೆ. ಇದರಲ್ಲಿ 7 ರಿಂದ 8 ಸಿಆರ್‌ಪಿಎಫ್ ಯೋಧರು 24 ಗಂಟೆಗಳ ಕಾಲವೂ ಅಗ್ನಿಹೋತ್ರಿಯವರ ಭದ್ರತೆ ಒದಗಿಸಲಿದ್ದಾರೆ.
ಇದನ್ನೂ ಓದಿ: The Kashmir Files ಕನ್ನಡ ಅವತರಣಿಕೆಯಲ್ಲಿ ಬಿಡುಗಡೆ ಮಾಡಲು ರಾಜ್ಯ ಬಿಜೆಪಿ ಚಿಂತನೆ
ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯದ ಕುರಿತ ಕಥಾ ಹಂದರವುಳ್ಳ ಚಿತ್ರ ‘ಕಾಶ್ಮೀರ್ ಫೈಲ್ಸ್’ ಬಿಡುಗಡೆಯ ನಂತರ ನಿರ್ದೇಶಕರಿಗೆ ಉಗ್ರವಾದಿ ಸಂಘಟನೆಗಳು ಬೆದರಿಕೆಯೊಡ್ಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲು ನಿರ್ಧರಿಸಿದೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಮೊಬೈಲ್ ಲಿಂಕ್ ಬಗ್ಗೆ ಸೈಬರ್ ತಜ್ಞರ ಎಚ್ಚರಿಕೆ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ದೇಶಾದ್ಯಂತ ಸದ್ದು ಮಾಡುತ್ತಿದ್ದರೆ, ಅದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು ಸೈಬರ್ ದಾಳಿಗೆ ತೊಡಗಿದ್ದಾರೆ. ಮಂಗಳೂರಿನ ಸೈಬರ್ ಪರಿಣತ ಡಾ.ಅನಂತ ಪ್ರಭು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಯಾವ ರೀತಿ ಸೈಬರ್ ಕಳ್ಳರು ಕಾಶ್ಮೀರ್ ಫೈಲ್ಸ್ ಚಿತ್ರದ ಹೆಸರಲ್ಲಿ ಜನರನ್ನು ಮೋಸದಲ್ಲಿ ಸಿಲುಕಿಸಿ ವಂಚಿಸುತ್ತಾರೆ ಎಂಬುದನ್ನು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮೊಬೈಲ್‌ನ ವಾಟ್ಸಪ್ ಜಾಲತಾಣದಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರದ ಫ್ರೀ ಡೌನ್‌ಲೋಡ್ ಲಿಂಕ್ ಹರಿದಾಡುತ್ತಿದ್ದು, ಅದನ್ನು ಒತ್ತಿದಲ್ಲಿ ವೈರಸ್ ದಾಳಿಗೆ ಒಳಗಾಗಬೇಕಾಗುತ್ತದೆ. ಡೌನ್‌ಲೋಡ್ ಲಿಂಕ್ ಹೆಸರಲ್ಲಿ ಸೈಬರ್ ಹ್ಯಾಕರ್ಸ್ ವೈರಸ್ ಕಳುಹಿಸುತ್ತಿದ್ದು ಅದರ ಮೂಲಕ ಆಂಡ್ರಾಯ್ಡ… ಫೋನ್ ಅಥವಾ ಲ್ಯಾಪ್ ಟಾಪ್‌ನಲ್ಲಿ ಇರುವ ಮಾಹಿತಿಗಳನ್ನು ಕದಿಯುವ ಸಾಧ್ಯತೆ ಇರುತ್ತದೆ ಎಂದು ಡಾ.ಅನಂತ ಪ್ರಭು ಎಚ್ಚರಿಸಿದ್ದಾರೆ.