13 ದಿನ ಬಳಿಕ ಮತ್ತೆ ಮಣಿಪುರದಲ್ಲಿ ಹಿಂಸೆ: ಕೈ ಕಾಲು ಕತ್ತರಿಸಿ ಮೂವರು ಯುವಕರ ಭೀಕರ ಕೊಲೆ

By Kannadaprabha News  |  First Published Aug 19, 2023, 6:50 AM IST

ಕಳೆದ ಮೂರು ತಿಂಗಳುಗಳಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮತ್ತೆ ಸಂಘರ್ಷ ಮುಂದುವರೆದಿದ್ದು ಮೂವರು ಯುವಕರನ್ನು ಚಾಕುವಿನಿಂದ ಹಲ್ಲೆ ಮಾಡಿ, ಕೈ ಕಾಲುಗಳನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ.


ಇಂಫಾಲ್‌: ಕಳೆದ ಮೂರು ತಿಂಗಳುಗಳಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮತ್ತೆ ಸಂಘರ್ಷ ಮುಂದುವರೆದಿದ್ದು ಮೂವರು ಯುವಕರನ್ನು ಚಾಕುವಿನಿಂದ ಹಲ್ಲೆ ಮಾಡಿ, ಕೈ ಕಾಲುಗಳನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಇದರಿಂದಾಗಿ 13 ದಿನಗಳಿಂದ ಶಾಂತವಾಗಿದ್ದ ಈಶಾನ್ಯ ರಾಜ್ಯದಲ್ಲಿ ಮತ್ತೆ ಹಿಂಸೆ ಮರಳಿದೆ.  ಉಖ್ರುಲ್‌ (Ukhrul) ಜಿಲ್ಲೆಯ ಕುಕಿ ಥೋವೈ ಗ್ರಾಮದ ಅರಣ್ಯಪ್ರದೇಶದಲ್ಲಿ ಸುಮಾರು 25 ರಿಂದ 35 ವರ್ಷ ವಯಸ್ಸಿನ ಮೂವರು ಯುವಕರ ದೇಹಗಳು ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ನಾಗಾ ಬುಡಕಟ್ಟು ಜನರು ಅತಿ ಹೆಚ್ಚಾಗಿರುವ ಉಖ್ರುಲ್‌ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೊದಲ ಘರ್ಷಣೆಯ ಘಟನೆ ಇದಾಗಿದೆ.

ಶುಕ್ರವಾರ ಮುಂಜಾನೆ ಗ್ರಾಮದಲ್ಲಿ ಭಾರೀ ಗುಂಡಿನ ಸದ್ದು ಕೇಳಿ ಬಂದಿದೆ. ಇದಾದ ಬಳಿಕ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಮೂರು ಶವಗಳು ಪತ್ತೆಯಾಗಿವೆ. ದೇಹಗಳ ಮೇಲೆ ಬಲವಾದ ಚಾಕುವಿನ ಗಾಯದ ಗುರುತುಗಳಿದ್ದು ಕೈಕಾಲುಗಳನ್ನು ಕತ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈತೇಯಿ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವ ನಿರ್ಧಾರದ ವಿರುದ್ಧ ಮೇ 3ರಿಂದ ಕುಕಿ ಸಮುದಾಯದ ಜನರು ಹಿಂಸಾಚಾರಕ್ಕೆ ಮುಂದಾದರು. ಬಳಿಕ ಅಂದಿನಿಂದ ಎರಡೂ ಸಮುದಾಯಗಳು ಪರಸ್ಪರ ಭಾರೀ ಸಂಘರ್ಷದಲ್ಲಿ ತೊಡಗಿದ್ದು, ವಿವಿಧ ಘಟನೆಗಳಲ್ಲಿ ರಾಜ್ಯದಲ್ಲಿ ಈವರೆಗೆ 170ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೈತೇಯಿ ಸಮುದಾಯದ ಜನರು ಶೇ.53ರಷ್ಟಿದ್ದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನರು ಶೇ.40ರಷ್ಟಿದ್ದಾರೆ.

Tap to resize

Latest Videos

ಮೋದಿ ಸರ್ಕಾರದ ಉಜ್ವಲಾ, ಜನಧನ್‌ಗೆ ರಾಹುಲ್‌ ಮೆಚ್ಚುಗೆ 

ಮ್ಯಾನ್ಮಾರ್‌ಗೆ ಹೋಗಿದ್ದ ಮೈತೇಯಿಗಳು ವಾಪಸ್‌

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಗಡಿದಾಟಿ ಮ್ಯಾನ್ಮಾರ್‌ಗೆ ಹೋಗಿದ್ದ 200ಕ್ಕೂ ಹೆಚ್ಚು ಮೈತೇಯಿಗಳು ರಾಜ್ಯಕ್ಕೆ ಮರಳಿದ್ದಾರೆ. ಇವರನ್ನು ಮರಳಿ ಕರೆತರುವಲ್ಲಿ ಭಾರತೀಯ ಸೇನೆ ಪ್ರಮುಖ ಪಾತ್ರ ವಹಿಸಿದೆ ಎಂದು ಮುಖ್ಯಮಂತ್ರಿ ಬೀರೇನ್‌ ಸಿಂಗ್‌ ಶ್ಲಾಘಿಸಿದ್ದಾರೆ.

click me!