ಮಕ್ಕಳ ಲಸಿಕಾ ಅಭಿಯಾನಕ್ಕೆ ಕೋವಿನ್ ರೀತಿ ಯು-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಸಾರ್ವತ್ರಿಕ ಲಸಿಕಾಕರಣದ ಡಿಜಿಟಲೀಕರಣ ಆರಂಭವಾಗಿದೆ. ದೇಶಾದ್ಯಂತ ಪ್ರಾಯೋಗಿಕವಾಗಿ ಯೋಜನೆಗೆ ಚಾಲನೆ ನೀಡಲಾಗಿದೆ.
ನವದೆಹಲಿ (ಏಪ್ರಿಲ್ 8, 2023): ‘ಕೋವಿನ್’ ಡಿಜಿಟಲ್ ವೇದಿಕೆಯ ಮೂಲಕ ಕೊರೋನಾ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದ ಭಾರತ ಇದೀಗ ಅದೇ ಮಾದರಿಯಲ್ಲಿ ನವಜಾತ ಶಿಶುಗಳ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಕ್ಕೆ ‘ಯು-ವಿನ್’ ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಆರಂಭಿಸಿದೆ. ದೇಶಾದ್ಯಂತ ‘ಯು-ವಿನ್’ ಪ್ರಾಯೋಗಿಕವಾಗಿ ಪ್ರಾರಂಭವಾಗಿದ್ದು, ಮಕ್ಕಳ ದತ್ತಾಂಶವನ್ನು ಕೈಬರಹದ ಬದಲಾಗಿ ಸಾಫ್ಟ್‌ವೇರ್ ಮೂಲಕ ನಮೂದಿಸುವ ಕೆಲಸಕ್ಕೆ ಚಾಲನೆ ಸಿಕ್ಕಿದೆ.
ಇದರಿಂದಾಗಿ ದೇಶದ 2.6 ಕೋಟಿ ನವಜಾತ ಶಿಶುಗಳು ಹಾಗೂ 2.9 ಕೋಟಿ ಗರ್ಭಿಣಿಯರ ಮೇಲೆ ಪ್ರತಿ ವರ್ಷ ನಿಗಾ ಇಡಲು ಅನುಕೂಲವಾಗಲಿದೆ ಎಂದು ಯುನಿಸೆಫ್ ಇಂಡಿಯಾದ ಆರೋಗ್ಯಾಧಿಕಾರಿ ಡಾ. ಮಂಗೇಶ್ ಗಧಾರಿ ತಿಳಿಸಿದ್ದಾರೆ. ನವಜಾತ ಶಿಶುಗಳಿಗೆ (New Born Babies) ಮುಂದಿನ ಬಾರಿ ಲಸಿಕೆ (Vaccine) ಯಾವಾಗ ಹಾಕಬೇಕು ಎಂಬುದರ ಮೇಲೆ ನಿಗಾ ಇಡಲು ದಶಕಗಳಿಂದ ಆರೋಗ್ಯಾಧಿಕಾರಿಗಳು (Health Officials) ಹಾಗೂ ಸೇವಾದಾತರು ಪ್ರಯಾಸ ಪಡುತ್ತಿದ್ದರು. ಮತ್ತೊಂದೆಡೆ, ಸಾರ್ವತ್ರಿಕ ಲಸಿಕಾಕರಣ (Universal Vaccination Programme) ವೇಳೆ ನೀಡುವ ಕಾರ್ಡುಗಳನ್ನು (Card) ಮಕ್ಕಳ ಪೋಷಕರು ತರುತ್ತಿರಲಿಲ್ಲ.
ಇದನ್ನು ಓದಿ: ಏಮ್ಸ್ ಬಳಿಕ ಕೋವಿಡ್ ಲಸಿಕೆಯ ‘ಕೋವಿನ್’ ವೆಬ್ ಮಾಹಿತಿ ಹ್ಯಾಕ್..!
ಆದರೆ ಈ ಎಲ್ಲ ಸಮಸ್ಯೆಗಳಿಗೆ ಕೋವಿನ್ (CoWin) ರೀತಿಯಲ್ಲೇ ಯು-ವಿನ್ (U- Win) ಪರಿಹಾರ ಒದಗಿಸಲಿದೆ. ಲಸಿಕೆಗೆ ಸಮಯ ಕಾದಿರಿಸುವ ಜತೆಗೆ, ಲಸಿಕೆ ಹಾಕಿಸಬೇಕಾದ ಕುರಿತು ನೆನಪಿಸುವ ಸಂದೇಶ ಕಳುಹಿಸುವುದು, ಲಸಿಕಾಕರಣದ ದಾಖಲೆ, ಪ್ರಮಾಣಪತ್ರ ನಿರ್ವಹಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಇದು ಸರಳಗೊಳಿಸಲಿದೆ ಎಂದು ಅವರು ತಿಳಿಸಿದ್ದಾರೆ. ಚಾಸಾರ್ವತ್ರಿಕ ಲಸಿಕಾಕರಣ ಕಾರ್ಯದಲ್ಲಿ ಕುಟುಂಬಗಳ ಅಂತಾರಾಜ್ಯ ಅಥವಾ ಅಂತರ ಜಿಲ್ಲಾ ವಲಸೆ ಕೂಡ ಸಮಸ್ಯೆಯಾಗಿತ್ತು. ಯು-ವಿನ್‌ನಿಂದ ಲಸಿಕೆ ಪಡೆಯಬೇಕಾದ ಶಿಶುಗಳ ದಾಖಲೆ ನಿರ್ವಹಣೆ ಸುಲಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆಯಿಂದ 34 ಲಕ್ಷ ಜೀವ ಉಳಿಸಿದ ಭಾರತ: ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿವಿ ಮೆಚ್ಚುಗೆ