
ಏಕರೂಪ ಸಂಹಿತೆ: ಏನು ಶಿಫಾರಸು?
ಡೆಹ್ರಾಡೂನ್: ಉತ್ತರಾಖಂಡ ಸಚಿವ ಸಂಪುಟ ಭಾನುವಾರ ಅತಿ ಮಹತ್ವದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ಒಪ್ಪಿಗೆ ನೀಡಿದೆ. ಇದರಿಂದಾಗಿ ಇಂದು ಆರಂಭವಾದ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ಇದರ ಮಂಡನೆಗೆ ವೇದಿಕೆ ಸಿದ್ಧವಾಗಿದೆ. ಇದು ವಿಧಾನಸಭೆಯಲ್ಲೂ ಪಾಸಾದರೆ, ಸ್ವಾತಂತ್ರ್ಯಾನಂತರ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಖ್ಯಾತಿಗೆ ಉತ್ತರಾಖಂಡ ಭಾಜನವಾಗಲಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ನ್ಯಾ। ರಂಜನಾ ಪ್ರಕಾಶ್ ದೇಸಾಯಿ ಅವರ ಸಮಿತಿ ಇತ್ತೀಚೆಗೆ ಸಲ್ಲಿಸಿದ ಸಂಹಿತೆಯ ಅಧ್ಯಯನ ವರದಿಯ ಬಗ್ಗೆ ಚರ್ಚಿಸಿ, ಅದರ ಮಂಡನೆಗೆ ಒಪ್ಪಿಗೆ ನೀಡಲಾಯಿತು. ಮಂಗಳವಾರ ಮಂಡನೆಗೆ ತೀರ್ಮಾನಿಸಲಾಯಿತು. ಶನಿವಾರ ಸಂಪುಟದಲ್ಲಿ ಇದು ಮಂಡನೆಯಾದರೂ ನಿರ್ಣಯ ಮುಂದೂಡಲಾಗಿತ್ತು.
ಏಕರೂಪ ನಾಗರಿಕ ಸಂಹಿತೆ ಕರಡು ಬಿಲ್‌ಗೆ ಉತ್ತರಾಖಂಡ ಸಂಪುಟ ಅನುಮೋದನೆ, ಫೆ.6ಕ್ಕೆ ಮಂಡನೆ!
ಇದು ಜಾರಿಯಾದರೆ ರಾಜ್ಯದಲ್ಲಿ ಮದುವೆ, ವಿಚ್ಛೇದನ, ಆಸ್ತಿ ಹಕ್ಕು- ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಧರ್ಮಗಳಿಗೂ ಒಂದೇ ಕಾನೂನು ಅನ್ವಯವಾಗಲಿದೆ. ಈವರೆಗೂ ಆಯಾ ಧರ್ಮಗಳು ಬೇರೆ ಬೇರೆ ವೈಯಕ್ತಿಕ ಕಾನೂನು ಅನುಸರಿಸುತ್ತಿದ್ದವು. ಇದು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುತ್ತಿತ್ತು.
ಏನಿದು ಏಕರೂಪ ನಾಗರಿಕ ಸಂಹಿತೆ?
ಎಲ್ಲಾ ಧರ್ಮೀಯರಿಗೂ ವಿವಾಹ, ವಿಚ್ಛೇದನ, ಆಸ್ತಿ, ಭೂಮಿ ಮತ್ತು ಉತ್ತರಾಧಿಕಾರ ಕುರಿತು ವಿವಿಧ ಧರ್ಮಗಳಲ್ಲಿ ಪ್ರತ್ಯೇಕ ನಿಯಮಗಳಿವೆ. ಅದನ್ನೆಲ್ಲಾ ರದ್ದುಪಡಿಸಿ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ.
India Gate: ಏಕರೂಪ ಸಂಹಿತೆ ದ್ವಂದ್ವದಲ್ಲಿ ಬಿಜೆಪಿ: ಪ್ರಶಾಂತ್ ನಾತು
ಮೊದಲ ರಾಜ್ಯದ ಹಿರಿಮೆ
ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾದರೆ ಇಂಥ ಕಾಯ್ದೆ ರೂಪಿಸಿದ ದೇಶದ ಮೊದಲ ರಾಜ್ಯವಾಗಿ ಉತ್ತರಾಖಂಡ ಹೊರಹೊಮ್ಮಲಿದೆ. ಸದ್ಯ ಗೋವಾದಲ್ಲಿ ಮಾತ್ರವೇ ಈ ನಿಯಮ ಜಾರಿಯಲ್ಲಿದೆ. ಆದರೆ ಅದು ಪೋರ್ಚುಗೀಸರ ಕಾಲದಿಂದಲೂ ಇದೆ. ಸ್ವಾತಂತ್ರ್ಯಾನಂತರದ ಗೋವಾ ಸರ್ಕಾರ ಯಾವುದೇ ಹೊಸ ಕಾಯ್ದೆ ರೂಪಿಸಿಲ್ಲ.
ಇತರೆ ಬಿಜೆಪಿ ರಾಜ್ಯಗಳಲ್ಲೂ ಕಾಯ್ದೆ ಜಾರಿ ?
ನವದೆಹಲಿ: ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿದ ಬಳಿಕ, ಬಿಜೆಪಿ ಆಡಳಿತ ಇರುವ ಇತರೆ ಕೆಲ ರಾಜ್ಯಗಳು ಸಂಹಿತೆ ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಉತ್ತರಾಖಂಡದ ರೀತಿಯಲ್ಲೇ ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್, ಹರ್ಯಾಣ, ಮಧ್ಯಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳು ಕೂಡಾ ಕಾಯ್ದೆ ಜಾರಿಗೆ ಆಸಕ್ತಿ ಹೊಂದಿವೆ. ಇದಕ್ಕಾಗಿ ಸಮಿತಿ ರಚಿಸಿ ನಾಗರಿಕ ಸಂಹಿತೆಯ ಅಧ್ಯಯನಕ್ಕೆ ಈ ರಾಜ್ಯಗಳು ತಯಾರಿ ನಡೆಸಿವೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ನಾಗರಿಕ ಸಂಹತೆಯನ್ನು ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಡ ಹೇರಿತ್ತು. ಕರ್ನಾಟಕದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಸಂಹಿತೆ ಜಾರಿಗೆ ಆಸಕ್ತಿ ತೋರಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ