Asianet Suvarna News Asianet Suvarna News

India Gate: ಏಕರೂಪ ಸಂಹಿತೆ ದ್ವಂದ್ವದಲ್ಲಿ ಬಿಜೆಪಿ: ಪ್ರಶಾಂತ್‌ ನಾತು

ಕರ್ನಾಟಕದ ಚುನಾವಣೆಗಿಂತ ಮುಂಚೆ ಬಿಜೆಪಿ ಒಳಗಡೆ ಏಕರೂಪ ನಾಗರಿಕ ಕಾನೂನು ತರುವುದರ ಬಗ್ಗೆ ಬಹಳಷ್ಟು ಉತ್ಸಾಹ ಇತ್ತು. ಆದರೆ ಮಣಿಪುರದ ಗಲಾಟೆ ನಂತರ ಏಕರೂಪ ನಾಗರಿಕ ಕಾನೂನಿನ ಹೆಸರಿನಲ್ಲಿ ಈಶಾನ್ಯ ಮತ್ತು ಪೂರ್ವದ ರಾಜ್ಯಗಳಲ್ಲಿರುವ ಆದಿವಾಸಿಗಳನ್ನು ಕಾಂಗ್ರೆಸ್‌ ಮತ್ತು ಉಳಿದ ಪ್ರಾದೇಶಿಕ ಪಾರ್ಟಿಗಳು ಸಂಘಟಿತರನ್ನಾಗಿ ಮಾಡಿ ಬೀದಿಗಿಳಿಸಿದರೆ ಏನು ಮಾಡುವುದು ಎಂಬ ಆಲೋಚನೆಯಲ್ಲಿ ಬಿಜೆಪಿ ಇದೆ. 

BJP in Uniform Code Duality Says Prashant Natu grg
Author
First Published Sep 1, 2023, 10:03 AM IST

ಬೆಂಗಳೂರು(ಸೆ.01):  ಕರ್ನಾಟಕದ ಚುನಾವಣೆಗಿಂತ ಮುಂಚೆ ಬಿಜೆಪಿಯಲ್ಲಿ ಏಕರೂಪ ನಾಗರಿಕ ಕಾನೂನು ತರುವುದರ ಬಗ್ಗೆ ಬಹಳ ಉತ್ಸಾಹ ಇತ್ತು. ಆದರೆ ಮಣಿಪುರದ ಗಲಾಟೆ ನಂತರ ಏಕರೂಪ ನಾಗರಿಕ ಕಾನೂನಿನ ಹೆಸರಿನಲ್ಲಿ ಈಶಾನ್ಯ ಮತ್ತು ಪೂರ್ವದ ರಾಜ್ಯಗಳಲ್ಲಿರುವ ಆದಿವಾಸಿಗಳನ್ನು ಕಾಂಗ್ರೆಸ್‌ ಮತ್ತು ಉಳಿದ ಪ್ರಾದೇಶಿಕ ಪಾರ್ಟಿಗಳು ಸಂಘಟಿತರನ್ನಾಗಿ ಮಾಡಿ ಬೀದಿಗಿಳಿಸಿದರೆ ಏನು ಮಾಡುವುದು ಎಂಬ ಚಿಂತೆ ಶುರುವಾಗಿದೆ.

ಕರ್ನಾಟಕದ ಚುನಾವಣೆ ಸೋತ ತಕ್ಷಣ ಮಧ್ಯಪ್ರದೇಶಕ್ಕೆ ಹೋಗಿದ್ದ ಪ್ರಧಾನಿ ಮೋದಿ ಏಕರೂಪ ನಾಗರಿಕ ಸಂಹಿತೆ ವಿಷಯವನ್ನು ಪ್ರಸ್ತಾಪಿಸಿದ್ದರು. ಇನ್ನೇನು ಆಗಸ್ಟ್‌ನಲ್ಲಿ ಸಂಸತ್‌ನಲ್ಲಿ ಮಸೂದೆ ಮಂಡನೆ ಒಂದೇ ಬಾಕಿ ಎನ್ನುವ ರೀತಿಯಲ್ಲಿ ಬಿಜೆಪಿ ನಾಯಕರು ಹೇಳಲು ಕೂಡ ಆರಂಭಿಸಿದ್ದರು. ಎಂದಿನಂತೆ ಟಿ.ವಿ. ಚಾನಲ್‌ಗಳಲ್ಲಿ ಚರ್ಚೆ ಕೂಡ ಆರಂಭವಾಯಿತು. ಆದರೆ ಏಕಾಏಕಿ ಮಣಿಪುರದ ಹಿಂಸಾಚಾರ ತಾರಕಕ್ಕೆ ಏರಿದ ನಂತರ ಆಂತರಿಕವಾಗಿ ಏನಾಯಿತೋ ಏನೋ ಈಗ ಯಾವೊಬ್ಬ ಬಿಜೆಪಿ ನಾಯಕರು ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿಲ್ಲ. ಈಗಿನ ಟೈಮ್‌ ಟೇಬಲ್‌ ಪ್ರಕಾರ ಸೆಪ್ಟೆಂಬರ್‌ನಲ್ಲಿ ಮೋದಿ ಮತ್ತು ಬಿಜೆಪಿ ಕೇಂದ್ರ ನಾಯಕತ್ವ ಜಿ20 ಸಮಾವೇಶದ ತಯಾರಿಯಲ್ಲಿ ವ್ಯಸ್ತವಿದೆ. ಆಮೇಲೆ ಅಕ್ಟೋಬರ್‌ನಲ್ಲಿ ಪಂಚ ರಾಜ್ಯಗಳಲ್ಲಿ ಚುನಾವಣೆಗಳು ಘೋಷಣೆ ಆಗುತ್ತವೆ. ಅದಾದ ಮೇಲೆ ಜನವರಿಯಲ್ಲಿ ಅಯೋಧ್ಯೆ ರಾಮಮಂದಿರದ ಲೋಕಾರ್ಪಣೆ, ನಂತರ ಫೆಬ್ರವರಿಯಲ್ಲಿ ಪ್ರಸಕ್ತ ಅವಧಿಯ ಕೊನೆ ಬಜೆಟ್‌ ಇದೆ. ಹೀಗಿರುವಾಗ ಚುನಾವಣಾ ರಾಜಕೀಯ ಕಾರಣಗಳಿಗೋಸ್ಕರ ಏಕರೂಪ ನಾಗರಿಕ ಸಂಹಿತೆಯನ್ನು 2024ರ ಮೊದಲು ಜಾರಿಗೊಳಿಸದೇ ಇರಲು ತೀರ್ಮಾನ ಆಗಿದೆಯಾ ಅಥವಾ ಮೋದಿ ಶೈಲಿಯಂತೆ ರಹಸ್ಯವಾಗಿಟ್ಟು ಚಳಿಗಾಲದ ಅಧಿವೇಶನದಲ್ಲಿ ಮಂಡನೆಗೆ ಮುಂದಾಗಿ ಒಂದು ಚರ್ಚೆಗೆ ನಾಂದಿ ಹಾಡುವ ಇರಾದೆ ಇದೆಯಾ ಅನ್ನುವುದರ ಬಗ್ಗೆ ಬಹುತೇಕ ಕೇಂದ್ರ ಸಚಿವರಿಗೂ ಗೊತ್ತಿಲ್ಲ. ಆದರೆ ಮೋದಿ ಈಗೀಗ ಭಾರತವನ್ನು 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಗೆ ಒಯ್ಯುವುದರ ಮೂಲಕ ಜಾಗತಿಕ ಮೂರನೇ ಆರ್ಥಿಕ ಶಕ್ತಿ ಮಾಡುತ್ತೇನೆ ಎನ್ನುವುದರ ಬಗ್ಗೆ ಹೆಚ್ಚು ಹೆಚ್ಚು ಮಾತನಾಡುತ್ತಿದ್ದಾರೆ ಅನ್ನುವುದು ಗಮನಿಸಬೇಕಾದ ಸಂಗತಿ.

India Gate: ರಾಜ್ಯ ಬಿಜೆಪಿಗರ ಮೇಲೆ ಪ್ರಧಾನಿ ಮೋದಿಗೆ ಸಿಟ್ಟೇಕೆ?

ಬಿಜೆಪಿಗಿರುವ ಆತಂಕ ಏನು?

ಕರ್ನಾಟಕದ ಚುನಾವಣೆಗಿಂತ ಮುಂಚೆ ಬಿಜೆಪಿ ಒಳಗಡೆ ಏಕರೂಪ ನಾಗರಿಕ ಕಾನೂನು ತರುವುದರ ಬಗ್ಗೆ ಬಹಳಷ್ಟು ಉತ್ಸಾಹ ಇತ್ತು. ಆದರೆ ಮಣಿಪುರದ ಗಲಾಟೆ ನಂತರ ಏಕರೂಪ ನಾಗರಿಕ ಕಾನೂನಿನ ಹೆಸರಿನಲ್ಲಿ ಈಶಾನ್ಯ ಮತ್ತು ಪೂರ್ವದ ರಾಜ್ಯಗಳಲ್ಲಿರುವ ಆದಿವಾಸಿಗಳನ್ನು ಕಾಂಗ್ರೆಸ್‌ ಮತ್ತು ಉಳಿದ ಪ್ರಾದೇಶಿಕ ಪಾರ್ಟಿಗಳು ಸಂಘಟಿತರನ್ನಾಗಿ ಮಾಡಿ ಬೀದಿಗಿಳಿಸಿದರೆ ಏನು ಮಾಡುವುದು ಎಂಬ ಆಲೋಚನೆಯಲ್ಲಿ ಬಿಜೆಪಿ ಇದೆ. ಜೊತೆಗೆ ಕರ್ನಾಟಕದಲ್ಲಿ ಆದಂತೆ ಹಿಂದೂ ಸಮುದಾಯ ಒಂದು ವಿಷಯ ಅಂತ ಒಟ್ಟಿಗೆ ಬರದೇ ಬಿಜೆಪಿ ಮತ್ತು ಮೋದಿ ವಿರುದ್ಧ ಎಂಬ ಕಾರಣಕ್ಕಾಗಿ ಪೂರ್ತಿ ಕಾಂಗ್ರೆಸ್‌ ಕಡೆಗೆ ವಾಲಿದರೆ ಕಾಂಗ್ರೆಸ್‌ ಇನ್ನಷ್ಟುಮಜಬೂತು ಆಗಬಹುದು ಎನ್ನುವ ಚಿಂತನೆಯೂ ಬಿಜೆಪಿ ದಿಲ್ಲಿ ನಾಯಕರಲ್ಲಿದೆ. ಅರ್ಥ ಸ್ಪಷ್ಟ. ಹಿಂದುತ್ವ ಇರಲಿ, ಸೆಕ್ಯೂಲರಿಸಮ್‌ ಇರಲಿ, ವೈಚಾರಿಕವಾದಗಳಿಗೊಂದು ಸೀಮಿತತೆ ಇದೆ. ಅದರ ಜೊತೆಗೆ ವೇಗವಾದ ಸರ್ವಸ್ಪರ್ಶಿಯಾದ ಅಭಿವೃದ್ಧಿ ಮತ್ತು ಜನರ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಕೊಡದೇ ಇದ್ದರೆ ಚುನಾವಣೆ ಗೆಲ್ಲೋದು ಕಷ್ಟ.

ಸಂಸದರ ಸಭೇಲಿ ಮೋದಿ ಹೇಳಿದ್ದೇನು?

ಬಹುತೇಕ ರಾಜ್ಯಗಳ ಸಂಸದರ ಜೊತೆ ಪ್ರತ್ಯೇಕವಾಗಿ ಮಾತನಾಡಿದ ಪ್ರಧಾನಿ ಮೋದಿ 2014ಕ್ಕಿಂತ ಮೊದಲು ನಿಮ್ಮ ನಿಮ್ಮ ರಾಜ್ಯಗಳಲ್ಲಿ ಮೂಲಭೂತ ಸೌಕರ್ಯ ಹೇಗಿತ್ತು, ಇವತ್ತು ಹೇಗಿದೆ, ಎಷ್ಟುಬದಲಾಗಿದೆ ಅನ್ನುವುದನ್ನು ಉದಾಹರಣೆ ಸಮೇತ ಹೇಳಿ ಮನವರಿಕೆ ಮಾಡಿ ಕೊಡಿ. ಆಗ ಕಳೆದ ಬಾರಿ ನಮಗೆ ವೋಟು ಹಾಕದ ಮತದಾರ ಮತ್ತು ಮೊದಲ ಬಾರಿ ವೋಟು ಹಾಕುವ ಉತ್ಸಾಹದಲ್ಲಿರುವ ಮತದಾರ ನಮ್ಮತ್ತ ವಾಲುತ್ತಾರೆ. ಅದು ಬಿಟ್ಟು ನೀವು ಕ್ಯಾಮೆರಾಗಳ ಎದುರು ಹಾಗೂ ಜನರ ಎದುರು ಆರ್ಟಿಕಲ್‌ 370 ರದ್ದು ಮಾಡಿದ್ವಿ, ಅದಕ್ಕೆ ವೋಟು ಕೊಡಿ, ರಾಮ ಮಂದಿರ ಕಟ್ಟಿದ್ದೇವೆ ಅದಕ್ಕೆ ವೋಟು ಕೊಡಿ ಅನ್ನುತ್ತಾ ಇರಬೇಡಿ. ಹಿಂದುತ್ವದ ಕಾರಣದಿಂದ ವೋಟು ಹಾಕುವವರು ನಮ್ಮ ಜೊತೆ ಇದ್ದೇ ಇದ್ದಾರೆ. ಈಗ ಅಭಿವೃದ್ಧಿ ಕಾರಣದಿಂದ, ಭ್ರಷ್ಟಾಚಾರದ ಆರೋಪ ಇಲ್ಲದ ಕಾರಣದಿಂದ ನಮ್ಮ ಕಡೆ ನೋಡುತ್ತಿರುವ, ಇನ್ನೂ ಯಾರಿಗೆ ವೋಟು ಅನ್ನೋದನ್ನು ನಿರ್ಣಯ ಮಾಡಿಲ್ಲದ ಮತದಾರರಿಗೆ ಮನವರಿಕೆ ಮಾಡಿಕೊಡುವ ಬಗ್ಗೆ ಆದ್ಯತೆ ಇರಲಿ ಎಂದು ಹೇಳಿ ಕಳುಹಿಸಿದ್ದಾರೆ. ಈ ಮಾತುಗಳ ತಾತ್ಪರ್ಯ ಗಮನಿಸಿದರೆ ಮೋದಿ ಸಾಹೇಬರು 2024ರ ಚುನಾವಣೆಯಲ್ಲಿ ಹಿಂದುತ್ವದ ಜೊತೆಗೆ 10 ವರ್ಷಗಳಲ್ಲಿ ಆಗಿರುವ ಪ್ರಗತಿ ಮತ್ತು ರಾಜಕೀಯ ಸ್ಥಿರತೆಯನ್ನು ಹೆಚ್ಚು talking point ಮಾಡುವ ರೀತಿ ಕಾಣುತ್ತಿದೆ. ತುಂಬಾ ಸೂಕ್ಷ್ಮವಾಗಿ ಮೋದಿ ಅವರು ಗುಜರಾತ್‌ನಲ್ಲಿ ಗೆದ್ದಿರುವ ಮೂರು ಚುನಾವಣೆಗಳು ಮತ್ತು ದೇಶದಲ್ಲಿ ಗೆದ್ದಿರುವ ಎರಡು ಚುನಾವಣೆಗಳನ್ನು ಗಮನಿಸಿದರೆ ಪ್ರತಿಯೊಂದು ಚುನಾವಣೆಯಲ್ಲೂ ಹೊಸ ವಿಷಯ ಮುಂದಕ್ಕೆ ತಂದಿದ್ದು ಕಾಣುತ್ತದೆ. 2002ರಲ್ಲಿ ಹಿಂದೂ ಮುಸ್ಲಿಂ ದಂಗೆಗಳ ನಂತರ ಹಿಂದೂ ಹೃದಯ ಸಾಮ್ರಾಟ್‌ ಅನ್ನುವ ಪ್ರಚಾರ, 2007ರಲ್ಲಿ ಗುಜರಾತ್‌ ಮಾಡೆಲ… ಅಭಿವೃದ್ಧಿ ಅನ್ನುವ ಪ್ರಚಾರ, 2012ರಲ್ಲಿ ಒಬ್ಬ ಗುಜರಾತಿ ಪ್ರಧಾನಿ ಆಗಬೇಕು ಅನ್ನುವ ಅಸ್ಮಿತೆಯ ಪ್ರಚಾರ, 2014ರಲ್ಲಿ ಭ್ರಷ್ಟಾಚಾರದ ವಿರುದ್ಧ ನಾನು ಒಬ್ಬನೇ ಹೋರಾಡುತ್ತೇನೆ ಅನ್ನುವ ಪ್ರಚಾರ, 2019ರಲ್ಲಿ ರಾಷ್ಟ್ರೀಯ ಭದ್ರತೆಯ ಪ್ರಚಾರ ಮೋದಿ ಅವರನ್ನು ಗೆಲುವಿನ ದಡಕ್ಕೆ ತಲುಪಿಸಿತ್ತು. ಹೀಗಾಗಿ 2024ರಲ್ಲಿ ಮೋದಿ ಮತ್ತು ಇತರರು ಎಂದೂ ಕಾಣದಷ್ಟುಅಭಿವೃದ್ಧಿ ಮತ್ತು ಸ್ಥಿರತೆಯ ಪ್ರಶ್ನೆ ಇಟ್ಟುಕೊಂಡು ಹೋಗುತ್ತಾರೆ ಅನ್ನಿಸುತ್ತಿದೆ. ಅದಕ್ಕೇ ಇರಬೇಕು ಮೋದಿ ಪದೇ ಪದೇ ಅಮೆರಿಕ, ಚೀನಾ ನಂತರದ ಆರ್ಥಿಕ ಶಕ್ತಿಯಾಗಿ ಜಪಾನ್‌ ಮತ್ತು ಜರ್ಮನಿಯನ್ನು ಕೂಡ ಹಿಂದಿಕ್ಕಿ ಭಾರತ ಮುನ್ನುಗ್ಗುಲಿದೆ, ಅದಕ್ಕೆ ನನಗೆ ಇನ್ನೊಂದು ಅವಕಾಶ ಕೊಡಿ ಎಂದು ನೆನಪಿಸುತ್ತಿದ್ದಾರೆ.

ಹೊಸ ತಲೆಮಾರು ಯಶಸ್ಸು ತರುತ್ತಾ?

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್‌ ಒಂದನ್ನು ಬಿಟ್ಟರೆ ಎರಡನೇ ತಲೆಮಾರಿನಲ್ಲೂ ಯಶಸ್ವಿಯಾದ ರಾಜಕೀಯ ಪಕ್ಷ ಇಲ್ಲ. ಕಾಂಗ್ರೆಸ್‌ ಪಕ್ಷ ಮಾತ್ರ ಮೊದಲು ಕೆಂಗಲ… ಹನುಮಂತಯ್ಯ, ನಂತರ ನಿಜಲಿಂಗಪ್ಪ, ಆಮೇಲೆ ದೇವರಾಜ್‌ ಅರಸು, ವೀರೇಂದ್ರ ಪಾಟೀಲ್‌, ಬಂಗಾರಪ್ಪ, ಎಸ್‌.ಎಂ.ಕೃಷ್ಣ, ಸಿದ್ದರಾಮಯ್ಯ, ಈಗ ಡಿ.ಕೆ.ಶಿವಕುಮಾರ್‌ವರೆಗೆ ಸಾಲುಸಾಲು ಜನಪ್ರಿಯತೆ ಇರುವ ನಾಯಕರನ್ನು ಒಂದೋ ತಯಾರು ಮಾಡಿದೆ, ಅಪರೂಪಕ್ಕೆ ಆಮದು ಮಾಡಿಕೊಂಡಿದೆ. ಆದರೆ ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಮೊದಲು ಅಧಿಕಾರ ಅನುಭವಿಸಿದ ಜನತಾ ಪಾರ್ಟಿ ಮೊದಲನೇ ತಲೆಮಾರಿನ ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್‌.ಪಟೇಲ್‌ ಮತ್ತು ಎಸ್‌.ಆರ್‌.ಬೊಮ್ಮಾಯಿ ಇರುವವರೆಗೆ ಒಂದು ರಾಜಕೀಯ ಪ್ರಸ್ತುತತೆ ಉಳಿಸಿಕೊಂಡು ಎರಡು ಬಾರಿ ಅಧಿಕಾರ ಹಿಡಿಯಿತು. ನಂತರ ಅವಸಾನ ಕಂಡಿತು. ಮುಂದೆ ಎರಡು ಬಾರಿ ರಾಜ್ಯದಲ್ಲಿ ಅಧಿಕಾರ ಹಿಡಿದ ಬಿಜೆಪಿಯ ಉಚ್ಛ್ರಾಯಕ್ಕೆ ಕಾರಣ ಯಡಿಯೂರಪ್ಪ ಮತ್ತು ಅನಂತಕುಮಾರ್‌ ಜೋಡಿ. ಯಡಿಯೂರಪ್ಪ ರೈತ ಹೋರಾಟ ಮತ್ತು ಜಾತಿ ಪ್ರಾಬಲ್ಯದ ಕಾರಣದಿಂದ ಜನಪ್ರಿಯರಾಗಿ ಬೆಳೆದರೆ, ಅನಂತಕುಮಾರ್‌ ತಮ್ಮ ಚತುರ ರಾಜಕಾರಣ ಮತ್ತು ಸಂಘಟನಾ ಸಾಮರ್ಥ್ಯದಿಂದಾಗಿ ತಾವೂ ಬೆಳೆದರು, ಜೊತೆಗೆ ಪಾರ್ಟಿಯನ್ನೂ ಬೆಳೆಸಿದರು. ಆದರೆ ಈಗ ಒಂದು ಕಡೆ ಯಡಿಯೂರಪ್ಪ ನೇಪಥ್ಯಕ್ಕೆ ಸರಿದು ಅನಂತಕುಮಾರ್‌ ತೀರಿಕೊಂಡಿರುವಾಗ ಮರಳಿ ಬಿಜೆಪಿ ಕವಲು ದಾರಿಗೆ ಬಂದು ತಲುಪಿದೆ. ಇವತ್ತು ಯಡಿಯೂರಪ್ಪರಂಥ ಒಬ್ಬ ಮಾಸ್‌ ಲೀಡರ್‌ ಮತ್ತು ಅನಂತ ಕುಮಾರ್‌ರಂತಹ ಮತ್ತೊಬ್ಬ ಚತುರ ಸಂಘಟಕರನ್ನು ಬಿಜೆಪಿ ಹೈಕಮಾಂಡ್‌ ಮತ್ತು ಆರ್‌ಎಸ್‌ಎಸ್‌ ಸೇರಿಕೊಂಡು ತಯಾರು ಮಾಡುವಲ್ಲಿ ಯಶಸ್ವಿ ಆಗ್ತಾವಾ ಅನ್ನುವುದು ರಾಜ್ಯದಲ್ಲಿ ಭವಿಷ್ಯದ ಕಾಂಗ್ರೆಸ್ಸೇತರ ರಾಜಕಾರಣದ ಭವಿಷ್ಯ ನಿರ್ಧರಿಸಲಿದೆ. ರಾಜಕಾರಣದ ಒಂದು ವಿಶೇಷತೆ ಎಂದರೆ ಪಾರ್ಟಿ ಕಟ್ಟುವಾಗ ನಾಯಕರ ನಡುವೆ ಪ್ರೀತಿ ಸ್ವಲ್ಪ ಕಡಿಮೆ ಇದ್ದರೂ ಪರವಾಗಿಲ್ಲ, ಆದರೆ ವಿಶ್ವಾಸಕ್ಕೆ ಕೊರತೆ ಆಗಬಾರದು. ಆದರೆ ಇವತ್ತಿನ ಕರ್ನಾಟಕ ಬಿಜೆಪಿಯಲ್ಲಿ ವಿಪರ್ಯಾಸ ನೋಡಿ, ಪರಸ್ಪರ ಪ್ರೀತಿಯೂ ಇಲ್ಲ, ವಿಶ್ವಾಸವೂ ಇಲ್ಲ.

India Gate: 'ಅವಿಶ್ವಾಸ'ದಿಂದ ಕಾಂಗ್ರೆಸ್ ಸಾಧಿಸಿದ್ದೇನು?

ಕಾಂತೇಶ್‌ಗೆ ಟಿಕೆಟ್‌ ಸಿಗುತ್ತಾ?

ಬಿಜೆಪಿ ಹೈಕಮಾಂಡ್‌ ನೀವು ಶಿವಮೊಗ್ಗದಿಂದ ನಿಲ್ಲೋದು ಬೇಡ ಎಂದು ಹೇಳಿದಾಗ ಒಂದು ಕ್ಷಣವೂ ಹಿಂದೆಮುಂದೆ ನೋಡದೆ ನಾನು ನಿಲ್ಲೋದಿಲ್ಲ ಎಂದು ಪತ್ರಕ್ಕೆ ಸಹಿ ಮಾಡಿ ಕೊಟ್ಟಈಶ್ವರಪ್ಪ ಈಗ ಏನಾದರೂ ಮಾಡಿ ಮಗನಿಗೆ ಹಾವೇರಿಯಿಂದ ಟಿಕೆಟ್‌ ಕೊಡಿಸಿ ಎಂದು ಆರ್‌ಎಸ್‌ಎಸ್‌ ನಾಯಕರಿಗೆ ಹೇಳಿ ಸ್ವತಃ ತಾವೇ ಕ್ಷೇತ್ರದ ತುಂಬಾ ಮಗನನ್ನು ಕರೆದುಕೊಂಡು ಓಡಾಡುತ್ತಿದ್ದಾರೆ. ಈಶ್ವರಪ್ಪ ಆರ್‌ಎಸ್‌ಎಸ್‌ ನಾಯಕರ ಮುಂದೆ ಇಟ್ಟಿರುವ ತರ್ಕ ಲೋಕಸಭೆಯಲ್ಲಿ ತುಮಕೂರು, ಶಿವಮೊಗ್ಗ, ಹಾವೇರಿ, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ, ಬೀದರ, ಕೊಪ್ಪಳ, ದಾವಣಗೆರೆ ಹೀಗೆ 9 ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೆಟ್‌ ನೀಡುವ ಬಿಜೆಪಿ 6 ಟಿಕೆಟ್‌ ಒಕ್ಕಲಿಗರಿಗೆ, 3 ಟಿಕೆಟ್‌ ಬ್ರಾಹ್ಮಣರಿಗೆ ಕೊಟ್ಟು ಮೀಸಲು ಕ್ಷೇತ್ರಗಳಲ್ಲಿ ಸಹಜವಾಗಿ ದಲಿತರಿಗೆ ಸೀಟು ಸಿಗುತ್ತದೆ. ಲೋಕಸಭೆಗೆ ಹಿಂದುಳಿದವರು ಎಂದು ಟಿಕೆಟ್‌ ಕೊಡುವುದು ಬೆಂಗಳೂರು ಸೆಂಟ್ರಲ್‌ ನಿಂದ ಬಲಿಜ ಸಮುದಾಯದ ಪಿ.ಸಿ.ಮೋಹನ್‌ಗೆ ಮಾತ್ರ. ಹೀಗಾಗಿ ಈಶ್ವರಪ್ಪ ಒಂದು ಟಿಕೆಟ್‌ ಕುರುಬ ಸಮುದಾಯಕ್ಕೆ, ಒಂದು ಟಿಕೆಟ್‌ ಬಿಲ್ಲವರಿಗೆ, ಸಾಧ್ಯವಾದರೆ ಇನ್ನೊಂದು ಗೊಲ್ಲರಿಗೆ ಟಿಕೆಟ್‌ ಕೊಡಿ ಎಂದು ಆರ್‌ಎಸ್‌ಎಸ್‌ ನಾಯಕರ ಮೂಲಕ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಈಶ್ವರಪ್ಪ ಹೇಳುತ್ತಿರುವ ತರ್ಕ ಅಂದರೆ ಯಡಿಯೂರಪ್ಪನವರ ಇಬ್ಬರು ಪುತ್ರರಾದ ರಾಘವೇಂದ್ರ ಮತ್ತು ವಿಜಯೇಂದ್ರಗೆ ಟಿಕೆಟ್‌ ಸಿಕ್ಕಿದೆ. ನನ್ನ ಮಗ ಕಾಂತೇಶ್‌ ಕೂಡ ಪಾರ್ಟಿ ಕೆಲಸ ಮಾಡಿದ್ದಾನೆ. ಹೀಗಾಗಿ ನನ್ನ ಮಗನಿಗೂ ಟಿಕೆಟ್‌ ಕೊಡಿ ಎಂದು. ಆದರೆ ಈಶ್ವರಪ್ಪ ಪುತ್ರಗೆ ಟಿಕೆಟ್‌ ಕೊಡಲು ಸ್ವತಃ ಬೊಮ್ಮಾಯಿ, ಬಿ.ಸಿ.ಪಾಟೀಲ್‌, ಹಾವೇರಿ ಜಿಲ್ಲೆಯ ಬಿಜೆಪಿ ನಾಯಕರು ಒಪ್ಪುತ್ತಿಲ್ಲ. ಅವರು ಕೊಡುತ್ತಿರುವ ಕಾರಣ ಎರಡು 1.ಕಾಂತೇಶ್‌ ಸ್ಥಳೀಯರಲ್ಲ 2.ಪಕ್ಕದ ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ ಜೋಶಿ ನಿಲ್ಲುತ್ತಾರೆ. ಇಲ್ಲೂ ಲಿಂಗಾಯತರಿಗೆ ಕೊಡದೇ ಹೋದರೆ ಪ್ರತಿಕೂಲ ಪರಿಣಾಮ ಆಗಬಹುದು ಎಂದು.

Follow Us:
Download App:
  • android
  • ios