
ಲಕ್ನೋ: ಓದಿಸಿ ನ್ಯಾಯಾಧೀಶೆ ಮಾಡಿದ ಗಂಡನನ್ನೇ ಪತ್ನಿ ವರದಕ್ಷಿಣೆ ಆರೋಪ ಮಾಡಿ ಜೈಲಿಗಟ್ಟಿದ್ದಾಳೆ ಎಂದು ಪತಿಯೋರ್ವ ತನ್ನ ನ್ಯಾಯಾಧೀಶೆ ಪತ್ನಿ ವಿರುದ್ಧ ಆರೋಪ ಮಾಡಿದ್ದಾನೆ. ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಆಗಿರುವ ಮಹಿಳೆಯ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಅಲೋಕ್ ಮೌರ್ಯ ಎಂಬುವವರು ತಮ್ಮ ಎಸ್‌ಡಿಎಂ ಪತ್ನಿ ಜ್ಯೋತಿ ಮೌರ್ಯ (Jyothi Mourya) ವಿರುದ್ಧ ಈ ಆರೋಪ ಮಾಡಿದ್ದಾರೆ. ತಾನು ತನ್ನ ಪತ್ನಿಯನ್ನು ಮ್ಯಾಜಿಸ್ಟೇಟ್ ಮಾಡುವ ಸಲುವಾಗಿ ಹಗಲು ರಾತ್ರಿ ದುಡಿಮೆ ಮಾಡಿ ಓದಿಸಿದ್ದು, ಈಗ ಆಕೆ ನನಗೆ ಮೋಸ ಮಾಡಿದ್ದಾಳೆ ಎಂದು ಗಂಡ ಅಲೋಕ್ ಮೌರ್ಯ ಮಾಧ್ಯಮದೆದುರು ಕಣ್ಣೀರಾಕಿದ್ದಾನೆ. ನ್ಯಾಯಾಧೀಶೆ ತನ್ನನ್ನು ನ್ಯಾಯಾಧೀಶೆ ಮಾಡಿದ ಗಂಡನನ್ನು ಮರೆತು ತನ್ನ ಘನತೆಗೆ ಸರಿಯಾದ ಹಿರಿಯ ಅಧಿಕಾರಿಯೊಬ್ಬರ ಜೊತೆ ಸಂಬಂಧ ಇರಿಸಿಕೊಂಡಿದ್ದಾಳೆ. ಅಲ್ಲದೇ ತನಗೆ ಮ್ಯೂಚುವಲ್ ಆಗಿ (ಪರಸ್ಪರ ಒಪ್ಪಿಗೆಯಿಂದ) ವಿಚ್ಛೇದನ ನೀಡುವಂತೆ ಗಂಡನಿಗೆ ಆಕೆ ಧಮ್ಕಿ ಹಾಕಿದ್ದು, ತನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಗಂಡ ಅಳಲು ತೋಡಿಕೊಂಡಿದ್ದಾನೆ.
ಮದುವೆಯ ನಂತರ ಇಬ್ಬರು ಆರ್ಥಿಕವಾಗಿ ಸಂಕಷ್ಟದಿಂದಿದ್ದರು, ಆದರೂ ಅಲೋಕ್ ಮೌರ್ಯ (Alokh Mourya), ಪತ್ನಿಯ ನ್ಯಾಯಾಧೀಶೆಯಾಗುವ ಕನಸಿಗೆ ಅಡ್ಡಿಯಾಗಬಾರದೆಂದು ಹಗಲಿರುಳು ದುಡಿಮೆ ಮಾಡಿ ಆಕೆಯನ್ನು ಓದಿಸಿದ್ದಾನೆ. ಅಲ್ಲದೇ ಜಡ್ಜ್‌ಗಳ ಪರೀಕ್ಷೆಯಲ್ಲಿ ಪಾಸಾಗುವುದಕ್ಕಾಗಿ ಆಕೆಯನ್ನು ಉತ್ತಮವಾಗಿ ಕೋಚಿಂಗ್ ಕ್ಲಾಸ್‌ಗಳಿಗೆ ಕಳುಹಿಸಿದ್ದಾನೆ. ಇದರ ಜೊತೆಗೆ ಆಕೆಯ ಕಠಿಣ ಪರಿಶ್ರಮವೂ ಜೊತೆಯಾಗಿ ಆಕೆ 2016ರಲ್ಲಿ ಎಸ್‌ಡಿಎಂ ಪರೀಕ್ಷೆ ಪಾಸಾಗಿದ್ದು, ಉತ್ತರಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲೇ (Prayagraj) ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ.
ಜಡ್ಜ್ ಆದ ಬಳಿಕ ಜ್ಯೋತಿಗೆ ಯಶಸ್ಸು ತಲೆಗೇರಿದ್ದು, ಹತ್ತಿದ ಏಣಿಯ ಮೆಟ್ಟಿ ದೂರ ತಳ್ಳಲು ಮುಂದಾಗಿದ್ದಾಳೆ. ಓದಿಸಿದ ಗಂಡನಿಗೆ ಆಕೆ ಮೋಸ (Cheating) ಮಾಡಲು ಶುರು ಮಾಡಿದ್ದಾಳೆ. ಆಕೆ ಮತ್ತೊಬ್ಬ ಹಿರಿಯ ಅಧಿಕಾರಿ ಜೊತೆ ಸಂಬಂಧ ಇರಿಸಿಕೊಂಡಿದ್ದಾಳೆ. ಈಕೆಯ ಈ ಅನೈತಿಕ ಸಂಬಂಧ ಅಲೋಕ್‌ಗೆ ತಿಳಿಯುತ್ತಿದ್ದಂತೆ ಪತ್ನಿಗೆ ಬುದ್ಧಿವಾದ ಹೇಳಿ ಸಂಬಂಧ ಬಿಡುವಂತೆ ಹೇಳಿದ್ದಲ್ಲದೇ ಮದುವೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾನೆ. ಆದರೆ ಜ್ಯೋತಿ ಗಂಡನ ಜೊತೆ ಸಂಬಂಧ ಮುಂದುವರಿಸಲು ಇಷ್ಟವಿಲ್ಲದೇ ಆತನ ವಿರುದ್ಧ ನಕಲಿ ವರದಕ್ಷಿಣೆ ಕೇಸ್ ದಾಖಲಿಸಿದ್ದಾಳೆ ಎಂದು ಪತಿ ಅಲೋಕ್ ಮೌರ್ಯ ದೂರಿದ್ದಾನೆ. ಇದು ಆತನ ಬಂಧನಕ್ಕೂ ಕಾರಣವಾಗಿದ್ದು, ಪ್ರಸ್ತುತ ಆತ ಜಾಮೀನು ಮೇರೆಗೆ ಜೈಲಿನಿಂದ ಹೊರಗಿದ್ದಾನೆ, ಜೊತೆಗೆ ತಾನು ಕೆಲಸವನ್ನು ಕಳೆದುಕೊಂಡಿದ್ದೇನೆ ಎಂದು ಅಲೋಕ್ ಕಣ್ಣೀರಾಕಿದ್ದಾನೆ.
ಹಲವು ವರ್ಷಗಳ ಕಾಲ ಪತ್ನಿಯ ಶಿಕ್ಷಣಕ್ಕಾಗಿ ವೆಚ್ಚ ಮಾಡಿದ ತಾನು ಇಂದು ಆಕೆಯ ಕಾರಣದಿಂದಲೇ ನಿರುದ್ಯೋಗಿಯಾಗಿದ್ದೇನೆ. ಒಪ್ಪಿಗೆಯಿಂದ ಆಕೆಗೆ ವಿಚ್ಛೇದನ ನೀಡದೇ ಹೋದರೆ ಕೊಲೆ ಮಾಡುವುದಾಗಿಯೂ ತನಗೆ ಬೆದರಿಕೆ ಕರೆಗಳು ಬರುತ್ತಿವೆ. ಪೊಲೀಸ್ ಇಲಾಖೆ ಹಾಗೂ ಇತರ ಆಡಳಿತದಿಂದಲೂ ನನಗೆ ಯಾವುದೇ ಬೆಂಬಲವಿಲ್ಲದಾಗಿದೆ ಎಂದು ಅಲೋಕ್ ಕಣ್ಣೀರಿಟ್ಟಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ