ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ದ್ವಿಪಕ್ಷೀಯ ಪಾಲುದಾರಿಕೆ, ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳು, ಪ್ರಮುಖ ಸ್ಮಾರಕಗಳು ಮತ್ತು ಪುರಾತತ್ವ ಪ್ರದೇಶಗಳ ರಕ್ಷಣೆ ಹಾಗೂ ಕಾನೂನಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇದಲ್ಲದೇ ಸಹಕಾರ, ರಕ್ಷಣೆ, ವ್ಯಾಪಾರ, ಹೂಡಿಕೆ ಒಪ್ಪಂದ, ವಿಜ್ಞಾನ ಮತ್ತು ಶೈಕ್ಷಣಿಕ ಸಹಭಾಗಿತ್ವದ ಕುರಿತಾಗಿ ಮಾತುಕತೆ ನಡೆಸಲಾಯಿತು. ಇದು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ಭೇಟಿಯಾಗಿತ್ತು ಎಂದು ಹೇಳಿದ್ದಾರೆ.
ಕೈರೋ (ಜೂನ್ 26, 2023): ಪ್ರಧಾನಿ ನರೇಂದ್ರ ಮೋದಿ ಅವರ 2 ದಿನದ ಈಜಿಪ್ಟ್ ಪ್ರವಾಸಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿದ್ದು, ಕೃಷಿ, ಸ್ಮಾರಕ ರಕ್ಷಣೆ, ವ್ಯೂಹಾತ್ಮಕ, ವ್ಯಾಪಾರ ವಲಯಗಳಿಗೆ ಸಂಬಂಧಿಸಿದ 4 ಪ್ರಮುಖ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ. ಸೋಮವಾರ ಬೆಳಗ್ಗಿನ ಜಾವ ಪ್ರಧಾನಿ ಮೋದಿ ಭಾರತಕ್ಕೆ ವಾಪಸಾಗಿದ್ದಾರೆ.
ಭಾನುವಾರ ಮಧ್ಯಾಹ್ನ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್ ಸಿಸಿ ಅವರನ್ನು ಮೋದಿ ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ, ‘26 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಈಜಿಪ್ಟ್‌ಗೆ ದ್ವಿಪಕ್ಷೀಯ ಭೇಟಿ ನೀಡಿದ್ದು, ಈ ವೇಳೆ ಪ್ರಮುಖವಾಗಿ 4 ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ದ್ವಿಪಕ್ಷೀಯ ಪಾಲುದಾರಿಕೆ, ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳು, ಪ್ರಮುಖ ಸ್ಮಾರಕಗಳು ಮತ್ತು ಪುರಾತತ್ವ ಪ್ರದೇಶಗಳ ರಕ್ಷಣೆ ಹಾಗೂ ಕಾನೂನಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇದಲ್ಲದೇ ಸಹಕಾರ, ರಕ್ಷಣೆ, ವ್ಯಾಪಾರ, ಹೂಡಿಕೆ ಒಪ್ಪಂದ, ವಿಜ್ಞಾನ ಮತ್ತು ಶೈಕ್ಷಣಿಕ ಸಹಭಾಗಿತ್ವದ ಕುರಿತಾಗಿ ಮಾತುಕತೆ ನಡೆಸಲಾಯಿತು. ಇದು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ಭೇಟಿಯಾಗಿತ್ತು’ ಎಂದು ಹೇಳಿದ್ದಾರೆ.
ಇದನ್ನು ಓದಿ: ಈಜಿಪ್ಟ್ ಅತ್ಯುನ್ನತ ರಾಜ್ಯ ಗೌರವ 'ಆರ್ಡರ್ ಆಫ್ ದಿ ನೈಲ್' ಸ್ವೀಕರಿಸಿದ ಮೋದಿ: ಐತಿಹಾಸಿಕ ಮಸೀದಿಗೆ ಭೇಟಿ
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅಲ್ ಸಿಸಿ ಪ್ರಧಾನಿ ಮೋದಿ ಅವರನ್ನು ಈಜಿಪ್ಟ್‌ಗೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ 2 ದಿನಗಳ ಈಜಿಪ್ಟ್ ಪ್ರವಾಸ ಕೈಗೊಂಡ ಮೋದಿ, ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಇದಾದ ಬಳಿಕ ಈಜಿಪ್ಟ್ ಅಧ್ಯಕ್ಷರು ನೀಡಿದ ಔತಣಕೂಟದಲ್ಲಿ ಮೋದಿ ಭಾಗಿಯಾದರು. ನಂತರ ಭಾರತಕ್ಕೆ ಮರಳಿದರು.
ಐತಿಹಾಸಿಕ ಗೀಜಾ ಪಿರಿಮಿಡ್‌ಗೆ ಮೋದಿ ಭೇಟಿ
ಈಜಿಪ್ಟ್‌ನ ರಾಜಧಾನಿ ಕೈರೋದ ಹೊರವಲಯದಲ್ಲಿರುವ, ವಿಶ್ವದ 7 ಅದ್ಭುತಗಳಲ್ಲಿ ಒಂದಾದ ಗೀಜಾ ಪಿರಮಿಡ್‌ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಭೇಟಿ ನೀಡಿದರು. ಈ ವೇಳೆ ಪಿರಿಮಿಡ್‌ಗಳ ಐತಿಹ್ಯದ ಬಗ್ಗೆ ಆಸಕ್ತಿಯಿಂದ ಮಾಹಿತಿ ಪಡೆದರು.
ಇದನ್ನೂ ಓದಿ: ಇಂದು ಐತಿಹಾಸಿಕ ಮಸೀದಿಗೆ ಭೇಟಿ ನೀಡಲಿರುವ ನಮೋ: ಈಜಿಪ್ಟ್‌ನಲ್ಲೂ ಮೋದಿ.. ಮೋದಿ ಘೋಷಣೆ
ನೈಲ್ ನದಿಯ ಪಶ್ವಿಮ ತೀರದಲ್ಲಿ ನಿರ್ಮಾಣವಾಗಿರುವ ಈ ಪಿರಮಿಡ್ ಸೇರಿದಂತೆ 3 ಪಿರಮಿಡ್‌ಗಳನ್ನು ಮೋದಿ ವೀಕ್ಷಿಸಿದರು. ಇದು ಈಜಿಪ್ಟ್‌ನಲ್ಲೇ ಅತಿದೊಡ್ಡ ಪಿರಮಿಡ್ ಆಗಿದ್ದು, 4ನೇ ರಾಜಕುಟುಂಬಕ್ಕೆ ಸೇರಿದ ಖುಫು ರಾಜನ ಬಹುದೊಡ್ಡ ಸಮಾಧಿಯಾಗಿದೆ. ಇದನ್ನು ಕ್ರಿ.ಪೂ .26ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದರ ನಿರ್ಮಾಣಕ್ಕೆ 27 ವರ್ಷಗಳನ್ನು ತೆಗೆದುಕೊಳ್ಳಲಾಗಿತ್ತು.
ಹಕೀಮಿ ಮಸೀದಿಯ ವಾಸ್ತುಶಿಲ್ಪಕ್ಕೆ ಮೋದಿ ಪ್ರಶಂಸೆ
2 ದಿನಗಳ ಅಧಿಕೃತ ಈಜಿಪ್ಟ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 11ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಅಲ್ ಹಕೀಮಿಗೆ ಮಸೀದಿಗೆ ಭೇಟಿ ನೀಡಿದರು. ಈ ವೇಳೆ ಮಸೀದಿಯ ವಾಸ್ತುಶಿಲ್ಪವನ್ನು ಅವರು ಹೊಗಳಿದರು.
ಇದನ್ನೂ ಓದಿ: ಭಾರತದಲ್ಲಿ ಅಮೆರಿಕ ದಿಗ್ಗಜ ಕಂಪನಿಗಳಿಂದ ಬಂಪರ್ ಬಂಡವಾಳ: ಮೋದಿ ಭೇಟಿ ಬೆನ್ನಲ್ಲೇ ಅಮೆಜಾನ್, ಗೂಗಲ್, ಬೋಯಿಂಗ್ ಹೂಡಿಕೆ
ದಾವೂದಿ ಬೊಹ್ರಾ ಸಮುದಾಯದ ಸಹಾಯದೊಂದಿಗೆ ಈ ಮಸೀದಿಯನ್ನು 3 ತಿಂಗಳ ಹಿಂದೆ ಮರುನಿರ್ಮಾಣ ಮಾಡಲಾಗಿತ್ತು. ಈಜಿಪ್ಟ್‌ನ ಪ್ರವಾಸೋದ್ಯಮ ಸಚಿವರ ಜೊತೆ ಮಸೀದಿಗೆ ಭೇಟಿ ನೀಡಿದ ಮೋದಿ, ಒಳಾಂಗಣದಲ್ಲಿ ಕೆತ್ತಲಾಗಿರುವ ಬರಹಗಳನ್ನು ಬಹುವಾಗಿ ಮೆಚ್ಚಿಕೊಂಡರು. ಬಳಿಕ ಕೈರೋದಲ್ಲಿರುವ ಅಲ್ ಹಕೀಮ್ ಮಸೀದಿಗೆ ಭೇಟಿ ನೀಡಿದ್ದು ಸಂತೋಷವಾಗಿದೆ. ಇದು ಈಜಿಪ್ಟ್‌ನ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಸಾಕ್ಷಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಇದೇ ವೇಳೆ ಬೊಹ್ರಾ ಸಮುದಾಯದ ನಾಯಕರನ್ನು ಭೇಟಿ ಮಾಡಿ ಮೋದಿ ಮಾತುಕತೆ ನಡೆಸಿದರು. ಪ್ರಧಾನಿಯಾಗುವುದಕ್ಕಿಂತ ಮೊದಲೇ ಮೋದಿ ಅವರು ಈ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
1012ರಲ್ಲಿ ನಿರ್ಮಾಣವಾದ ಈ ಮಸೀದಿ ಸುಮಾರು 13,500 ಚದರ ಮೀ. ವಿಸ್ತೀರ್ಣವನ್ನು ಹೊಂದಿದೆ.
ಇದನ್ನೂ ಓದಿ: ಇಂದಿನಿಂದ ಪ್ರಧಾನಿ ಮೋದಿ 2 ದಿನ ಈಜಿಪ್ಟ್ ಪ್ರವಾಸ: 1000 ವರ್ಷ ಹಳೆಯ ಮಸೀದಿಗೆ ಭೇಟಿ
ಭಾವೈಕ್ಯತೆಗೆ ಮೋದಿ ಕೊಡುಗೆ: ಈಜಿಪ್ಟ್ ಧರ್ಮಗುರು ಶ್ಲಾಘನೆ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾವೈಕ್ಯತೆ ಮತ್ತು ಬಹುತ್ವಕ್ಕೆ ಶ್ರಮಿಸುತ್ತಿದ್ದಾರೆ ಎಂದು ಈಜಿಪ್ಟ್‌ನ ಪರಮೋಚ್ಚ ಧಾರ್ಮಿಕ ನಾಯಕ, ಗ್ರಾಂಡ್ ಮುಫ್ತಿ ಡಾ. ಶಾಕಿ ಇಬ್ರಾಹಿಂ ಅಬ್ದೆಲ್ ಕರೀಂ ಅಲ್ಲಂ ಅವರು ಪ್ರಶಂಸಿಸಿದ್ದಾರೆ.
‘ಶನಿವಾರ ತಡರಾತ್ರಿ ಮುಫ್ತಿ ಅವರನ್ನು ಮೋದಿ ಭೇಟಿಯಾದರು. ಈ ವೇಳೆ ಉಭಯ ಗಣ್ಯರ ನಡುವೆ ಭಯೋತ್ಪಾದನೆ, ತೀವ್ರವಾದ, ಧರ್ಮಾಂಧತೆ ಹಾಗೂ ಕೋಮುಸೌಹಾರ್ದದ ಕುರಿತಂತೆ ಚಚರ್ಚೆ ನಡೆಯಿತು. ಈ ವೇಳೆ ಮುಫ್ತಿ ಅವರು ತಮ್ಮ ಇತ್ತೀಚಿನ ಭಾರತದ ಭೇಟಿಯನ್ನು ಸ್ಮರಿಸಿದರು ಹಾಗೂ ಈಜಿಪ್ಟ್ - ಭಾರತದ ಜನರ ನಡುವೆ ಸೌಹಾರ್ದ ಸಂಬಂಧವಿದೆ ಎಂದು ಶ್ಲಾಘಿಸಿದರು. ಅಲ್ಲದೆ, ಮೋದಿ ಅವರು ಬಹುತ್ವ ಹಾಗೂ ಜಾತ್ಯತೀತತೆ ಎತ್ತಿ ಹಿಡಿಯಲು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು’ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಅಮೆರಿಕ ಪ್ರವಾಸದ ಜೊತೆಗೆ ಈಜಿಪ್ಟ್‌ಗೂ ಮೋದಿ ಭೇಟಿ: ವಿದೇಶಾಂಗ ಸಚಿವಾಲಯ
ಇತ್ತೀಚೆಗೆ ಅಮರಿಕಕ್ಕೆ ಭೇಟಿ ನೀಡಿದಾಗ ಕೂಡ ಮೋದಿ ಅವರು, ‘ಭಾರತದಲ್ಲಿ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಮಾಡಲಾಗುತ್ತಿದೆ’ ಎಂಬ ಆರೋಪ ನಿರಾಕರಿಸಿದ್ದರು ಹಾಗೂ ‘ದೇಶದಲ್ಲಿ ಧರ್ಮ, ಜಾತಿ, ವರ್ಣ ಆಧರಿತ ತಾರತಮ್ಯವಿಲ್ಲ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಲಾಗುತ್ತಿದೆ. ಸರ್ಕಾರಿ ಯೋಜನೆಗಳು ಯಾವುದೇ ತಾರತಮ್ಯ ಇಲ್ಲದೇ ಜನರನ್ನು ತಲುಪುತ್ತಿವೆ’ ಎಂದಿದ್ದರು.
ಇದನ್ನೂ ಓದಿ: ಅಮೆರಿಕದಲ್ಲಿ ಮೋದಿ ಭೇಟಿ ಸಂಚಲನ: ಹೋಟೆಲ್, ವಿಮಾನ ಪ್ರಯಾಣದ ದರ ಭಾರಿ ಏರಿಕೆ; ಅಧ್ಯಕ್ಷ ದಂಪತಿಯಿಂದ ಆತ್ಮೀಯ ಔತಣ