ಉತ್ತರ ಪ್ರದೇಶದಲ್ಲಿ 100 ಜನರ ಬಲಿ ಪಡೆದ ಚಂಡಮಾರುತ; ಪ್ರಯಾಗರಾಜ್‌ನಲ್ಲಿ ಅತ್ಯಧಿಕ, ಗಾಳಿಯಲ್ಲಿ ತೇಲಿಹೋದ ಮನುಷ್ಯ!

Published : May 14, 2026, 09:43 PM IST
Uttara Pradesh Rain Damange

ಸಾರಾಂಶ

ಉತ್ತರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬಿರುಗಾಳಿ, ಗುಡುಗು ಸಹಿತ ಮಳೆ ಮತ್ತು ಸಿಡಿಲಿಗೆ 100 ಜನರು ಬಲಿಯಾಗಿದ್ದಾರೆ. ಈ ಪ್ರಕೃತಿ ವಿಕೋಪದಿಂದಾಗಿ ರಾಜ್ಯಾದ್ಯಂತ ಅಪಾರ ಹಾನಿಯಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತ್ರಸ್ತರಿಗೆ 24 ಗಂಟೆಯೊಳಗೆ ಪರಿಹಾರ ವಿತರಿಸಲು ಆದೇಶಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದು, ಅನಿರೀಕ್ಷಿತವಾಗಿ ಅಪ್ಪಳಿಸಿದ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆ ಮತ್ತು ಸಿಡಿಲು ಬಡಿತಕ್ಕೆ ಬರೋಬ್ಬರಿ 100 ಮಂದಿ ಬಲಿಯಾಗಿದ್ದಾರೆ. ರಾಜ್ಯದಾದ್ಯಂತ ನೂರಾರು ಮರಗಳು, ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ಹಲವು ಮನೆಗಳು ಧ್ವಂಸಗೊಂಡಿವೆ. ಈ ಭೀಕರ ದುರಂತಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ಸೂಚಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಯೊಳಗೆ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಜಿಲ್ಲಾವಾರು ಸಾವಿನ ವಿವರ:

ಪರಿಹಾರ ಕಮಿಷನರ್ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ಪ್ರಯಾಗ್‌ರಾಜ್ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು ಅಂದರೆ 21 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ ಭದೋಹಿಯಲ್ಲಿ 18, ಮಿರ್ಜಾಪುರದಲ್ಲಿ 15, ಫತೇಪುರದಲ್ಲಿ 10, ಉನ್ನಾವೊ ಮತ್ತು ಬದೌನ್‌ನಲ್ಲಿ ತಲಾ ಆರು ಮಂದಿ ಮೃತಪಟ್ಟಿದ್ದಾರೆ. ಪ್ರತಾಪ್‌ಗಢ ಮತ್ತು ಬರೇಲಿಯಲ್ಲಿ ತಲಾ ನಾಲ್ವರು, ಸೀತಾಪುರ, ರಾಯಬರೇಲಿ ಮತ್ತು ಚಂದೌಲಿಯಲ್ಲಿ ತಲಾ ಇಬ್ಬರು ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಕಾನ್ಪುರ ದೇಹತ್, ಹರ್ದೋಯ್, ಕಾಶಂಬಿ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಾವು-ನೋವು ಸಂಭವಿಸಿದೆ.

ಬೆಚ್ಚಿಬೀಳಿಸಿದ ಬರೇಲಿ ಘಟನೆ:

ಸಾಮಾಜಿಕ ಜಾಲತಾಣಗಳಲ್ಲಿ ಈ ಭೀಕರ ಬಿರುಗಾಳಿಯ ವಿಡಿಯೋಗಳು ವೈರಲ್ ಆಗುತ್ತಿವೆ. ಬರೇಲಿಯ ಬಮಿಯಾನಾ ಗ್ರಾಮದ ವಿಡಿಯೋವೊಂದು ನೋಡುಗರ ಮೈನಡುಗಿಸುವಂತಿದೆ. ಬಿರುಗಾಳಿಯ ರಭಸಕ್ಕೆ ವ್ಯಕ್ತಿಯೊಬ್ಬ ತಗಡಿನ ಶೆಡ್‌ನೊಂದಿಗೆ ಗಾಳಿಯಲ್ಲಿ ಹಾರಿ ಸುಮಾರು 50 ಅಡಿ ದೂರದ ಗದ್ದೆಗೆ ಬಿದ್ದಿದ್ದಾನೆ. 'ನಾನು ಹಗ್ಗ ಹಿಡಿದು ನಿಂತಿದ್ದೆ, ಗಾಳಿ ನನ್ನನ್ನು ಶೆಡ್ ಸಮೇತ ಎತ್ತಿ ಬಿಸಾಡಿತು, ನಾನು ಎಲ್ಲಿ ಬಿದ್ದೆ ಎಂಬ ಅರಿವೇ ಇರಲಿಲ್ಲ' ಎಂದು ಕೈಕಾಲು ಮುರಿದುಕೊಂಡ ಸಂತ್ರಸ್ತ ನನ್ನೆ ಮಿಯಾನ್ ತಿಳಿಸಿದ್ದಾರೆ.

ಸೇತುವೆ ಹಾನಿ ಮತ್ತು ಸಿಡಿಲು ಬಡಿತ:

ಭದೋಹಿಯ ರಾಂಪುರದಲ್ಲಿ ಪಾಂಟೂನ್ ಸೇತುವೆ ಹಾನಿಗೊಳಗಾದ ಪರಿಣಾಮ ಹಲವರು ಗಂಗಾ ನದಿಗೆ ಬಿದ್ದಿರುವ ವರದಿಯಾಗಿದೆ. ಮಿರ್ಜಾಪುರದಲ್ಲಿ ಸೇತುವೆ ಧ್ವಂಸಗೊಂಡಿದ್ದರಿಂದ ಸುಮಾರು 20 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಫತೇಪುರದಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟರೆ, ರಾಜ್ಯದ ವಿವಿಧೆಡೆ ಸಿಡಿಲು ಬಡಿತಕ್ಕೆ ಅನೇಕ ಕೃಷಿಕರು ಮತ್ತು ಮಹಿಳೆಯರು ಬಲಿಯಾಗಿದ್ದಾರೆ. ನೂರಾರು ಜಾನುವಾರುಗಳು ಸಹ ಈ ನೈಸರ್ಗಿಕ ವಿಕೋಪಕ್ಕೆ ಬಲಿಯಾಗಿವೆ.

ಸಿಎಂ ಯೋಗಿ ಆದಿತ್ಯನಾಥ್ ಆದೇಶ:

ದುರಂತದ ತೀವ್ರತೆಯನ್ನು ಗಮನಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಕ್ಷಣವೇ ಪರಿಹಾರ ಕಾರ್ಯ ಚುರುಕುಗೊಳಿಸಲು ಸೂಚಿಸಿದ್ದಾರೆ. ಪ್ರತಿ ಮೂರು ಗಂಟೆಗೊಮ್ಮೆ ಮಳೆ ಹಾನಿಯ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. 'ಸಂತ್ರಸ್ತ ಕುಟುಂಬಗಳ ಜೊತೆ ನೇರ ಸಂಪರ್ಕದಲ್ಲಿರಿ, ಯಾವುದೇ ವಿಳಂಬವಿಲ್ಲದೆ 24 ಗಂಟೆಯೊಳಗೆ ಆರ್ಥಿಕ ನೆರವು ತಲುಪಬೇಕು' ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 30 ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಕ್ಷಣಾ ತಂಡಗಳು ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಲು ಹರಸಾಹಸ ಪಡುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಳಪತಿ ವಿಜಯ್​ಗೆಳತಿ ತ್ರಿಷಾಗೆ ಜಾಕ್​ಪಾಟ್; ಟ್ರೆಂಡಿಂಗ್ ನಟಿಗೆ ಬಂತು ಸೂಪರ್ ಆಫರ್..!
ಬೆಂಗಳೂರಿನಿಂದ ಲೋಕಮಾನ್ಯ ತಿಲಕ ನಿಲ್ದಾಣಕ್ಕೆ ಹೊಸ ರೈಲು ಸೇವೆ ಆರಂಭಿಸಿದ ಭಾರತೀಯ ರೈಲ್ವೇ