
ಅಮೆರಿಕದ ಗ್ರೀನ್ ಕಾರ್ಡ್ (ಶಾಶ್ವತ ನಿವಾಸ) ಬಯಸುವ ಭಾರತೀಯ ವೃತ್ತಿಪರರು ಕೆಲವು ಉದ್ಯೋಗ ಆಧಾರಿತ ವಿಭಾಗಗಳಲ್ಲಿ ಬರೋಬ್ಬರಿ 179 ವರ್ಷಗಳವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು 'ನ್ಯಾಷನಲ್ ಫೌಂಡೇಶನ್ ಫಾರ್ ಅಮೇರಿಕನ್ ಪಾಲಿಸಿ' (NFAP) ನಡೆಸಿದ ನೂತನ ವಿಶ್ಲೇಷಣೆ ತಿಳಿಸಿದೆ.
ಪ್ರಸ್ತುತ ಸುಮಾರು 9,96,599 ಭಾರತೀಯ ವೃತ್ತಿಪರರು ಮತ್ತು ಅವರ ಅವಲಂಬಿತರು ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಸಿಗದೆ ಬಾಕಿ ಪಟ್ಟಿಯಲ್ಲಿ ಸಿಲುಕಿಕೊಂಡಿದ್ದಾರೆ. ಇದು ಅಮೆರಿಕದ ಒಟ್ಟು ಗ್ರೀನ್ ಕಾರ್ಡ್ ಅರ್ಜಿದಾರರ ಪೈಕಿ ಶೇ. 79 ರಷ್ಟಿದೆ. ಪ್ರತಿಯೊಂದು ದೇಶಕ್ಕೂ ನಿಗದಿಪಡಿಸಲಾದ ದೇಶವಾರು ಮಿತಿಯೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ, ಚೀನಾ ಮತ್ತು ಫಿಲಿಪೈನ್ಸ್‌ನಂತಹ ಇತರ ದೇಶಗಳ ಅರ್ಜಿದಾರರಿಗೆ ಹೋಲಿಸಿದರೆ ಭಾರತೀಯರು ಅತ್ಯಂತ ಸುದೀರ್ಘವಾಗಿ ಕಾಯಬೇಕಾಗಿದೆ.
ಅಮೆರಿಕವು ವಾರ್ಷಿಕವಾಗಿ 1,40,000 ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳನ್ನು ನೀಡುತ್ತದೆ. ಆದರೆ, ನಿಯಮಾವಳಿಗಳ ಪ್ರಕಾರ ಯಾವುದೇ ಒಂದು ನಿರ್ದಿಷ್ಟ ದೇಶದ ಪ್ರಜೆಗಳಿಗೆ ಒಟ್ಟು ಕೋಟಾದ ಶೇ.7 ಕ್ಕಿಂತ ಹೆಚ್ಚು ಕಾರ್ಡ್ ನೀಡುವಂತಿಲ್ಲ. ಭಾರತೀಯರು ಪ್ರಮುಖವಾಗಿ ಮೂರು ವಿಭಾಗಗಳ ಮೂಲಕ ಅರ್ಜಿ ಸಲ್ಲಿಸುತ್ತಾರೆ.
EB-1 (ಮೊದಲ ಆದ್ಯತೆ): ವಿಜ್ಞಾನ, ಕಲೆ, ಶಿಕ್ಷಣ, ವ್ಯವಹಾರ ಅಥವಾ ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಹೊಂದಿರುವವರಿಗೆ ನೀಡಲಾಗುತ್ತದೆ.
EB-2 (ಎರಡನೇ ಆದ್ಯತೆ): ಸ್ನಾತಕೋತ್ತರ (Master's) ಅಥವಾ ಉನ್ನತ ಪದವಿ ಹೊಂದಿರುವ ಕೌಶಲ್ಯಪೂರ್ಣ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.
EB-3 (ಮೂರನೇ ಆದ್ಯತೆ): ಸಾಧಾರಣ ಪದವಿ ಹೊಂದಿದ ವೃತ್ತಿಪರರು ಮತ್ತು ಇತರ ನುರಿತ ಕಾರ್ಮಿಕರಿಗೆ ಲಭ್ಯವಿದೆ.
(ಉಳಿದಂತೆ ಧಾರ್ಮಿಕ ಕಾರ್ಯಕರ್ತರಿಗೆ EB-4 ಹಾಗೂ ಹೂಡಿಕೆದಾರರಿಗೆ EB-5 ವಿಭಾಗಗಳಿವೆ).
NFAP ತನ್ನ ನೀತಿ ಸಂಕ್ಷಿಪ್ತ ವರದಿಯಲ್ಲಿ ತಿಳಿಸಿರುವಂತೆ, 2026 ಅಥವಾ ಆನಂತರ ಅರ್ಜಿ ಸಲ್ಲಿಸುವ ಭಾರತದ ಉನ್ನತ ಕೌಶಲ್ಯ ಹೊಂದಿರುವ ವಿದೇಶಿ ಪ್ರಜೆಯೊಬ್ಬರು ಗ್ರೀನ್ ಕಾರ್ಡ್ ಪಡೆಯಲು ಅಂದಾಜು ಕಾಯಬೇಕಾದ ಸಮಯವೆಂದರೆ
EB-2 ವಿಭಾಗ: 179 ವರ್ಷಗಳು
EB-3 ವಿಭಾಗ: 38 ವರ್ಷಗಳು
EB-1 ವಿಭಾಗ: 5 ವರ್ಷಗಳು
ಭಾರತ ಮತ್ತು ಚೀನಾದ ಅರ್ಜಿದಾರರು EB-1 ವಿಭಾಗದಲ್ಲಿ ಒಂದೇ ರೀತಿಯ (5 ವರ್ಷ) ಕಾಯುವಿಕೆ ಎದುರಿಸುತ್ತಿದ್ದಾರೆ. ಆದರೆ, EB-2 ನಲ್ಲಿ ಚೀನಾದ ಅಭ್ಯರ್ಥಿಗಳು 25 ವರ್ಷ ಹಾಗೂ EB-3 ನಲ್ಲಿ ಕೇವಲ 7 ವರ್ಷ ಕಾಯಬೇಕಾಗುತ್ತದೆ. ಆದರೆ ಭಾರತೀಯರಿಗೆ EB-2 ನಲ್ಲೇ 179 ವರ್ಷಗಳ ಕಾಯುವಿಕೆ ನಿಗದಿಯಾಗಿದೆ.
ಈ ಸಮಸ್ಯೆ ಇಂದು ನಿನ್ನೆಯದಲ್ಲ, ಕಳೆದ ಒಂದು ದಶಕದಿಂದಲೂ ಇದೇ ರೀತಿ ಮುಂದುವರೆದಿದೆ. ಉದಾಹರಣೆಗೆ, 2016 ರ ಹಣಕಾಸು ವರ್ಷದಲ್ಲಿ ಅಮೆರಿಕದ USCIS ಸಂಸ್ಥೆಯು ಭಾರತೀಯರಿಗೆ EB-2 ವಿಭಾಗದಲ್ಲಿ 47,601 ಅರ್ಜಿಗಳನ್ನು ಅನುಮೋದಿಸಿತು. ಅವಲಂಬಿತರನ್ನು ಸೇರಿಸಿದರೆ ಈ ಸಂಖ್ಯೆ 98,594 ತಲುಪಿತ್ತು. ಆದರೆ ಅದೇ ವರ್ಷ EB-2 ಅಡಿಯಲ್ಲಿ ಕೇವಲ 4,407 ಭಾರತೀಯರಿಗೆ ಮಾತ್ರ ಗ್ರೀನ್ ಕಾರ್ಡ್ ಸಿಕ್ಕಿತು. ಅಂದರೆ, 2016 ಒಂದೇ ವರ್ಷದಲ್ಲಿ 90,000 ಕ್ಕೂ ಹೆಚ್ಚು ಜನರು ಬಾಕಿ ಪಟ್ಟಿಗೆ ಸೇರ್ಪಡೆಯಾದರು. ಈ ಸರಣಿ 2017 ಮತ್ತು 2018 ರಲ್ಲೂ ಮುಂದುವರಿಯಿತು.
ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಕಾನ್ಸುಲೇಟ್‌ಗಳು ಮುಚ್ಚಿದ್ದರಿಂದ ಕೌಟುಂಬಿಕ ವೀಸಾಗಳು ಬಳಕೆಯಾಗದೆ ಉಳಿದಿದ್ದವು. ಅಮೆರಿಕನ್ ನಿಯಮಗಳ ಪ್ರಕಾರ, ಆ ಬಳಕೆಯಾಗದ ವೀಸಾಗಳನ್ನು ಉದ್ಯೋಗ ವಿಭಾಗಕ್ಕೆ ವರ್ಗಾಯಿಸಲಾಯಿತು. ಇದರಿಂದ 2020 ರಿಂದ 2024 ರ ಅವಧಿಯಲ್ಲಿ ಹೆಚ್ಚುವರಿಯಾಗಿ 2,80,000 ಗ್ರೀನ್ ಕಾರ್ಡ್‌ಗಳು ಲಭ್ಯವಾಗಿದ್ದರೂ ಸಹ, ಉದ್ಯೋಗ ಆಧಾರಿತ ಕಾಯುವಿಕೆ ಪಟ್ಟಿ ಕಳೆದ 5 ವರ್ಷಗಳಲ್ಲಿ ಶೇ. 20.6 ರಷ್ಟು ಹೆಚ್ಚಾಗಿದೆ.
ಈ ನಿಯಮಾವಳಿಗಳು ಮತ್ತು ವಿಳಂಬ ಧೋರಣೆಯಿಂದಾಗಿ ಅಮೆರಿಕದ ಕಂಪನಿಗಳು ಭಾರತದ ಉನ್ನತ ತಂತ್ರಜ್ಞರು ಹಾಗೂ ಪ್ರತಿಭಾವಂತರನ್ನು ಆಕರ್ಷಿಸಲು ಮತ್ತು ತಮ್ಮಲ್ಲೇ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ ಎಂದು NFAP ವರದಿ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ