ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ವೈರಲ್ ಆಗಬೇಕು ಎಂದು ಮೂಗಿಗೆ ಹತ್ತಿ ತುಂಬಿಸಿ ರಸ್ತೆ ಮಧ್ಯೆ ಮಲಗಿದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಕೆಲ ರೀಲ್ಸ್ ಮಾಡುವವರ ಹಾವಳಿ ವಿಪರೀತವಾಗುತ್ತಿದೆ. ಸಾಮಾಜಿಕ ಜಾಲತಾಣ ಹಣ ಮಾಡುವ ಸಾಧನವೂ ಆಗಿರುವುದರಿಂದ ಜನ ಒಂದು ಲೈಕ್ಸ್ ಕಾಮೆಂಟ್‌ಗಾಗಿ ಇಲ್ಲದ ಅವಾಂತರವನ್ನೇ ಮಾಡುತ್ತಿದ್ದಾರೆ. ಕೆಲವರು ತಮ್ಮ ಜೀವಕ್ಕೆ ಅಪಾಯ ತಂದುಕೊಂಡರೆ ಮತ್ತೆ ಕೆಲವರು ತಮ್ಮ ರೀಲ್ಸ್ ಮಾಡುವ ಭರದಲ್ಲಿ ಇನ್ಯಾರಿಗೋ ಕಿರುಕುಳ ನೀಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ವೈರಲ್ ಆಗಬೇಕು ಎಂದು ಮೂಗಿಗೆ ಹತ್ತಿ ತುಂಬಿಸಿ ರಸ್ತೆ ಮಧ್ಯೆ ಮಲಗಿದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹೀಗೆ ತನ್ನದೇ ಸಾವಿನ ನಾಟಕವಾಡಿದ ಯುವಕನನ್ನು ಪೊಲೀಸರು ಕರೆದುಕೊಂಡು ಹೋಗಿ ಕಂಬಿ ಹಿಂದೆ ಕೂರಿಸಿದ್ದಾರೆ.
ಹೀಗೆ ತನ್ನದೇ ಸಾವಿನ ನಾಟಕವಾಡಿದ ಯುವಕನನ್ನು ಮುಕೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತರ ಜೊತೆ ಸೇರಿ ಬ್ಯುಸಿಯಾದ ರಸ್ತೆಯಲ್ಲಿ ಹೆಣದಂತೆ ಕತ್ತಿಗೆ ಹೂವಿನ ಹಾರ ಹಾಕಿಕೊಂಡು ಮೈ ಮೇಲೆ ಬಿಳಿವಸ್ತ್ರ ಹೊದ್ದುಕೊಂಡು ಹೆಣಕ್ಕಿಂತ ನಾನೇನು ಕಡಿಮೆ ಎಂದು ಮೂಗಿಗೂ ಹತ್ತಿ ಇಟ್ಟುಕೊಂಡು ನಡುರಸ್ತೆಯಲ್ಲಿ ಮಲಗಿದ್ದರೆ ಇತ್ತ ಈತನ ಸ್ನೇಹಿತರು ಈ ದೃಶ್ಯವನ್ನು ವೀಡಿಯೋ ಮಾಡಿದ್ದಾರೆ.
ಆತ ಮುಕೇಶ್ ಬಂಧಿತನಾಗಿದ್ದರೂ ಆತನ ಆಸೆಯಂತೆ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಆತ ನಡುರಸ್ತೆಯಲ್ಲಿ ಕೆಂಪು ಬಣ್ಣದ ಮ್ಯಾಟೊಂದರ ಮೇಲೆ ಮಲಗಿದ್ದು ಆತನಿಗೆ ಹೂವಿನ ಹಾರ ಹಾಕಿ ಬಿಳಿ ಬಟ್ಟೆಯನ್ನು ಹೊದಿಸಲಾಗಿದೆ. ಜೊತೆಗೆ ಕತ್ತಿಗೆ ಹೂವಿನ ಹಾರವನ್ನು ಹಾಕಲಾಗಿದ್ದು, ಬಿಳಿ ಬಟ್ಟೆಯ ಮೇಲೆ ಹೂವಿನ ದಳಗಳನ್ನು ಕೂಡ ಉದುರಿಸಲಾಗಿದೆ. ಆತನಿಗೆ ಅಡ್ಡಲಾಗಿ ಪೊಲೀಸ್ ಬ್ಯಾರಿಕೇಡನ್ನು ಕೂಡ ರಸ್ತೆಗೆ ಇಡಲಾಗಿದ್ದು,(ಇದರಿಂದ ಯಾವುದೇ ತೊಂದರೆಯಾಗದಂತೆ ಈ ವೀಡಿಯೋ ಶೂಟ್ ಮಾಡಬಹುದು ಎಂಬ ಯೋಚನೆ ಆತನದ್ದು) ಸುತ್ತಲೂ ನಾಲ್ಕರಿಂದ ಐದು ಜನ ನಿಂತು ಆತನನ್ನು ನೋಡುತ್ತಿದ್ದಾರೆ. ಬ್ಯುಸಿಯಾದ ರಸ್ತೆಯಾಗಿರುವುದರಿಂದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಕೂಡ ಕಾಣಬಹುದಾಗಿದೆ.
ಅಗಲಿದ ಪ್ರೀತಿಯ ಹಸುವಿಗೆ ಮನುಷ್ಯರಂತೆ ಅಂತಸಂಸ್ಕಾರ ನಡೆಸಿದ ಕುಟುಂಬ: ವೀಡಿಯೋ ವೈರಲ್
ಬರೀ ವೀಡಿಯೋ ಮಾತ್ರವಲ್ಲ, ಹಿನ್ನೆಲೆಯಲ್ಲಿ ಆಡಿಯೋ ಕೂಡ ಇದ್ದು, ಅಯ್ಯೋ ಸೋದರ ರಾಮ ರಾಮ ಎಂದು ಒಬ್ಬ ಹೇಳುತ್ತಿದ್ದರೆ, ಮತ್ತೊಬ್ಬ ಯಾರಿದು ಎಂದು ಕೇಳುತ್ತಿದ್ದಾರೆ. ಇನ್ನೊಬ್ಬರು ಈತನಿಗೆ ಏನಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬ ನಾನು ಈ ದೃಶ್ಯವನ್ನು ವೀಡಿಯೋ ಮಾಡಲೇ ಎಂದು ಕೇಳುತ್ತಿರುವುದು ಕೂಡ ರೆಕಾರ್ಡ್ ಆಗಿದೆ. ಆದರೆ ಕೆಲ ಸೆಕೆಂಡುಗಳ ನಂತರ ಆತ ಎದ್ದು ಕುಳಿತಿದ್ದು, ಮೂಗಿನಿಂದ ಹತ್ತಿ ತೆಗೆದು ದೂರ ಬಿಸಾಕಿ ಜೀವ ಬಂದವರಂತೆ ತನ್ನ ದೇಹವನ್ನು ಅಲುಗಾಡಿಸುತ್ತಾ ನಗುವುದನ್ನು ಕಾಣಬಹುದು.
ಈ ವೀಡಿಯೋ ನಂತರದಲ್ಲಿ ವೈರಲ್ ಆಗಿದ್ದು, ಮುಕೇಶ್‌ನನ್ನು ಹಿಡಿದು ಠಾಣೆಗೆ ಕರೆತಂದ ಪೊಲೀಸರು ರಸ್ತೆಯಲ್ಲಿ ಮಲಗಿದವನನ್ನು ಕಂಬಿ ಹಿಂದೆ ಕೂರಿಸಿದ್ದಾರೆ. ಇನ್ನು ವೀಡಿಯೋ ನೋಡಿದ ಜನರು ಕೂಡ ಈ ರೀಲ್ಸ್ ರಾಜನ ಹುಚ್ಚುತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂತರ ಬೇರೆ ರೀತಿಯ ಕಾಯಿಲೆ ಎಂದು ಕಾಮೆಂಟ್ ಮಾಡಿದ್ದಾರೆ. ಜನ ವೀವ್ಸ್ ಪಡೆಯಲು ಈ ಮಟ್ಟಕ್ಕೆ ಇಳಿತಾರೆ ಎಂದು ನಾನು ಯೋಚಿಸಿರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ರೀಲ್ಸ್ ಮಾಡುವವು ಹುಚ್ಚಾಟ ಆಡಿದ್ರೆ ರೀಲ್ಸ್ ಮೇಲೆಯೂ ಶೇಕಡಾ 18ರಷ್ಟು ಜಿಎಸ್‌ಟಿ ಹೇರಬೇಕು ಆಗ ಎಲ್ಲಾ ಸರಿ ಹೋಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ದಿನ ಸ್ನಾನ ಮಾಡದೇ ಗಂಗಾಜಲ ಸಿಂಪಡಿಸಿಕೊಂಡು ಕೂರುವ ಗಂಡ: ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಹೆಂಡತಿ
ಮುಂಜಾನೆಯಷ್ಟೇ ಹರಿದ್ವಾರದಲ್ಲಿ ಗಂಗಾ ತೀರದಲ್ಲಿ ಶಿವಲಿಂಗದ ಮುಂದೆ ರೀಲ್ಸ್ ಮಾಡಲು ಹೋಗಿ ಯುವತಿಯೊಬ್ಬಳು ಕಾಲು ಜಾರಿ ಗಂಗಾ ನದಿಗೆ ಬಿದ್ದ ಬಗ್ಗೆ ವರದಿಯಾಗಿತ್ತು. ಆದರೆ ಅದೃಷ್ಟವಶಾತ್ ಆ ಹುಡುಗಿ ಅನಾಹುತದಿಂದ ಪಾರಾಗಿದ್ದಳು. ಒಟ್ಟಿನಲ್ಲಿ ಈ ರೀಲ್ಸ್ ಮಾಡುವವರ ಹಾವಳಿಗೆ ಮಿತಿ ಇಲ್ಲದಂತಾಗಿದೆ.
Reel क्या न करा दे...
उत्तर प्रदेश के जिला कासगंज में एक युवक ने चौराहे पर लेटकर मरने का ढोंग किया। पुलिस ने रीलपुत्र मुकेश कुमार को गिरफ्तार किया। pic.twitter.com/3JfDbIYYy0