UP Elections: 59 ವಿಧಾನಸಭಾ ಕ್ಷೇತ್ರಗಳಿಗೆ 4ನೇ ಹಂತದಲ್ಲಿ ಶೇ.58ರಷ್ಟು ಮತದಾನ

By Kannadaprabha NewsFirst Published Feb 24, 2022, 3:00 AM IST
Highlights

ಉತ್ತರ ಪ್ರದೇಶದ 59 ವಿಧಾನಸಭಾ ಕ್ಷೇತ್ರಗಳಿಗೆ 4ನೇ ಹಂತದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಶೇ.57.45ರಷ್ಟು ಮತದಾನವಾಗಿದೆ. ಮತದಾನ ಪ್ರಕ್ರಿಯೆಯು ಬುಧವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಲಖನೌ (ಫೆ.24): ಉತ್ತರ ಪ್ರದೇಶದ 59 ವಿಧಾನಸಭಾ ಕ್ಷೇತ್ರಗಳಿಗೆ 4ನೇ ಹಂತದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಶೇ.57.45ರಷ್ಟು ಮತದಾನವಾಗಿದೆ. ಮತದಾನ ಪ್ರಕ್ರಿಯೆಯು ಬುಧವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಲಖೀಂಪುರ ಖೇರಿ, ಉನ್ನಾವೋ, ಲಖನೌ, ರಾಯ್‌ಬರೇಲಿ, ಫತೇಪುರ ಮುಂತಾದ ಜಿಲ್ಲೆಗಳಲ್ಲಿ ನಡೆದ ಚುನಾವಣೆಗೆ ವಿವಿಧ ಪಕ್ಷಗಳಿಂದ 624 ಮಂದಿ ಸ್ಪರ್ಧಿಸಿದ್ದರು.

ಚುನಾವಣಾ ಆಯೋಗದ ಪ್ರಕಾರ ಪಿಲಿಭಿತ್‌ನಲ್ಲಿ ಶೇ.61.33ರಷ್ಟು, ಖೇರಿಯಲ್ಲಿ ಶೇ.62.4, ಸೀತಾಪುರದಲ್ಲಿ 58.3, ಉನ್ನಾವೋದಲ್ಲಿ ಶೇ.54.05, ಲಖನೌನಲ್ಲಿ ಶೇ.55.08ರಷ್ಟು ಮತದಾನವಾಗಿದೆ. 4ನೇ ಹಂತದ ಚುನಾವಣೆಗೆ ಒಳಪಟ್ಟ 59 ವಿಧಾನಸಭಾ ಕ್ಷೇತ್ರಗಳಲ್ಲಿ 2017ರಲ್ಲಿ ಬಿಜೆಪಿ 51ರಲ್ಲಿ ಜಯಗಳಿಸಿತ್ತು. 2017ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಶೇ.62.55ರಷ್ಟು ಮತದಾನ ನಡೆದಿತ್ತು. ಈ ನಡುವೆ ಸಮಾಜವಾದಿ ಪಕ್ಷವು ಲಖನೌ, ಉನ್ನಾವೋ, ಹರ್ದೋಯ ಮತ್ತು ಸೀತಾಪುರದ ಕೆಲವು ಪ್ರದೇಶಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕ್ರಮಕ್ಕೆ ಒತ್ತಾಯಿಸಿದೆ. ಇದರೊಂದಿಗೆ ರಾಜ್ಯದಲ್ಲಿ ನಿಗದಿಯಾಗಿರುವ 7 ಹಂತಗಳ ಪೈಕಿ ಇನ್ನು 3 ಹಂತ ಬಾಕಿ ಉಳಿದಂತಾಗಿದೆ.

Latest Videos

UP Elections: ಮತ ಚಲಾಯಿಸಿ ಇವಿಎಂಗೆ ಫೆವಿಕ್ವಿಕ್ ಹಾಕಿ ಹೋದ ಮತದಾರ!

ಲಕ್ಷ್ಮಿ ‘ಆನೆ’ ಅಥವಾ ‘ಸೈಕಲ್‌’ ಮೇಲೆ ಬರಲ್ಲ: ಲಕ್ಷ್ಮಿ ದೇವತೆ ‘ಸೈಕಲ್‌’ ಅಥವಾ ‘ಆನೆ’ಯ ಮೇಲೆ ಹತ್ತಿ ಯಾರ ಮನೆಗೂ ಹೋಗುವುದಿಲ್ಲ. ಹಾಗೆಯೇ ‘ಕೈ’ಬೀಸುವುದಿಲ್ಲ. ಲಕ್ಷ್ಮೇ ಯಾವಾಗಲೂ ‘ಕಮಲ’ದ ಮೇಲೆ ಕುಳಿತು ಬರುತ್ತಾಳೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದ್ದಾರೆ. ಈ ಮೂಲಕ ಸಮಾಜವಾದಿ ಪಕ್ಷ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಪಕ್ಷಗಳನ್ನು ವ್ಯಂಗ್ಯ ಮಾಡಿದ್ದಾರೆ. ಅಲ್ಲದೇ ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಸಿಂಗ್‌, ‘ಚುನಾವಣೆಯಲ್ಲಿ ಗೆದ್ದರೆ ಬಡವರಿಗೆ ವರ್ಷಕ್ಕೆ 6 ಸಾವಿರ ರು. ಸಹಾಯಧನ, ಉಚಿತ ಪಡಿತರ, ಬಡತನ ರೇಖೆಗಿಂತ ಮೇಲಿರುವವರಿಗೂ ಮನೆ ನಿರ್ಮಿಸಿಕೊಡಲಾಗುವುದು. ನಾವು ಸರ್ಕಾರ ರಚಿಸುವುದಕ್ಕೋಸ್ಕರ ಮಾತ್ರ ರಾಜಕೀಯ ಮಾಡುತ್ತಿಲ್ಲ. ಸಮಾಜವನ್ನು ಕಟ್ಟುವುದಕ್ಕಾಗಿ ರಾಜಕೀಯ ಮಾಡುತ್ತಿದ್ದೇವೆ’ ಎಂದು ಹೇಳಿದರು.

ರೋಡ್‌ ಶೋಗಳಿಗೆ ಆಯೋಗ ಅಸ್ತು: ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಚುನಾವಣಾ ಪ್ರಚಾರದ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಚುನಾವಣಾ ಆಯೋಗ ತೆಗೆದುಹಾಕಿದೆ. ಜಿಲ್ಲಾಡಳಿತದ ಅನುಮತಿ ಪಡೆದು ರೋಡ್‌ ಶೋ ನಡೆಸಲು ಸಹ ಅನುಮತಿ ನೀಡಲಾಗಿದೆ.  ಇದರೊಂದಿಗೆ ಚುನಾವಣಾ ಅಭ್ಯರ್ಥಿಗಳು ಸಾರ್ವಜನಿಕವಾಗಿ ಸಭೆಗಳು ಮತ್ತು ರಾರ‍ಯಲಿಗಳನ್ನು ಹಮ್ಮಿಕೊಳ್ಳಲು ಸಹ ಅನುಮತಿ ನೀಡಲಾಗಿದೆ. ಈ ಹಿಂದೆ ಕೇವಲ ಒಟ್ಟು ಸಾಮರ್ಥ್ಯದ ಶೇ.50ರಷ್ಟುಜನರೊಂದಿಗೆ ಮಾತ್ರ ಸಭೆ ನಡೆಸುವಂತೆ ನಿರ್ಬಂಧ ವಿಧಿಸಲಾಗಿತ್ತು. ಇನ್ನು ಮಣಿಪುರದ 2 ಹಂತ ಮತ್ತು ಉತ್ತರ ಪ್ರದೇಶದ ಐದು, ಆರು ಮತ್ತು ಏಳನೇ ಹಂತದ ಚುನಾವಣೆ ಬಾಕಿಯಿದೆ.

UP Elections: 4 ನೇ ಹಂತದ ಮತದಾನದೊಂದಿಗೆ ಮುಕ್ತಾಯವಾಗಲಿದೆ 240 ಕ್ಷೇತ್ರಗಳ ಚುನಾವಣೆ!

ಯುಪಿ ಚುನಾವಣಾ ಮಾಹಿತಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022 ರಲ್ಲಿ 403 ವಿಧಾನಸಭಾ ಸ್ಥಾನಗಳಿಗೆ ಮೊದಲ ಹಂತದ ಮತದಾನ ಫೆಬ್ರವರಿ 10 ರಂದು, ಎರಡನೇ ಹಂತ ಫೆಬ್ರವರಿ 14 ರಂದು, ಮೂರನೇ ಹಂತ ಫೆಬ್ರವರಿ 20 ರಂದು, ನಾಲ್ಕನೇ ಹಂತ ಫೆಬ್ರವರಿ 23 ರಂದು, ಐದನೇ ಹಂತ ಫೆಬ್ರವರಿ 27 ರಂದು, ಆರನೇ ಮಾರ್ಚ್ 3 ರಂದು ಹಂತ ಮತ್ತು ಕೊನೆಯ ಹಂತ ಮಾರ್ಚ್ 7 ರಂದು ಮತದಾನ. ಯುಪಿಯಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

click me!