India Gate: ಯೋಗಿಯನ್ನು ಭ್ರಷ್ಟ, ಪಕ್ಷಪಾತಿ ಎನ್ನಲು ವಿರೋಧ ಪಕ್ಷಗಳ ಬಳಿ ಸಾಕ್ಷಿಗಳೇ ಇಲ್ಲ

By Kannadaprabha News  |  First Published Jan 22, 2022, 9:51 AM IST

ಮೋದಿಗೆ ಇರುವ ಹಾಗೆ ಯೋಗಿಗೆ ರಾಜಕೀಯ ಪ್ರಬಂಧನ ಸಾಮರ್ಥ್ಯ ಮತ್ತು ಹಿಡಿತ ಇನ್ನೂ ಆ ಮಟ್ಟಕ್ಕಿಲ್ಲ. ಪಕ್ಷದ ಒಳಗೆ ಕೂಡ ಅಮಿತ್‌ ಶಾ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸುನೀಲ್‌ ಬನ್ಸಾಲ್‌, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಜೊತೆ ಸಂಬಂಧ ಚೆನ್ನಾಗಿಲ್ಲ. 


ನವದೆಹಲಿ (ಜ. 22):  ಭಾರತದಂಥ ಮೂಲಭೂತ ಸೌಕರ್ಯ ಕಮ್ಮಿ ಮತ್ತು ಬಡತನ ಜಾಸ್ತಿ ಇರುವ ದೇಶದಲ್ಲಿ ಯಾವುದೇ ಚುನಾಯಿತ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಸರ್ವೇ ಸಾಮಾನ್ಯ.ಅದು ಕೂಡ  ಉತ್ತರ ಪ್ರದೇಶದಂಥ ಜನ ಸಾಂದ್ರತೆ ಜಾಸ್ತಿ ತಲಾ ಆದಾಯ ಕಮ್ಮಿ ಇರುವ ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿ ಆದರೂ ಕಷ್ಟವೇ.  ಕುಟುಂಬ ಮತ್ತು ಸ್ವಜಾತಿ ಪಕ್ಷಪಾತ ಭ್ರಷ್ಟಾಚಾರ ಕಾನೂನು ಅವ್ಯವಸ್ಥೆ ಅಭಿವೃದ್ಧಿ ಬಗ್ಗೆ ನಿರಾಸಕ್ತಿ ರಾಜಕೀಯ ಅಸ್ಥಿರತೆ  ಹೀಗೆ ನಾನಾ ಕಾರಣಗಳಿಂದ ಜನಪ್ರಿಯತೆ ಕಳೆದುಕೊಂಡವರೆ ಹೆಚ್ಚು.

ಅದು ಕಲ್ಯಾಣ ಸಿಂಗ್ ಮಾಯಾವತಿ ಮುಲಾಯಂ ಅಖಿಲೇಶ ಹೀಗೇ ಎಲ್ಲರೂ ಪಾಪ್ಯುಲಾರಿಟಿ ಕಳೆದು ಕೊಂಡವರೇ.ಆದರೆ ಕಳೆದ 5 ವರ್ಷಗಳಲ್ಲಿ ಪೂರ್ವಾಂಚಲದ ಜನ "ಮಹಾರಾಜಜಿ "  ಎಂದು ಕರೆಯುವ ಯೋಗಿ ಆದಿತ್ಯನಾಥರ ಬಗ್ಗೆ ವೈಯಕ್ತಿಕ ಯಾವುದೇ ಆರೋಪಗಳು ಬಂದಿಲ್ಲ.ಕಚ್ಚೆ  ಇರಲಿ ದುಡ್ಡಿನ ವಿಷಯ ಇರಲಿ ಸ್ವ ಕುಟುಂಬ ಮತ್ತು ಸ್ವ ಜಾತಿ ಅಧಿಕಾರಿಗಳ ಬಗೆಗಿನ ಪಕ್ಷಪಾತ ಇರಲಿ ಒಂದು ಆರೋಪವೂ ಬಂದಿಲ್ಲ.

Tap to resize

Latest Videos

UP Elections: ಮೋದಿ ಹಿಂದುಳಿದ ಜನಾಂಗದವರೆಂದು ಬಿಜೆಪಿ ಕಡೆ ವಾಲಿದ ಮತದಾರರು

2017 ರಲ್ಲಿ ಯೋಗಿ ಮುಖ್ಯಮಂತ್ರಿ ಆದಾಗ ಒಂದು ವರ್ಷ ಅನುಭವದ ಕೊರತೆ ಇಂದ ಸಮಸ್ಯೆ ಆಯಿತು.ಆದರೆ ನಂತರ ಯೋಗಿ ಗೂಂಡಾಗಿರಿ ನಿಯಂತ್ರಣ ಮತ್ತು ಅಭಿವೃದ್ಧಿಯನ್ನು ಜಿಲ್ಲೆ ಗಳ ವರೆಗೆ ತೆಗೆದುಕೊಂಡು ಹೋಗುವ  ಪ್ರಯತ್ನ ಮಾಡಿರುವುದು ಕಾಣುತ್ತದೆ. ಆದರೆ ಯೋಗಿ ಗೆ ಇರುವ ಸಮಸ್ಯೆ ಜಾತಿಗಳ ಧ್ರುವೀಕರಣದ್ದು ಮಾತ್ರ.ಒಂದು ವೇಳೆ ಯೋಗಿ ಸೀಟುಗಳು ಕಡಿಮೆ ಆದರೆ ಅದಕ್ಕೆ ಯು ಪಿ ಯ ಜನಮಾನಸದ ಮಸ್ತಿಷ್ಕದಲ್ಲಿ ಹಾಸು ಹೊಕ್ಕಾಗಿರುವ ಜಾತಿಗಳ ಮಹತ್ವಾಕಾಂಕ್ಷೆ ಗಳ ತಾಕಲಾಟ ಮತ್ತು ಅಸ್ಮಿತೆ ಯದ್ದು.ಅದನ್ನು ತಡೆಯಬೇಕಾದರೆ ಯೋಗಿಗೆ ಮೋದಿ ಬೇಕೇ ಬೇಕು.

ಬಿಜೆಪಿ ವೋಟ್ ಬ್ಯಾಂಕ್ ?

ಅಟಲ್ ಬಿಹಾರಿ ವಾಜಪೇಯಿ ಮಧ್ಯ ಪ್ರದೇಶದ ಗ್ವಾಲಿಯರ್ ದವರಾದರು 1957 ರಿಂದ ರಾಜಕೀಯ ಮಾಡಿದ್ದು ಯು ಪಿ ಯಲ್ಲೇ. ಬ್ರಾಹ್ಮಣ ರಾಗಿದ್ದ ಅಟಲ್ ಜಿ  ಯನ್ನು ಎಲ್ಲ ಸಮುದಾಯಗಳು  ಇಷ್ಟ ಪಡುತ್ತಿದ್ದವು.ಜೊತೆಗೆ ರಾಮಮಂದಿರದ ಆಂದೋಲನ ಇತ್ತು.ಆದರೆ ಅಟಲ್ ಮುಖ ತೋರಿಸಿ ಬಿಜೆಪಿ ಯು ಪಿ ಯಲ್ಲಿ ಲೋಕಸಭೆಯಲ್ಲಿ ಗೆದ್ದಿದ್ದು 52 ಸೀಟು ಮಾತ್ರ. ಆದರೆ 1991 ರಲ್ಲಿ ಮಂಡಲದ ಉಚ್ಛಾಯ ಇದ್ದಾಗಲೂ ಬಿಜೆಪಿ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಕಾರಣ ಅಯೋಧ್ಯೆ ಜೊತೆಗೆ  ಹಿಂದುಳಿದ ಲೋಧ್ ವರ್ಗದ ಕಲ್ಯಾಣ ಸಿಂಗ್ ರ ಮುಖ ಕಾರಣ.2014 ರಲ್ಲಿ ಕೂಡ ಅಟಲ್ ಮುಖಕ್ಕೆ ಬಂದ 52 ಕ್ಕಿಂತ  ಮೋದಿ ಮುಖಕ್ಕೆ ಜಾಸ್ತಿ 77 ಸೀಟು ಬಂದಿತ್ತು.

ಮೋದಿಗೆ ಗುಜರಾತ್ ನ ಹಿಂದುತ್ವ ಬ್ರಾಂಡ್ ನ  ಜೊತೆಗಿದ್ದ " ಪಿಚಡಾ" ಎಂಬ ಪ್ರಚಾರ ಇದಕ್ಕೆ ಮುಖ್ಯ ಕಾರಣ .ಯು ಪಿ ಯಲ್ಲಿ  ತಥಾಕಥಿತ ಮೇಲು ಜಾತಿಗಳು ಮತ್ತು ಹಿಂದುಳಿದ ಜಾತಿಗಳ ನಡುವೆ ನಮಗಿಂತ ಬಹಳವೇ ಜಾಸ್ತಿ ಕಂದಕ ಗಳಿವೆ ಹೀಗಾಗಿ ಜಾತಿಯಿಂದ ಠಾಕೂರ ಆಗಿರುವ .ಯೋಗಿ ಗೆಲ್ಲಬೇಕೆಂದರೆ ಹಿಂದುಳಿದವರ ಮತಗಳು ಬೇಕೇ ಬೇಕು.ಅದು ಪಡೆಯುವ ವಿಧಾನ ಹಿಂದುತ್ವ ಒಂದೇ ಎಂದು ಯೋಗಿ ಕಟು ಹಿಂದುತ್ವ ಮಾತನಾಡಿದರೆ.ಇದಕ್ಕೆ ಪ್ರತಿಯಾಗಿಯೇ ಅಖಿಲೇಶ್ ಯಾದವ ಚುನಾವಣೆಯನ್ನು ಮೇಲು ಜಾತಿ ಮತ್ತು ಹಿಂದುಳಿದ ಜಾತಿಗಳ ನಡುವಿನ ಅಖಾಡಾ ಮಾಡುವ ಪ್ರಯತ್ಬ ಮಾಡುತ್ತಿದ್ದಾರೆ.

UP Elections 2022: ಮಾಯಾವತಿಗೆ "ಪ್ಲಸ್" ನದ್ದೇ ಸಮಸ್ಯೆ!

 ಇತಿಹಾಸದ ಆ ಘಟನೆ 

ಸಂಘ ಸ್ಥಾಪಕ ಡಾಕ್ಟರ ಜಿ  ನಿಧನದ ನಂತರವೇ ಮಹಾರಾಷ್ಟ್ರದ ಪರಭಣಿಯ ನಾನಾಜಿ ದೇಶಮುಖ ರನ್ನು ಗುರೂಜಿ ಗೋಳವಲ್ಕರ  ಸಂಘ ಪ್ರಚಾರಕರಾಗಿ ಆಗ್ರಾಕ್ಕೆ ಕಳುಹಿಸಿದ್ದರು.ಮುಂದೆ ಜನಸಂಘಕ್ಕೆ ಹೋದ ನಾನಾಜಿ ದೇಶಮುಖ ರ ಒಂದು ವಿಶೇಷ  ಗುಣ ಎಂದರೆ ಲೋಹಿಯಾ ಚರಣ ಸಿಂಗ್ ಆಚಾರ್ಯ ಕೃಪಾಲಾನಿ ಹೀಗೆ ಎಲ್ಲರ  ಜೊತೆ ಒಳ್ಳೆ  ಗೆಳೆತನ.  1962 ರಲ್ಲೇ ಜನಸಂಘಕ್ಕೆ 48 ಸೀಟು ಬಂದಿದ್ದವು. ನಾನಾಜಿ ಯನ್ನು ಒಮ್ಮೆ ಭೇಟಿಯಾದ ಆಗಿನ ಕಾಂಗ್ರೆಸ್ ಮುಖ್ಯಮಂತ್ರಿ ಚಂದ್ರಭಾನು ಗುಪ್ತಾ " ನಾನಾಜಿ ನಿಮ್ಮ ಆರ್ಯ ಸಮಾಜದ ಹಿನ್ನೆಲೆ ಇರುವ ಗೆಳೆಯ ಚೌಧರಿ  ಚರಣ್ ಸಿಂಗ್ ಸುಮ್ಮನೆ ಸತಾಯಿಸುತ್ತಿದ್ದಾರೆ ಸಂಪುಟ ಸೇರಿಕೋ " ಎಂದು ಹೇಳಿ ಅಂದರಂತೆ.ಜಾಟ್ ರ ನಾಯಕರಾಗಿ ಬೆಳೆದಿದ್ದ ಚೌಧರಿ ಚರಣ್ ಸಿಂಗ್ ರ ಬಳಿಗೆ ಹೋದ ನಾನಾಜಿ " ಸಂಪುಟ ಯಾಕೆ ಸೇರುತ್ತಿಲ್ಲ  " ಎಂದಾಗ ಚೌಧರಿ ಚರಣ್ ಸಿಂಗ್ " ಚುನಾವಣೆಯಲ್ಲಿ ಜಾಟ್ ರು ಯಾದವರು ದಲಿತರ ವೋಟು ಕಾಂಗ್ರೆಸ್ ಗೆ  ಬೇಕು ಗೆದ್ದಾಗ ಮುಖ್ಯಮಂತ್ರಿ ಆಗೋದು ಬ್ರಾಹ್ಮಣರು ಬನಿಯಾಗಳು ನಮಗೆ ಅನ್ಯಾಯ " ಎಂದರಂತೆ.

ಆಗ ನಾನಾಜಿ ಈಗ ನಾವು 48 ಇದ್ದೇವೆ ಜನಸಂಘ  100 ರ ಗಡಿ ಮುಟ್ಟಿದಾಗ ಯು ಪಿ ಯಲ್ಲಿ ನಿಮ್ಮನ್ನು ಮುಖ್ಯಮಂತ್ರಿ ಮಾಡಲು ಬೆಂಬಲ ಕೊಡುತ್ತೇವೆ ಎಂದು ಹೇಳಿದರಂತೆ. 5 ವರ್ಷದ ನಂತರ 1967 ರಲ್ಲಿ ಜನಸಂಘಕ್ಕೆ 98 ಸೀಟು ಬಂತು  ಆಗ ಚೌಧರಿ ಚರಣ್ ಸಿಂಗ್ ಕಾಂಗ್ರೆಸ್ ನಿಂದ ಹೊರಗೆ ಬಂದು ಭಾರತೀಯ ಕ್ರಾಂತಿ ದಳ ಸ್ಥಾಪಿಸಿದರು ಲೋಹಿಯಾವಾದಿಗಳು  ಮತ್ತು  ಜನಸಂಘದ ಬಾಹ್ಯ ಬೆಂಬಲ ಪಡೆದು ಮುಖ್ಯಮಂತ್ರಿ ಯಾದರು.ಅರ್ಥ ಇಷ್ಟೇ ಜನಸಂಘ ಮತ್ತು ಬಿಜೆಪಿ ಪ್ರಜ್ನ್ಯಾ ಪೂರ್ವಕ ವಾಗಿ ಹಿಂದುಳಿದ ಜಾತಿಗಳನ್ನು ಓಲೈಸಿ ಜೊತೆಗಿಟ್ಟು ಕೊಳ್ಳುವ ಪ್ರಯತ್ನ ಮಾಡಿದ್ದರಿಂದಲೇ  ಮಂಡಲ ಚಳುವಳಿ ಯ ಸಮಯದಲ್ಲೂ 1991 ರಲ್ಲೂ ಬಹುಮತ ಬಂತು..ಇದನ್ನು ಅರ್ಥ ಮಾಡಿಕೊಳ್ಳದೇ ಗೋವಿಂದ ವಲ್ಲಭ ಪಂತ ಕಮಲಾಪತಿ ತ್ರಿಪಾಠಿ ನಾರಾಯಣ ದತ್ತ ತಿವಾರಿ ಶ್ರೀಪತಿ ಮಿಶ್ರಾ ಹೇಮಾವತಿ ನಂದನ ಬಹುಗುಣಾ ಹೀಗೆ ಸಾಲು ಸಾಲು ಬ್ರಾಹ್ಮಣ ಮುಖ್ಯಮಂತ್ರಿ ಕೊಟ್ಟು ಯುಪಿ ಯಲ್ಲಿ ಕಾಂಗ್ರೆಸ  ಪೂರ್ತಿ ಕಣ್ಮರೆ ಆಯಿತು

ಯೋಗಿ ಸಾಮರ್ಥ್ಯ ದೌರ್ಬಲ್ಯ 

ಯೋಗಿ ಅತಿರೇಕದ ಹಿಂದುತ್ವವಾದಿ ಹೌದು ಆದರೆ ಯೋಗಿ ದುಡ್ಡಿನ ವಿಷಯದಲ್ಲಿ ಸರಿ ಇಲ್ಲ ಎಂದು ಅಖಿಲೇಶ ಮತ್ತು ಮಾಯಾವತಿ ಕೂಡ ಟೀಕೆ ಮಾಡೋಲ್ಲ.ಯೋಗಿ ಮೋದಿ ಯಂತೆ 16 ಗಂಟೆ ಕೆಲಸ ಮಾಡುತ್ತಾರೆ ಕಚೇರಿಯಲ್ಲಿ  ಕುಟುಂಬ ಮತ್ತು  ಸ್ವ ಜಾತಿಯ ಅಧಿಕಾರಿ ಗಳ ಹಾವಳಿ ಇಲ್ಲ. ಯೋಗಿ ವರ್ಗಾವಣೆ ಯನ್ನು ಧಂಧೆ ಮಾಡಿಕೊಂಡಿರುವ ಮುಖ್ಯಮಂತ್ರಿ ಅಲ್ಲ.ಅದು ಜನರ ನಡುವೆ ಪಾಸಿಟಿವ್ ಆದರೆ ಸ್ವ ಪಕ್ಷದ  ಶಾಸಕರ ನಡುವೆ ದೊಡ್ಡ ನೆಗೆಟಿವ್.ಯೋಗಿ ಯು ಪಿ ಯ ಕಾನೂನು ಪರಿಸ್ಥಿತಿ ಮತ್ತು ವಿದ್ಯುತ ಸಮಸ್ಯೆಯನ್ನು ತಕ್ಕ ಮಟ್ಟಿಗೆ ರೀಪೇರಿ ಮಾಡಿದ್ದಾರೆ.ಲಕ್ನೌ - ಗಾಜಿಪುರ ,ಅಲಹಾಬಾದ್ - ಗೋರಖಪುರ, ಅಯೋಧ್ಯಾ- ವಾರಣಾಸಿ ಹೀಗೆ  ಸಾಲು ಸಾಲು ಹೆದ್ದಾರಿ ಗಳನ್ನು ನಿರ್ಮಿಸುತ್ತಿದ್ದಾರೆ.ಕೈರಾನಾ ಮುಜಫರ್ ನಗರ ಮೀರಟ್ ಮೊರಾದಾಬಾದ್ ಸಹಾರನ್ ಪುರ ಗಳಲ್ಲಿ ನಡೆಯುತ್ತಿದ್ದ ಹಾಡೇ ಹಗಲು ಗೂಂಡಾಗಿರಿ ಬಹಳಷ್ಟು ಕಡಿಮೆ ಆಗಿವೆ.

Uttar Pradesh Elections: ಅಖಿಲೇಶ್ ರ್ಯಾಲಿಗೆ ಭರ್ಜರಿ ಯುವಕರ ದಂಡು, ಯೋಗಿಗೆ ಚಿಂತೆ ಶುರು

ಕಾಶಿ ಕಾರಿಡಾರ್ ಉದ್ಘಾಟನೆ ಆಗಿದೆ ಅಯೋಧ್ಯೆ ಮಂದಿರ 2023 ಕ್ಕೆ ಉದ್ಘಾಟನೆಗೆ ತಯಾರಾಗ ಲಿದೆ.ಈ ಖಡಕ್ ಶೈಲಿ  ಹಿಂದುತ್ವ ವನ್ನು ಇಷ್ಟ ಪಡುವ ಯು ಪಿ ಮತ್ತು ಹೊರ ರಾಜ್ಯಗಳ  ಬಿಜೆಪಿ ಮತದಾರರಲ್ಲಿ  ಮೋದಿ ಜೊತೆಗೆ ಯೋಗಿ ಇಮೇಜ್ ಮತ್ತು ಕ್ರೇಜ್  ಅನ್ನು ಕೂಡ ನಿಸ್ಸಂದೇಹ ವಾಗಿ ಹೆಚ್ಚಿಸಿವೆ.

ಮೋದಿಯಂತೆ ಯೋಗಿಗೂ ಮಂತ್ರಿ ಗಳಿಗಿಂತ ಅಧಿಕಾರಿಗಳ ಮೇಲೆ ವಿಶ್ವಾಸ ಜಾಸ್ತಿ. ಆದರೆ ಸಮಸ್ಯೆ  ಎಂದರೆ ಒಟ್ಟಾರೆ ವ್ಯವಸ್ಥೆಯ ಮೇಲೆ ಮೋದಿ ಗೆ ಇರುವ ಹಾಗೆ ಯೋಗಿ ಗೆ ರಾಜಕೀಯ ಪ್ರಬಂಧನ ಸಾಮರ್ಥ್ಯ ಮತ್ತು ಹಿಡಿತ ಇನ್ನು ಆ ಮಟ್ಟಕ್ಕಿಲ್ಲ.ಪಕ್ಷದ ಒಳಗೆ ಕೂಡ ಅಮಿತ್ ಶಾ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಜೊತೆ ಸಂಬಂಧ ಚೆನ್ನಾಗಿಲ್ಲ. ಹಿಂದುತ್ವ ಯೋಗಿ ಗಿರುವ ಅವಕಾಶ ಆದರೆ  ಜಾತಿ ಪೊಲಿಟಿಕ್ಸ್  ಯೋಗಿ ಗಿರುವ ಸೀಮಿತತೆ.

ಯೋಗಿ ಗೆದ್ದರೇನು ಸೋತರೇನು ? 

ಪ್ರಾಯಶಃ ಈ ಪ್ರಶ್ನೆಗೆ ಉತ್ತರ 2024 ರ ದೇಶದ ಲೋಕಸಭಾ ಚುನಾವಣೆಯ ಚಿತ್ರಕಥೆಗೆ ನಾಂದಿ ಹಾಡಲಿದೆ.ಒಂದು ವೇಳೆ ಯೋಗಿ ಗೆದ್ದರೆ 2024 ರ ದ್ರಷ್ಟಿಯಿಂದ ಬಿಜೆಪಿ ಮತ್ತು ಮೋದಿ ಗೆ ಸಿಕ್ಕಾಪಟ್ಟೆ  ಆಮ್ಲಜನಕ ಪೂರೈಕೆ.ಕೃಷಿ ಕಾಯಿದೆಯ ಹಿನ್ನೆಡೆ ಮತ್ತು ಜಾತಿ ಧ್ರುವೀಕರಣ ಕೂಡ ಬಿಜೆಪಿ ಯನ್ನು  ದಿಲ್ಲಿಯಲ್ಲಿ ಅಧಿಕಾರದ 8 ವರ್ಷಗಳ ನಂತರವೂ ಅಲುಗಾಡಿಸಲು ಸಾಧ್ಯ ಆಗುತ್ತಿಲ್ಲ ಎನ್ನುವುದು ವಿಪಕ್ಷಗಳ ಉತ್ಸಾಹದಲ್ಲಿ ಕುಂದು .ಯು ಪಿ ಯಲ್ಲಿ ಮರು ಮುಖ್ಯಮಂತ್ರಿ ಆದರೆ ಯೋಗಿ ಜನಪ್ರಿಯತೆಯಲ್ಲಿ ದೇಶದಲ್ಲಿ  ಮೋದಿ ನಂತರದ ಸ್ಥಾನದಲ್ಲಿ ಬಂದು ಕೂರಬಹುದು.

ಅದು ಪಕ್ಷದೊಳಗೆ ಹೊಸ ಸಮೀಕರಣ ಗಳಿಗೂ ಕಾರಣ ಆಗಬಹುದು.ಆದರೆ ಏನಕೇನ ಒಂದು ವೇಳೆ ಯೋಗಿ ಗೆರೆ ಮುಟ್ಟಲು ಸಾಧ್ಯ ಆಗದೇ ಇದ್ದರೆ ಯೋಗಿ ಏನೋ ಇತಿಹಾಸದ ಪುಟ ಸೇರಿಕೊಳ್ಳುತ್ತಾರೆ ಆದರೆ 2024 ಕ್ಕೆ ಬಿಜೆಪಿ ಹಾದಿ ಕಠಿಣ ಆಗಲು ಶುರು ಆಗಿ ಆಡಳಿತ ವಿರೋಧಿ ಅಲೆ ಯ ರೂಪ ತಾಳಬಹುದು.ಯು ಪಿ ಯಲ್ಲಿ ಸರ್ಕಾರ ಇರದೇ ಇದ್ದರೆ ಜುಲೈ ನಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆ ಏಕಾಂಗಿ ಆಗಿ ಗೆಲ್ಲುವುದು ಬಿಜೆಪಿ ಗೆ ಕಷ್ಟ .ಒಂದು ಸತ್ಯ ಏನಪ್ಪಾ ಎಂದರೆ ಯು ಪಿ ಯಲ್ಲಿ ರಾಷ್ಟ್ರೀಯ ಪಕ್ಷ ಏಕಾಂಗಿ ಆಗಿ  ಗೆದ್ದರೆ ಮಾತ್ರ ದಿಲ್ಲಿ ಯಲ್ಲಿ ಸ್ವಲ್ಪ ಸ್ಥಿರತೆ ಇರುತ್ತದೆ. ಇಲ್ಲ ವಾದಲ್ಲಿ ದಿಲ್ಲಿಯಲ್ಲೂ ಸಮ್ಮಿಶ್ರ ಪ್ರಯೋಗ ನಡೆಸಬೇಕಾಗುತ್ತದೆ.ಒಂದೇ ಮಾತಲ್ಲಿ ಹೇಳೋದಾದರೆ  ಮೋದಿ ಗೆಲ್ಲಲು ಯೋಗಿ ಗೆಲ್ಲಬೇಕು ಆದರೆ ಯೋಗಿ ಗೆಲ್ಲಲು  ಮೋದಿ ಕೂಡ  ಬೇಕು.ಯಾರಿಗೆ ಆಗಲಿ ಯು ಪಿ ಫ್ಲವರ್ ಅಲ್ಲ ನೋಡಿ ಅದು ಒಂದು ಫಾಯರ್ ನೋಡಿ

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
 

click me!