*ಚೀನಾ ‘ಸಮುದ್ರ ದಾಹ’ಕ್ಕೆ ರಾಜನಾಥ್ ಆಕ್ರೋಶ
*ಕೆಲ ಬೇಜವಾಬ್ದಾರಿ ರಾಷ್ಟ್ರಗಳು ಕಡಲ ಕಾನೂನನ್ನು ಉಲ್ಲಂಘಿಸುತ್ತಿವೆ
*ಅತ್ಯಾಧುನಿಕ ಐಎನ್‌ಎಸ್ ವಿಶಾಖಪಟ್ಟಣಂ ಲೋಕಾರ್ಪಣೆ ಮಾಡಿ ಕಿಡಿ
*ಇದು ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ಧ್ವಂಸ ಯುದ್ಧನೌಕೆ
ಮುಂಬೈ(ನ.22): ಕ್ಷಿಪಣಿಗಳನ್ನು ಉಡ್ಡಯನ ಮಾಡಬಲ್ಲ (Air Missile) ಹಾಗೂ ಧ್ವಂಸ ಮಾಡಬಲ್ಲ ಸಾಮರ್ಥ್ಯ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಯುದ್ಧ ಕೌಶಲ್ಯಗಳನ್ನು ಒಳಗೊಂಡಿರುವ ಅತ್ಯಾಧುನಿಕ ಜಲಾಂತರ್ಗಾಮಿ ಯುದ್ಧ ನೌಕೆ (Warhip) ‘ಐಎನ್‌ಎಸ್ ವಿಶಾಖಪಟ್ಟಣಂ (INS Visakhapatnam)’ ಅನ್ನು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ (Rajnath singh) ಭಾನುವಾರ ಲೋಕಾರ್ಪಣೆ ಮಾಡಿದರು. ಈ ಮೂಲಕ ಮೊದಲ ಸ್ವದೇಶಿ ನಿರ್ಮಿತ ಅತ್ಯಾಧುನಿಕ ‘ಕ್ಷಿಪಣಿ ದಾಳಿ ಯುದ್ಧ ನೌಕೆ’ಯನ್ನು ಭಾರತೀಯ ಸೇನೆಗೆ ಸಮರ್ಪಿಸಿದರು. ಇದೇ ವೇಳೆ, ಕಡಲ ಕಾನೂನು ಉಲ್ಲಂಘಿಸುತ್ತಿರುವ ಚೀನಾ ವಿರುದ್ಧ ರಾಜನಾಥ್ ಹರಿಹಾಯ್ದರು.
ಹೊಸ ಮತ್ತು ಶಕ್ತಿಶಾಲಿ ಭಾರತ ಪಾಕಿಸ್ತಾನ ಚೀನಾಗಳಿಗೆ ತಕ್ಕ ಪ್ರತ್ತ್ಯುತ್ತರ ನೀಡಲಿದೆ!
ಲೋಕಾರ್ಪಣೆ ಬಳಿಕ ಮಾತನಾಡಿದ ರಕ್ಷಣಾ ಸಚಿವರು, ‘ಪಕ್ಷಪಾತ ಧೋರಣೆ ಹಾಗೂ ಪ್ರಾಬಲ್ಯ ಮೆರೆಯುವ ಪ್ರವೃತ್ತಿ ಹೊಂದಿರುವ ಕೆಲವು ಬೇಜವಾಬ್ದಾರಿ ರಾಷ್ಟ್ರಗಳು ವಿಶ್ವಸಂಸ್ಥೆಯ ಕಡಲ ಕಾನೂನನ್ನು (UNCLOS) ತಪ್ಪಾಗಿ ವ್ಯಾಖ್ಯಾನಿಸುತ್ತಿವೆ’ ಎಂದು ಚೀನಾದ ವಿರುದ್ಧ ವಾಗ್ದಾಳಿ ನಡೆಸಿದರು. ‘ಕೆಲವು ರಾಷ್ಟ್ರಗಳು ತಮಗೆ ತೋಚಿದಂತೆ ವ್ಯಾಖ್ಯಾನ ಮಾಡುವ ಮೂಲಕ ಕಡಲ ಕಾನೂನನ್ನು ದುರ್ಬಲಗೊಳಿಸುತ್ತಿರುವುದು ಕಳವಳಕಾರಿ’ ಎಂದರು.
ಒಮ್ಮತದ ತಳಹದಿ ಮೇಲೆ ರೂಪಿಸಲಾಗಿರುವ ತತ್ವಕ್ಕೆ ಬೆಂಬಲ!
2016ರಲ್ಲಿ ಅಂತಾರಾಷ್ಟ್ರೀಯ ನ್ಯಾಯಾಧಿಕರಣವು ದಕ್ಷಿಣ ಚೀನಾ ಸಮುದ್ರ ಯಾರ ಸೊತ್ತೂ ಅಲ್ಲ ಎಂದಿತ್ತು. ಆದರೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ಚೀನಾ, ‘ನ್ಯಾಯಾಧಿಕರಣದ ಆದೇಶಕ್ಕೆ ನಾನು ಬಾಧ್ಯಸ್ಥನಲ್ಲ’ ಎಂದು ಹೇಳುತ್ತಿದೆ. ಹೀಗಾಗಿ ರಾಜನಾಥ್ ಈ ನುಡಿಗಳನ್ನು ಆಡಿದರು.
INS Visakhapatnam| ಕ್ಷಿಪಣಿ ದಾಳಿ ಸಾಮರ್ಥ್ಯ ಯುದ್ಧ ನೌಕೆ ನೌಕಾಪಡೆಗೆ!
‘ಕಡಲ ರಕ್ಷಣೆ ವಿಷಯದಲ್ಲಿ ಜವಾಬ್ದಾರಿ ಭಾಗಿದಾರ ದೇಶವಾಗಿರುವ ಭಾರತ, ಒಮ್ಮತದ ತಳಹದಿ ಮೇಲೆ ರೂಪಿಸಲಾಗಿರುವ ತತ್ವಗಳನ್ನು ಬೆಂಬಲಿಸುತ್ತದೆ. ಶಾಂತಿಯುತವಾದ ಹಾಗೂ ನಿಯಮಗಳಿಗೆ ಬದ್ಧವಾಗಿರುವ ಕಡಲ ರಕ್ಷಣಾ ವ್ಯವಸ್ಥೆಯನ್ನು ಬಯಸುತ್ತದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ವ್ಯಾಪಾರ, ನೌಕಾಯಾನದ ಸ್ವಾತಂತ್ರ್ಯ ಹಾಗೂ ಈ ಪ್ರದೇಶದ ಎಲ್ಲ ಭಾಗಿದಾರ ರಾಷ್ಟ್ರಗಳ ಹಿತಾಸಕ್ತಿ ರಕ್ಷಣೆಗೆ ಭಾರತ ಬೆಂಬಲ ನೀಡುತ್ತದೆ’ ಎಂದು ಸಚಿವರು ಹೇಳಿದರು.
ಐಎನ್‌ಎಸ್ ವಿಶಾಖಪಟ್ಟಣಂ ವಿಶೇಷತೆ:
*ಯುದ್ಧನೌಕೆ ಉದ್ದ 163 ಮೀಟರ್
*312 ಸಿಬ್ಬಂದಿ ಕಾರ್ಯಾಚರಣೆ ನಡೆಸಲು ನೌಕೆಯಲ್ಲಿ ಸ್ಥಳಾವಕಾಶ
*7408 ಕಿ.ಮೀ ದೂರದವರೆಗೆ ಚಲಿಸುವ ಸಾಮರ್ಥ್ಯ
*7400 ಟನ್ ತೂಕ ಹೊತ್ತೊಯ್ಯಬಲ್ಲ ಶಕ್ತಿ
*42 ದಿನ ಎಂಥ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯಾಚರಣೆ ಸಾಮರ್ಥ್ಯ
*ಪ್ರತೀ ಗಂಟೆಗೆ 55 ಕಿ.ಮೀ ವೇಗದಲ್ಲಿ ಕ್ರಮಿಸುವ ಯುದ್ಧನೌಕೆ
*ಬ್ರಹ್ಮೋಸ್, ಭೂಮಿಯಿಂದ ನಭಕ್ಕೆ ಚಿಮ್ಮಬಲ್ಲ ಬರಾಕ್ ಕ್ಷಿಪಣಿಗಳು ಒಳಗೊಂಡ ವ್ಯವಸ್ಥೆ
*ಮಧ್ಯಮ ಮತ್ತು ಕಡಿಮೆ ಅಂತರದ ದಾಳಿಗೆ ಗನ್‌ಗಳು
*ಜಲಾಂತರ್ಗಾಮಿ ಯುದ್ಧ ನೌಕೆ ನಿಗ್ರಹ ರಾಕೆಟ್‌ಗಳು
*ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧ ಸಾಮಗ್ರಿಗಳು
ನಮ್ಮ ಒಂದು ಇಂಚು ಭೂಮಿಯನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ!
ಉತ್ತರಾಖಂಡದ ಪಿಥೋರಗಢ್‌ನಲ್ಲಿ ಶಹೀದ್ ಸಮ್ಮಾನ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್ "ಪಶ್ಚಿಮ ಗಡಿಯಲ್ಲಿರುವ (Western Boundry) ನಮ್ಮ ನೆರೆಹೊರೆಯವರಿಗೆ ನಾವು ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ, ಅದು ತನ್ನ ಮಿತಿಯನ್ನು ದಾಟಿದರೆ, ನಾವು ಗಡಿಯಲ್ಲಿ ಪ್ರತೀಕಾರ ತೀರಿಸುವುದಿಲ್ಲ ಆದರೆ ಗಡಿಯನ್ನು ದಾಟಿ ಸರ್ಜಿಕಲ್ (Surgical) ಮತ್ತು ಎರ್ ಸ್ಟ್ರೈಕ್ (Air Strike) ದಾಳಿ ಮಾಡಬಹುದು". ನಮಗೆ ಇನ್ನೂ ಒಬ್ಬ ನೆರೆಹೊರೆಯವರಿದ್ದಾರೆ, ಅದು ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ರಕ್ಷಣಾ ಸಚಿವರು ಚೀನಾವನ್ನು ಹೆಸರಿಸದೆ ಚೀನಾ (China) ಬಗ್ಗೆ ಮಾತನಾಡಿದ್ದಾರೆ. ವಿಶ್ವದ ಯಾವುದೇ ದೇಶವು "ನಮ್ಮ ಒಂದು ಇಂಚು ಭೂಮಿಯನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದರೆ, ಭಾರತ ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತದೆ" ಎಂದು ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ.