ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾಗುವ ಸಬ್ಸಿಡಿಯನ್ನು ಇನ್ನೂ ಒಂದೆರಡು ತಿಂಗಳು ವಿಸ್ತರಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಹೇಳಿಕೆಯು ಫೇಮ್ 3 ಯೋಜನೆಯ ಅಂತಿಮ ರೂಪುರೇಷೆ ಸಿದ್ಧವಾಗುವವರೆಗೆ ಈ ಕ್ರಮವನ್ನು ಮುಂದುವರೆಸಲಾಗುವುದು ಎಂದು ಸೂಚಿಸುತ್ತದೆ.
ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ನೀಡುವ ಸಬ್ಸಿಡಿಯನ್ನು ಇನ್ನೂ ಒಂದೆರಡು ತಿಂಗಳ ಕಾಲ ಮುಂದುವರೆಸುವುದಾಗಿ ಕೇಂದ್ರದ ಭಾರಿ ಉದ್ದಿಮೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಅದರೊಂದಿಗೆ, ಈ ತಿಂಗಳು ಅಂತ್ಯಗೊಳ್ಳಬೇಕಿದ್ದ ಸಬ್ಸಿಡಿ ಯೋಜನೆ ಮುಂದುವರೆಯಲಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟಗಾರರು ಹಾಗೂ ಗ್ರಾಹಕರು ನಿರಾಳರಾಗಿದ್ದಾರೆ.
ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಆಟೋ ಹಾಗೂ ಎಲೆಕ್ಟ್ರಿಕ್ ವಾಣಿಜ್ಯ ಆಟೋಗಳಿಗೆ ಕೇಂದ್ರ ಸರ್ಕಾರ ಕ್ರಮವಾಗಿ 10,000 ರು., 25,000 ರು. ಹಾಗೂ 50,000 ರು. ಸಬ್ಸಿಡಿ ನೀಡುತ್ತದೆ. ಇದಕ್ಕಾಗಿ ಇಎಂಪಿಎಸ್ ಎಂಬ ಯೋಜನೆ ಜಾರಿಯಲ್ಲಿದೆ. ಅದು ಸೆ.30ಕ್ಕೆ ಅಂತ್ಯಗೊಳ್ಳಬೇಕಿತ್ತು. ಆದರೆ ಅದನ್ನು ಫೇಮ್ 3 ಯೋಜನೆಯ ರೂಪರೇಷೆ ಅಂತಿಮಗೊಂಡು ಜಾರಿಗೆ ಬರುವವರೆಗೆ ಮುಂದುವರೆಸಲಾಗುವುದು. ಬಹುತೇಕ ಒಂದೆರಡು ತಿಂಗಳ ಕಾಲ ಮುಂದುವರೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ವಾಹನಗಳ ಬಿಡಿಭಾಗಗಳ ಉತ್ಪಾದಕರ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಎಲೆಕ್ಟ್ರಿಕ್ ವಾಹನಗಳ ಉದ್ದಿಮೆಯವರು ಆತಂಕಗೊಳ್ಳುವ ಅಗತ್ಯವಿಲ್ಲ. ಸಬ್ಸಿಡಿಯನ್ನು ಇನ್ನೂ 1-2 ತಿಂಗಳು ಮುಂದುವರೆಸಲಾಗುವುದು. ಫೇಮ್ 3 ಜಾರಿಗೊಳಿಸುವಾಗ ಫೇಮ್ 2ನಲ್ಲಿರುವ ಲೋಪಗಳನ್ನು ಸರಿಪಡಿಸಲಾಗುವುದು. ಫೇಮ್ 3 ಯೋಜನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮುಂದಿನ ವರ್ಷದಿಂದಲೇ ಈ ದೇಶದಲ್ಲಿ ಪೆಟ್ರೋಲ್ -ಡೀಸೆಲ್ ಕಾರ್‌ಗಳ ಮಾರಾಟ ಬಂದ್ - ಭಾರತಕ್ಕೆ ಬೇಕಿನ್ನು 16 ವರ್ಷ!
ಸಬ್ಸಿಡಿಗೆ ವಿರೋಧವಿಲ್ಲ
ಎಲೆಕ್ಟ್ರಿಕ್ ವಾಹನಗಳಿಗೆ ನೀಡುವ ಸಬ್ಸಿಡಿಗೆ ವಿರೋಧವಿಲ್ಲ. ಇದನ್ನು ಹಣಕಾಸು ಇಲಾಖೆ ಮತ್ತು ಭಾರಿ ಕೈಗಾರಿಕೆ ಇಲಾಖೆಗಳು ನಿರ್ಧರಿಸುತ್ತವೆ’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಇ-ವಾಹನಗಳ ಬ್ಯಾಟರಿ ಬೆಲೆ ಇಳಿದಿರುವ ಕಾರಣ ಸಬ್ಸಿಡಿ ಅಗತ್ಯವಿಲ್ಲ ಎಂದು ಇತ್ತೀಚೆಗೆ ಗಡ್ಕರಿ ಹೇಳಿದ್ದರು. ಈ ಬಗ್ಗೆ ಸೋಮವಾರ ಸ್ಪಷ್ಟನೆ ನೀಡಿದ ಅವರು, ಗಡ್ಕರಿ, ‘ನಾನು ಸಬ್ಸಿಡಿಯನ್ನು ವಿರೋಧಿಸುವುದಿಲ್ಲ. ಆ ಕುರಿತು ನನಗೆ ಸಮಸ್ಯೆಯಿಲ್ಲ. ಉತ್ಪಾದನಾ ವೆಚ್ಚ ಕಡಿಮೆ ಇರುವುದರಿಂದ, ಸಬ್ಸಿಡಿ ಇಲ್ಲದೆ ಇವಿಗಳನ್ನು ನಿರ್ವಹಿಸಬಹುದು ಎನ್ನುವುದು ನನ್ನ ಭಾವನೆ ಆಗಿತ್ತು’ ಎಂದರು. ಅಲ್ಲದೇ ‘ಮುಂದಿನ 2 ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಪೆಟ್ರೋಲ್, ಡೀಸೆಲ್ ವಾಹನಗಳ ಬೆಲೆಯಷ್ಟೇ ಆಗಲಿದೆ’ ಎಂದು ಗಡ್ಕರಿ ಹೇಳಿದರು.
ಬರುತ್ತಲೇ ಸಂಚಲನ ಸೃಷ್ಟಿಸಿದ ₹3 ಲಕ್ಷ EV ಕಾರ್; ಒಮ್ಮೆ ಚಾರ್ಜ್ ಮಾಡಿದ್ರೆ 1,200 ಕಿಮೀ ಓಡುತ್ತೆ