ಇಂದು ಅನಂತಕುಮಾರ್‌ ಜನ್ಮದಿನ: ಸತ್ಪ್ರೇರಣೆಯ ಅನಂತಛಾಯೆ ಪಸರಿಸಲಿ, ಜೆ.ಪಿ.ನಡ್ಡಾ

By Kannadaprabha NewsFirst Published Sep 22, 2024, 11:44 AM IST
Highlights

ಅನಂತಕುಮಾರ್ ಅತ್ಯಂತ ನಮ್ರತೆಯುಳ್ಳವರಾಗಿದ್ದರು. ಅವರ ನಮ್ರತೆಯನ್ನೂ ಮನುಷ್ಯತ್ವದ ಧೋರಣೆಯನ್ನೂ ಎಂದಿಗೂ ಮರೆಯುವಂತಿಲ್ಲ. ಅವರ ಹಾಸ್ಯ ಪ್ರವೃತ್ತಿಯೂ ಸ್ಮರಣೀಯವಾದುದು. ಸರ್ವವ್ಯಾಪಿಯಾಗಿದ್ದ ಅವರ ಸರಳತೆ, ಕಠಿಣ ಪರಿಶ್ರಮವನ್ನು ನಾವು ಅನುಸರಿಸಬೇಕು. ಅವರ ಪ್ರಾಮಾಣಿಕತೆಯನ್ನು ನಾವು ಗೌರವಿಸಬೇಕು. ಅವರು ಹೊಂದಿದ್ದ ರಾಜಕೀಯ ಪ್ರಜ್ಞೆ, ಚಾತುರ್ಯ, ಸಂಘಟನಾ ಕೌಶಲ, ಕಾರ್ಯ ಯೋಜನೆಯ ಯುದ್ಧತಂತ್ರ ಎಲ್ಲವೂ ಅವರನ್ನು ನಾವೆಲ್ಲರೂ ಯಾವಾಗಲೂ ಗೌರವಿಸುವಂತೆ ಪ್ರೇರಿಸುತ್ತಿದ್ದವು.

ಜೆ.ಪಿ.ನಡ್ಡಾ

ಕೇಂದ್ರ ಆರೋಗ್ಯ ಸಚಿವ

Latest Videos

ಬೆಂಗಳೂರು(ಸೆ.22): ಅನಂತಕುಮಾರ್ ನಮಗೆ ಪ್ರೇರಣೆ ನೀಡುತ್ತಿದ್ದುದು ಮಾತ್ರವಲ್ಲ, ಅವರ ಸಹಚರರಾಗಿ ಅವರ ಜೊತೆಗೆ ಕೆಲಸ ಮಾಡುವ ಸೌಭಾಗ್ಯವೂ ನನಗೆ ದಕ್ಕಿತ್ತು. ಎಲ್ಲೋ ಕೆಲವು ದಿನಗಳಲ್ಲ, 1980 ರಿಂದ 2018ರವರೆಗೂ ದೀರ್ಘಕಾಲ ಅವರ ಜೊತೆಗೆ ನಾನು ಕೆಲಸ ಮಾಡಿದ್ದೇನೆ.

ಅನಂತಕುಮಾರ್ ನನಗಿಂತ ವಯಸ್ಸಿನಲ್ಲಿ ದೊಡ್ಡವರು. ಆದರೆ, ನನ್ನನ್ನು ಎಂದೂ ತಮಗಿಂತ ಕಿರಿಯನಂತೆ ಕಾಣಲಿಲ್ಲ. ನನ್ನನ್ನು ತಮ್ಮ ಸ್ನೇಹಿತನಂತೆಯೇ ಕಾಣುತ್ತಿದ್ದರು. 1980ರಲ್ಲಿ ನಾವು ವಿದ್ಯಾರ್ಥಿ ಪರಿಷತ್ತಿನ ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದಾಗ ಶುರುವಾದ ಗೆಳೆತನ ನಮ್ಮದು. ನಾನು ವಿದ್ಯಾರ್ಥಿ ಪರಿಷತ್ತಿನ ಕೆಲಸದಲ್ಲಿ ಭಾಗವಹಿಸುವ ಕಾಲಕ್ಕೆ ಅನಂತಕುಮಾರ್ ಕರ್ನಾಟಕದಲ್ಲಿ ಪರಿಷತ್ತಿನ ಸಂಘಟನಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಆಗಿಂದಾಗ್ಗೆ ರಾಷ್ಟ್ರೀಯ ಸಮಿತಿಯ ಬೈಠಕ್‌ನಲ್ಲೂ ರಾಷ್ಟ್ರೀಯ ಪರಿಷತ್ತಿನ ಸಭೆಗಳಲ್ಲೂ ನಾವು ಪರಸ್ಪರ ಭೇಟಿ ಮಾಡುವ ಅವಕಾಶ ಸಿಗುತ್ತಿತ್ತು. ಅವರಲ್ಲಿ ಪರಿಷತ್ತಿನ ಸಂಘಟನೆಗಾಗಿ ಕೆಲಸ ಮಾಡುವ ಉತ್ಸಾಹ ತುಂಬಿ ತುಳುಕುತ್ತಿತ್ತು, ಸಮಾಜದಲ್ಲಿ ಪರಿವರ್ತನೆಯುಂಟು ಮಾಡುವ ಹಂಬಲದ ಹೊಳಹುಗಳು ಕಾಣುತ್ತಿದ್ದವು. ಅಲ್ಲದೆ, ದೇಶದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಗೆ ಕೆಲಸ ಮಾಡಬೇಕೆನ್ನುವುದಕ್ಕೆ ಅವರ ಕೆಲಸ ನಮಗೆ ಪ್ರೇರಣೆ ನೀಡುವಂತಹುದಾಗಿತ್ತು.

ಬಿಜೆಪಿ ಜೊತೆಗೆ ಧೃಡವಾಗಿದ್ದೇನೆ, ಕಾಂಗ್ರೆಸ್ ಸೇರ್ಪಡೆ ಸುದ್ದಿ ತಳ್ಳಿ ಹಾಕಿದ ತೇಜಸ್ವಿನಿ ಅನಂತಕುಮಾರ್‌

ಅನಂತಕುಮಾರ್ ನಮಗೆ ಪ್ರೇರಣೆ ನೀಡುತ್ತಿದ್ದುದು ಮಾತ್ರವಲ್ಲ, ಅವರ ಸಹಚರರಾಗಿ ಅವರ ಜೊತೆಗೆ ಕೆಲಸ ಮಾಡುವ ಸೌಭಾಗ್ಯವೂ ನನಗೆ ದಕ್ಕಿತು. ಎಲ್ಲೋ ಕೆಲವು ದಿನಗಳೆಂದಲ್ಲ, ೧೯೮೦ರಿಂದ ೨೦೧೮ರವರೆಗೂ ದೀರ್ಘಕಾಲ ಈ ಸೌಭಾಗ್ಯ ನನಗೆ ಪ್ರಾಪ್ತವಾಯಿತು. ಪರಿಷತ್ತಿನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ನಾವಿಬ್ಬರೂ ಏಕಕಾಲಕ್ಕೆ ಪೂರ್ಣಾವಧಿ ಕಾರ್ಯಕರ್ತರಾಗಿ ಹೊರಟೆವು, ನಾನು ಯುವ ಮೋರ್ಚಾದ ಕರ್ತವ್ಯದಲ್ಲಿದ್ದಾಗ ಅನಂತಕುಮಾರ್, ಕರ್ನಾಟಕದಲ್ಲಿ ಬಿಜೆಪಿಯ ಸಂಘಟನೆಯಲ್ಲಿ ತೊಡಗಿದ್ದರು. ಅವರು ಕೇಂದ್ರ ಸರ್ಕಾರದ ಮಂತ್ರಿಗಳಾಗಿದ್ದಾಗ ನಾನು ಹಿಮಾಚಲ ಪ್ರದೇಶದಲ್ಲಿ ಅವರಿಗೆ ಜೊತೆಯಾಗಿದ್ದೆ, 2010ರಿಂದ ಮುಂದೆ 2018ರವರೆಗೂ ಪಕ್ಷದ ಕೇಂದ್ರ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿಯೂ, ಕೇಂದ್ರ ಸರ್ಕಾರದಲ್ಲಿ ಅವರ ಸಹೋದ್ಯೋಗಿಯಾಗಿಯೂ ಅವರೊಡನೆ ಕೆಲಸ ಮಾಡುವ ಸದವಕಾಶ ನನಗೆ ಲಭಿಸಿತು.

ನಮ್ರತೆಯ ಅನಂತ

ಅನಂತಕುಮಾರ್ ಅತ್ಯಂತ ನಮ್ರತೆಯುಳ್ಳವರಾಗಿದ್ದರು. ಅವರ ನಮ್ರತೆಯನ್ನೂ ಮನುಷ್ಯತ್ವದ ಧೋರಣೆಯನ್ನೂ ಎಂದಿಗೂ ಮರೆಯುವಂತಿಲ್ಲ. ಅವರ ಹಾಸ್ಯ ಪ್ರವೃತ್ತಿಯೂ ಸ್ಮರಣೀಯವಾದುದು. ಸರ್ವವ್ಯಾಪಿಯಾಗಿದ್ದ ಅವರ ಸರಳತೆ, ಕಠಿಣ ಪರಿಶ್ರಮವನ್ನು ನಾವು ಅನುಸರಿಸಬೇಕು. ಅವರ ಪ್ರಾಮಾಣಿಕತೆಯನ್ನು ನಾವು ಗೌರವಿಸಬೇಕು. ಅವರು ಹೊಂದಿದ್ದ ರಾಜಕೀಯ ಪ್ರಜ್ಞೆ, ಚಾತುರ್ಯ, ಸಂಘಟನಾ ಕೌಶಲ, ಕಾರ್ಯ ಯೋಜನೆಯ ಯುದ್ಧತಂತ್ರ ಎಲ್ಲವೂ ಅವರನ್ನು ನಾವೆಲ್ಲರೂ ಯಾವಾಗಲೂ ಗೌರವಿಸುವಂತೆ ಪ್ರೇರಿಸುತ್ತಿದ್ದವು.

ಅನಂತಕುಮಾರ್ ಅವರ ವಿನೀತಭಾವದ ಬಗೆಗೆ ಹೇಳುವುದಾದರೆ, ಅವರು ಯಾರೋ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಎಂದು ನಮಗೆ ಅನ್ನಿಸುತ್ತಲೇ ಇರಲಿಲ್ಲ. ಆತ ನಮ್ಮೊಳಗೇ ಒಬ್ಬ ಎನ್ನುವ ರೀತಿಯಲ್ಲೇ ಅವರು ಯಾವಾಗಲೂ ನಡೆದುಕೊಳ್ಳುತ್ತಿದ್ದರು. ಮಾನವೀಯ ದೃಷ್ಟಿಕೋನದಿಂದ ನೋಡುವುದಾದರೆ ಅನಂತಕುಮಾರ್ ಅವರ ದೃಷ್ಟಿ ಪಕ್ಷದಲ್ಲಾಗಲಿ ಸಮಾಜದಲ್ಲಾಗಲಿ ಎಲ್ಲರಿಗಿಂತ ಕೊನೆಗೆ ನಿಂತಿರುವವರ, ಹಿಂದುಳಿದವರ ಕಡೆಗೇ ಇರುತ್ತಿತ್ತು.

ಉಪಚಾರ ನಿರಂತರ

ಅವರ ಬಂಧುತ್ವ, ಆತ್ಮೀಯತೆ ಮರೆಯಲಾರದ ಗುಣ. ಸಭೆ ಎಲ್ಲಿ ಸೇರಬೇಕೆಂಬ ಪ್ರಶ್ನೆ ಬಂದಾಗ ನನ್ನ ಉತ್ತರ ಸಿದ್ಧವಾಗಿರುತ್ತಿತ್ತು: ಅನಂತಕುಮಾರರ ಮನೆಯಲ್ಲಿ. ಅವರ ಮನೆಯಲ್ಲಿ ಸತ್ಕಾರ ಸರ್ವದಾ ಸಿದ್ಧವಾಗಿರುತ್ತಿತ್ತು. ರಾತ್ರಿ ಹತ್ತು ಗಂಟೆಯಾಗಲಿ, ಹನ್ನೆರಡಾದರೂ ಸರಿಯೇ. ಊಟಕ್ಕೆ ಬರುವುದೋ ತಿಂಡಿಗೋ ಎಂದು ಅನಂತಕುಮಾರರನ್ನು ಕೇಳುವ ಅಗತ್ಯವೇ ಇರಲಿಲ್ಲ. ಮಧ್ಯಾಹ್ನ ಹನ್ನೆರಡಕ್ಕೆ ಬರಲು ಹೇಳಿದ್ದಾರೆಂದರೆ ಊಟದ ವ್ಯವಸ್ಥೆಯಾಗಿರುತ್ತದೆ ಎಂದು ನಿಶ್ಚಿತ. ಸಂಜೆಯಾದರೆ ಒಳ್ಳೆಯ ಉಪಾಹಾರ, ರಾತ್ರಿಯಾದರೆ ಭೋಜನ ಮುಗಿಸಿಯೇ ನಾವು ಮರಳುವುದು. ನಾವು ಎಂದರೆ ಎಲ್ಲೋ ಕೆಲವರಲ್ಲ. ನಮ್ಮ ಪರಿವಾರದವರು ಯಾರಿರುತ್ತಾರೋ ಅವರಿಗೆಲ್ಲ ಅದೇ ಸತ್ಕಾರ. ಇದು ಅನಂತಕುಮಾರರ ಆತ್ಮೀಯ ಬಂಧುತ್ವದ ರೀತಿ. ಅವರು ಅನಂತ ಮಾತ್ರವಲ್ಲ, ಅನ್ನದಾತರೂ ಆಗಿದ್ದವರು.

ಅಂದಿನ ಕೆಲಸ ಅಂದೇ ಪೂರ್ಣ

ಅನಂತಕುಮಾರ್ ಒಬ್ಬ ಅಪೂರ್ವ ದುಡಿಮೆಗಾರ. ಸಮಯದ ಪರಿವೆಯೇ ಇಲ್ಲದೆ ಸದಾ ಕಾರ್ಯತತ್ಪರರಾಗಿರುತ್ತಿದ್ದವರು. ಪಕ್ಷದ ಸಭೆಗಳು ದಿನವಿಡೀ ನಡೆದ ನಂತರ ಅಲ್ಲಿನ ನಿರ್ಣಯಗಳನ್ನು ಬರೆದಿಡುವ ಮುಖ್ಯ ಕೆಲಸವಾಗಬೇಕಲ್ಲ, ದಿನದ ಪರಿಶ್ರಮದಿಂದ ರಾತ್ರಿ ಹತ್ತು ಗಂಟೆಯ ಹೊತ್ತಿಗೆ ನಿದ್ರೆ ತುಂಬಿ ಕಣ್ಣು ಜೋಲುವ ಹೊತ್ತಿಗೆ ಅನಂತಕುಮಾರ್ ಹಾಜರು. ನಮ್ಮನ್ನೂ ಸುಮ್ಮನೆ ಬಿಡುವವರಲ್ಲ. ನಡ್ಡಾರವರೇ, ಈ ನಿರ್ಣಯಗಳನ್ನು ಬರೆದಿಡುವ ಕೆಲಸ ಈ ಹೊತ್ತೇ ಆಗಬೇಕು. ನಾಳೆ ಬೆಳಗ್ಗೆ ಇವನ್ನು ತಲುಪಿಸಲೇಬೇಕು ಎನ್ನುತ್ತಾ ಬರೆಯಲು ಕುಳಿತರೆ ರಾತ್ರಿ ಒಂದಾದರೂ ಸರಿಯೇ. ಎರಡಾದರೂ ಸರಿಯೇ. ಬರೆದು, ಬರೆದುದನ್ನು ಪರಿಶೀಲಿಸಿ, ಮತ್ತೆ ಬರೆದು, ಎಲ್ಲ ಸಮಂಜಸವಾಗಿದೆ ಎಂದು ದೃಢಪಟ್ಟ ಮೇಲೆಯೇ, ವಿಶ್ರಾಂತಿಯ ಯೋಚನೆ. ಕೆಲಸದಲ್ಲೂ ಅಷ್ಟೇ. ಇಂಥ ಸಮಯವೆಂಬುದೇ ಇಲ್ಲ.ಎಷ್ಟು ಹೊತ್ತಾದರೂ ಸರಿಯೇ, ಮಾಡ ಹೊರಟ ಕೆಲಸವನ್ನು ಮುಗಿಸಿಯೇ ಸಿದ್ಧ.

ಪಿಪಿಪಿ ಜಾರಿಗೆ ತಂದ ಧೀಮಂತ

ಕೇಂದ್ರ ಸರ್ಕಾರದ ಒಬ್ಬ ಮಂತ್ರಿಯಾಗಿ ಅನಂತಕುಮಾರರ ಸಾಧನೆ, ಕೊಡುಗೆ ಅಪಾರವಾಗಿದೆ. ಅವರ ಆಲೋಚನೆಗಳು ನವನವೀನವಾಗಿರುತ್ತಿದ್ದವು. ತಮ್ಮ ಆಲೋಚನೆಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ಅವರು ಯಾವುದೇ ಸವಾಲನ್ನು ಎದುರಿಸಲು ಸನ್ನದ್ಧರಾಗಿರುತ್ತಿದ್ದರು. ಕಾರ್ಯ ಸಿದ್ಧತೆಯಲ್ಲಿ ಒದಗಬಹುದಾದ ಅಡ್ಡಿ -ಆತಂಕಗಳನ್ನು ಅವರು ಯಶಸ್ವಿಯಾಗಿ ನಿವಾರಿಸಬಲ್ಲವರಾಗಿದ್ದರು. ಅವರು ನಾಗರಿಕ ವಿಮಾನಯಾನ ಖಾತೆಯ ಸಚಿವರಾಗಿದ್ದ ಸಂದರ್ಭ. ಆ ಕಾಲಕ್ಕೆ ಸಾರ್ವಜನಿಕ ಕಾಮಗಾರಿಗಳಿಗೆ ಖಾಸಗಿ ಭಾಗಿತ್ವವನ್ನು ಆಹ್ವಾನಿಸುವುದೆಂದರೆ ಒಂದು ಹಿನ್ನಡೆಯ ಹೆಜ್ಜೆಯೆಂದೇ ಭಾವಿಸಲಾಗುತ್ತಿತ್ತು. ಸರ್ಕಾರ ಆಪತ್ತನ್ನು ಮೈಮೇಲೆ ಎಳೆದುಕೊಂಡಂತೆಯೇ ಲೆಕ್ಕ. ಖಾಸಗೀಕರಣದ ಮಾತೆತ್ತುವುದೇ ಮಹಾಪಾಪವೆಂದು ಪರಿಗಣಿಸಲಾಗುತ್ತಿದ್ದ ಕಾಲದಲ್ಲಿ, ಅನಂತಕುಮಾರ್ ವಿಮಾನ ಯಾನದಲ್ಲಿ ಮಾತ್ರವಲ್ಲ, ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲೂ ಸರ್ಕಾರದೊಡನೆ ಖಾಸಗಿ ಸಹಭಾಗಿತ್ವವನ್ನು ಆಹ್ವಾನಿಸಲು ಮುಂದಾದರು. ಅನಂತಕುಮಾರ್ ರೂಪಿಸಿದ ಈ ಪ್ರಯೋಗವನ್ನು ವಾಜಪೇಯಿ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿತು.

ಅನಂತಕುಮಾರ್‌ ಪತ್ನಿ ತೇಜಸ್ವಿನಿ ಬಸವನಗುಡಿ ಬಿಜೆಪಿ ಅಭ್ಯರ್ಥಿ?

ಆರೋಗ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ

ಕೋಟ್ಯಂತರ ಭಾರತೀಯರ ಆರೋಗ್ಯಕ್ಕೆ ನೆರವಾಗುವ ಮಹತ್ವಪೂರ್ಣ ಕೊಡುಗೆ ಕೊಟ್ಟವರು ಅನಂತಕುಮಾರ್. ನಾನು ಸ್ವಾಸ್ಥ್ಯ ಖಾತೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೆ. ಅವರು ಔಷಧ ಖಾತೆಯನ್ನು ನೋಡಿಕೊಳ್ಳುತ್ತಿದ್ದರು. ಔಷಧ ತಯಾರಿಕೆ ನಮ್ಮ ಹೊಣೆಯಾದರೆ ಅವುಗಳಿಗೆ ಬೆಲೆ ನಿಗದಿಪಡಿಸುವ ಕೆಲಸ ಔಷಧ ಮಂತ್ರಾಲಯಕ್ಕೆ ಸಂಬಂಧಿಸಿದ್ದು. ಅನಂತಕುಮಾರರೊಡನೆ ಕೆಲಸ ಮಾಡುವುದೆಂದರೆ ಅದೊಂದು ಆನಂದದಾಯಕ ಅನುಭವ. ಸಾವಿರಾರು ರುಪಾಯಿ ಬೆಲೆಬಾಳುವ ಜೀವರಕ್ಷಕ ಔಷಧಗಳನ್ನು, ಜನೌಷಧಿಯ ಹೆಸರಿನಲ್ಲಿ ಅವರು ನೂರಿನ್ನೂರು ರುಪಾಯಿಗಳಿಗೆ ಲಭ್ಯವಾಗುವಂತೆ ಮಾಡಿದರು. ಅತ್ಯಗತ್ಯ ಔಷಧಗಳನ್ನು ಯಾವುದೇ ಯೋಚನೆಯಿಲ್ಲದೆ ರಾಷ್ಟ್ರೀಯ ಪಟ್ಟಿಯಲ್ಲಿ ಸೇರಿಸುವಂತೆ ನನಗೆ ಸಲಹೆ ಮಾಡುತ್ತಿದ್ದ ಅನಂತಕುಮಾರ್, ಅವುಗಳು ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡುವುದು ತನ್ನ ಜವಾಬ್ದಾರಿ ಎನ್ನುತ್ತಿದ್ದರು. ಹೀಗಾಗಿ, ಹೃದ್ರೋಗಿಗಳು ಎರಡು ಲಕ್ಷ ರುಪಾಯಿ ತೆರಬೇಕಾಗಿದ್ದ ಸ್ಟೆಂಟ್, ಇಪ್ಪತ್ತು ಮೂವತ್ತು ಸಾವಿರ ರುಪಾಯಿಗಳಲ್ಲಿ ದೊರಕುವಂತಾಯಿತು. ಮಂಡಿ ಕೀಲಿನ ಶಸ್ತ್ರಚಿಕಿತ್ಸೆಯೂ ಸುಲಭ ಬೆಲೆಯಲ್ಲಿ ಸಾಧ್ಯವಾಗುವಂತಾಯಿತು.

ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಶಕ್ತಿ

ಅವರ ಕಾರ್ಯಕ್ಕೆ ಒದಗುತ್ತಿದ್ದ ಪ್ರೇರಣೆ ತತ್ವಜ್ಞಾನಪೂರ್ವಕವಾಗಿರುತ್ತಿತ್ತು. ಎಲ್ಲರನ್ನೂ ಜೊತೆಜೊತೆಗೇ ಮುಂದಕ್ಕೊಯ್ಯಬೇಕು. ಇದು ಅನಂತಕುಮಾರರ ಧ್ಯೇಯ. ಆಗಿಂದಾಗ್ಗೆ ಸಭಾಕಲಾಪಗಳು ಜರುಗುತ್ತಿದ್ದವು. ಸಭೆಯ ನಿರ್ಣಯಗಳಿಂದ ಎಲ್ಲರಿಗೂ ಸಂತೋಷವಾಗುವುದು ಸಾಧ್ಯವಂತೂ ಇಲ್ಲ. ಕೆಲವರು ಸಂತುಷ್ಟರಾದರೆ ಬೇಸರಗೊಳ್ಳುವವರು ಹಲವರು. ಸಂತೃಪ್ತರಾದವರನ್ನು ಅಷ್ಟಕ್ಕೆ ಬಿಟ್ಟು ಅನಂತಕುಮಾರ್ ಬೇಸರದಲ್ಲಿರುವವರನ್ನು ಸಂತೈಸಲು ಮುಂದಾಗುತ್ತಿದ್ದರು.. ಯಾವುದೇ ಅಶಾಂತ ಮನಸ್ಸನ್ನು ಸಾಂತ್ವನಗೊಳಿಸುವ ಶಕ್ತಿ ಅವರಲ್ಲಿತ್ತು. ನನಗೆ ಅತಿ ದುಃಖವಾಗುವ ವಿಷಯವೇನೆಂದರೆ, ನಾನು ಆರೋಗ್ಯ ಖಾತೆಯ ಮಂತ್ರಿಯಾಗಿದ್ದರೂ ಅನಂತಕುಮಾರರ ಅನಾರೋಗ್ಯದ ಸುಳಿವೂ ನನಗೆ ಗೊತ್ತಾಗದೆ ಹೋದುದು. ಅತೀ ಗಂಭೀರವಾದ ಖಾಯಿಲೆಗೆ ತುತ್ತಾಗಿ ಅವರು ನಮ್ಮನ್ನು ಅಗಲಿ ಹೋದರು. ನಮ್ಮಿಂದ ತಮ್ಮ ನೋವನ್ನು ಅಡಗಿಸಿಟ್ಟು ಅವರು ದೂರವಾಗಿಬಿಟ್ಟರು. ಆದರೆ, ಅವರ ನೆನಪು ನಮ್ಮಲ್ಲಿ ಸದಾ ಹಸಿರಾಗಿರುತ್ತದೆ.
ಪಕ್ಷಕ್ಕೆ ಅವರು ಸಲ್ಲಿಸಿರುವ ಸೇವೆ ಮರೆಯುವಂತಹುದಲ್ಲ. ಪಕ್ಷದ ಕಾರ್ಯಕರ್ತರಾಗಿ, ಚುನಾವಣಾ ಸಮಿತಿಯ ಸದಸ್ಯರಾಗಿ, ಪಾರ್ಲಿಮೆಂಟರಿ ಸಮಿತಿಯ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಅತ್ಯುಚ್ಚ ನಿರ್ಣಾಯಕ ಸಮಿತಿಯ ಕಾರ್ಯದರ್ಶಿಯಾಗಿ ಅನಂತಕುಮಾರ್ ಸಲ್ಲಿಸಿದ ಸೇವೆ ಸ್ಮರಣಾರ್ಹ.

click me!