ಚಿರಾಗ್‌ ಪಾಸ್ವಾನ್‌ ವಿರುದ್ಧ ಬಂಡೆದ್ದ ಚಿಕ್ಕಪ್ಪ!

By Kannadaprabha NewsFirst Published Jun 15, 2021, 7:44 AM IST
Highlights

* ಚಿರಾಗ್‌ ಪಾಸ್ವಾನ್‌ ವಿರುದ್ಧ ಬಂಡೆದ್ದ ಚಿಕ್ಕಪ್ಪ

* ಎಲ್‌ಜೆಪಿಯ 6 ಪೈಕಿ 5 ಸಂಸದರಿಂದ ಪಶುಪತಿಗೆ ಬೆಂಬಲ ಘೋಷಣೆ

* ಪಶುಪತಿ ಪಾರಸ್‌ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆ

* ನಿತೀಶ್‌ ವಿರುದ್ಧ ಬಂಡೆದ್ದ ಚಿರಾಗ್‌ ಈಗ ಏಕಾಂಗಿ

ನವದೆಹಲಿ(ಜೂ.15): ದಿಢೀರ್‌ ಬೆಳವಣಿಗೆಯೊಂದರಲ್ಲಿ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ)ದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಅವರ ವಿರುದ್ಧ ಅವರದ್ದೇ ಪಕ್ಷದ 5 ಸಂಸದರು ಬಂಡೆದಿದ್ದಾರೆ. ಜೊತೆಗೆ ಚಿರಾಗ್‌ ಅವರ ಚಿಕ್ಕಪ್ಪ (ಎಲ್‌ಜೆಪಿ ಸಂಸ್ಥಾಪಕ ರಾಂ ವಿಲಾಸ್‌ ಪಾಸ್ವಾನ್‌ರ ತಮ್ಮ) ಪಶುಪತಿ ಕುಮಾರ್‌ ಪಾರಸ್‌ ಅವರನ್ನು ಸಂಸದೀಯ ಪಕ್ಷದ ನೂತನ ನಾಯಕ ಎಂದು ಘೋಷಿಸಿದ್ದು, ಈ ಕುರಿತು ಲೋಕಸಭಾ ಸ್ಪೀಕರ್‌ಗೆ ಮಾಹಿತಿಯನ್ನೂ ರವಾನಿಸಿದ್ದಾರೆ.

ಕರೆದರೂ ಎನ್‌ಡಿಎ ಸಭೆಗೆ ಚಿರಾಗ್‌ ಪಾಸ್ವಾನ್‌ ಗೈರು!

ಇದರೊಂದಿಗೆ ಪಕ್ಷದಲ್ಲಿ ಚಿರಾಗ್‌ ಇದೀಗ ಏಕಾಂಗಿಯಾಗಿದ್ದಾರೆ. ಜೆಡಿಯು ನಾಯಕ ನಿತೀಶ್‌ ವಿರುದ್ಧ ಭಾರೀ ಮುನಿಸು ಹೊಂದಿರುವ ಚಿರಾಗ್‌, ಇದೇ ಕಾರಣಕ್ಕಾಗಿ ಕಳೆದ ಲೋಕಸಭಾ ಚುನಾವಣೆ ಮತ್ತು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದರು. ಪಕ್ಷ ಯಾವುದೇ ಸಾಧನೆ ಮಾಡದೇ ಇದ್ದರೂ, ಜೆಡಿಯು ಹೆಚ್ಚಿನ ಸ್ಥಾನ ಗೆಲ್ಲದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಆದರೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಗೆ ಚಿರಾಗ್‌ ನಾಯಕತ್ವವೇ ಕಾರಣ ಎಂದು ದೂರಿರುವ 5 ಸಂಸದರು, ಇದೀಗ ರಾಂ ವಿಲಾಸ್‌ ಪಾಸ್ವಾನ್‌ ಪುತ್ರನಿಗೆ ಕೈಕೊಟ್ಟಅವರ ಚಿಕ್ಕಪ್ಪನ ಕೈಹಿಡಿದಿದ್ದಾರೆ. ಬೆಳವಣಿಗೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪಶುಪತಿ ಕುಮಾರ್‌, ‘ನಾನು ಪಕ್ಷವನ್ನು ಒಡೆದಿಲ್ಲ, ಬದಲಾಗಿ ಕಾಪಾಡಿದ್ದೇನೆ. ಪಕ್ಷದ ಶೇ.99ರಷ್ಟುಕಾರ್ಯಕರ್ತರು ಚಿರಾಗ್‌ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ನಮ್ಮ ತಂಡ ಬಿಜೆಪಿ ನೇತೃತ್ವದ ಎನ್‌ಡಿಎದ ಭಾಗವಾಗಿ ಮುಂದುವರೆಯಲಿದೆ. ಚಿರಾಗ್‌ ಕೂಡಾ ನಮ್ಮ ಸಂಘಟನೆಯ ಭಾಗವಾಗಿ ಉಳಿಯಬಹುದು’ ಎಂದು ಹೇಳಿದ್ದಾರೆ. ಮತ್ತೊಂದೆಡೆ ದಿಢೀರ್‌ ಬೆಳವಣಿಗೆ ಬಳಿಕ ಪಶುಪತಿ ಅವರ ಮನೆಗೆ ಚಿರಾಗ್‌ ತೆರಳಿದ್ದರಾದರೂ, ಅಲ್ಲಿ ಅವರ ಭೇಟಿಯಾಗಿಲ್ಲ.

'ಬಿಹಾರದಲ್ಲಿ NDA ಸೋತಿದ್ದರೆ ಮೋದಿ ರಾಜೀನಾಮೆ ಕೇಳುತ್ತಿದ್ದರು'

ಈ ನಡುವೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರನ್ನು ಪಶುಪತಿ ಕುಮಾರ್‌ ಅವರು ವಿಕಾಸ ಪುರುಷ ಎಂದು ಹೊಗಳಿರುವುದು, ಮುಂದಿನ ಬೆಳವಣಿಗೆಗಳ ದಿಕ್ಸೂಚಿ ನೀಡಿದೆ. ಜೊತೆಗೆ ಪರಿಸ್ಥಿತಿ ಚಿರಾಗ್‌ ಪಾಲಿಗೆ ಕಷ್ಟವಾಗಬಹುದು ಎಂಬ ಸುಳಿವನ್ನೂ ನೀಡಿದೆ.

ಜೆಡಿಯು ವ್ಯಂಗ್ಯ:

ಈ ನಡುವೆ ಎಲ್‌ಜೆಪಿ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಯು, ಚಿರಾಗ್‌ ಪಾಸ್ವಾನ್‌ ಏನು ಬಿತ್ತಿದ್ದರೂ ಅದನ್ನೇ ಬೆಳೆದಿದ್ದಾರೆ ಎಂದು ವ್ಯಂಗ್ಯವಾಡಿದೆ.

click me!