Latest Videos

ಬಿಹಾರದಲ್ಲಿ ನೆಟ್‌ ತನಿಖೆಗೆ ತೆರಳಿದ್ದ ಸಿಬಿಐ ಟೀಂ ಮೇಲೇ ಭಾರಿ ದಾಳಿ!

By Kannadaprabha NewsFirst Published Jun 24, 2024, 5:35 AM IST
Highlights

ಬಿಹಾರದ ನವಾಡಾ ಜಿಲ್ಲೆಯಲ್ಲಿ ಯುಜಿಸಿ-ನೆಟ್ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಗೆ ಆಗಮಿಸಿದ್ದ ಸಿಬಿಐ(CBI) ತಂಡದ ಮೇಲೆ ಗ್ರಾಮಸ್ಥರು ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ಸಿಬಿಐ ತಂಡದ ಚಾಲಕನಿಗೆ ಗಾಯಗಳಾಗಿವೆ.

ನಾವಡಾ (ಬಿಹಾರ): ಬಿಹಾರದ ನವಾಡಾ ಜಿಲ್ಲೆಯಲ್ಲಿ ಯುಜಿಸಿ-ನೆಟ್ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಗೆ ಆಗಮಿಸಿದ್ದ ಸಿಬಿಐ(CBI) ತಂಡದ ಮೇಲೆ ಗ್ರಾಮಸ್ಥರು ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ಸಿಬಿಐ ತಂಡದ ಚಾಲಕನಿಗೆ ಗಾಯಗಳಾಗಿವೆ.

ಟೆಲಿಗ್ರಾಂ ಆ್ಯಪ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ ಹಾಗೂ 5-6 ಲಕ್ಷ ರು.ಗೆ ಆ್ಯಪ್‌ ಮೂಲಕ ಮಾರಾಟ ನಡೆದಿದೆ ಎಂಬ ಮಾಹಿತಿ ಆಧರಿಸಿ ಜೂ.18ರಂದು ನಡೆದಿದ್ದ ಯುಜಿಸಿ ನೆಟ್ ಪರೀಕ್ಷೆಯನ್ನು ಕೇಂದ್ರ ಶಿಕ್ಷಣ ಸಚಿವಾಲಯ 4 ದಿನದ ಹಿಂದೆ ರದ್ದುಗೊಳಿಸಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

ಪರೀಕ್ಷೆ ಪಾಸ್‌ಗಾಗಿ ಲಂಚ: ನೀಟ್‌ ಹಗರಣದಲ್ಲಿ ಕನ್ನಡಿಗರೂ ಭಾಗಿ!

ಹೀಗಾಗಿ ದೆಹಲಿಯ ಸಿಬಿಐ ತಂಡವು ಶಂಕಿತ ಆರೋಪಿಗಳನ್ನು ಹುಡುಕಿಕೊಂಡು ಅವರನ್ನು ಬಂಧಿಸಲು ಶನಿವಾರ ಸಂಜೆ ನವಾಡಾ ಜಿಲ್ಲೆಯ ಕಾಸಿಯಾಡಿಹ್ ಗ್ರಾಮಕ್ಕೆ ತಲುಪಿತ್ತು. ಆಗ ಗ್ರಾಮಸ್ಥರು ಮಫ್ತಿಯಲ್ಲಿದ್ದ ಸಿಬಿಐ ತಂಡವನ್ನು ‘ನಕಲಿ ತಂಡ’ ಎಂದು ಭಾವಿಸಿ ಥಳಿಸಿದ್ದಾರೆ. ಅವರ ವಾಹನಗಳನ್ನೂ ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆಗಿದ್ದೇನು?:

ಸಿಬಿಐ ತಂಡವು ಶನಿವಾರ ಸಂಜೆ, ಒಂದಿಬ್ಬರು ನವಾಡಾ ಪೊಲೀಸರೊಂದಿಗೆ ಕಾಸಿಯಾಹಾಡ್‌ ಗ್ರಾಮಕ್ಕೆ ತೆರಳಿ ಅಲ್ಲಿನ ಆರೋಪಿಗೆ ಹುಡುಕಾಟ ನಡೆಸಿತ್ತು. ಆಗ ಸುಮಾರು 200-300 ಗ್ರಾಮಸ್ಥರು, ಸಿವಿಲ್ ಡ್ರೆಸ್ ನಲ್ಲಿದ್ದ ಸಿಬಿಐ ತಂಡವನ್ನು ನಕಲಿ ಎಂದು ತಿಳಿದು ಸುತ್ತುವರೆದಿದ್ದಾರೆ.

ನೀಟ್ ರಾದ್ಧಾಂತದ ಹಿಂದಿದೆಯಾ ಕೋಚಿಂಗ್ ಸಂಸ್ಥೆಗಳ ಕುತಂತ್ರ?

ಆಗ, ಸಿಬಿಐ ಅಧಿಕಾರಿಗಳು ತಮ್ಮ ಗುರುತಿನ ಚೀಟಿ ತೋರಿಸಿದ್ದಾರೆ. ಜತೆಗೆ ಸಿಬಿಐ ತಂಡದೊಂದಿಗೆ ಇದ್ದ ಬಿಹಾರ ಪೊಲೀಸರ ಮಹಿಳಾ ಪೇದೆಯೊಬ್ಬರು ಜನರನ್ನು ಶಾಂತಗೊಳಿಸಲು ಯತ್ನಿಸಿದ್ದಾರೆ. ಆದರೆ ದಾಳಿಯಿಂದ ಬೆಚ್ಚಿದ ಸಿಬಿಐ ತಂಡ ಕೂಡಲೇ ಸಮೀಪದ ರಾಜೌಲಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದೆ. ಆಗ ಹೆಚ್ಚಿನ ಸಂಖ್ಯೆಯ ಪೊಲೀಸರು ಬರುವಷ್ಟರಲ್ಲಿ ಸಿಬಿಐ ತಂಡ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ ಆಗಿತ್ತು. ಗ್ರಾಮಸ್ಥರ ಹೊಡೆತದಿಂದ ಸಿಬಿಐ ತಂಡದ ಕಾರು ಚಾಲಕ ಗಾಯಗೊಂಡ ಎಂದು ಗೊತ್ತಾಗಿದೆ.
ಘಟನೆ ಹಿನ್ನೆಲೆಯಲ್ಲಿ 4 ಜನರನ್ನು ಬಿಹಾರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

click me!