ಪ್ರಧಾನಿ ಮೋದಿ 28 ಪೈಸೆ ಪಿಎಂ ಎಂದ ಉದಯನಿಧಿ ಸ್ಟ್ಯಾಲಿನ್‌

By Santosh NaikFirst Published Mar 24, 2024, 11:38 AM IST
Highlights

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ತಮಿಳುನಾಡು ಡಿಎಂಕೆ ಸಚಿವ ಉದಯನಿಧಿ ಸ್ಟ್ಯಾಲಿನ್‌, ನಾವು ಇನ್ನು ಮುಂದೆ ಪ್ರಧಾನಿ ನರೇಂದ್ರ ಮೋದಿಯನ್ನು 28 ಪೈಸೆ ಪಿಎಂ ಎಂದೇ ಕರೆಯಬೇಕು ಎಂದಿದ್ದಾರೆ.

ನವದೆಹಲಿ (ಮಾ.24): ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟ್ಯಾಲಿನ್‌ ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿಗೆ ಸಿಗಬೇಕಾದ ಪ್ರಮಾಣದ ಧನಸಹಾಯ ನೀಡುತ್ತಿಲ್ಲ ಎಂದು ಆಪಾದಿಸಿರುವ ಸ್ಟ್ಯಾಲಿನ್‌, ತಮಿಳುನಾಡು ಕಟ್ಟುವ ಪ್ರತಿ 1 ರೂಪಾಯಿ ತೆರಿಗೆಯಲ್ಲಿ ಕೇವಲ 28 ಪೈಸೆಯನ್ನು ಮಾತ್ರವೇ ಕೇಂದ್ರ ಸರ್ಕಾರ ನಮಗೆ ನೀಡುತ್ತಿದೆ ಎಂದಿದ್ದಾರೆ. ಇನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಹೆಚ್ಚಿನ ಪ್ರಮಾಣದ ಹಣ ಪಡೆಯುತ್ತಿವೆ ಎಂದಿದ್ದಾರೆ. ರಾಮನಾಥಪುರಂ ಮತ್ತು ಥೇಣಿಯಲ್ಲಿ ಪ್ರತ್ಯೇಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದರು ಮತ್ತು "ಇನ್ನು ಮುಂದೆ ನಾವು ಪ್ರಧಾನಿಯನ್ನು 28 ಪೈಸೆ ಪಿಎಂ ಎಂದು ಕರೆಯಬೇಕು" ಎಂದು ಹೇಳಿದರು.

ಉದಯನಿಧಿ ಸ್ಟಾಲಿನ್ ಅವರು ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿ,  ತಮಿಳುನಾಡಿನಲ್ಲಿ ಮಕ್ಕಳ ಭವಿಷ್ಯವನ್ನು ನಾಶಮಾಡಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ತಂದಿದ್ದಾರೆ ಎಂದು ಆರೋಪ ಮಾಡಿದರು. ಹಣ ಹಂಚಿಕೆ, ಅಭಿವೃದ್ಧಿ ಯೋಜನೆಗಳು ಮತ್ತು ರಾಜ್ಯದಲ್ಲಿ ನೀಟ್ ನಿಷೇಧದ ವಿಷಯದಲ್ಲಿ ಕೇಂದ್ರವು ತಮಿಳುನಾಡಿಗೆ ತಾರತಮ್ಯ ಮಾಡಿದೆ ಎಂದು ಅವರು ಹೇಳಿದರು.

ತಮಿಳುನಾಡಿನ ಪ್ರತಿಭಟನೆಯ ಬೆನ್ನಲ್ಲಿಯೇ ಏಮ್ಸ್‌ ಮಧುರೈ ಯೋಜನೆಯನ್ನು ಘೋಷಣೆ ಮಾಡಿದ್ದರು. ಆದರೆ, ಇದು ಶಿಲಾನ್ಯಾಸ ಆಗಿದ್ದು ಬಿಟ್ಟರೆ ಮುಂದೆ ಹೋಗಿಯೇ ಇಲ್ಲ ಎಂದು ಆರೋಪಿಸಿದ್ದಾರೆ. ಚುನಾವಣೆ ಹತ್ತಿರವಿರುವಾಗ ಮಾತ್ರ ಪ್ರಧಾನಿ ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ ಎಂದು ಡಿಎಂಕೆ ಸಚಿವರು ಆರೋಪಿಸಿದ್ದಾರೆ. 39 ಲೋಕಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮತಗಳ ಎಣಿಕೆ ನಡೆಯಲಿದೆ.

ನಿವೇತಾ ಪೇತುರಾಜ್‌-ಉದಯನಿಧಿ ಸ್ಟ್ಯಾಲಿನ್‌ ಕುರಿತಾಗಿ 'ಬಿಗ್‌; ಗಾಸಿಪ್‌, 'ಇದೆಲ್ಲ ಸುಳ್ಳು..' ಎಂದ ನಟಿ!

18ನೇ ಲೋಕಸಭೆಗೆ ಏಪ್ರಿಲ್‌ 19 ರಿಂದ ಜೂನ್‌ 1 ರವರೆಗೆ ದೇಶಾದ್ಯಂತ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.  ಮೊದಲ ಹಂತ ಏಪ್ರಿಲ್‌ 26 (ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್​), 2ನೇ ಹಂತದ ಚುನಾವಣೆ ಮೇ 7 (ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು  ಬೀದರ್‌) ರಂದು ನಡೆಯಲಿದೆ. ಫಲಿತಾಂಶ ಜೂನ್‌ 4ಕ್ಕೆ ಪ್ರಕಟವಾಗಲಿದೆ.

 

ಹಿಂದೂ ಧರ್ಮದ ಅವಹೇಳನ: ಉದಯನಿಧಿ ಸ್ಟಾಲಿನ್‌ಗೆ ಮತ್ತೆ ಚಾಟಿ ಬೀಸಿದ ಸುಪ್ರೀಂ

click me!