ದುಬೈನಿಂದ ಮರಳಿದ ಇಬ್ಬರು ಕೇರಳಿಗರಿಗೆ ಕೊರೋನಾ| ಗುರುವಾರ ವಂದೇ ಭಾರತ್ ಕಾರ್ಯಾಚರಣೆ ಮೂಲಕ ವಿಮಾನದಲ್ಲಿ ಬಂದಿದ್ದರು| ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಾರತೀಯರಿಂದ ಸೋಂಕು ಭೀತಿ
ತಿರುವನಂತಪುರಂ(ಮೇ.10): ವಿದೇಶದಿಂದ ಭಾರತೀಯರನ್ನು ವಿಮಾನ ಹಾಗೂ ಹಡಗಿನ ಮೂಲಕ ಕರೆತರುವ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಆತಂಕಕಾರಿ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ದುಬೈ ಹಾಗೂ ಅಬುಧಾಬಿಯಿಂದ ಗುರುವಾರ ಮರಳಿದ 363 ಜನರ ಪೈಕಿ ಇಬ್ಬರಿಗೆ ಶನಿವಾರ ಕೊರೋನಾ ಸೋಂಕು ದೃಢಪಟ್ಟಿದೆ.
ಇವರೆಲ್ಲರಿಬ್ಬರೂ ಕಲ್ಲಿಕೋಟೆ ಹಾಗೂ ಕೊಚ್ಚಿಯವರಾಗಿದ್ದು, ಅಲ್ಲಿಯೇ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಹೇಳಿದ್ದಾರೆ. ಈ 2 ಕೇಸುಗಳಿಂದ ಕೇರಳದಲ್ಲಿ ಸೋಂಕಿತರ ಸಂಖ್ಯೆ 505ಕ್ಕೇರಿದೆ. ಆದರೆ 17 ಮಂದಿ ಮಾತ್ರ ಸಕ್ರಿಯ ಸೋಂಕಿತರಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ.
ಭಾರತೀಯರನ್ನು ತಾಯ್ನಾಡಿಗೆ ಕರೆದೊಯ್ಯುವ ಹೆಮ್ಮೆ ನಮ್ಮದು: ಪೈಲಟ್ ಭಾವುಕ ನುಡಿಗಳಿವು!
ವಿದೇಶಗಳಿಂದ ತವರಿಗೆ ಮರಳು ಕೇರಳದ 2 ಲಕ್ಷಕ್ಕೂ ಹೆಚ್ಚು ಜನ ಈಗಾಗಲೇ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ. ಹೀಗಾಗಿ ಕೊರೋನಾ ಸೋಂಕಿನ 3ನೇ ಅಲೆಗೆ ಕೇರಳ ಸಿದ್ಧವಿದೆ ಎಂದು ವಿಜಯನ್ ಶುಕ್ರವಾರ ಹೇಳಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಕೇರಳ ಮಾತ್ರವಲ್ಲದೇ ಈಗಾಗಲೇ ಮೊದಲ ಹಂತದಲ್ಲಿ ವಿಶ್ವದ 13ಕ್ಕೂ ಹೆಚ್ಚು ದೇಶಗಳಿಂದ 15000ಕ್ಕೂ ಹೆಚ್ಚು ಜನರನ್ನು ಕರೆತರಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಎರಡನೇ ಹಂತದಲ್ಲಿ ಮತ್ತಷ್ಟುದೇಶಗಳಿಂದ ಭಾರತೀಯ ಮೂಲದವರನ್ನು ಕರೆತರುವ ಭರವಸೆಯನ್ನೂ ನೀಡಿದೆ.
ಆಪರೇಷನ್ ಏರ್‌ಲಿಫ್ಟ್‌ನಲ್ಲಿ ಕನ್ನಡಿಗ ಪೈಲಟ್: ಭಾರತೀಯರ ಕರೆತಂದ ತುಳುನಾಡ ಕುವರ!
ಹೀಗೆ ಬರುವವರಿಗೆ ಅವರು ಹೊರಟ ದೇಶ ಮತ್ತು ಭಾರತಕ್ಕೆ ಬಂದಿಳಿದ ಮೇಲೆ ಕಡ್ಡಾಯ ಕೊರೋನಾ ಪರೀಕ್ಷೆ ಮಾಡಲಾಗುತ್ತದೆಯಾದರೂ, ಸೋಂಕು ಹರಡುವ ಭೀತಿಯಂತೂ ಇದ್ದೇ ಇದೆ. ಕಾರಣ ಇದೀಗ ಕೇರಳದಲ್ಲಿ ಸೋಂಕು ಪತ್ತೆಯಾದ ಇಬ್ಬರಿಗೂ ದುಬೈನಲ್ಲಿ ಪರೀಕ್ಷೆ ಮಾಡಿಸಿ, ಸೋಂಕು ಇಲ್ಲವೆಂದು ಖಚಿತವಾದ ಬಳಿಕವಷ್ಟೇ ವಿಮಾನ ಹತ್ತಿ ಕಳುಹಿಸಲಾಗಿತ್ತು. ಹೀಗಾಗಿ ವಿದೇಶದಿಂದ ಬರುವವರ ಮೂಲಕ ಭಾರತದಲ್ಲಿ ಮತ್ತೊಂದು ಸುತ್ತಿನಲ್ಲಿ ಸೋಂಕು ಹರಡುವ ಭೀತಿ ಕಾಡಿದೆ.