
ನವದೆಹಲಿ: ಇಂಡಿಗೋ ವಿಮಾನಗಳ ಹಾರಾಟ ರದ್ದತಿ ಗದ್ದಲದ ನಡುವೆಯೇ ಕೇರಳದ ಅಲ್ ಹಿಂದ್ ಮತ್ತು ಫ್ಲೈ ಎಕ್ಸ್‌ಪ್ರೆಸ್ ಕಂಪನಿಗಳಿಗೆ ದೇಶದಲ್ಲಿ ಪ್ರಾದೇಶಿಕ ವಿಮಾನ ಸೇವೆ ಒದಗಿಸಲು ಇದೀಗ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ. ಈಗಾಗಲೇ ಉತ್ತರ ಪ್ರದೇಶ ಮೂಲದ ಶಂಕ್ ಏರ್‌ಗೆ ಕೇಂದ್ರ ವಿಮಾನಯಾನ ಸಚಿವಾಲಯ ಅನುಮತಿ ನೀಡಿದ್ದು, ಮುಂದಿನ ವರ್ಷದ ಆರಂಭದ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ.
ಇತ್ತೀಚಿನ ಇಂಡಿಗೋ ಬಿಕ್ಕಟ್ಟಿನ ಬಳಿಕ, ದೇಶದ ವಿಮಾನಯಾನ ವಲಯದಲ್ಲಿ ಒಂದೇ ಸಂಸ್ಥೆಯ ಅಧಿಪತ್ಯ ಭಾರೀ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಹೊಸ ಹೊಸ ಸಂಸ್ಥೆಗಳ ಆಗಮನದ ಬಗ್ಗೆ ಸುಳಿವು ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಎರಡು ಹೊಸ ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರ ನೀಡುವ ಮೂಲಕ ಮುಂದಿನ ವರ್ಷದ ಹೊತ್ತಿಗೆ ದೇಶದ ವಿಮಾನಯಾನ ವಲಯಕ್ಕೆ ಮೂರು ಹೊಸ ಸಂಸ್ಥೆಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ.
ಅಲ್ ಹಿಂದ್ ಏರ್ ಏರ್‌ವೇಸ್, ಕೇರಳವನ್ನು ಕೇಂದ್ರ ಸ್ಥಾನ ಮಾಡಿಕೊಳ್ಳಲಿದ್ದು, ಕೇರಳ ಮೂಲದ ಅಲ್‌ಹಿಂದ್ ಗ್ರೂಪ್ ಇದರ ಪ್ರವರ್ತಕ ಸಂಸ್ಥೆಯಾಗಿದೆ.
ಇಂಡಿಗೋ, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಅಲಯನ್ಸ್ ಏರ್, ಅಕಾಸಾ, ಸ್ಪೈಸ್‌ಜೆಟ್, ಸ್ಟಾರ್ ಏರ್, ಫ್ಲೈ 91, ಇಂಡಿಯಾ ಒನ್ ಏರ್‌ನಂಥ ಸಂಸ್ಥೆಗಳು ಸದ್ಯ ದೇಶದಲ್ಲಿ ಸೇವೆ ನೀಡುತ್ತಿವೆ. ಇನ್ನು ಗೋಫಸ್ಟ್, ಜೆಟ್ ಏರ್‌ವೇಸ್ ಕಳೆದ ಕೆಲ ವರ್ಷಗಳಲ್ಲಿ ನಷ್ಟದ ಕಾರಣ ಸೇವೆ ಸ್ಥಗಿತಗೊಳಿಸಿದ್ದವು.
ಪ್ರಸಕ್ತ ದೇಶದಲ್ಲಿ 160 ವಿಮಾನ ನಿಲ್ದಾಣಗಳಿದ್ದು, ವಿಮಾನಯಾನ ಉದ್ಯಮ 1.40 ಲಕ್ಷ ಕೋಟಿ ರು. ವಹಿವಾಟು ನಡೆಸುತ್ತಿದೆ. ಜೊತೆಗೆ ಪ್ರತಿ ವರ್ಷ ಶೇ.12ರಷ್ಟು ಬೆಳವಣಿಗೆ ಸಾಧಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ