ಏ.22ರಿಂದ ಜೂ.17ವರೆಗೆ ಟ್ರಂಪ್‌-ಮೋದಿ ಮಾತಾಡಿಲ್ಲ: ಜೈಶಂಕರ್‌

Kannadaprabha News   | Kannada Prabha
Published : Jul 29, 2025, 01:16 AM ISTUpdated : Jul 29, 2025, 01:17 AM IST
India's EAM S Jaishankar

ಸಾರಾಂಶ

‘ಏಪ್ರಿಲ್ 22 ರಿಂದ ಜೂನ್ 17 ರವರೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ’ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೋಮವಾರ ತಿಳಿಸಿದ್ದಾರೆ.

ನವದೆಹಲಿ: ‘ಏಪ್ರಿಲ್ 22 ರಿಂದ ಜೂನ್ 17 ರವರೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ’ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೋಮವಾರ ತಿಳಿಸಿದ್ದಾರೆ.

ಈ ಮೂಲಕ ‘ಭಾರತ-ಪಾಕ್‌ ಯುದ್ಧವನ್ನು ನಾನು ಫೋನ್‌ ಮಾಡಿ ನಿಲ್ಲಿಸಿದೆ. ವ್ಯಾಪಾರ ನಿಲ್ಲಿಸುವುದಾಗಿ ಹೆದರಿಸಿ ಕದನವಿರಾಮ ಸಾರಿದೆ’ ಎಂದು 26 ಬಾರಿ ಹೇಳಿಕೆ ನೀಡಿರುವ ಟ್ರಂಪ್‌ ಹಾಗೂ ‘ಟ್ರಂಪ್ ಅವರ ಒತ್ತಡದಿಂದ ಭಾರತ ಪಾಕಿಸ್ತಾನದೊಂದಿಗಿನ ಮಿಲಿಟರಿ ಸಂಘರ್ಷವನ್ನು ಕೊನೆಗೊಳಿಸಿತು’ ಎಂಬ ಪ್ರತಿಪಕ್ಷಗಳ ಆರೋಪ ನಿರಾಕರಿಸಿದ್ದಾರೆ.

ಸೋಮವಾರ ಆಪರೇಷನ್‌ ಸಿಂದೂರದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಜೈಶಂಕರ್‌, ‘ಪಹಲ್ಗಾಂ ದಾಳಿ ಬಗ್ಗೆ ಸಂತಾಪ ಸೂಚಿಸಲು ಟ್ರಂಪ್‌ ಅವರು ಏ.22ರಂದು ಕರೆ ಮಾಡಿದ್ದರು. ಅದಾದ ನಂತರ ಮೋದಿ ಮತ್ತು ಟ್ರಂಪ್ ನಡುವೆ ಜೂನ್ 17ರ ವರೆಗೆ ಮಾತುಕತೆ ನಡೆದಿಲ್ಲ. ಜೂ.17ರಂದು ಮೋದಿ ಕೆನಡಾದಲ್ಲಿದ್ದಾಗ ಟ್ರಂಪ್‌ ಭೇಟಿ ಸಾಧ್ಯವಾಗಲಿಲ್ಲ. ಅಂದು ಇಬ್ಬರೂ ಮಾತನಾಡಿದರು’ ಎಂದು ಜೈಶಂಕರ್ ಲೋಕಸಭೆಯಲ್ಲಿ ಹೇಳಿದರು.

ಇನ್ನು ಯುದ್ಧ ಹೇಗೆ ನಿಂತಿತು ಎಂಬ ವಿವರ ನೀಡಿದ ಅವರು, ‘ "ಮೇ 9 ರಂದು, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಪ್ರಧಾನಿಗೆ ಕರೆ ಮಾಡಿ, ಮುಂದಿನ 2 ಗಂಟೆಗಳಲ್ಲಿ ಪಾಕಿಸ್ತಾನದಿಂದ ಭಾರಿ ದಾಳಿ ನಡೆವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದರು. ‘ಅಂತಹ ದಾಳಿ ನಡೆದರೆ, ನಮ್ಮ ಕಡೆಯಿಂದ ಸೂಕ್ತ ಪ್ರತಿಕ್ರಿಯೆ ಸಿಗುತ್ತದೆ’ ಎಂದು ಪ್ರಧಾನಿ ಸ್ಪಷ್ಟಪಡಿಸಿದರು. ಆ ದಾಳಿ ನಡೆಯಿತು ಮತ್ತು ಮೇ 9-10 ರಂದು ನಮ್ಮ ಸಶಸ್ತ್ರ ಪಡೆಗಳು ಅದನ್ನು ವಿಫಲಗೊಳಿಸಿದವು. ನಂತರ ಮೇ 10ರಂದು, ಪಾಕಿಸ್ತಾನವು ಹೋರಾಟವನ್ನು ನಿಲ್ಲಿಸಲು ಸಿದ್ಧವಾಗಿದೆ ಎಂಬ ಫೋನ್‌ ಬಂದವು. ಬಳಿಕ ಸೇನಾ ಮಟ್ಟದ ಮಾತುಕತೆ ನಡೆದವು. ಯಾವುದೇ ಹಂತದಲ್ಲಿ, ಅಮೆರಿಕದ ಜತೆ ಮಾತುಕತೆ ವೇಳೆ ವ್ಯಾಪಾರ ವಹಿವಾಟು ಬಗ್ಗೆ ಮಾತುಕತೆ ನಡೆದಿಲ್ಲ’ ಎಂದರು.

‘ಆಪರೇಷನ್‌ ಸಿಂದೂರ ನಂತರ ಪಾಕ್‌ ಉಗ್ರವಾದದ ವಿರುದ್ಧ ವಿಶ್ವದಲ್ಲಿ ಸಂಚರಿಸಿ ಅಭಿಪ್ರಾಯ ಮೂಡಿಸಿದೆವು. ಇದರ ಫಲವಾಗಿಯೇ ಅಮೆರಿಕವು ಪಹಲ್ಗಾಂ ದಾಳಿಕೋರ ಸಂಘಟನೆ ಟಿಆರ್‌ಎಫ್‌ ಅನ್ನು ನಿಷೇಧಿಸಿತು’ ಎಂದು ಜೈಶಂಕರ್‌ ವಿವರಿಸಿದರು.

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ: 27ನೇ ಸಲ ಟ್ರಂಪ್‌ ನುಡಿ

ಲಂಡನ್: ಭಾರತ ಎಷ್ಟೇ ಅಲ್ಲಗಳೆದರೂ ಅದಕ್ಕೆ ಕಿವಿಗೊಡದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಭಾರತ-ಪಾಕಿಸ್ತಾನದ ನಡುವೆ ಯುದ್ಧ ನಡೆಯದಂತೆ ತಡೆದದ್ದು ನಾನೇ’ ಎಂದು ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಎದುರು ತಮ್ಮ ಪೌರುಷ ಪ್ರದರ್ಶಿಸಿದ್ದಾರೆ. ಟ್ರಂಪ್‌ ಹೀಗೆ ಹೇಳುತ್ತಿರುವುದು 27ನೇ ಬಾರಿ.

ಸ್ಟಾರ್ಮರ್‌ರನ್ನು ಸ್ಕಾಟ್ಲೆಂಡ್‌ನಲ್ಲಿ ಸೋಮವಾರ ಟ್ರಂಪ್‌ ಭೇಟಿಯಾದರು. ಈ ವೇಳೆ, ‘ನಾನೇನಾದರೂ ಮಧ್ಯಪ್ರವೇಶಿಸದಿದ್ದರೆ ಜಗತ್ತು ಒಂದೇ ಕಾಲಕ್ಕೆ 6 ಯುದ್ಧಗಳನ್ನು ನೋಡಬೇಕಿತ್ತು. , ಭಾರತ ಮತ್ತು ಪಾಕಿಸ್ತಾನದ ನಡುವೆ ಭೀಕರ ಕದನ ನಡೆಸುತ್ತಿದ್ದವು. ಆದರೆ ನಾನು ಹಾಗೆ ಆಗುವುದನ್ನು ತಪ್ಪಿಸಿದ್ದೇನೆ’ ಎಂದು ಹೇಳಿದರು ಎಂದು ‘ಗಾರ್ಡಿಯನ್‌’ ಪತ್ರಿಕೆ ವರದಿ ಮಾಡಿದೆ.

ಆಪರೇಷನ್‌ ಸಿಂದೂರವನ್ನು ಯಾರದ್ದೋ ಒತ್ತಡದಿಂದ ನಿಲ್ಲಿಸಿಲ್ಲ: ರಾಜನಾಥ್‌ ಸಿಂಗ್‌

ಪಿಟಿಐ ನವದೆಹಲಿನಮ್ಮ ಉದ್ದೇಶಿತ ರಾಜಕೀಯ-ಮಿಲಿಟರಿ ಗುರಿ ಈಡೇರಿದ ಬಳಿಕ ಪಹಲ್ಗಾಂ ದಾಳಿಗೆ ಪ್ರತಿಯಾಗಿ ಆರಂಭಿಸಿದ್ದ ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತೇ ಹೊರತು ಯಾವುದೇ ಒತ್ತಡದಿಂದ ಅಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ಒಂದು ವೇಳೆ ಪಾಕ್‌ ಮತ್ತೆ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ಈ ಕಾರ್ಯಾಚರಣೆ ಪುನಾರಂಭವಾಗಲಿದೆ ಎಂದೂ ಹೇಳಿದ್ದಾರೆ.

ಈ ಮೂಲಕ ಅಮೆರಿಕದ ಒತ್ತಡದಿಂದಾಗಿ ಕದನ ವಿರಾಮ ಘೋಷಿಸಲಾಯಿತು ಎಂಬ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.ಲೋಕಸಭೆಯಲ್ಲಿ ಸೋಮವಾರ ಆಪರೇಷನ್‌ ಸಿಂದೂರ ವಿಚಾರವಾಗಿ ನಡೆದ ಚರ್ಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಪಾಕಿಸ್ತಾನದ ಒಂಬತ್ತು ಉಗ್ರ ನೆಲೆಗಳ ಮೇಲಿನ ಮಿಲಿಟರಿ ದಾಳಿ ಪರಿಣಾಮಕಾರಿಯಾಗಿತ್ತು ಮತ್ತು ಸಮನ್ವಯದಿಂದ ಕೂಡಿತ್ತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಆಪರೇಷನ್‌ ಸಿಂದೂರದಲ್ಲಿ 9 ಉಗ್ರ ನೆಲೆಗಳು ಸಂಪೂರ್ಣವಾಗಿ ನಾಶವಾದವು ಮತ್ತು ಪಾಕ್‌ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ನಮ್ಮ ದಾಳಿಯಿಂದಾದ ಹಾನಿಗಳ ಕುರಿತು ಸೂಕ್ತ ಸಾಕ್ಷ್ಯವೂ ಇದೆ’ ಎಂದು ಸಿಂಗ್‌ ತಿಳಿಸಿದರು.‘ಇಡೀ ಕಾರ್ಯಾಚರಣೆ 22 ನಿಮಿಷಕ್ಕೂ ಹೆಚ್ಚುಕಾಲದ್ದಾಗಿತ್ತು ಮತ್ತು ಈ ಕಾರ್ಯಾಚರಣೆ ಮೂಲಕ ಪಹಲ್ಗಾಂ ದಾಳಿಗೆ ಸೂಕ್ತ ಪ್ರತೀಕಾರ ತೀರಿಸಲಾಯಿತು. ಕಾರ್ಯಾಚರಣೆ ಕಾರ್ಯಗತಗೊಳಿಸುವ ಮುನ್ನ ನಮ್ಮ ಸೇನಾಪಡೆಗಳು ಅಮಾಯಕ ನಾಗರಿಕರಿಗೆ ಯಾವುದೇ ತೊಂದರೆಯಾಗದೆ, ಕೇವಲ ಉಗ್ರರಿಗಷ್ಟೇ ಗರಿಷ್ಠ ಹಾನಿಯಾಗುವ ರೀತಿಯಲ್ಲಿ ಸಾಕಷ್ಟು ಪೂರ್ವಸಿದ್ಧತೆ ನಡೆಸಿದ್ದವು‘ ಎಂದರು.

‘ಈ ಕಾರ್ಯಾಚರಣೆಯನ್ನು ಯಾರದ್ದೋ ಒತ್ತಡದಿಂದ ಸ್ಥಗಿತಗೊಳಿಸಲಾಯಿತು ಎಂಬುದು ಆಧಾರರಹಿತ. ಪಾಕ್‌ ಮಿಲಿಟಿರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರು ಕರೆ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ನಮ್ಮ ಸೇನೆ ಕಾರ್ಯಾಚರಣೆ ನಿಲ್ಲಿಸಿತು’ ಎಂದರು. ಈ ಮೂಲಕ ಭಾರತ-ಪಾಕ್‌ ಕದನ ವಿರಾಮಕ್ಕೆ ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆಯನ್ನು ಪರೋಕ್ಷವಾಗಿ ತಳ್ಳಿಹಾಕಿದರು.ನಮ್ಮ ಆಸ್ತಿಗೆ ಹಾನಿಯಾಗಿಲ್ಲ:

‘ಈ ಕಾರ್ಯಾಚರಣೆ ವೇಳೆ ನಮ್ಮ ಯಾವುದೇ ಪ್ರಮುಖ ಆಸ್ತಿಗೆ ಹಾನಿಯಾಗಿಲ್ಲ, ಪಾಕಿಸ್ತಾನಕ್ಕೆ ನಮ್ಮ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ ಎಂದ ಅವರು, ಆಪರೇಷನ್‌ ಸಿಂದೂರ ಎಂಬುದು ನಮ್ಮ ಸಾಮರ್ಥ್ಯದ ಸಂಕೇತ. ನಮ್ಮ ನಾಗರಿಕರಿಗೆ ಯಾರೇ ಹಾನಿ ಮಾಡಿದರೂ ನಾವು ಸುಮ್ಮನಿರಲ್ಲ ಎಂಬುದನ್ನು ಇದು ತೋರಿಸಿಕೊಟ್ಟಿತು’ ಎಂದು ಹೇಳಿದರು. 

ಪಾಕಿಸ್ತಾನದ ಎಷ್ಟು ವಿಮಾನ ನಾಶ ಮಾಡಲಾಗಿದೆ ಎಂದು ನೀವು ಕೇಳಿಲ್ಲ!

 ಆಪರೇಷನ್‌ ಸಿಂದೂರ ಕಾರ್ಯಾಚರಣೆ ಚರ್ಚೆ ವೇಳೆ ಭಾರತದ ಎಷ್ಟು ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂಬ ಪ್ರತಿಪಕ್ಷಗಳ ಕೆಲ ಸಂಸದರ ಪ್ರಶ್ನೆಗೆ ರಾಜನಾಥ್‌ ಸಿಂಗ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕೆಲ ಸಂಸದರು ಭಾರತದ ಎಷ್ಟು ವಿಮಾನಗಳು ನಷ್ಟವಾಗಿವೆ ಎಂದು ಕೇಳುತ್ತಿದ್ದಾರೆ. ಆದರೆ ಅವರ ಈ ಪ್ರಶ್ನೆಗಳು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರತಿನಿಧಿಸುಂತೆ ಕಾಣುತ್ತಿಲ್ಲ. ಅದರ ಬದಲು ಅವರು, ನಮ್ಮ ಸೇನಾಪಡೆಗಳು ವೈರಿದೇಶದ ಎಷ್ಟು ವಿಮಾನಗಳನ್ನು ಹೊಡೆದುರುಳಿಸಿವೆ ಎಂದು ಕೇಳಬೇಕಿತ್ತು’ ಎಂದರು.‘ಭಾರತವು ಭಯೋತ್ಪಾದಕರ ಶಿಬಿರ ನಾಶಪಡಿಸಿದೆಯೇ ಎಂದು ಸಂಸದರು ಕೇಳಿದ್ದರೆ, ನನ್ನ ಉತ್ತರ ಹೌದು ಎಂದಾಗಿರುತ್ತಿತ್ತು. ಕಾರ್ಯಾಚರಣೆಯಲ್ಲಿ ನಮ್ಮ ವೀರಯೋಧರು ಸಾವಿಗೀಡಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದರೆ, ಅದಕ್ಕೆ ನನ್ನ ಉತ್ತರ ‘ಇಲ್ಲ’ ಎಂಬುದಾಗಿದೆ’ ಎಂದು ತಿಳಿಸಿದರು.

ಉದ್ದೇಶಿತ ಗುರಿ ಸಾಧನೆ ಹಿನ್ನೆಲೆಯಲ್ಲಿ ಸ್ಥಗಿತ

ಪಾಕ್‌ ಮತ್ತೆ ದುಸ್ಸಾಹಸ ಆರಂಬಿಸಿದ್ರೆ ಪುನಃ ದಾಳಿ

ಪಾಕ್‌ ದಾಳಿಗೆ ನಮ್ಮ ಪ್ರಮುಖ ಆಸ್ತಿಗೆ ಹಾನಿಯಾಗಿಲ್ಲ

ಪಾಕ್‌ಗೆ ಆದ ಹಾನಿ ಬಗ್ಗೆ ಏಕೆ ವಿಪಕ್ಷಗಳು ಕೇಳುತ್ತಿಲ್ಲ?

ಲೋಕಸಭೆಯಲ್ಲಿ ‘ಸಿಂದೂರ’ ಬಗ್ಗೆ ರಕ್ಷಣಾ ಸಚಿವ ಹೇಳಿಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ರೀಡಾ ಕ್ಷೇತ್ರದಲ್ಲಿದ್ದ ಪಕ್ಷಪಾತಕ್ಕೆ ಹಿಂದೆಯೇ ಕಡಿವಾಣ : ಪ್ರಧಾನಿ ನರೇಂದ್ರ ಮೋದಿ
ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!