
ಆನೆ ಮರಿಗಳ ಮುದ್ದಾದ ವಿಡಿಯೋಗಳು ಆಗಾಗ ವೈರಲ್ ಆಗ್ತಿರ್ತವೆ. ಕೆಲ ದಿನಗಳ ಹಿಂದೆ ಪಶ್ಚಿಮ ಘಟ್ಟಗಳ ನಡುವೆ ಬರುವ ಶೋಲಾ ಕಾಡಿನಲ್ಲಿ ಆನೆ ಹಿಂಡೊಂದು ಹಾಯಾಗಿ ನಿದ್ರಿಸುತ್ತಿರುವ ವೀಡಿಯೋವೊಂದು ಭಾರಿ ವೈರಲ್ ಆಗಿತ್ತು. ಅದೇ ರೀತಿ ಈಗ ಮತ್ತೊಂದು ತಾಯಾನೆ ಮರಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಅಮ್ಮನ ಮಡಿಲಲ್ಲಿ ನಿದ್ದೆಗೆ ಜಾರಿದ ಆನೆ
ಈ ವೀಡಿಯೋವನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿಯಾದ ಸುಶಾಂತ್ ನಂದಾ ಅವರು ಈ ವೀಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾಣುವಂತೆ ಪುಟ್ಟ ಮರಿಯೊಂದು ಅಮ್ಮನ ಮಡಿಲಲ್ಲಿ ನಿದ್ರೆಗೆ ಜಾರಿದೆ. ಆನೆ ಮರಿ ಹೇಗೆ ತಾಯಿ ಮಡಿಲಲ್ಲಿ ಮಲಗಲು ಸಾಧ್ಯ ಎಂದು ನಿಮಗೆ ಅಚ್ಚರಿ ಆಗಬಹುದು. ಆದರೆ ಈ ವೀಡಿಯೋ ನೋಡಿದರಷ್ಟೇ ಅದು ಹೇಗೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ.
ವೀಡಿಯೋದಲ್ಲಿ ತಾಯಿ ಮರಿ ಇಬ್ಬರು ನಿದ್ದೆಗೆ ಜಾರಿದ್ದರೆ, ಮತ್ತೊಂದು ಆನೆ ಪಕ್ಕದಲ್ಲಿ ನಿಂತಿದೆ. ತಾಯಾನೆಯ ಹಿಂಭಾಗದ ತೊಡೆ ಮೇಲೆ ಮರಿಯಾನೆ ತಲೆ ಇಟ್ಟು ಮಲಗಿದ್ದು, ಅಮ್ಮನ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲು ಎಂಬುದನ್ನು ಈ ಆನೆಮರಿ ತೋರಿಸುತ್ತಿದೆ.
ವೀಡಿಯೋಗೆ ಭಾರಿ ಮೆಚ್ಚುಗೆ
ಐಷಾರಾಮಿ ಎಂದರೆ ನಾಲ್ಕು ಟನ್ ಪ್ರೀತಿಯ ಮೇಲೆ ನಿದ್ರಿಸುವುದು, ಚೋಟು ತನ್ನ ತಾಯಿಯ ಮಡಿಲಲ್ಲಿ ಗಾಢ ನಿದ್ದೆಗೆ ಜಾರಿದೆ. ಸುಕ್ಕುಗಳಲ್ಲಿ ಸುತ್ತುವರಿದ ಶುದ್ಧ ಪ್ರೀತಿ ಎಂದು ಬರೆದು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಭಾರಿ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.
ಆರಾಮದಾಯಕ ಹಾಗೂ ಸುರಕ್ಷಿತ ಜಾಗ ಇದು ಎಂದು ಒಬ್ಬರು ಹೇಳಿದ್ದರೆ, ಆ ಆನೆಮರಿಯ ಮುಖದಲ್ಲಿ ನಿದ್ದೆಯಲ್ಲೂ ನಗು ಕಾಣುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಚೋಟುವಿನ ನಗುಮುಖ ಇದರಲ್ಲಿ ಕಾಣಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮರಿಗಳನ್ನು ಬಹಳ ಮುದ್ದಾಗಿ ಸಾಕುವ ಆನೆಗಳು
ಅಂದಹಾಗೆ ಆನೆಮರಿಗಳು ಪ್ರಾಣಿ ಸಾಮ್ರಾಜ್ಯದ ಅತ್ಯಂತ ಆಕರ್ಷಕ ಮತ್ತು ಅತ್ಯಂತ ಮುದ್ದಾದ ಜೀವಿಗಳಾಗಿವೆ. ಮರಿಗಳಿದ್ದಲ್ಲಿ ಆನೆಗಳು ಬಹಳ ಜಾಗರೂಕವಾಗಿದ್ದು, ಅವುಗಳಿಗೆ ಭಾರಿ ಪ್ರಮಾಣದ ಭದ್ರತೆಯನ್ನು ಒದಗಿಸುತ್ತವೆ. ಜೊತೆಗೆ ಹಲವು ವರ್ಷಗಳ ಕಾಲ ಮರಿಗಳನ್ನು ಬಹಳ ಪ್ರೀತಿ ಹಾಗೂ ಜತನದಿಂದ ಆರೈಕೆ ಮಾಡುತ್ತವೆ. ಮರಿಗಳಿಗೆ ಪರಭಕ್ಷಕ ಪ್ರಾಣಿಗಳಿಂದ ಭಯದ ಸೂಚನೆ ಎದುರಾದ ಕೂಡಲೇ ಅವುಗಳು ಮರಿಯ ಸುತ್ತಲೂ ನಿಂತು ವೃತ್ತವನ್ನು ರಚಿಸುತ್ತವೆ.
ಇನ್ನು ಆನೆಮರಿಗಳು ಅಷ್ಟೇ ಪುಟ್ಟ ಮಕ್ಕಳಂತೆ ಅಮ್ಮನ ಹಿಂದೆಯೇ ಓಡಾಡುತ್ತಾ ಅಮ್ಮನನ್ನು ಅವಲಂಬಿಸಿದ್ದು, ಅವುಗಳ ಮಾನವ ಮಕ್ಕಳು ಹೆಬ್ಬರಳನ್ನು ಚೀಪುವಂತೆ ತಮ್ಮ ಸೊಂಡಿಲನ್ನು ಚೀಪುತ್ತವೆ. ಹಾಗೆಯೇ ಆಹಾರಕ್ಕಾಗಿ ಮತ್ತು ನೀರನ್ನು ಹುಡುಕುವಂತಹ ಬದುಕುಳಿಯುವ ಕೌಶಲ್ಯಗಳನ್ನು ಕಲಿಯಲು ಎಳೆಯ ಆನೆಗಳು ತಮ್ಮ ಹಿಂಡಿನ ತಾಯಿ ಮತ್ತು ಹಿರಿಯ ಆನೆಗಳನ್ನು ಗಮನಿಸಿ ಅನುಕರಿಸುತ್ತವೆ.
ಇಡೀ ಕುಟುಂಬದಲ್ಲಿರುವ ಹೆಣ್ಣು ಆನೆಗಳಿಂದ ಆರೈಕೆ
ಹಿಂಡಿನಲ್ಲಿರುವ ಇತರ ಹೆಣ್ಣು ಆನೆಗಳು, ಹೆಚ್ಚಾಗಿ ಚಿಕ್ಕಮ್ಮ ಮತ್ತು ಅಕ್ಕಂದಿರು, ಈ ಮರಿ ಆನೆಯನ್ನು ಸಾಕಲು ಮತ್ತು ರಕ್ಷಿಸಲು ಸಹಾಯ ಮಾಡುತ್ತಾರೆ. ಮರಿ ಆನೆಗಳು ತಮ್ಮ ಅಗತ್ಯತೆಗಳು ಮತ್ತು ಭಾವನೆಗಳನ್ನು ಸೂಚಿಸಲು ಘೀಳಿಡುವುದು, ಗುರುಗುಟ್ಟುವಿಕೆ ಮತ್ತು ನೆಲದ ಕಂಪನಗಳನ್ನು ಬಳಸಿಕೊಂಡು ಸಂವಹನ ನಡೆಸುತ್ತವೆ.
10 ಲೀಟರ್ ಎದೆಹಾಲು ಕುಡಿಯುವ ಆನೆಮರಿಗಳು
ಆನೆ ಮರಿಗಳು ದಿನಕ್ಕೆ ಸುಮಾರು 3 ತಿಂಗಳವರೆಗೆ 3 ಗ್ಯಾಲನ್‌ನಷ್ಟು (10 ಲೀಟರ್) ಹಾಲು ಸೇವಿಸುತ್ತವೆ. 4 ರಿಂದ 6 ತಿಂಗಳ ಹೊತ್ತಿಗೆ ಇವು ಹುಲ್ಲು, ಎಲೆಗಳು ಮತ್ತು ತೊಗಟೆಯನ್ನು ತಿನ್ನಲು ಪ್ರಾರಂಭಿಸುತ್ತವೆಯಾದರೂ ಸುಮಾರು ಒಂದೆರಡು ವರ್ಷಗಳ ಕಾಲ ತಾಯಿ ಹಾಲು ಕುಡಿಯುವುದನ್ನು ಮುಂದುವರಿಸುತ್ತವೆ. ಸಂಪೂರ್ಣವಾಗಿ ತಾಯಿ ಹಾಲು ಬಿಡುವ ಹೊತ್ತಿಗೆ ಸುಮಾರು 2-3 ವರ್ಷದಲ್ಲಿ ಮರಿ ಆನೆಗಳು ಪ್ರತಿದಿನ ಹೆಚ್ಚಿನ ಪ್ರಮಾಣದ ಸಸ್ಯಗಳನ್ನು ತಿನ್ನುತ್ತವೆ. ಒಟ್ಟಿನಲ್ಲಿ ಆನೆಗಳು ಈ ಪ್ರಪಂಚದ ಅತ್ಯಂತ ಬುದ್ಧಿವಂತ ಪ್ರಾಣಿಗಳಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ