1.17 ಕೋಟಿ ನೀಡಿ HR88B8888 ನಂಬರ್ ಪ್ಲೇಟ್ ಖರೀದಿಸಿದವನಿಗೆ ಸಂಕಷ್ಟ

Published : Dec 04, 2025, 08:43 AM IST
vehicle number plate

ಸಾರಾಂಶ

ಹರಿಯಾಣದಲ್ಲಿ HR88B8888 ನಂಬರ್ ಪ್ಲೇಟ್‌ಗೆ 1.17 ಕೋಟಿ ರೂ. ಹರಾಜು ಕೂಗಿದ್ದ ಸುಧೀರ್ ಕುಮಾರ್ ಎಂಬ ವ್ಯಕ್ತಿ ಹಣ ಪಾವತಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಹರಿಯಾಣ ಸರ್ಕಾರವು ಅವರ ಆಸ್ತಿಗಳ ಬಗ್ಗೆ ತನಿಖೆಗೆ ಆದೇಶಿಸಿದ್ದು, ಈ ದುಬಾರಿ ನಂಬರ್ ಪ್ಲೇಟನ್ನು ಮರು ಹರಾಜು ಮಾಡುವುದಾಗಿ ಘೋಷಿಸಿದೆ.

ನಂಬರ್‌ ಪ್ಲೇಟ್‌ಗೆ 1.17 ಕೋಟಿ ರೂಪಾಯಿ ಹರಾಜು ಕೂಗುವ ಮೂಲಕ ದೇಶದಲ್ಲೇ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾದ HR88B8888 ಖರೀದಿ ಮಾಡಿದವರಿಗೆ ಈಗ ಸಂಕಷ್ಟ ಎದುರಾಗಿದೆ. ಹರ್ಯಾಣದಲ್ಲಿ ಈ ದುಬಾರಿ ಮೊತ್ತದ ಫ್ಯಾನ್ಸಿ ನಂಬರ್ ಪ್ಲೇಟ್ ಸೇಲ್ ಆಗಿತ್ತು. ದಾಖಲೆಯ ಮೊತ್ತಕ್ಕೆ ಈ ನಂಬರ್ ಪ್ಲೇಟ್‌ಗೆ ಹರಾಜು ಕೂಗಲಾಗಿತ್ತು. ಆದರೆ ಹೀಗೆ ಹರಾಜು ಕೂಗಿ ಹಣ ಪಾವತಿಸಲು ಆ ವ್ಯಕ್ತಿ ವಿಫಲರಾದ ಹಿನ್ನೆಲೆ ಹರ್ಯಾಣ ಸರ್ಕಾರ ಆ ವ್ಯಕ್ತಿ ವಿರುದ್ಧ ಈಗ ತನಿಖೆಗೆ ಆದೇಶಿಸಿದ್ದಾರೆ.

HR88B8888 ಈ ನಂಬರ್ ಪ್ಲೇಟ್ ದೇಶದಲ್ಲೇ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಎಂದು ಸುದ್ದಿಯಾಗಿತ್ತು. ಸುಧೀರ್ ಕುಮಾರ್ ಎಂಬುವವರು 1.17 ಕೋಟಿ ಮೊತ್ತಕ್ಕೆ ಈ ನಂಬರ್‌ ಪ್ಲೇಟ್‌ಗೆ ಬಿಡ್ ಮಾಡಿದ್ದರು. ಆದರೆ ಅವವರು ಹಣ ಪಾವತಿ ಮಾಡುವುದಕ್ಕೆ ವಿಫಲರಾದ ಹಿನ್ನೆಲೆ ಸುಧೀರ್ ಕುಮಾರ್ ಅವರ ಆಸ್ತಿಗಳ ಬಗ್ಗೆ ಹರಿಯಾಣ ಸರ್ಕಾರ ತನಿಖೆಗೆ ಆದೇಶಿಸಿದೆ. ಹರಿಯಾಣ ಸಾರಿಗೆ ಸಚಿವ ಅನಿಲ್ ವಿಜ್ ಅವರು ಸಾರಿಗೆ ಸೇವೆ ರೊಮುಲಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕನಾಗಿರುವ ಸುಧೀರ್ ಕುಮಾರ್ ಅವರ ಆಸ್ತಿ ಮತ್ತು ಆದಾಯವನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ತಮ್ಮ ಇಲಾಖೆಗೆ ಆದೇಶಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅನಿಲ್ ವಿಜ್, ನಾವು ವಿಐಪಿ ನಂಬರ್ ಪ್ಲೇಟ್‌ಗಳನ್ನು ಹರಾಜಿನ ಮೂಲಕ ನೀಡುತ್ತೇವೆ. ಹಲವಾರು ಜನರು 8888 ಸಂಖ್ಯೆಗೆ ಬಿಡ್ ಮಾಡಿದ್ದರು. ಆದರೆ ಈ ನಂಬರ್ ಪ್ಲೇಟ್‌ಗೆ ಅತಿ ಹೆಚ್ಚು 1.17 ಕೋಟಿ ಬಿಡ್ ಮಾಡುವ ಮೂಲಕ ಹರಾಜಿನಲ್ಲಿ ಗೆದ್ದ ನಂತರ ಬಿಡ್ ಮಾಡಿದ ಸುಧೀರ್ ಕುಮಾರ್ ಆ ಮೊತ್ತವನ್ನು ಪಾವತಿಸಲಿಲ್ಲ. ಬದಲಾಗಿ, ಅವರು ತಮ್ಮ ಭದ್ರತಾ ಠೇವಣಿ ರೂ. 11,000 ಅನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಮಾಡಿಕೊಟ್ಟರು ಎಂದು ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಐಪಿ ನಂಬರ್ ಪ್ಲೇಟ್‌ಗೆ 1.17 ಕೋಟಿ ರೂ. ಬಿಡ್ ಮಾಡಿದ ಸುಧೀರ್‌ ಕುಮಾರ್ ಅವರ ನಿವ್ವಳ ಮೌಲ್ಯವನ್ನು ಪರಿಶೀಲಿಸಲು ವಿಜ್ ಆದೇಶಿಸಿದ್ದಾರೆ. ಆರ್ಥಿಕ ಸಾಮರ್ಥ್ಯವಿಲ್ಲದಿದ್ದರು ಕೆಲ ಬಿಡ್ಡರ್‌ಗಳು ನಂಬರ್ ಪ್ಲೇಟ್‌ನ ಬೆಲೆಯನ್ನು ಹೆಚ್ಚಿಸುವುದನ್ನು ತಡೆಯುವ ಸಲುವಾಗಿ, ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಯುವುದಾಗಿಯೂ ಸಚಿವರು ತಿಳಿಸಿದ್ದಾರೆ. ಹರಾಜಿನಲ್ಲಿ ಬಿಡ್ಡಿಂಗ್ ಮಾಡುವುದು ಹವ್ಯಾಸವಲ್ಲ ಅದು ಒಂದು ಜವಾಬ್ದಾರಿ ಎಂದು ವಿಜ್ ಹೇಳಿದ್ದಾರೆ.

ಸುಧೀರ್ ಕುಮಾರ್ ಅವರು ನಂಬರ್ ಪ್ಲೇಟ್‌ಗೆ ತಾವು ಬಿಡ್ ಕರೆದ ಮೊತ್ತವನ್ನು ಪಾವತಿಸದ ಹಿನ್ನೆಲೆ ಅದನ್ನು ಮರು ಹರಾಜು ಮಾಡಲಾಗುತ್ತದೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ನವೆಂಬರ್ 26 ರಂದು, HR88B8888 ಸಂಖ್ಯೆಯ ನಂಬರ್ ಪ್ಲೇಟ್ 1.17 ಕೋಟಿ ರೂ.ಗೆ ಮಾರಾಟವಾಗಿ ಸುದ್ದಿಯಾಗಿತು, ಇದು ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ ಎನಿಸಿತ್ತು. ಇದಕ್ಕೆ ಆರ್‌ಟಿಒ 50,000 ರೂ. ಮೂಲ ಬೆಲೆ ನಿಗದಿ ಮಾಡಿತ್ತು. ಈ ನಂಬರ್ ಪ್ಲೇಟ್‌ಗಾಗಿ 45 ಜನರು ಅರ್ಜಿ ಸಲ್ಲಿಸಿದ್ದರು.

ಬಿಡ್ಡಿಂಗ್ ಮೊತ್ತವನ್ನು ಪಾವತಿಸಲು ಡಿಸೆಂಬರ್ 1 ಕೊನೆಯ ದಿನಾಂಕವಾಗಿತ್ತು ಆದರೆ ಸುಧೀರ್ ಕುಮಾರ್ ಈ ಹಣವನ್ನು ಪಾವತಿ ಮಾಡಲಿಲ್ಲ, ಜೊತೆಗೆ ಸ್ಪಷ್ಟ ಕಾರಣವನ್ನು ನೀಡಲಿಲ್ಲ. ಶನಿವಾರ ರಾತ್ರಿ ಎರಡು ಬಾರಿ ಬಿಡ್ ಮೊತ್ತವನ್ನು ಪಾವತಿ ಮಾಡಲು ಪ್ರಯತ್ನಿಸಿದೆ. ಆದರೆ ತಾಂತ್ರಿಕ ದೋಷದಿಂದಾಗಿ ವಿಫಲವಾಗಿದೆ ಎಂದು ಭಾನುವಾರ ಹೇಳಿದ್ದರು. ಒಂದು ನಂಬರ್ ಪ್ಲೇಟ್‌ಗಾಗಿ ಭಾರಿ ಮೊತ್ತವನ್ನು ಖರ್ಚು ಮಾಡುವುದನ್ನು ತಮ್ಮ ಕುಟುಂಬ ವಿರೋಧಿಸುತ್ತದೆ ಎಂದು ಅವರು ಹೇಳಿದರು. ಪ್ರಸ್ತುತ ಕುಟುಂಬದೊಂದಿಗೆ ಚರ್ಚೆಗಳು ನಡೆಯುತ್ತಿವೆ. ನಂಬರ್ ಪ್ಲೇಟ್‌ಗಾಗಿ ಇಷ್ಟೊಂದು ದೊಡ್ಡ ಮೊತ್ತವನ್ನು ಖರ್ಚು ಮಾಡುವುದು ಬುದ್ಧಿವಂತ ನಿರ್ಧಾರವಲ್ಲ ಎಂದು ಕುಟುಂಬದ ಹಿರಿಯರು ಹೇಳಿದ್ದಾರೆ, ಆದರೆ ನಾನು ಅದರ ಪರವಾಗಿದ್ದೇನೆ. ಸೋಮವಾರದೊಳಗೆ ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು.

ಪ್ರತಿ ವಾರ ವಿಐಪಿ ನಂಬರ್ ಪ್ಲೇಟ್‌ಗಳನ್ನು ಹರಾಜು ಹಾಕುವ ಹರಿಯಾಣ

ಹರಿಯಾಣವು ವಾರಕ್ಕೊಮ್ಮೆ ವಿಐಪಿ ಅಥವಾ ಫ್ಯಾನ್ಸಿ ನಂಬರ್ ಪ್ಲೇಟ್‌ಗಳಿಗಾಗಿ ಆನ್‌ಲೈನ್ ಹರಾಜು ನಡೆಸುತ್ತದೆ. ಶುಕ್ರವಾರ ಸಂಜೆ 5 ರಿಂದ ಸೋಮವಾರ ಬೆಳಗ್ಗೆ 9 ರವರೆಗೆ, ಬಿಡ್ಡರ್‌ಗಳು ತಮ್ಮ ಆಯ್ಕೆಯ ಸಂಖ್ಯೆಗೆ ಅರ್ಜಿ ಸಲ್ಲಿಸಬಹುದು. ಇದಾದ ನಂತರ ಬುಧವಾರ ಸಂಜೆ 5 ಗಂಟೆಗೆ ಫಲಿತಾಂಶಗಳು ಪ್ರಕಟವಾಗುತ್ತದೆ. ಆರ್‌ಟಿಒದ ಅಧಿಕೃತ ವೆಬ್‌ಸೈಟ್ fancy.parivahan.gov.in ಪೋರ್ಟಲ್‌ನಲ್ಲಿ ಹರಾಜು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್
ಅ*ತ್ಯಾಚಾರ ಆರೋಪಿ , ಕಾಂಗ್ರೆಸ್‌ ಶಾಸಕ ರಾಹುಲ್‌ ಮಮ್‌ಕೂಟತಿಲ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ!