
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಏಪ್ರಿಲ್ 22, 2025ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮಿನ ಶಾಂತ ಕಣಿವೆಗಳನ್ನು ಭೀಕರ ಭಯೋತ್ಪಾದನಾ ದಾಳಿ ನಲುಗಿಸಿ ಹಾಕಿತು. ಭಯೋತ್ಪಾದಕರ ಅಟ್ಟಹಾಸ ನಡೆದ ಬೈಸರನ್ ಕಣಿವೆಯಲ್ಲಿ 28 ಜನರು ಪ್ರಾಣ ಕಳೆದುಕೊಂಡಿದ್ದು, ಅವರಲ್ಲಿ 24 ಜನರು ಭಾರತೀಯ ಪ್ರವಾಸಿಗರಾಗಿದ್ದರೆ ಇಬ್ಬರು ಸ್ಥಳೀಯರು, ಓರ್ವ ನೇಪಾಳಿ ಪ್ರವಾಸಿ ಮತ್ತು ಓರ್ವ ಯುಎಇ ಪ್ರವಾಸಿಗರು ಸೇರಿದ್ದರು. ಈ ದಾಳಿಯನ್ನು ಪಾಕಿಸ್ತಾನದ ಲಷ್ಕರ್ ಎ ತೈಬಾ ಸಂಘಟನೆಯ ಬೆಂಬಲ ಹೊಂದಿರುವ ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನಡೆಸಿತ್ತು. ಈ ಘೋರ ದುರಂತ ಒಂದು ಗಂಭೀರ ಸವಾಲನ್ನು ಹುಟ್ಟುಹಾಕಿದೆ: ಇದು ಭಾರತದ ಗುಪ್ತಚರ ಸಂಸ್ಥೆಗಳ ವೈಫಲ್ಯವಾಗಿತ್ತೇ? ಆದರೆ ಈ ಪ್ರಶ್ನೆಗೆ ಒಂದು ಸ್ಪಷ್ಟವಾದ ಉತ್ತರ ಲಭ್ಯವಿಲ್ಲ. ಅಲ್ಲಿನ ಪರಿಸ್ಥಿತಿ ಈಗ ಸಂಕೀರ್ಣವಾಗಿದ್ದು, ಗುಪ್ತಚರ ವೈಫಲ್ಯ ಮತ್ತು ಒಂದಷ್ಟು ಯಶಸ್ಸಿನ ಸಂಕೇತಗಳು ಲಭ್ಯವಾಗಿವೆ.
ಗುಪ್ತಚರ ವೈಫಲ್ಯ ಉಂಟಾಗಿರಬಹುದು ಎನ್ನಲು ಸಂಕೇತಗಳು
1. ದಾಳಿಯ ಪ್ರಮಾಣ ಮತ್ತು ಯೋಜನೆ: 2019ರ ಪುಲ್ವಾಮಾ ದಾಳಿಯ ಬಳಿಕ ಇದು ಈ ಪ್ರದೇಶದಲ್ಲಿ ನಡೆದಿರುವ ಅತಿದೊಡ್ಡ ದಾಳಿಯಾಗಿದೆ. ಮಿನಿ ಸ್ವಿಜರ್ಲೆಂಡ್ ಎಂದೇ ಜನಪ್ರಿಯವಾಗಿರುವ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಈ ಪೂರ್ವ ಯೋಜಿತ, ಬೃಹತ್ ಪ್ರಮಾಣದ ದಾಳಿ ನಡೆದಿರುವುದು ಭದ್ರತೆ ಮತ್ತು ಕಣ್ಗಾವಲಿನ ಕುರಿತು ಅನುಮಾನಗಳು ಮೂಡುವಂತೆ ಮಾಡಿದೆ. ಭಯೋತ್ಪಾದಕರು ಯಾವುದೇ ಅಡ್ಡಿ ಎದುರಾಗದೆ, ಯಾರೂ ತಡೆಯದಂತೆ ದಾಳಿಯನ್ನು ರೂಪಿಸಿ, ಅದನ್ನು ಕಾರ್ಯರೂಪಕ್ಕೆ ತರಲು ಯಶಸ್ವಿಯಾದರು.
Pahalgam Terror Attack: ಬಂದೂಕಿನ ಹಿಂದಿನ ಕ್ರೌರ್ಯ: ಟಿಆರ್‌ಎಫ್ ಕರಾಳ ಮುಖ ಅನಾವರಣಗೊಳಿಸಿದ ಪಹಲ್ಗಾಮ್ ದಾಳಿ
2. ವಿಚಕ್ಷಣಾ ಸುಳಿವುಗಳ ಕುರಿತು ಕ್ರಮ ಕೈಗೊಳ್ಳಲು ವೈಫಲ್ಯ: ಭಾರತೀಯ ಗುಪ್ತಚರ ಸಂಸ್ಥೆಗಳು ಈ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಮೊದಲೇ ಮುನ್ಸೂಚನೆ ನೀಡಿದ್ದವು ಎನ್ನಲಾಗಿದೆ. ಭಯೋತ್ಪಾದಕರು ವಿಚಕ್ಷಣಾ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎನ್ನಲಾಗಿದ್ದು, ಅವರು ದಾಳಿಗೆ ಮೊದಲೇ ಈ ಪ್ರದೇಶವನ್ನು ಪರಿಶೀಲಿಸುತ್ತಿದ್ದರು. ಆದರೆ, ಅವರನ್ನು ತಡೆಯಲು ಅಥವಾ ಭದ್ರತೆಯನ್ನು ಹೆಚ್ಚಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಇದು ಗುಪ್ತಚರ ಮಾಹಿತಿಗಳನ್ನು ಬಳಸಿಕೊಂಡು ದಾಳಿಯನ್ನು ತಡೆಯುವಲ್ಲಿ ವೈಫಲ್ಯ ಉಂಟಾಗಿರುವುದಕ್ಕೆ ಸಾಕ್ಷಿಯಾಗಿದೆ.
3. ಪ್ರವಾಸಿಗರೇ ಗುರಿಯಾಗಿದ್ದರೂ ಹೆಚ್ಚುವರಿ ಭದ್ರತಾ ಕೊರತೆ: ದಾಳಿಗೆ ಒಳಗಾದ ಪ್ರದೇಶ ಪ್ರತಿವರ್ಷವೂ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಅದರೊಡನೆ, ಈ ಬಾರಿ ಅಮೆರಿಕಾ ಉಪಾಧ್ಯಕ್ಷರಾದ ಜೆಡಿ ವ್ಯಾನ್ಸ್ ಸಹ ಭಾರತಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇತ್ತು. ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಿಲ್ಲ.
ಭದ್ರತಾ ವೈಫಲ್ಯ ಅಲ್ಲ ಎನ್ನಲು ಕಾರಣಗಳೇನು?
1. ಒಂದಷ್ಟು ಗುಪ್ತಚರ ಮಾಹಿತಿಗಳು ಲಭ್ಯವಿದ್ದವು: ರಾ ಮತ್ತು ಐಬಿಯಂತಹ ಗುಪ್ತಚರ ಸಂಸ್ಥೆಗಳು ಪಹಲ್ಗಾಮ್‌ನಲ್ಲಿ ಒಂದಷ್ಟು ಉಗ್ರರ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕಿದ್ದವು. ಇದು ಗುಪ್ತಚರ ವ್ಯವಸ್ಥೆ ಒಂದಷ್ಟು ಕಾರ್ಯಾಚರಿಸುತ್ತಿತ್ತಾದರೂ, ಆ ಮಾಹಿತಿಗಳನ್ನು ಆಧರಿಸಿ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ.
2. ಸವಾಲಿನ ವಾಸ್ತವ ಚಿತ್ರಣ: ಜಮ್ಮು ಮತ್ತು ಕಾಶ್ಮೀರ ಅತ್ಯಂತ ಸೂಕ್ಷ್ಮವಾದ ಪ್ರದೇಶವಾಗಿದ್ದು, ಭಯೋತ್ಪಾದಕರಿಗೆ ಗಡಿಯಾಚೆಗೆ ಪಾಕಿಸ್ತಾನದಿಂದಲೂ ಬೆಂಬಲ ಲಭಿಸುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿದೆ. ಭಯೋತ್ಪಾದಕರು ಬಹಳಷ್ಟು ಬಾರಿ ಸ್ಥಳೀಯ ಮಾರ್ಗದರ್ಶಕರು, ಗುಪ್ತ ಜಾಲಗಳನ್ನು, ಮತ್ತು ಎನ್ಕ್ರಿಪ್ಟೆಡ್ ಸಂವಹನವನ್ನು ಬಳಸಿಕೊಳ್ಳುವುದರಿಂದ ದಾಳಿ ನಡೆಸುವ ಮುನ್ನ ಭಯೋತ್ಪಾದಕರ ಪತ್ತೆ ಕಷ್ಟ ಸಾಧ್ಯವಾಗುತ್ತದೆ.
3. ಸರ್ಕಾರದ ನೋಟ ಮತ್ತು ಕ್ಷಿಪ್ರ ಪ್ರತಿಕ್ರಿಯೆ: ಗೃಹ ಸಚಿವ ಅಮಿತ್ ಷಾ ಅವರು ಇದು ಟಿಆರ್‌ಎಫ್ ಸಂಘಟನೆ ಸರಿಯಾಗಿ ಯೋಜನೆ ರೂಪಿಸಿ ಕೈಗೊಂಡಿರುವ ದಾಳಿ ಎಂದಿದ್ದು, ಇದು ಸಂಪೂರ್ಣ ಭದ್ರತಾ ವೈಫಲ್ಯದಿಂದ ಉಂಟಾಗಿರುವ ದಾಳಿಯಲ್ಲ ಎಂದಿದ್ದಾರೆ. ದಾಳಿಯ ಬಳಿಕ ಭದ್ರತಾ ಪಡೆಗಳು ಕ್ಷಿಪ್ರವಾಗಿ ಕಾರ್ಯಾಚರಣೆಗೆ ಇಳಿದಿದ್ದು, ಓರ್ವ ಭಯೋತ್ಪಾದಕನ ಹತ್ಯೆ ನಡೆಸಿ, ಉಳಿದವರಿಗಾಗಿ ಗಂಭೀರ ಹುಡುಕಾಟ ನಡೆಸುತ್ತಿದೆ. ಇದು ಸೇನೆ ಒಂದಷ್ಟು ಮಟ್ಟಿಗೆ ಸಿದ್ಧತೆ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ.
ಸಮತೋಲನದ ನೋಟ: ಈ ದಾಳಿ ಸಂಪೂರ್ಣವಾಗಿ ಗುಪ್ತಚರ ವೈಫಲ್ಯವಲ್ಲದಿದ್ದರೂ, ಇದು ಗುಪ್ತಚರ ಮಾಹಿತಿಗಳನ್ನು ತಕ್ಷಣವೇ ಕಾರ್ಯರೂಪಕ್ಕೆ ತರುವಲ್ಲಿ ವೈಫಲ್ಯ ಉಂಟಾಗಿರುವುದಕ್ಕೆ ಸಾಕ್ಷಿಯಾಗಿದೆ. ಗುಪ್ತಚರ ಸಂಸ್ಥೆಗಳಿಗೆ ಏನೋ ಚಟುವಟಿಕೆಗಳು ನಡೆಯುತ್ತಿವೆ ಎನ್ನುವುದು ತಿಳಿದಿತ್ತಾದರೂ, ಅವುಗಳಿಗೆ ಈ ದಾಳಿಯ ನಿಖರವಾದ ಸಮಯ, ಪ್ರಮಾಣದ ಅರಿವಿರಲಿಲ್ಲ. ಬಹಳಷ್ಟು ಭಯೋತ್ಪಾದನಾ ನಿಗ್ರಹ ಪ್ರಕರಣಗಳಲ್ಲಿ ಇಂತಹ ಅಂತರ ಸಾಮಾನ್ಯವಾಗಿದ್ದು, ಇದನ್ನು ಪ್ರತಿಕ್ರಿಯೆಯಲ್ಲಿನ ವಿಳಂಬಕ್ಕೆ ಒಂದು ಕಾರಣವಾಗಿಸಲು ಸಾಧ್ಯವಿಲ್ಲ. ಪಹಲ್ಗಾಮ್ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇದೇ ಸಮಯದಲ್ಲಿ ಅಮೆರಿಕಾ ಉಪಾಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿದ್ದರಿಂದ ಅಪಾಯದ ಕುರಿತು ಸರಿಯಾದ ಮೌಲ್ಯಮಾಪನ ನಡೆಸಬೇಕಾಗಿತ್ತು. ಆದರೆ, ಭದ್ರತಾ ವ್ಯವಸ್ಥೆ ಅಪಾಯದ ಪ್ರಮಾಣವನ್ನು ಕಡಿಮೆಯಾಗಿ ಅಂದಾಜಿಸಿತ್ತು.
ಈ ಘಟನೆಯಲ್ಲಿ ಪರಿಗಣಿಸಬೇಕಾದ ಇನ್ನೊಂದು ಆಯಾಮವೆಂದರೆ, ಪಾಕಿಸ್ತಾನದ ಪಾತ್ರ. ಟಿಆರ್‌ಎಫ್ ಸಂಘಟನೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ ಬೆಂಬಲ ನೀಡುತ್ತಿದೆ ಎನ್ನಲಾಗಿದೆ. ಈ ದಾಳಿಯ ಕೆಲವೇ ದಿನಗಳ ಮುನ್ನ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಕಾಶ್ಮೀರವನ್ನು ಪಾಕಿಸ್ತಾನದ 'ಜುಗುಲಾರ್ ವೇನ್' (ಕತ್ತಿನ ರಕ್ತನಾಳ) ಎಂಬ ಹೇಳಿಕೆ ನೀಡಿದ್ದು, ಅದು ಭಯೋತ್ಪಾದಕರಿಗೆ ಇಂತಹ ಕುಕೃತ್ಯ ನಡೆಸಲು ಉತ್ತೇಜನ ನೀಡಿರುವ ಸಾಧ್ಯತೆಗಳಿವೆ. ಈಗಾಗಲೇ ಆಂತರಿಕ ಮತ್ತು ಗಡಿಯಾಚೆಗಿನ ಅಪಾಯಗಳನ್ನು ಎದುರಿಸುತ್ತಾ ಹೈರಾಣಾಗಿರುವ ಭಾರತೀಯ ಗುಪ್ತಚರ ವ್ಯವಸ್ಥೆಯ ಮೇಲೆ ಇಂತಹ ಅಂಶಗಳು ಇನ್ನಷ್ಟು ಹೆಚ್ಚಿನ ಒತ್ತಡ ಹೇರುತ್ತವೆ.
ಮುಂದಿನ ಹಾದಿ: ಭಾರತ ಈ ನೋವಿನ ಘಟನೆಯಿಂದ ಪಾಠ ಕಲಿಯಬೇಕು. ಈ ಪರಿಸ್ಥಿತಿಗೆ ಕೇವಲ ಗುಪ್ತಚರ ಸಂಸ್ಥೆಗಳನ್ನು ದೂರುವುದರಿಂದ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ. ಬದಲಿಗೆ, ಎಲ್ಲಿ ತಪ್ಪಾಗಿದೆ, ಅದನ್ನು ಸರಿಪಡಿಸುವತ್ತ ಭಾರತ ಕ್ರಮ ಕೈಗೊಳ್ಳಬೇಕು. ಭಾರತ ಅನುಸರಿಸಬೇಕಾದ ಕೆಲವು ಮುಖ್ಯ ಹೆಜ್ಜೆಗಳು:
ಹೆಚ್ಚಿನ ಅಪಾಯಕಾರಿ ಪ್ರದೇಶಗಳಲ್ಲಿ ಇನ್ನೂ ಉತ್ತಮ ನೈಜ ಸಮಯದ ಕಣ್ಗಾವಲು ವ್ಯವಸ್ಥೆಯ ಜಾರಿ.
ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ನಡುವೆ ಉತ್ತಮ ಸಹಕಾರ, ಸಮನ್ವಯ.
ವಿಶೇಷವಾಗಿ ಕಾಶ್ಮೀರದಲ್ಲಿನ ಪ್ರವಾಸಿ ತಾಣಗಳಿಗೆ ಹೆಚ್ಚಿನ ಭದ್ರತೆ.
ಆಧುನಿಕ ತಂತ್ರಜ್ಞಾನ ಮತ್ತು ಅಮೆರಿಕಾದಂತಹ ದೇಶಗಳಿಂದ ಅಂತರಾಷ್ಟ್ರೀಯ ಬೆಂಬಲ ಪಡೆದುಕೊಂಡು, ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು ಇನ್ನಷ್ಟು ಉತ್ತಮಗೊಳಿಸುವುದು. ಈ ದಾಳಿಯ ಬಳಿಕ ನಾವು ಯಾರಿಂದ ತಪ್ಪಾಗಿದೆ ಎಂದು ಬೆರಳು ತೋರಿಸುವುದರಿಂದ ಪ್ರಯೋಜನವಾಗುವುದಿಲ್ಲ. ಬದಲಿಗೆ, ನಾವು ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನ ನಡೆಸಬೇಕು. ಇದು ಕೇವಲ ಒಂದು ವೈಫಲ್ಯದ ಕುರಿತ ಚರ್ಚೆಗೆ ಸೀಮಿತವಾಗಬಾರದು. ಬದಲಿಗೆ, ಇದರಿಂದ ಪಾಠಗಳನ್ನು ಕಲಿತು, ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಭಾರತ ಕ್ರಮಗಳನ್ನು ಕೈಗೊಳ್ಳಬೇಕು.
Bengaluru Road Rage: ಕನ್ನಡಿಗರ ಹಿರಿಮೆಗೆ ಧಕ್ಕೆ ತಂದ DRDO ಅಧಿಕಾರಿಯ ಮಾತು ಮತ್ತು IAF ಅಧಿಕಾರಿಯ ಕ್ರಮಗಳು
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ