ಪಹಲ್ಗಾಮ್‌ ದಾಳಿ: ಪ್ರವಾಸ ರದ್ದುಗೊಳಿಸುತ್ತಿರುವ ಪ್ರಯಾಣಿಕರು, ಕನ್ನಡಿಗರು ಹೋಟೆಲ್‌ನಲ್ಲಿ ಲಾಕ್

Published : Apr 23, 2025, 11:20 AM ISTUpdated : Apr 23, 2025, 11:45 AM IST
ಪಹಲ್ಗಾಮ್‌ ದಾಳಿ: ಪ್ರವಾಸ ರದ್ದುಗೊಳಿಸುತ್ತಿರುವ ಪ್ರಯಾಣಿಕರು, ಕನ್ನಡಿಗರು ಹೋಟೆಲ್‌ನಲ್ಲಿ ಲಾಕ್

ಸಾರಾಂಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯ ನಂತರ, ಬೆಂಗಳೂರಿನಿಂದ ಕಾಶ್ಮೀರಕ್ಕೆ ತೆರಳಬೇಕಿದ್ದ ಸಾವಿರಾರು ಪ್ರಯಾಣಿಕರು ತಮ್ಮ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಿದ್ದಾರೆ.

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಘಟನೆ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದಿಂದ ಕಾಶ್ಮೀರಕ್ಕೆ ತೆರಳಬೇಕಿದ್ದ ಸಾವಿರಾರು ಪ್ರಯಾಣಿಕರು ತಮ್ಮ ಬುಕ್ಕಿಂಗ್ ರದ್ದುಪಡಿಸುವಂತೆ ಟ್ರಾವೆಲ್ಸ್ ಏಜೆನ್ಸಿಗಳ ಮೇಲೆ ಒತ್ತಡ ನಿರ್ಮಾಣ ಮಾಡತೊಡಗಿದ್ದಾರೆ. ಪರಿಣಾಮ ಮುಂದಿನ ಆರು ವಾರಗಳ ಅವಧಿಯಲ್ಲಿ ರಾಜ್ಯದಿಂದ ಪ್ರಯಾಣ ಮಾಡಬೇಕಿದ್ದ ಸುಮಾರು 1 ಲಕ್ಷ ಜನ ಪ್ರವಾಸಿಗರು ಕಾಶ್ಮೀರ ಪ್ರವಾಸದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ. 

ಬೇಸಿಗೆಯಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಇರುವ ಕಾರಣ ರಾಜ್ಯದಿಂದ ಜಮ್ಮು- ಕಾಶ್ಮೀರ ಪ್ರವಾಸ ಮಾಡು ವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಸಾಕಷ್ಟು ಜನರು ಈಗಾಗಲೇ ಪ್ಯಾಕೇಜ್ ಟೂರ್‌ಮತ್ತು ವಿಮಾನ ಹಾಗೂ ಹೋಟೆಲ್ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಉಗ್ರರ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಫೋನ್ ಕರೆ ಮಾಡಿ ಪ್ರವಾಸ ಮುಂದೂಡಿ ಅಥವಾ ಕ್ಯಾನ್ಸಲ್ ಮಾಡಿ ಎಂದು ಕೋರುತ್ತಿ ದ್ದಾರೆ. ಅಲ್ಲದೇ ಜುಲೈನಿಂದ ಆಗಸ್ಟ್‌ವರೆಗೆ ನಡೆಯುವ ಅಮರನಾಥ ಯಾತ್ರೆಗೆ ತೆರಳುವ ಬಗ್ಗೆಯು ಪ್ರವಾಸಿಗರು ಗೊಂದಲದಲ್ಲಿದ್ದಾರೆ ಎಂದು ವೈಟ್‌ಫೀಲ್ಡ್ ಟೂರ್ಸ್ ಏಜೆ ನ್ಸಿಯ ಪ್ರತಿನಿಧಿ ಸಿದ್ದಲಿಂಗಪ್ಪ 'ಕನ್ನಡಪ್ರಭ'ಕ್ಕೆ ತಿಳಿಸಿದರು. 

ಕಾಶ್ಮೀರದಲ್ಲಿ ಬೆಟ್ಟ, ಗುಡ್ಡ, ಕಣಿವೆ, ಹಿಮ ಇರುವ ಕಾರಣ ಬೇಸಿಗೆಯಲ್ಲಿ ಸಮಯ ಕಳೆಯಲು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಿಂದ ಸಾವಿರಾರು ಜನ ಪ್ರವಾಸ ಮಾಡುತ್ತಾರೆ. ಕಾಶ್ಮೀರ ಭಾರತದ ಸ್ವಿಜರ್ಲೆಂಡ್ ಎಂದೇ ಕರೆಯಲ್ಪಡುತ್ತದೆ. ಬೇಸಿಗೆಯ ಎರಡೂರು ತಿಂಗಳ ಅವಧಿಯಲ್ಲಿ ಸುಮಾರು 2 ಲಕ್ಷ ಪ್ರವಾಸಿಗರು ಕರ್ನಾಟಕದಿಂದಲೇ ಪ್ರಯಾಣ ಮಾಡುತ್ತಾರೆ. ಬೆಂಗಳೂರಿನಲ್ಲಿ 2,500 ಟ್ರಾವೆಲ್ಸ್ ಏಜೆನ್ಸಿಗಳಿವೆ. ನಿತ್ಯ ಬೆಂಗಳೂರಿನಿಂದ ಶ್ರೀನಗರಕ್ಕೆ 2 ನೇರ ವಿಮಾನಗಳು ಹಾರುತ್ತವೆ. ಅಲ್ಲದೇ ದೇಶದ ಬೇರೆ ನಗರಗಳಿಂದಲೂ ಕನ್ನಡಿಗರು ಶ್ರೀನಗರಕ್ಕೆ ತೆರಳುತ್ತಾರೆ. ಹೀಗಾಗಿ, ಬೇಸಿಗೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರವಾಸ ಮಾಡುವವರ ಸಂಖ್ಯೆ ದೊಡ್ಡದಿದೆ. ಉಗ್ರರ ದಾಳಿ ಘಟನೆ ಹಿನ್ನೆಲೆಯಲ್ಲಿ ಖಂಡಿತವಾಗಿ ಈಗ ಎಲ್ಲರಿಗೂ ಭಯ ಕಾಡುತ್ತದೆ ಎಂದು ಸಿದ್ದಲಿಂಗಪ್ಪ ಹೇಳಿದರು.

ಹೋಟೆಲ್‌ನಲ್ಲಿ ಕನ್ನಡಿಗರು ಲಾಕ್
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸಂಭವಿಸಿದ ಉಗ್ರರ ದಾಳಿಯಲ್ಲಿ ಕನ್ನಡಿಗರು ಸೇರಿದಂತೆ ಅನೇಕ ಪ್ರವಾಸಿಗರು ಹತ್ಯೆಯಾದ ಹಿನ್ನೆಲೆಯಲ್ಲಿ ಕಾಶ್ಮೀರ ಪ್ರವಾಸ ಕೈಗೊಂಡು ಶ್ರೀನಗರ ಸೇರಿದಂತೆ ವಿವಿಧ ನಗರಗಳಲ್ಲಿ ಉಳಿದುಕೊಂಡಿರುವ ಕನ್ನಡಿಗರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪ್ರವಾಸವನ್ನು ಮುಂದುವರೆಸುವ ಕುರಿತು ಸಂದಿಗ್ಧತೆಗೆ ಸಿಲುಕಿದ್ದಾರೆ. ಒಂದು ವಾರ ಕಾಲ ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸ ಕೈಗೊಳ್ಳಲು ಮಂಗಳವಾರವಷ್ಟೇ ಶ್ರೀನಗರ ತಲುಪಿರುವ ನಗರದ ವೈದ್ಯ ಡಾ. ಗಿರೀಶ್ ಗೌಡ ಅವರು ಘಟನೆ ಕುರಿತು ಬೇಸರ ಮತ್ತು ಆತಂಕ ವ್ಯಕ್ತಪಡಿಸಿದರು. 

ಇದನ್ನೂ ಓದಿ: ಪಹಲ್ಗಾಮ್‌ ಉಗ್ರ ದಾಳಿ ಪ್ರಕರಣ: ಹನಿಮೂನ್‌ಗೆ ಹೋಗಿದ್ದ ಹಲವರ ದುರಂತ ಸಾವು

'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಮಂಗಳವಾರವಷ್ಟೇ ನಾನು ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸಕ್ಕೆ ಬಂದಿದ್ದೇನೆ. ಗುರುವಾರ ಪಹಲ್‌ಗಾಮ್‌ಗೂ ತೆರಳಬೇಕಿತ್ತು. ಆದರೆ, ಪಹಲ್‌ಗಾಮ್‌ನಲ್ಲೇ ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಕುಟುಂಬ ಸದಸ್ಯರ ಎದುರೇ ಪ್ರವಾಸಿಗರನ್ನು ಕೊಂದಿರುವ ಸುದ್ದಿ ಕೇಳಿ ತೀವ್ರ ನೋವು ಮತ್ತು ಬೇಸರವಾಗಿದೆ ಎಂದರು. 

ದಾಳಿಯ ನಂತರ ಶ್ರೀನಗರದಲ್ಲಿ ವಾಹನಗಳ ತಪಾಸಣೆ ಮತ್ತು ಭದ್ರತೆ ಹೆಚ್ಚಿಸಲಾಗಿದೆ. ಈ ದಿನ ಹೊರಗೆ ಹೋಗುವುದು ಬೇಡ. ಹೋಟೆಲ್ ಕೊಠಡಿಯಲ್ಲೇ ಉಳಿದುಕೊಳ್ಳಿ ಎಂದು ಟೂ‌ರ್ ಗೈಡ್‌ಗಳು ಸಲಹೆ ನೀಡಿದ್ದಾರೆ. ಹೀಗಾಗಿ, ಎಲ್ಲಾ ಪ್ರವಾಸಿಗರೂ ಕೊಠಡಿಯಲ್ಲೇ ಉಳಿದುಕೊಂಡಿದ್ದಾರೆ. ಎಲ್ಲರಲ್ಲೂ ಆತಂಕವಿದೆ. ಆದರೆ, ಸೇನೆ ಇರುವ ಕಾರಣ ಸುರಕ್ಷತೆಯ ಭರವಸೆ ಇದೆ. ಆದರೆ, ಪ್ರವಾಸಿ ಸ್ಥಳಗಳ ಭೇಟಿ ಕುರಿತು ಸ್ಪಷ್ಟತೆ ಇಲ್ಲ ಎಂದು ಡಾ. ಗಿರೀಶ್ ಗೌಡ ಹೇಳಿದರು.

ಇದನ್ನೂ ಓದಿ: ಹಿಂದೂ ಗಂಡಸರೇ ಟಾರ್ಗೆಟ್‌: TCS ಉದ್ಯೋಗಿ US ಟೆಕ್ಕಿ, IB ಅಧಿಕಾರಿಯೂ ಪಹಲ್ಗಾಮ್‌ ದಾಳಿಗೆ ಬಲಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..