
ಬೆಂಗಳೂರು(ನ.30): ಕೊರೋನಾ ಹೊಸ ತಳಿ ಒಮಿಕ್ರೋನ್ (Covid New Varient Omicron) ಸೋಂಕು ಸಕ್ರಿಯವಾಗಿರುವ ದಕ್ಷಿಣ ಆಫ್ರಿಕಾದಿಂದ (South Africa) ರಾಜ್ಯಕ್ಕೆ ಆಗಮಿಸಿದ್ದ ಇಬ್ಬರಲ್ಲಿ ಕೋವಿಡ್ ಸೋಂಕು (Coronavirus) ಪತ್ತೆಯಾಗಿದ್ದು, ಆ ಪೈಕಿ ಒಬ್ಬರ ಜಿನೋಮಿಕ್ ಸೀಕ್ವೆನ್ಸ್ ವರದಿಯಲ್ಲಿ ಡೆಲ್ಟಾಗಿಂತ (Delta)ಭಿನ್ನ ಮಾದರಿಯ ವಂಶವಾಹಿ ಗುಣಗಳು ಪತ್ತೆಯಾಗಿವೆ. ಅವರಿಗೆ ಯಾವ ರೂಪಾಂತರಿ ಸೋಂಕು ತಗುಲಿದೆ ಎಂಬ ನಿಗೂಢತೆಯು ಆತಂಕ ಸೃಷ್ಟಿಸಿದೆ.
ನ.1ರಿಂದ ನ.20ರವರೆಗೆ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport Bengaluru) ಮೂಲಕ ರಾಜ್ಯಕ್ಕೆ ಆಗಮಿಸಿದ್ದ 94 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು.
ಇವರ ಜಿನೋಮಿಕ್ ಸೀಕ್ವೆನ್ಸ್ ವರದಿಯಲ್ಲಿ (Genomic Sequence Report) ನ.11ರಂದು ಸೋಂಕು ದೃಢಪಟ್ಟಿದ್ದ ವ್ಯಕ್ತಿಗೆ ಡೆಲ್ಟಾ ಮಾದರಿಯ ಸೋಂಕಿರುವುದು ಖಚಿತವಾಗಿದೆ. ಆದರೆ, ನ.20ರಂದು ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ವರದಿಯಲ್ಲಿ ಡೆಲ್ಟಾ ಮಾದರಿಗಿಂತ ಭಿನ್ನ ಅಂಶಗಳು ಪತ್ತೆಯಾಗಿವೆ. ಹೀಗಾಗಿ ರಾಜ್ಯ ಸರ್ಕಾರವು ಈ ಮಾದರಿಯನ್ನು ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದು ಯಾವ ರೂಪಾಂತರಿ ವೈರಾಣು ಎಂಬ ಬಗ್ಗೆ ಕುತೂಹಲ ಹಾಗೂ ಆತಂಕ ಮೂಡಿದೆ.
ಸಂಪರ್ಕಿತರ ಪತ್ತೆ, ಪರೀಕ್ಷೆ:
ಇನ್ನು ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿದ 224 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಯಾರಿಗೂ ಸೋಂಕು ದೃಢಪಟ್ಟಿಲ್ಲ. ಇಬ್ಬರು ಕೊರೋನಾ ಸೋಂಕಿತರ 12 ಮಂದಿ ಪ್ರಾಥಮಿಕ ಹಾಗೂ 212 ಮಂದಿ ದ್ವಿತೀಯ ಹಂತದ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಯಾರಿಗೂ ಸೋಂಕು ದೃಢಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೆಲ್ಟಾದಷ್ಟುಡೇಂಜರ್ ಅಲ್ಲ
ದಕ್ಷಿಣ ಆಫ್ರಿಕಾದಿಂದ ಆಗಮಿಸಿ ಕೊರೋನಾ ಸೋಂಕು ದೃಢಪಟ್ಟಿದ್ದವರ ಮಾದರಿಗಳ ಜಿನೋಮಿಕ್ ಸೀಕ್ವೆನ್ಸಿಂಗ್ ನಡೆಸಲಾಗಿದೆ. ಈ ಪೈಕಿ ಒಬ್ಬರ ವರದಿ ಡೆಲ್ಟಾಗಿಂತ ಭಿನ್ನವಾಗಿರುವುದು ಕಂಡುಬಂದಿದೆ. ಹೀಗಾಗಿ ಹೆಚ್ಚಿನ ಪರೀಕ್ಷೆಗೆ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ.
- ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ
ರಾಜ್ಯಕ್ಕೆ ಡವಡವ
- ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ಸೋಂಕು ಭಾರಿ ಸಕ್ರಿಯವಾಗಿದೆ
- ನ.1ರಿಂದ 20ರವರೆಗೆ ಅಲ್ಲಿಂದ 94 ಮಂದಿ ಬೆಂಗಳೂರಿಗೆ ಬಂದಿದ್ದಾರೆ
- ಆ ಪೈಕಿ ಇಬ್ಬರು ಪ್ರಯಾಣಿಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ
- ಒಬ್ಬ ಪ್ರಯಾಣಿಕನ ಸೋಂಕು ಡೆಲ್ಟಾಮಾದರಿ ಎಂದು ಖಚಿತಪಟ್ಟಿದೆ
- ಆದರೆ ಇನ್ನೊಬ್ಬ ವ್ಯಕ್ತಿಯ ಸೋಂಕು ಡೆಲ್ಟಾಗಿಂತ ವಿಭಿನ್ನವಾಗಿದೆ
- ಈತನ ಜಿನೋಮಿಕ್ ಮಾದರಿಯನ್ನು ಸರ್ಕಾರ ಕೇಂದ್ರಕ್ಕೆ ಕಳಿಸಿದೆ
- ಅದು ಯಾವ ರೂಪಾಂತರಿ ಎಂಬ ಆತಂಕ ಹೆಚ್ಚಾಗತೊಡಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ