ನೋಯ್ಡಾ: ಫ್ಯಾಶನ್ ಶೋ ಈವೆಂಟ್‌ನಲ್ಲಿ ರಾಂಪ್ ವಾಕ್ ಮಾಡುವಾಗ ಕಬ್ಬಿಣದ ಪಿಲ್ಲರ್ ಬಿದ್ದು 24 ವರ್ಷದ ಮಾಡೆಲ್ ಸಾವನ್ನಪ್ಪಿದ ದಾರುಣ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. 24 ವರ್ಷದ ಮಾಡೆಲ್ ವಂಶಿಕಾ ಚೋಪ್ರಾ ಮೃತ ಮಾಡೆಲ್ ಆಗಿದ್ದು, ನೋಯ್ಡಾದ ಫಿಲ್ಮ್ ಸಿಟಿಯಲ್ಲಿ ನಡೆದ ಫ್ಯಾಶನ್ ಶೋ ವೇಳೆ ರಾಂಪ್ ವಾಕ್ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೋಯ್ಡಾದ ಫಿಲ್ಮ್ ಸಿಟಿ ಪ್ರದೇಶದಲ್ಲಿ ಇರುವ ಸ್ಟುಡಿಯೋದಲ್ಲಿ ರಾಂಪ್ ವಾಕ್ ಮಾಡುತ್ತಿದ್ದಾಗ ಲೈಟಿಂಗ್ ಇರುವ ಕಬ್ಬಿಣದ ಫಿಲ್ಲರ್ ಬಿದ್ದ ಪರಿಣಾಮ ಮಾಡೆಲ್ ವಂಶಿಕಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಮತ್ತೊಬ್ಬ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ. ಮಾಹಿತಿ ಪಡೆದ ಕೂಡಲೇ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಲೀಸರ ಪ್ರಕಾರ, ಮೃತರನ್ನು ಮಾಡೆಲ್ ವಂಶಿಕಾ ಚೋಪ್ರಾ (Vanshika Chopra) ಎಂದು ಹಾಗೂ ಗಾಯಗೊಂಡ ವ್ಯಕ್ತಿಯನ್ನು ಬಾಬಿ ರಾಜ್ ಎಂದು ಗುರುತಿಸಲಾಗಿದೆ. ಇವರಿಬ್ಬರು ನೋಯ್ಡಾದ ಈ ದುರಾದೃಷ್ಟಕಾರಿ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ 1.30 ರ ಸುಮಾರಿಗೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವತಿ ಗ್ರೇಟರ್ ನೋಯ್ಡಾದ ಗೌರ್ ಸಿಟಿ -2 ನಿವಾಸಿ ಎಂದು ತಿಳಿದು ಬಂದಿದೆ.
ಶವವಾಗಿ ಪತ್ತೆಯಾದ ಕೇರಳದ ಯುವ ರೂಪದರ್ಶಿ: ಪತಿ ಪೊಲೀಸ್ ಕಸ್ಟಡಿಗೆ
ಘಟನೆಗೆ ಸಂಬಂಧಿಸಿದಂತೆ ಕಾರ್ಯಕ್ರಮದ ಆಯೋಜಕರು ಹಾಗೂ ಲೈಟಿಂಗ್ ಟ್ರಸ್ ಅಳವಡಿಸಿದವರನ್ನು ಪೊಲೀಸರು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎರಡೂ ಸಂತ್ರಸ್ತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೋಯ್ಡಾ ಹೆಚ್ಚುವರಿ ಡೆಪ್ಯುಟಿ ಕಮಿಷನರ್ (ADCP) ಶಕ್ತಿ ಅವಸ್ತಿ ಈ ಬಗ್ಗೆ ಮಾಹಿತಿ ನೀಡಿ ಫಿಲ್ಮ್ ಸಿಟಿಯ ಸ್ಟುಡಿಯೋದಲ್ಲಿ ಫ್ಯಾಶನ್ ಶೋ ವೇಳೆ ಟ್ರಸ್ ಬಿದ್ದು ಮಾಡೆಲ್ ವಂಶಿಕಾ ಚೋಪ್ರಾ ಸಾವನ್ನಪ್ಪಿದ್ದಾರೆ. ಮೃತದೇಹದ ಪಂಚನಾಮವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ಕ್ರಮ ನಡೆಯುತ್ತಿದೆ ಎಂದರು.
ಗೆಳತಿ ಸಾವಿನಿಂದ ಖಿನ್ನತೆಗೆ ಜಾರಿದ ಮಾಡೆಲ್ ಆತ್ಮಹತ್ಯೆ : ಅಪಾರ್ಟ್‌ಮೆಂಟ್‌ನಲ್ಲಿ ಶವ ಪತ್ತೆ
ಘಟನೆ ನಡೆದ ಕೂಡಲೇ ವಂಶಿಕಾಳನ್ನು ಸಮೀಪದ ಕೈಲಾಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮೊದಲೇ ಆಕೆ ಪ್ರಾಣ ಬಿಟ್ಟಿದ್ದಾಳೆ ಎಂದು ಅಲ್ಲಿನ ವೈದ್ಯರು ಘೋಷಿಸಿದ್ದಾರೆ. ಗಾಯಾಳು ಬಾಬಿ ವಂಶಿಕಾಳ ಸ್ನೇಹಿತನಾಗಿದ್ದು ಆಗ್ರಾ ನಿವಾಸಿಯಾದ ಆತ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈ ಫ್ಯಾಷನ್ ಶೋ ಸಂಘಟಕರು ಹಾಗೂ ಲೈಟಿಂಗ್ ಕೆಲಸದಲ್ಲಿ ಭಾಗಿಯಾದ ನಾಲ್ವರನ್ನು ಬಂಧಿಸಿದ್ದಾರೆ. ತನಿಖೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಕ್ತಿ ಅವಸ್ತಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ