ಕಸ ಹಾಕಿದ ಪ್ರವಾಸಿಗರಿಂದಲೇ ಕಸ ಎತ್ತಿಸಿದ ಸ್ಥಳೀಯರು: ವೀಡಿಯೋ ಭಾರಿ ವೈರಲ್

Published : Oct 06, 2025, 05:44 PM IST
Tourists from Bihar litter in Darjeeling

ಸಾರಾಂಶ

Tourists littering in Darjeeling:  ಡಾರ್ಜಿಲಿಂಗ್‌ನಲ್ಲಿ ಪ್ರವಾಸಿಗರು ಕಸ ಎಸೆದಿದ್ದು ಇದನ್ನು ಗಮನಿಸಿದ ಸ್ಥಳೀಯ ಯುವಕನೊಬ್ಬ, ಅವರಿಂದಲೇ ಆ ಕಸವನ್ನು ಹೆಕ್ಕಿಸಿದ್ದಾನೆ. ಈ ವೀಡಿಯೋ ವೈರಲ್ ಆಗಿದ್ದು, ಪ್ರವಾಸಿ ತಾಣಗಳಲ್ಲಿನ ಸ್ವಚ್ಛತೆಯ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.

ಪ್ರವಾಸಿ ತಾಣದಲ್ಲಿ ಕಸ ಎಸೆದ ಪ್ರವಾಸಿಗರು

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ತನ್ನ ನೈಸರ್ಗಿಕವಾದ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ಸೆಳೆಯುವ ಭಾರತದ ಒಂದು ಸುಂದರವಾದ ಪ್ರವಾಸಿ ತಾಣ. ಆದರೆ ನಮ್ಮ ಪ್ರವಾಸಿಗರು ಇಂತಹ ಸೊಗಸಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡ್ತಾರೆ. ಅಲ್ಲೇ ಕಸ ಎಸೆದು ಬರುತ್ತಾರೆ. ಪ್ರವಾಸಿಗರ ಈ ಉದ್ಧಟತನದ ಬೇಜವಾಬ್ದಾರಿಯುತವಾದ ವರ್ತನೆಯಿಂದ ಕೇವಲ ಡಾರ್ಜಿಲಿಂಗ್ ಮಾತ್ರವವಲ್ಲ ನಮ್ಮ ಅನೇಮ ಪ್ರವಾಸಿ ತಾಣಗಳು ಪ್ಲಾಸ್ಟಿಕ್‌ಗಳು ಬಾಟಲ್‌ಗಳಿಂದ ತುಂಬಿ ಕಸದ ಕೊಂಪೆಯಾಗುತ್ತಿದೆ. ಸುಂದರ ತಾಣವನ್ನು ನೋಡುವುದಕ್ಕೆ ಬಂದ ಪ್ರವಾಸಿಗರು ತಮಗೆ ಬೇಡದ ಕಸವನ್ನು ಅಲ್ಲೇ ಎಸೆದು ಹೊರಟು ಹೋಗುತ್ತಾರೆ. ಹೀಗಾಗಿ ಪ್ರವಾಸಿ ತಾಣಗಳ ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗುತ್ತಿದೆ. ಪ್ರವಾಸಿಗರ ಈ ವರ್ತನೆಯ ಬಗ್ಗೆ ಈ ಹಿಂದೆಯೂ ಅನೇಕ ಬಾರಿ ಹಲವು ಕಡೆಗಳಲ್ಲಿ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೂ ಬೇಜವಾಬ್ದಾರಿಯುತ ಕೆಲ ಪ್ರವಾಸಿಗರು ಮತ್ತದೇ ವರ್ತನೆಯನ್ನು ಮುಂದುವರೆಸುತ್ತಾರೆ.

ಪ್ರವಾಸಿಗರಿಂದಲೇ ಕಸ ಎತ್ತಿಸಿದ ಸ್ಥಳೀಯರು

ಅದೇ ರೀತಿ ಇಲ್ಲೊಂದು ಕಡೆ ಹೀಗೆ ಪ್ರವಾಸಿಗರು ಎಸೆದ ಕಸವನ್ನು ಪ್ರವಾಸಿಗರ ಕೈನಿಂದಲೇ ಸ್ಥಳೀಯ ಯುವಕನೋರ್ವ ಹೆಕ್ಕಿಸಿದ್ದು, ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಈ ಘಟನೆ ನಡೆದಿದೆ. ಪ್ರವಾಸಕ್ಕೆಂದು ಬಂದ ಬಿಹಾರದ ಕೆಲ ಪ್ರವಾಸಿಗರು ಬಳಸಿದ ಡೈಪರ್ ಸೇರಿದಂತೆ ಮಣ್ಣಿನಲ್ಲಿ ಕೊಳೆಯದ ವಸ್ತುಗಳನ್ನು ಅಲ್ಲಿ ಎಸೆದು ಹೋಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯ ಯುವಕನೋರ್ವ ಆ ಕಸವನ್ನು ಅವರಿಂದಲೇ ಹೆಕ್ಕಿಸಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಸ್ಥಳೀಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವೈರಲ್ ವೀಡಿಯೋದಲ್ಲಿ ಕಾಣುವಂತೆ ಒಳ್ಳೆಯ ಸೀನರಿ ಇರುವ ಸ್ಥಳವೊಂದರ ಬಳಿ ಬಂದ ಪ್ರವಾಸಿಗರು ಅಲ್ಲಿ ತಮ್ಮ ಕಾರಿನ ಕಿಟಕಿಯಿಂದಲೇ ಬಳಸಿದ ಡೈಪರ್‌ನ್ನು ಹೊರಗೆ ಎಸೆದಿದ್ದಾರೆ. ಈ ವೇಳೆ ಅದೇ ಸ್ಥಳದಲ್ಲಿದ್ದ ಯುವಕರು ಪ್ರವಾಸಿಗರ ಈ ಕೃತ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಜೊತೆಗೆ ಅವರ ಕೈನಿಂದಲೇ ಆ ಡೈಪರ್‌ನ್ನು ಹೆಕ್ಕಿಸಿದ್ದಾರೆ. ನೀವು ಇಲ್ಲಿ ಡೈಪರ್ ಎಸೆದಿದ್ದೀರಿ, ನೀವೇ ಆ ಡೈಪರ್‌ನ್ನು ಅಲ್ಲಿಂದ ತೆಗೆಯಿರಿ ಎಂದು ಅವರು ಪ್ರವಾಸಿಗರಿಗೆ ಹೇಳಿದ್ದಾರೆ.

ಆದರೆ ಆತನ ಮಾತಿನ ಬಗ್ಗೆ ತಲೆಕೆಡಿಸಿಕೊಳ್ಳದ ಪ್ರವಾಸಿಗ ಆ ಸ್ಥಳ ಈಗಾಗಲೇ ಕಸಕಡ್ಡಿಗಳಿಂದ ಕೂಡಿದೆ ಎಂದು ವಾದ ಮಾಡಲು ಶುರು ಮಾಡಿದ್ದಾರೆ. ಆದರೆ ಅಲ್ಲಿದ್ದ ಯುವಕ ಆ ವಿಚಾರ ಬಿಡಿ. ನಾವು ಈ ಸ್ಥಳವನ್ನು ಬಹಳಷ್ಟು ಸ್ವಚ್ಛಗೊಳಿಸುತ್ತೇವೆ. ಡೈಪರ್ ಎತ್ತಿಕೊಳ್ಳಿ ಎಂದು ಹೇಳಿದ ನಂತರ ಪ್ರವಾಸಿಗರಲ್ಲಿ ಒಬ್ಬರು ಕಾರಿನಿಂದ ಇಳಿದು ಕಸವನ್ನು ಎತ್ತಿದ್ದಾರೆ.

ನಂತರ ವಾಹನದ ನಂಬರ್ ಪ್ಲೇಟ್ ಅನ್ನು ತೋರಿಸಿದ ಆ ಯುವಕ ನೀವು ಎಲ್ಲಿಂದ ಬಂದವರು? ಓಹ್, ನೀವು ಬಿಹಾರದವರು ಎಂದು ಹೇಳುತ್ತಾ,ದಯವಿಟ್ಟು ಕಸವನ್ನು ಎತ್ತಿಕೊಳ್ಳಿ. ಈ ರೀತಿ ಮಾಡಬೇಡಿ. ಇತರರು ಕಸ ಹಾಕಿದ್ದರೆ, ನೀವು ಕೂಡ ಅದೇ ರೀತಿ ಮಾಡುತ್ತೀರಾ? ಅವರನ್ನು ಪ್ರಶ್ನಿಸಿದ್ದಾರೆ. ಇವರ ನಡುವೆ ವಾಗ್ವಾದ ಮುಂದುವರೆಯುತ್ತಿದ್ದಂತೆ ಆ ಪ್ರವಾಸಿ ಕಾರಿನ ಚಾಲಕ ನೀವು ವೀಡಿಯೋ ಪೋಸ್ಟ್ ಮಾಡಿ ಎಂದು ಉದ್ಧಟತನದಿಂದ ಮಾತನಾಡಿದ್ದಾರೆ. ಅದಕ್ಕೆ ಆ ಯುವಕ ನೋಡಿ, ಬಿಹಾರದ ಜನರು ಹೀಗಿದ್ದಾರೆ. ಅವರು ಮಗುವಿನ ಡೈಪರ್ ಅನ್ನು ಕಸದ ಬುಟ್ಟಿಗೆ ಎಸೆಯಬೇಕಿತ್ತು ಆದರೆ ಹೊರಗೆ ಕಸ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲೂ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪ್ರವಾಸಿಗರ ವರ್ತನೆಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಭಾರತೀಯರ ದೊಡ್ಡ ಸಮಸ್ಯೆ, ಅವರು ಮಾಡಿದರು ಎಂದು ನಾವು ಮಾಡುವುದಕ್ಕೆ ಹೋಗುವುದು, ಅವರು ಕಸ ಎಸೆದರೆಂದು ನಾವು ಎಸೆಯುವುದಕ್ಕೆ ಹೋಗುವುದು. ಯಾವುದನ್ನೂ ಯೋಚನೆ ಮಾಡುವುದಿಲ್ಲ, ಇದರಿಂದಾಗಿ ನಮ್ಮ ಪ್ರವಾಸಿ ತಾಣಗಳು ಗಲೀಜಾಗುತ್ತಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬೇರೆಯವರೂ ಮಾಡಿದ್ದಾರೆ ಎಂಬುದು ಈಗ ಸಾಮಾನ್ಯ ವಾದ ಎನಿಸಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಿಜವಾಗಿಯೂ ನಮ್ಮ ಸಮಾಜ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಕಳ್ಳರ ಪ್ಲಾನ್ ಫೇಲ್  ಆಗಿದ್ದು ಹೇಗೆ? ವೀಡಿಯೋ ಭಾರಿ ವೈರಲ್

ಇದನ್ನೂ ಓದಿ: ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಪ್ರಯಾಣಿಕ: ಕುಡುಕನ ಕಿತಾಪತಿಯಿಂದಾಗಿ ವಿಮಾನ ತುರ್ತು ಲ್ಯಾಂಡಿಂಗ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ