Farm Laws: ಕೃಷಿ ಕಾಯ್ದೆ ಮರುಜಾರಿ: ಕೇಂದ್ರ ಸರ್ಕಾರ ಸುಳಿವು!

By Kannadaprabha NewsFirst Published Dec 26, 2021, 3:56 AM IST
Highlights

* ಹಿಂದೆ ಇಟ್ಟಹೆಜ್ಜೆ ಮುಂದೆ ಇಡುತ್ತೇವೆ

* ಸ್ವತಃ ಕೇಂದ್ರ ಕೃಷಿ ಸಚಿವರಿಂದ ಹೇಳಿಕೆ

*  ಕೃಷಿ ಕಾಯ್ದೆ ಮರುಜಾರಿ: ಕೇಂದ್ರ ಸರ್ಕಾರ ಸುಳಿವು

ನಾಗ್ಪುರ(ಡಿ.26):: ರೈತರ ವ್ಯಾಪಕ ಪ್ರತಿಭಟನೆಯಿಂದಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ರದ್ದುಗೊಳಿಸಿರುವ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಮುಂದಿನ ದಿನಗಳಲ್ಲಿ ಮತ್ತೆ ಜಾರಿಗೊಳಿಸುವ ಸುಳಿವನ್ನು ಸ್ವತಃ ಕೇಂದ್ರ ಕೃಷಿ ಸಚಿವರು ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ಸಮಾರಂಭವೊಂದರಲ್ಲಿ ಶುಕ್ರವಾರ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ‘ನಾವು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸಿದ್ದೆವು. ಆದರೆ ಕೆಲವರಿಗೆ ಅವು ಇಷ್ಟವಾಗಲಿಲ್ಲ. ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಜಾರಿಗೆ ಬಂದಿದ್ದ ಬಹುದೊಡ್ಡ ಸುಧಾರಣೆಗಳು ಇವಾಗಿದ್ದವು. ಆದರೆ ಈಗಲೂ ಸರ್ಕಾರಕ್ಕೆ ಬೇಸರವೇನಿಲ್ಲ. ನಾವು ಒಂದು ಹೆಜ್ಜೆ ಹಿಂದಿಟ್ಟಿದ್ದೇವೆ. ಮತ್ತೆ ಅದನ್ನು ಮುಂದಿಡುತ್ತೇವೆ. ಏಕೆಂದರೆ ಕೃಷಿಕರು ದೇಶದ ಬೆನ್ನೆಲುಬು’ ಎಂದು ಹೇಳಿದ್ದಾರೆ.

ಆದರೆ, ಕೃಷಿ ಕಾಯ್ದೆಗಳನ್ನು ಯಾವ ರೂಪದಲ್ಲಿ ಮತ್ತು ಯಾವಾಗ ಮತ್ತೆ ಜಾರಿಗೊಳಿಸಲಾಗುತ್ತದೆ ಎಂಬುದರ ಬಗ್ಗೆ ಹೆಚ್ಚಿನ ವಿವರವನ್ನೇನೂ ಅವರು ನೀಡಲಿಲ್ಲ.

ಕಾಂಗ್ರೆಸ್‌ ಕಿಡಿ:

ತೋಮರ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಉತ್ತರಪ್ರದೇಶ ಚುನಾವಣೆ ಮುಗಿದ ಬಳಿಕ ಕಾಯ್ದೆಗಳ ಜಾರಿಗೆ ಕೇಂದ್ರ ಸರ್ಕಾರ ಸಂಚು ನಡೆಸಿದೆ’ ಎಂದು ಕಿಡಿಕಾರಿದ್ದಾರೆ.

ಪಂಜಾಬ್‌ನಲ್ಲಿ ‘ಸಂಯುಕ್ತ ಸಮಾಜ್‌ ಮೋರ್ಚಾ’ ಕಣಕ್ಕೆ

 

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷಕ್ಕೂ ಅಧಿಕ ಅವಧಿಗೆ ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದಿದ್ದ ರೈತ ಸಂಘಟನೆಗಳು ಮುಂಬರುವ ಪಂಜಾಬ್‌ ವಿಧಾನಸಭೆ ಚುನಾವಣೆ ಅಖಾಡಕ್ಕೆ ಧುಮುಕಲು ನಿರ್ಧರಿಸಿವೆ.

ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬ್‌ನ 32 ರೈತ ಸಂಘಟನೆಗಳ ಪೈಕಿ 22 ಸಂಘಟನೆಗಳು ಒಗ್ಗೂಡಿ ‘ಸಂಯುಕ್ತ ಸಮಾಜ್‌ ಮೋರ್ಚಾ’ (ಎಸ್‌ಎಸ್‌ಎಂ) ಎಂಬ ರಂಗದ ಹೆಸರಿನಲ್ಲಿ ಎಲ್ಲ 117 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ಶನಿವಾರ ಘೋಷಿಸಿವೆ.

ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ರೈತ ನಾಯಕ ಬಲಬೀರ್‌ ಸಿಂಗ್‌ ರಾಜೇವಾಲ್‌ ಅವರು ಎಸ್‌ಎಸ್‌ಎಂ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಅರ್ಥಾತ್‌ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಸಾಧ್ಯತೆ ನಿಚ್ಚಳವಾಗಿದೆ.

ಆದರೆ, ಎಸ್‌ಎಂಎಂ ಸ್ಥಾಪನೆಗೂ ನಮಗೂ ಸಂಬಂಧವಿಲ್ಲ ಎಂದು ದಿಲ್ಲಿ ಕೃಷಿ ಹೋರಾಟದ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಸ್ಪಷ್ಟಪಡಿಸಿದೆ.

ಪಕ್ಷ ಅಲ್ಲ, ರಂಗ:

ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಸ್ಪರ್ಧೆ ಘೋಷಣೆ ಮಾಡಿದ ರೈತ ನಾಯಕ ಬಲದೇವ ಸಿಂಗ್‌, ‘ಪಂಜಾಬ್‌ಗೆ ನಮ್ಮ ರಂಗ ಹೊಸ ದಿಕ್ಕು ತೋರಿಸಲಿದೆ. ಆದರೆ ನಮ್ಮದು ರಾಜಕೀಯ ಪಕ್ಷವಲ್ಲ. ಒಂದು ‘ರಂಗ’ (ಮೋರ್ಚಾ) ಮಾತ್ರ’ ಎಂದು ಸ್ಪಷ್ಟಪಡಿಸಿದರು.

ರಾಜೇವಾಲ್‌ ಮಾತನಾಡಿ, ‘ಜನಾಗ್ರಹದ ಮೇರೆಗೆ ರಾಜಕೀಯಕ್ಕೆ ಧಮುಕುತ್ತಿದ್ದೇವೆ. ರಾಜ್ಯದಲ್ಲಿ ರಾಜಕೀಯ ಬದಲಾವಣೆ ತರಲು ಈ ನಿರ್ಧಾರ ಕೈಗೊಂಡಿದ್ದೇವೆ. ಎಲ್ಲ 117 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದೇವೆ’ ಎಂದರು.

ಆಪ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಪ್ರಶ್ನಿಸಿದಾಗ ‘ಈ ಬಗ್ಗೆ ಇನ್ನೂ ನಿರ್ಣಯ ಕೈಗೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

click me!