Tomato Flu ಕೇರಳದಲ್ಲಿ ಮಕ್ಕಳಿಗೆ ಟೊಮೆಟೋ ಜ್ವರ, 80ಕ್ಕೂ ಹೆಚ್ಚು ಕೇಸ್ ಪತ್ತೆ!

By Kannadaprabha NewsFirst Published May 12, 2022, 4:34 AM IST
Highlights

- 5 ವರ್ಷಕ್ಕಿಂತ ಚಿಕ್ಕ 80ಕ್ಕೂ ಹೆಚ್ಚು ಮಕ್ಕಳಲ್ಲಿ ಜ್ವರಬಾಧೆ
- ಮೈಮೇಲೆ ಟೊಮೆಟೋ ರೀತಿಯ ಗುಳ್ಳೆಗಳು ಸೃಷ್ಟಿ
- ಸೂಕ್ತ ಚಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮ ಅಗತ್ಯ

ಕೊಚ್ಚಿ(ಮೇ.12): ಈಗಲೂ ದೇಶದಲ್ಲಿ ಅತಿಹೆಚ್ಚು ಕೋವಿಡ್‌ ಸೋಂಕು ಮತ್ತು ಸಾವು ದಾಖಲಾಗುತ್ತಿರುವ ಕೇರಳದಲ್ಲಿ ಇದೀಗ ಟೊಮೆಟೊ ಜ್ವರ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ 80 ಮಕ್ಕಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಪೋಷಕರಲ್ಲಿ ಆತಂಕ ಮನೆ ಮಾಡಿದೆ.

ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೈರಾಣು ಜ್ವರವಾದ ಇದು ಹೇಗೆ ಸೃಷ್ಟಿಯಾಗಿದೆ, ಕಾರಣ ಏನು? ಎಂಬ ಮಾಹಿತಿ ಇಲ್ಲ. ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಇದು ಮಾರಣಾಂತಿಕವಲ್ಲ. ಸೂಕ್ತ ಚಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಂಡು ರೋಗದಿಂದ ರಕ್ಷಣೆ ಪಡೆಯಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೊರೋನಾ ವೈರಸ್ Vs ಕಾಲ ಬದಲಾವಣೆಯ ಅಲರ್ಜಿ: ನೀವು ಯಾವಾಗ ಆರೋಗ್ಯ ಪರೀಕ್ಷೆ ಮಾಡಿಕೊಳ್ಳಬೇಕು ?

ಏನಿದು ಜ್ವರ?:
ಇದೊಂದು ಅಪರೂಪದ ವೈರಲ್‌ ಜ್ವರವಾಗಿದ್ದು, ಮೈ ಮೇಲೆ ದದ್ದು (ರಾರ‍ಯಷಸ್‌), ಚರ್ಮದ ಉರಿ ಮತ್ತು ನಿರ್ಜಲೀಕರಣದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದದ್ದುಗಳು ಕೆಂಪನೆಯ ಬಣ್ಣವಿದ್ದು, ಟೊಮೆಟೊಗೆ ಹೋಲುವ ಕಾರಣ, ಇದಕ್ಕೆ ಟೊಮೆಟೊ ಜ್ವರವೆಂದು ಹೆಸರು ಇದೆ. ಜ್ವರ ಕಾಣಿಸಿಕೊಂಡವರಲ್ಲಿ ಟೊಮೆಟೊ ರೀತಿಯ ಗುಳ್ಳೆ, ಜ್ವರ, ಮೈಕೈ ನೋವು, ಸಂಧುಗಳಲ್ಲಿ ನೋವು, ಆಯಾಸ, ಬಳಲಿಕೆ ಕಾಣಿಸಿಕೊಳ್ಳುತ್ತದೆ. ಇದುವರೆಗೆ ಪತ್ತೆಯಾದ ಎಲ್ಲಾ 80 ಪ್ರಕರಣಗಳು ಕೇವಲ ಕೊಲ್ಲಂ ಜಿಲ್ಲೆಯೊಂದರಲ್ಲೇ ಕಾಣಿಸಿಕೊಂಡಿದೆ.

ಕಟ್ಟೆಚ್ಚರ:
ಕೇರಳದಲ್ಲಿ ಟೊಮೆಟೊ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕೇರಳದಿಂದ ತಮಿಳುನಾಡಿಗೆ ಪ್ರವೇಶಿಸುವವರ ಮೇಲೆ ಗಡಿ ಭಾಗದಲ್ಲಿ ತೀವ್ರ ನಿಗಾ ಇಡಲಾಗಿದೆ.

Viral Fever: ರಾಜಧಾನಿಯ ಮಕ್ಕಳ ಬೆಂಬಿಡದೇ ಕಾಡುತ್ತಿದೆ ಶೀತ, ಜ್ವರ

ಏನು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬಹುದು?
- ಮಕ್ಕಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು
- ಜ್ವರಪೀಡಿತ ಮಕ್ಕಳಿಗೆ ಸಾಧ್ಯವಾದಷ್ಟುಹೆಚ್ಚಿನ ಕಾಯಿಸಿ ಆರಿಸಿದ ನೀರು ಕುಡಿಸಬೇಕು
- ದದ್ದು ಅಥವಾ ಗುಳ್ಳೆಗಳನ್ನು ಕೆರೆಯುವುದಾಗಿ, ಒಡೆಯುವುದಾಗಲೀ ಮಾಡಬಾರದು
- ಜ್ವರ ಕಾಣಿಸಿಕೊಂಡವರು ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು
- ಜ್ವರ ಬಂದವರಿಂದ ಅಂತರ ಕಾಯ್ದುಕೊಳ್ಳಬೇಕು, ಹೆಚ್ಚು ವಿಶ್ರಾಂತಿ ಪಡೆಯಬೇಕು

ಕೇರಳದಲ್ಲಿ 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ 80 ಮಕ್ಕಳಿಗೆ ಹೊಸ ರೀತಿಯ ವೈರಾಣು ಜ್ವರ ಹರಡಿದೆ. ಅದಕ್ಕೆ ಟೊಮೆಟೋ ಫä್ಲ ಎಂದು ಹೆಸರಿಡಲಾಗಿದೆ. ಈ ಸೋಂಕು ತಗಲಿದ ಮಕ್ಕಳ ಮೈಮೇಲೆ ಟೊಮೆಟೋವನ್ನು ಹೋಲುವ ಕೆಂಪು ಗಂಟುಗಳಾಗುತ್ತವೆ.

ಕೋವಿಡ್ ಪ್ರಕರಣ
24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು 3,207 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಇದೇ ವೇಳೆಯಲ್ಲಿ 29 ಸೋಂಕಿತರು ಸಾವಿಗೀಡಾಗಿದ್ದಾರೆ. ಈ ಪೈಕಿ ಕೇರಳದಲ್ಲಿ 26, ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಸಕ್ರಿಯ ಸೋಂಕಿತರ ಸಂಖ್ಯೆ 20,403ಕ್ಕೆ ಇಳಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.0.95ರಷ್ಟಿದೆ. ಈವರೆಗೆ 190.34 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 4.31 ಕೋಟಿಗೆ ಮತ್ತು ಸಾವಿನ ಸಂಖ್ಯೆ 5.24 ಲಕ್ಷಕ್ಕೆ ತಲುಪಿದೆ.

click me!