ಗೋಲ್ಘಾಟ್(ಜ. 31): ಜನರು ಸಾಮಾನ್ಯವಾಗಿ ಸಾಕು ಪ್ರಾಣಿಗಳಾದ ಎಮ್ಮೆ, ಕುರಿ, ಮೇಕೆ, ಹಸುಗಳ ಹಾಲನ್ನು ಕುಡಿಯುವುದನ್ನು ನೀವು ನೋಡಿರಬಹುದು. ಆದರೆ ಅಸ್ಸಾಂನ ಗೋಲ್ಘಾಟ್ (Golaghat) ಜಿಲ್ಲೆಯೊಂದರ ಹಳ್ಳಿಯ ಮಗುವೊಂದು ಆನೆಯ ಕೆಚ್ಚಲಿಗೆ ಬಾಯಿ ಹಕ್ಕಿ ನೇರವಾಗಿ ಆನೆಯ ಹಾಲು ಕುಡಿಯುತ್ತಿದೆ. ಇದು ತಾಯಿ ಪ್ರಾಣಿ ಹಾಗೂ ಮಾನವ ಮಗುವಿನ ಮಧ್ಯೆ ಇರುವ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಮೂರು ವರ್ಷದ ಮಗುವೊಂದು ಆನೆಯೊಂದಿಗೆ ಯಾವುದೇ ಭಯವಿಲ್ಲದೇ ಆಟವಾಡುತ್ತಿದ್ದು, ತಾಯಿ ಆನೆಯೊಂದಿಗೆ ಆಟವಾಡುತ್ತಿರುವ ಮಗುವಿನ ಹೆಸರು ಹರ್ಷಿತಾ ಬೋರಾ (Harshita Bora). ಈ ಮಗು ಆನೆಯನ್ನು ಕಟ್ಟಿ ವಾಸ್ತವ್ಯ ಇರುವಲ್ಲಿ ಅದರೊಂದಿಗೆ ಅದರ ಕಾಲಡಿಯಲ್ಲೇ ಆಟವಾಡುತ್ತಾ ಅದರ ಹಾಲನ್ನು ಕುಡಿಯುತ್ತಿದೆ. ಈ ಮುದ್ದು ಮಗು ತನ್ನ ಎರಡು ಕಾಲುಗಳ ಬೆರಳುಗಳನ್ನು ನೆಲಕ್ಕೆ ಊರಿ ಹಿಂಭಾಗವನ್ನು ಎತ್ತಿ ಆನೆಯ ಕೆಚ್ಚಿಲಿಗೆ ಬಾಯಿ ಇಡುತ್ತಿದೆ. ವಿಡಿಯೋದಲ್ಲಿ ಮಗು ಆನೆಯೊಂದಿಗೆ ಹಿಂದೆ ಮುಂದೆ ಸುತ್ತುತ್ತಾ ಆಡುವುದನ್ನು ಕಾಣಬಹುದು. ಅದರ ಸೊಂಡಿಲನ್ನು ಹಿಡಿದು ತಬ್ಬಿಕೊಂಡು ಮಗು ಆ ಆನೆಗೆ ಮುತ್ತನ್ನಿಡುತ್ತಿದೆ.
ಮಗು ಹರ್ಷಿತಾ ಆನೆಗೆ ಹಾಲು ಕುಡಿಯಲು ಅವಕಾಶ ನೀಡುವಂತೆ ಆನೆಯನ್ನು ಕೇಳುತ್ತಿರುವುದು ಮತ್ತು ಆನೆ ಅದನ್ನು ಪಾಲಿಸಿ ಪುಟ್ಟ ಹುಡುಗಿಗೆ ಅದರ ಹಾಲನ್ನು ಸೇವಿಸಲು ಅವಕಾಶ ಮಾಡಿಕೊಟ್ಟಿದೆ. ಬಾಲಕಿಯ ಅಕ್ಕ ಮತ್ತು ಆಕೆಯ ಕುಟುಂಬದ ಇತರ ಸದಸ್ಯರು ಈ ಘಟನೆಯನ್ನು ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನೆರೆಹೊರೆಯವರ ಪ್ರಕಾರ ಈ ಪುಟ್ಟ ಬಾಲೆ ಹರ್ಷಿತಾ ಆನೆಯನ್ನು ಬಿನು ಎಂದು ಕರೆಯುತ್ತಾಳೆ. ಜೊತೆಗೆ ಆಗಾಗ ಅದರೊಂದಿಗೆ ಆಟವಾಡುತ್ತಿರುತ್ತಾಳಂತೆ.
ಸಾವಿನ ಅರಿವಿಲ್ಲದೇ ತಾಯಿಯ ಎದ್ದೇಳಿಸಲು ಪ್ರಯತ್ನಿಸಿದ ಮರಿಯಾನೆ... ಕಣ್ಣಂಚಿನಲ್ಲಿ ನೀರು ತರಿಸಿದ ದೃಶ್ಯ
ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗಿರುವ ಈ ದಿನಗಳಲ್ಲೇ ಇಂತಹ ಸಂಘರ್ಷಕ್ಕೆ ವಿರೋಧವೆನಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಮಾನವ ಹಾಗೂ ಆನೆಗಳ ನಡುವಿನ ಸಂಘರ್ಷ ಹೆಚ್ಚಾಗಿದೆ.
ಆನೆಯ ಕೋಪಕ್ಕೆ ಆಹುತಿಯಾದ ಕಾರು... ಭಯಾನಕ ವಿಡಿಯೋ
ಅಧಿಕೃತ ದಾಖಲೆಯ ಪ್ರಕಾರ, ಅಸ್ಸಾಂನಲ್ಲಿ 2021 ರಲ್ಲಿ ಆನೆಗಳ ದಾಳಿಯಿಂದ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಅಸ್ಸಾಂನ (Assam) ವಿವಿಧ ಜಿಲ್ಲೆಗಳಲ್ಲಿ ವಿದ್ಯುತ್ ಆಘಾತ, ವಿಷ ಪ್ರಾಶನ, ವೇಗವಾಗಿ ಚಲಿಸುವ ರೈಲಿಗೆ ಸಿಲುಕಿ, ಸಿಡಿಲು ಬಡಿದು ಮತ್ತು ಕೊಳಗಳಿಗೆ ಬಿದ್ದು ಸೇರಿದಂತೆ ವಿವಿಧ ಕಾರಣಗಳಿಂದ 71 ಆನೆಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ದೃಶ್ಯವೊಂದು ಇತ್ತೀಚೆಗೆ ಕ್ಯಾಮರಾದಲ್ಲಿ ಸೆರೆ ಆಗಿತ್ತು. ತಾಯಿ ಆನೆಯೊಂದು ಮರಿಯಾನೆಗೆ ತಿನ್ನಿಸುತ್ತಿರುವ ಸುಂದರ ದೃಶ್ಯ ಅದಾಗಿತ್ತು. ತಾಯಿ ಆನೆ ಹಾಗೂ ಮರಿಯಾನೆ ಹುಲ್ಲುಗಾವಲಿನ ಪ್ರದೇಶದಲ್ಲಿ ಜೊತೆಯಾಗಿ ಸಾಗುತ್ತಿವೆ. ತಾಯಿಯನ್ನು ಜೊತೆ ಜೊತೆಯಾಗಿ ಪುಟ್ಟ ಮರಿ ಹಿಂಬಾಲಿಸುತ್ತಿದೆ. ತಾಯಿ ಆನೆ ಹುಲ್ಲನ್ನು ಕಿತ್ತು ಅತ್ತಿತ್ತ ಅಲ್ಲಾಡಿಸುತ್ತ ಸ್ವಚ್ಛಗೊಳಿಸಿ ಅದನ್ನು ಬಾಯಿಗೆ ತುಂಬಿಸುತ್ತಿದೆ. ಬಾರಿ ಆನೆಗಳಲ್ಲದೇ ಎರಡು ಮೂರು ಬಗೆಯ ಹಕ್ಕಿಗಳು ಕೂಡ ಈ ವಿಡಿಯೋದಲ್ಲಿ ಸೆರೆಯಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ