
2 ದಿನ ರಾಜ್ಯದೆಲ್ಲೆಡೆ ಮಳೆ.. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಹವಾಮಾನ ಇಲಾಖೆ ಎಚ್ಚರಿಕೆ
ಮುಂದಿನ ಎರಡು ದಿನ ರಾಜ್ಯದ ಬಹುತೇಕ ಕಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಮಧ್ಯ ಭಾರತ, ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿ ಮಳೆ ಮಾರುತಗಳ ಪ್ರಭಾವದಿಂದ ಉತ್ತರ ಒಳನಾಡು ಹಾಗೂ ಕರಾವಳಿಯ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡ್ಮೂರು ದಿನ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಸೆ.16ರಂದು ಮಂಗಳವಾರ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು. ವಿಜಯನಗರ, ಯಾದಗಿರಿ ಜಿಲ್ಲೆಗಳಿಗೆ, ಸೆ.17ರಂದು ಬುಧವಾರ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ರಾಜ್ಯಾದ್ಯಂತ ಸೆ.18 ಮತ್ತು 19ಕ್ಕೆ ಸಾಧಾರಣ ಮಳೆ ಮುಂದುವರೆಯಲಿದೆ. ಸೆ.20 ರಿಂದ ರಾಜ್ಯದಲ್ಲಿ ಮಳೆ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆರೆ ಬಫರ್ ವಲಯ ನಿಗದಿ ಮಾಡಿದ್ದ ವಿಧೇಯಕ ವಾಪಸ್
ರಾಜಭವನ, ಸರ್ಕಾರದ ನಡುವಿನ ಸಂಘರ್ಷ ಮುಂದುವರಿದಿದ್ದು, ಕೆರೆಗಳ ವಿಸ್ತೀರ್ಣಕ್ಕನುಗುಣವಾಗಿ ಬಫರ್ ವಲಯ ಮರು ನಿಗದಿ ಮಾಡುವ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ರಾಜ್ಯಪಾಲರು, ಅಂಕಿತ ಹಾಕದೇ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಮಳೆಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೇ ಅನುಮೋದನೆಗೊಂಡ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಸ್ಪಷ್ಟೀಕರಣ ಕೋರಿ ಹಿಂದಕ್ಕೆ ಕಳುಹಿಸಿದ್ದಾರೆ. ವಿಧೇಯಕಕ್ಕೆ ಅನುಮೋದನೆ ನೀಡದಂತೆ ಬೆಂಗಳೂರು ಟೌನ್‌ಹಾಲ್ ಅಸೋಸಿಯೇಷನ್ ರಾಜ್ಯಪಾಲರ ಕಚೇರಿಗೆ ಆಕ್ಷೇಪಣೆ ಸಲ್ಲಿಸಿದ ಆಧಾರದಲ್ಲಿ ವಿಧೇಯಕವನ್ನು ವಾಪಸ್ ಕಳುಹಿಸಲಾಗಿದೆ.
ಯುಪಿಐ ದೈನಂದಿನ ವಹಿವಾಟು ಮಿತಿ ₹ 10 ಲಕ್ಷದವರೆಗೆ ಏರಿಕೆ
ಡಿಜಿಟಲ್ ಪಾವತಿಯಲ್ಲಿ ಕ್ರಾಂತಿಗೆ ಕಾರಣವಾದ ಯುಪಿಐ ನಿಯಮಗಳಲ್ಲಿ ಸರ್ಕಾರ ಕೆಲ ಬದಲಾವಣೆ ಮಾಡಿದ್ದು ಸೆ.15ರಿಂದಲೇ ಈ ಬದಲಾವಣೆಗಳು ಜಾರಿಗೆ ಬಂದಿದೆ. ಬದಲಾವಣೆ ಅನ್ವಯ, ಸಾಲ, ಇಎಂಐ, ಬಂಡವಾಳ ಮಾರುಕಟ್ಟೆ ಹೂಡಿಕೆ, ವಿಮಾ ಕಂತುಗಳ ಪಾವತಿಯ ದೈನಂದಿನ ಮಿತಿಯನ್ನು ದಿನಕ್ಕೆ 10 ಲಕ್ಷ ರು.ಗೆ ಏರಿಸಲಾಗಿದೆ. ಒಂದು ಬಾರಿಗೆ 5 ಲಕ್ಷ ರು. ಮೊತ್ತದ ವಹಿವಾಟು ನಡೆಸಬಹುದು. ಉಳಿದಂತೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯನ್ನು ಒಂದು ಬಾರಿಗೆ 5 ಲಕ್ಷ ರು.ನಂತೆ ದಿನಕ್ಕೆ ಗರಿಷ್ಠ 6 ಲಕ್ಷ ರು. ನಿಗದಿಪಡಿಸಲಾಗಿದೆ. ವ್ಯಾಪಾರಿಗಳಿಗೆ ಇನ್ನು ಒಮ್ಮೆಗೆ 10 ಲಕ್ಷ ರು.ವರೆಗೆ ಪಾವತಿಸಬಹುದು. ಆದರೆ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಕಳಿಸಬಹುದಾದ ಮೊತ್ತದ ಮಿತಿಯಲ್ಲಿ ಯಾವುದೇ ಬದಲಾವಣೆಯಾಗದೆ ಮೊದಲಿನಂತೆ ದಿನಕ್ಕೆ 1 ಲಕ್ಷ ರು.ನಲ್ಲೇ ಮುಂದುವರೆಯಲಿದೆ.
ನೌಕಾಪಡೆಗೆ ಸಬ್‌ಮರೀನ್ ನಾಶ ಸಾಮರ್ಥ್ಯದ ನೌಕೆ ಸೇರ್ಪಡೆ
ಹಿಂದೂ ಮಹಾಸಾಗರದಲ್ಲಿ ಚೀನಾ ಆಕ್ರಮಣದ ಆತಂಕ ಹೆಚ್ಚುತ್ತಿರುವ ನಡುವೆಯೇ, ಶತ್ರು ದೇಶದ ಸಬ್‌ಮರೀನ್‌ಗಳನ್ನು ಪತ್ತೆ ಮಾಡಿ, ಅದನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿರುವ ಸ್ವದೇಶಿ ದಾಳಿ ನೌಕೆಯೊಂದು ಭಾರತೀಯ ನೌಕಾಪಡೆ ಸೇರ್ಪಡೆಯಾಗಿದೆ. ನೌಕಾಪಡೆಗಾಗಿ ಕೋಲ್ಕತಾದ ಗಾರ್ಡನ್ ರೀಚ್ ಶಿಪ್‌ಬಲ್ಡರ್ಸ್ & ಇಂಜಿನಿಯರ್ಸ್ (ಜಿಆರ್‌ಎಸ್‌ಇ) ಸಂಸ್ಥೆ ಒಟ್ಟು 8 ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಗಳನ್ನು ನಿರ್ಮಿಸುತ್ತಿದೆ. ಈ ಪೈಕೆ 2ನೆಯ ನೌಕೆ ‘ಆ್ಯನ್‌ಡ್ರೋಟ್’ ಅನ್ನು ಶನಿವಾರ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ‘ಆ್ಯನ್‌ಡ್ರೋಟ್’ ಲಕ್ಷದ್ವೀಪದಲ್ಲಿರುವ ದ್ವೀಪವೊಂದರ ಹೆಸರು. ಭಾರತ ತನ್ನ ವಿಶಾಲವಾದ ಕಡಲ ಪ್ರದೇಶಗಳನ್ನು ರಕ್ಷಿಸುವ ಬದ್ಧತೆ ಹೊಂದಿದೆ ಎಂಬುದನ್ನು ಸೂಚಿಸಲು ಯುದ್ಧನೌಕೆಗೆ ಈ ಹೆಸರು ಇಡಲಾಗಿದೆ.
ಕೃತಕ ಬುದ್ಧಿಮತ್ತೆ ಕಂಟೆಂಟ್ ಕ್ರಿಯೆಟರ್‌ಗಳಿಗೆ ನೋಂದಣಿ ಕಡ್ಡಾಯ : ಶಿಫಾರಸು
ಕೃತಕ ಬುದ್ಧಿಮತ್ತೆ (ಎಐ) ಬಳಸಿ ಮಾನಹಾನಿಕರ ಮತ್ತು ಸುಳ್ಳು ವಿಡಿಯೋ ಹರಿಬಿಡುವ ಖಯಾಲಿ ಹೆಚ್ಚುತ್ತಿರುವ ನಡುವೆಯೇ, ಎಐ ಕಂಟೆಂಟ್ ಕ್ರಿಯೇಟರ್‌ಗಳಿಗೆ ನೋಂದಣಿ ಕಡ್ಡಾಯ, ಅವರು ರಚಿತ ವಿಷಯಗಳಿಗೆ ಕಡ್ಡಾಯ ಲೇಬಲ್ ಮಾಡುವಂತೆ ಮತ್ತು ಡೀಪ್‌ಫೇಕ್ ವಿಡಿಯೋಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸದೀಯ ಸ್ಥಾಯಿ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಕುರಿತು ವಿಪಕ್ಷಗಳು ಹರಿಬಿಟ್ಟಿದ್ದ ಎಐ ರಚಿತ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಚುನಾವಣಾ ಆಯೋಗದ ಮತಪಟ್ಟಿ ಪರಿಷ್ಕರಣೆ ವಿಧಾನ ಲೋಪವಿದ್ದರೆ ಪ್ರಕ್ರಿಯೆಯೇ ರದ್ದು : ಸುಪ್ರೀಂಕೋರ್ಟ್
ಸಾಂವಿಧಾನಿಕ ಸಂಸ್ಥೆಯಾಗಿ ಚುನಾವಣಾ ಆಯೋಗವು ಬಿಹಾರದಲ್ಲಿ ಕಾನೂನು ಪಾಲಿಸಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ ಎಂದು ನಾವು ಭಾವಿಸಿದ್ದೇವೆ. ಒಂದು ವೇಳೆ ಆಯೋಗದ ವಿಧಾನದಲ್ಲಿಯೇ ಯಾವುದಾದರೂ ಲೋಪವಿದ್ದರೆ, ಪರಿಷ್ಕರಣೆ ಪ್ರಕ್ರಿಯೆಯನ್ನೇ ರದ್ದು ಮಾಡುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಜತೆಗೆ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿರುವ ಕುರಿತ ಅರ್ಜಿಗಳ ಅಂತಿಮ ವಿಚಾರಣೆಯನ್ನು ಅ.7ಕ್ಕೆ ನಿಗದಿಪಡಿಸಿದೆ.
ಇ.ಡಿ. ಬಳಿಕ ನಾಗೇಂದ್ರಗೆ ಈಗ ಸಿಬಿಐ ತನಿಖೆ ಬಿಸಿ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ದುರ್ಬಳಕೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ಬಳಿಕ ಇದೀಗ ಸಿಬಿಐ ಅಖಾಡಕ್ಕೆ ಇಳಿದಿದೆ. ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸೇರಿದ ಸ್ಥಳಗಳು ಹಾಗೂ ಇತರೆ 15 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶದಲ್ಲೂ ಈ ಕಾರ್ಯಾಚರಣೆ ನಡೆದಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಬಳ್ಳಾರಿಯಲ್ಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಉದ್ಯಮಿ ‘ಎಗ್’ ಕುಮಾರಸ್ವಾಮಿ ಹಾಗೂ ಆತನ ಪುತ್ರ ಪಾಲಿಕೆಯ ಬಿಜೆಪಿ ಸದಸ್ಯ ಗೋವಿಂದರಾಜು ಮನೆಯ ಮೇಲೆ ಸೋಮವಾರ ದಾಳಿ ನಡೆಸಿ, ದಾಖಲೆ ಪರಿಶೀಲಿಸಿದ್ದಾರೆ. ಗೋವಿಂದರಾಜು ಅವರು ನಾಗೇಂದ್ರ ಅವರ ಆಪ್ತರಾಗಿದ್ದಾರೆ ಎಂಬುದು ಗಮನಾರ್ಹ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ