ಹಂದಿಗೆ ಹಾಕಿದ ಕೇಬಲ್ ಉರುಳಿಗೆ ಸಿಲುಕಿದ್ದರು ಬದುಕಿ ಮರಿಗಳಿಗೆ ಜನ್ಮ ನೀಡಿದ ಹುಲಿ

Published : May 02, 2025, 10:21 AM ISTUpdated : May 02, 2025, 10:43 AM IST
ಹಂದಿಗೆ ಹಾಕಿದ ಕೇಬಲ್ ಉರುಳಿಗೆ ಸಿಲುಕಿದ್ದರು ಬದುಕಿ ಮರಿಗಳಿಗೆ ಜನ್ಮ ನೀಡಿದ ಹುಲಿ

ಸಾರಾಂಶ

ಲೋಹದ ಉರುಳಿನಲ್ಲಿ ಸಿಲುಕಿದ ಹುಲಿಯೊಂದು ಜೀವಂತವಾಗಿ ಬದುಕುಳಿದಿದ್ದಲ್ಲದೇ ಮರಿಗಳಿಗೂ ಜನ್ಮ ನೀಡಿ ಅವುಗಳ ಪೋಷಣೆ ಮಾಡುತ್ತಿರುವ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಾಡು ಹಂದಿಗಳ ಹಾವಳಿ ತಪ್ಪಿಸುವುದಕ್ಕಾಗಿ ಹಳ್ಳಿಗಳ ಕಡೆ ಹಂದಿ ಹಿಡಿಯಲು ಲೋಹದ ಕೇಬಲ್ ವಯರ್‌ಗಳನ್ನು(ಉರುಳು) ಇಟ್ಟಿರುತ್ತಾರೆ. ಈ ಉರುಳಿನಲ್ಲಿ ಕಾಡು ಹಂದಿಯ ಬದಲು ಇತರ ಪ್ರಾಣಿಗಳು ಸಿಲುಕಿ ಸಾವನ್ನಪ್ಪಿದ ಘಟನೆಗಳೂ ನಡೆದಿವೆ. ಈಗ ಇಂತಹದ್ದೇ ಉರುಳಿನಲ್ಲಿ ಸಿಲುಕಿದ ಹುಲಿಯೊಂದು ಜೀವಂತವಾಗಿ ಬದುಕುಳಿದಿದ್ದಲ್ಲದೇ ಮರಿಗಳಿಗೂ ಜನ್ಮ ನೀಡಿ ಅವುಗಳ ಪೋಷಣೆ ಮಾಡುತ್ತಿರುವ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಪಿಲಿಭೀತ್‌ನ  ಟೆರೈ ಪೂರ್ವ ಅರಣ್ಯ ವಿಭಾಗದ ಸುರೈ ಅರಣ್ಯ ವ್ಯಾಪ್ತಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಸೊಂಟದಲ್ಲಿ ಕೇಬಲ್ ಸಿಲುಕಿಕೊಂಡು  ಗಾಯಗಳಾಗಿದ್ದರೂ ಈ ಹೆಣ್ಣು ಹುಲಿ ಸಂತಾನೋತ್ಪತಿ ಕ್ರಿಯೆ ನಡೆಸಿ ಮರಿಗಳಿಗೂ ಜನ್ಮ ನೀಡಿದೆ. ಹಿಂಗಾಲುಗಳ  ಮುಂದೆ ಸೊಂಟದ ಜಾಗದಲ್ಲಿ ಈ ಕೇಬಲ್ ಸಿಲುಕಿಕೊಂಡಿತ್ತು. ಆದರೂ ಈ ಹುಲಿ ಮರಿಗಳಿಗೆ ಜನ್ಮ ನೀಡಿ ಜೀವಂತವಾಗಿ ಬದುಕುಳಿದಿರುವುದು ವನ್ಯಜೀವಿ ತಜ್ಞರಿಗೆ ಅಚ್ಚರಿ ಮೂಡಿಸಿದೆ. 

ಈ ಹುಲಿ ಮೊದಲ ಬಾರಿಗೆ 2022ರಲ್ಲಿ ವನ್ಯಜೀವಿ ವೀಕ್ಷಕರಿಗೆ ಪತ್ತೆಯಾಗಿತ್ತು. ನಂತರ 2023ರ ಡಿಸೆಂಬರ್‌ನಲ್ಲಿ ಮತ್ತೆ ಕಾಣಲು ಸಿಕ್ಕಿತ್ತು. ಇದರ ಬೆನ್ನಿನ ಕೆಳಭಾಗದಲ್ಲಿ ಈ ಈ ಲೋಹದ ಉರುಳು ಸ್ಟಕ್‌ ಆಗಿ ನಿಂತಿತ್ತು. ಹೀಗಾಗಿ ಅಲ್ಲಿ ಗಾಯವೂ ಆಗಿತ್ತು. ಅಲ್ಲದೇ ಹುಲಿಯ ಸೊಂಟದ ಭಾಗ ಸಣ್ಣಗಾಗಿ ಚಿರತೆಯಂತಹ ಸಿಲೂಯೆಟ್ ಆಗಿ ಆಕಾರ ಬದಲಾಗಿತ್ತು. 2023ರಲ್ಲಿ ಇದು ಮತ್ತೆ ಕಾಣಲು ಸಿಕ್ಕಿದಾಗ ಅರಣ್ಯ ಇಲಾಖೆ ಅಧಿಕಾರಿಗಳು ಅಚ್ಚರಿಗೊಂದು ಅದನ್ನು ರಕ್ಷಿಸಲು ಬಲೆ ಹಾಕಲು ಸಿದ್ಧ ಮಾಡುತ್ತಿದ್ದಾಗ ಅದು ನಿಧಾನವಾಗಿ ತನ್ನ ಬಾಯಿಯಲ್ಲಿ ಮರಿಯನ್ನು ಎತ್ತಿಕೊಂಡು  ಹೋಗುವುದನ್ನು ಗಮನಿಸಿದರು. ಹೀಗಾಗಿ ಕಾರ್ಯಾಚರಣೆಯನ್ನು ಆ ಸಮಯದಲ್ಲಿ ಸ್ಥಗಿತಗೊಳಿಸಲಾಗಿತ್ತು.

ಈ ಹುಲಿ ಸಿಕ್ಕಿದಾಗಿನಿಂದಲೂ ಈ ಪ್ರಕರಣ ಅವರಿಗೆ ಅಚ್ಚರಿ ಮೂಡಿಸಿತ್ತು. ಏಕೆಂದರೆ ಈ ಲೋಹದ ಉರುಳು ಅದರ ದೇಹದ ಸೊಂಟದ ಭಾಗದಲ್ಲಿ(lumbosacral region) ಕುಣಿಕೆಯಂತೆ ಬಿಗಿದುಕೊಂಡಿತ್ತು. ಈ ಪ್ರದೇಶವೂ ದೇಹದ ಸಮತೋಲನಕ್ಕೆ ಹಾಗೂ ಚಲನಶೀಲತೆಗೆ ಬಹಳ ಅಗತ್ಯವಾದ ಪ್ರದೇಶವಾಗಿದೆ. ಆದರೂ ಈ ಹೆಣ್ಣು ಹುಲಿ ಬೇಟೆಯಾಡಲು, ಮೇಟಿಂಗ್ ನಡೆಸಲು ಹಾಗೂ ಗರ್ಭಧರಿಸಿ ಮರಿಗಳಿಗೆ ಜನ್ಮ ನೀಡುವುದಕ್ಕೂ ಯಶಸ್ವಿಯಾಗಿದ್ದು, ಇದು ಆಕೆಯ ಸಾಮರ್ಥ್ಯ ಹಾಗೂ ಬದುಕುಳಿಯುವಿಕೆಯ ಆಕೆಯ ಹೋರಾಟಕಿದ್ದ ಶಕ್ತಿ ಎಂದು ವನ್ಯಜೀವಿ ತಜ್ಞರು ಬಣ್ಣಿಸಿದ್ದಾರೆ.

ಈ ಹುಲಿ ಪತ್ತೆಯಾದ ನಂತರ ನಡೆದ ರಕ್ಷಣಾ ಪ್ರಯತ್ನದ ಭಾಗವಾಗಿ ಪ್ರಾರಂಭಿಸಲಾದ ಡ್ರೋನ್‌ ಕಣ್ಗಾವಲು ಈ ಹುಲಿಯ ರಕ್ಷಣಾ ಯತ್ನ ಬಹುತೇಕ ಅಸಾಧ್ಯ ಎಂಬುದನ್ನು ದೃಢಪಡಿಸಿತ್ತು. ಏಕೆಂದರೆ ಆಕೆಯ ಜೊತೆ 4 ಮರಿಗಳಿದ್ದವು, ಆಕೆ ಅವುಗಳಿಗೆ ಹಾಲುಣಿಸುತ್ತಾ ಸಾಕುವುದಕ್ಕೂ ಯಶಸ್ವಿಯಾಗಿದ್ದಳು. ಇಂದು ಈ ಹುಲಿಯ ಜೊತೆ ಮೂರು ಮರಿಗಳಿದ್ದು, ಅವುಗಳಿಗೆ 16 ತಿಂಗಳು ತುಂಬಿದ್ದು, ತಾಯಿಯ ಜೊತೆ ಅವುಗಳು ಕಾಡಿನಲ್ಲಿ ಅಲೆದಾಡುತ್ತಿವೆ. ತನ್ನ ದೇಹಕ್ಕಾದ ಗಂಭೀರ ಗಾಯದ ಹೊರತಾಗಿಯೂ ಈ ತಾಯಿ ಹುಲಿ ಮರಿಗಳಿಗೆ ಬೇಟೆಯಾಡುವುದನ್ನು ಮಾಡುತ್ತಿದೆ. ಇದು ಈ ತಾಯಿ ಹುಲಿಯನ್ನು ಗಮನಿಸುತ್ತಿರುವ ವನ್ಯಜೀವಿ ತಂಡಕ್ಕೆ ಮತ್ತು ವನ್ಯಜೀವಿ ಜೀವಶಾಸ್ತ್ರಜ್ಞರ ವಿಶಾಲ ವಲಯಕ್ಕೆ ಅಚ್ಚರಿ ಮೂಡಿಸಿದೆ.  ಈ ಹುಲಿ ಹಾಗೂ ಆಕೆಯ ಮರಿಗಳ ಬದುಕುಳಿಯುವಿಕೆ ಯಾವುದೇ ಪರಿಸ್ಥಿತಿಗೂ ಹೊಂದಿಕೊಳ್ಳುವ ಹಾಗೂ ಕಾಡಿನಲ್ಲಿನ ಜೀವ ವೈವಿಧ್ಯದಲ್ಲಿ ಇರುವ ಗುಪ್ತ ಸಾಧ್ಯತೆಗಳ ಜೀವಂತ ಪ್ರಕರಣವಾಗಿದೆ ಎಂದು ಅವರು ಈ ಘಟನೆ ಬಗ್ಗೆ ಹೇಳಿದ್ದಾರೆ.

ಪ್ರಸ್ತುತ ಭಾರತೀಯ ವನ್ಯಜೀವಿ ಸಂಸ್ಥೆಯಲ್ಲಿ, ಆಕೆಯ ಭವಿಷ್ಯದ ಬಗ್ಗೆ ವಿವರವಾದ ರಕ್ಷಣಾ ಯೋಜನೆಯ ಚರ್ಚೆಯಲ್ಲಿದೆ. ವನ್ಯಜೀವಿಗಳ ವೈದ್ಯ ಡಾ. ಪರಾಗ್ ನಿಗಮ್ ಈ ಬಗ್ಗೆ ಅಂಗ್ಲ ಮಾಧ್ಯಮವಾದ ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದು, ಈ ಹುಲಿಯನ್ನು ರಕ್ಷಿಸುವ ಅಗತ್ಯವು ತುರ್ತಾಗಿದೆ. ಲೋಹೀಯ ಬಲೆಯು ಗಂಭೀರ ದೈಹಿಕ ಮತ್ತು ಬೆನ್ನುಮೂಳೆಗೆ ಅಪಾಯಗಳನ್ನು ಉಂಟುಮಾಡುತ್ತದೆ, ಕಾಲಾನಂತರದಲ್ಲಿ ಅದರ ಆರೋಗ್ಯ ಹದಗೆಡಬಹುದು ಎಂದು ಹೇಳಿದ್ದಾರೆ. ರಾಷ್ಟ್ರೀಯ ಹುಲಿ  ದತ್ತಾಂಶಗಳಿಂದ ಈ ತಾಯಿ ಹುಲಿಯ ಬಗ್ಗೆ ಮಾಹಿತಿ ಪಡೆಯಲು ಆಕೆಯ ಫೋಟೋವನ್ನು ವಿಐಐನ ಟೈಗರ್ ಸೆಲ್‌ಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆಕೆಯ ಪ್ರಕರಣವನ್ನು ಅಧ್ಯಯನ ಮಾಡುತ್ತಿರುವ ಪಶುವೈದ್ಯಕೀಯ ತಜ್ಞರು, ಆಕೆಗೆ ಬದುಕುಳಿಯಲು ಮತ್ತು ಸಂತಾನೋತ್ಪತ್ತಿ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಕಿರಿದಾದ ಅಂಗರಚನೆ ಎಂಬುದನ್ನು ಗಮನಿಸಿದ್ದಾರೆ. ಕಾನ್ಪುರ್ ಮೃಗಾಲಯದ ಮಾಜಿ ಪಶುವೈದ್ಯಕೀಯ ಮುಖ್ಯಸ್ಥ ಡಾ. ಆರ್.ಕೆ. ಸಿಂಗ್ಈ ಕೇಬಲ್ ಇರುವ ಜಾಗವೂ ಆಕೆಯ ಆಕೆಯ ಮೂತ್ರಪಿಂಡಗಳು ಮತ್ತು ಅಂಡಾಶಯಗಳನ್ನು ಈ ಉರುಳಿನಿಂದ ದೂರ ಉಳಿಸಿರಬಹುದು ಎಂಬ ಮಾಹಿತಿ ನೀಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ