
ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವ ಮಾತು ಕೇಳಿಬರುತ್ತಿರುವುದು ಒಂದೆಡೆಯಾದರೆ, ಮದುವೆ ಬೇಡ, ಲಿವ್-ಇನ್ನಲ್ಲಿ ಇರೋಣ ಎಂದುಕೊಂಡು ಇರುವವರು ಹಲವರು. ವಿದೇಶದಲ್ಲಿ ಅಷ್ಟೇ ಇದ್ದ ಈ ಪರಿಯ ವಿವಾಹೇತರ ಸಂಬಂಧ ಸಿನಿಮಾ ತಾರೆಯರಿಂದ ಪ್ರಚಾರಗೊಂಡು, ಅವರಿಂದ ಪ್ರೇರೇಪಿತರಾಗಿರುವ ಹಲವು ಹುಡುಗಿಯರು ಲಿವ್ ಇನ್ ಸಂಬಂಧದಲ್ಲಿ ಇರುವುದು ಮಾಮೂಲಾಗಿದೆ. ಮಹಿಳೆಯರೇ ಇಂಥ ಸಂಬಂಧಕ್ಕೆ ಒಪ್ಪಿಕೊಂಡು ಮುಂದೆ ಬಂದಾಗ ಇನ್ನು ಪುರುಷರೇನು ಸುಮ್ಮನೇ ಇರ್ತಾರಾ? ಅಷ್ಟಕ್ಕೂ ಅಂತಿಮ ಫಲಿತಾಂಶದಲ್ಲಿ ಬಳಲುವಾಕೆ ಹೆಣ್ಣೇ ಎನ್ನುವ ಸತ್ಯ ಅವರಿಗೂ ಗೊತ್ತಿದ್ದದ್ದೇ. ಅದಕ್ಕಾಗಿ ಹೆಣ್ಣುಮಕ್ಕಳು ಇಂಥ ಸಂಬಂಧ ಹೊಂದುವಾಗ ಭವಿಷ್ಯದ ಯೋಚನೆ ಮಾಡಿ ಎಂದು ಹಲವರು ಹೇಳಿದರೂ ಅದು ಆ ಪ್ರಾಯದಲ್ಲಿ ಅವರ ಕಿವಿಗೆ, ತಲೆಗೆ ಎಲ್ಲಿಯೂ ಹೋಗುವುದೇ ಇಲ್ಲ.
ಇದೀಗ ಅಂಥದ್ದೇ ಒಂದು ಕೇಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇಲ್ಲಿ ಯುವತಿಯೊಬ್ಬಳು ಯುವಕನ ಜೊತೆ ಲಿವ್ ಇನ್ ಸಂಬಂಧದಲ್ಲಿ ಇದ್ದಳು. ಮಗುವೂ ಆಯಿತು. ಕೊನೆಗೆ ಅವನು ಮದುವೆಗೆ ನಿರಾಕರಿಸಿದ. ಏಕೆಂದರೆ ಅಲ್ಲಿಗೆ ಅವನ ಕೆಲಸ ಮುಗಿದಿತ್ತು. ಈಗ ಏನಿದ್ದರೂ ಸವಾಲು ಈ ಯುವತಿಯದ್ದು ಅಷ್ಟೇ. ಬೇರೆ ದಾರಿ ಕಾಣದೇ ರೇ*ಪ್ ಕೇಸ್ ಹಾಕಿದಳು. ಅದು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅದು ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರ ಪೀಠದ ಮುಂದೆ ವಿಚಾರಣೆ ಬಂದಿತ್ತು. ಇಂಥ ಸಂಬಂಧಗಳ ಬಗ್ಗೆ ನ್ಯಾಯಮೂರ್ತಿಗಳು ಏನು ಹೇಳಿದ್ದಾರೆ ನೋಡಿ.
ವಿವಾಹ ಬಂಧವಿಲ್ಲದೆಯೇ ಲಿವ್-ಇನ್ ಸಂಬಂಧದಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿವಾಹದ ಸುಳ್ಳು ನೆಪದಲ್ಲಿ ಪುರುಷನೊಬ್ಬ ತನ್ನ ಮೇಲೆ ಅ*ತ್ಯಾಚಾರ ಮತ್ತು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಪ್ಪಿಗೆಯ ಲಿವ್-ಇನ್ ಸಂಬಂಧಗಳು ಮತ್ತು ಕ್ರಿಮಿನಲ್ ಲೈಂ*ಗಿಕ ಅಪರಾಧಗಳ ನಡುವಿನ ವ್ಯತ್ಯಾಸಗಳನ್ನು ಕೋರ್ಟ್ ಒತ್ತಿಹೇಳಿದೆ.
ವಯಸ್ಕರು ವಿವಾಹದ ಹೊರಗೆ ಒಟ್ಟಿಗೆ ವಾಸಿಸಲು ಆಯ್ಕೆ ಮಾಡಿದಾಗ, ಅಂತಹ ಸಂಬಂಧಗಳು ಹೆಚ್ಚಾಗಿ ಅಂತರ್ಗತ ಅಪಾಯಗಳನ್ನು ಹೊಂದಿರುತ್ತವೆ. ಇದನ್ನು ಇಂಥ ಸಂಬಂಧ ಹೊಂದುವವರು ತಿಳಿದುಕೊಳ್ಳಬೇಕು ಎಂದಿದೆ ಕೋರ್ಟ್. ಈ ಪ್ರಕರಣದಲ್ಲಿ ಲಿವ್-ಇನ್ ಸಂಬಂಧ ಎನ್ನುತ್ತೀರಾ,ಮದುವೆಯಾಗಲೇ ಪುರುಷನ ಮಗುವನ್ನೂ ಪಡೆಯುತ್ತೀರಾ, ಅವನು ಮದುವೆಗೆ ಒಪ್ಪಲಿಲ್ಲ ಅಂದ ಮಾತ್ರಕ್ಕೆ ಅದು ಅ*ತ್ಯಾಚಾರ ಮತ್ತು ಹಲ್ಲೆ ಎಂದು ಹೇಗೆ ಹೇಳುತ್ತೀರಾ ಎಂದು ಕೋರ್ಟ್ ಪ್ರಶ್ನಿಸಿದೆ. ಒಮ್ಮತದ ಸಂಬಂಧವು ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಹೇಗೆ ಕಾರಣವಾಗುತ್ತದೆ? ಒಮ್ಮತದ ಸಂಬಂಧವಿದ್ದಾಗ ಅಪರಾಧದ ಪ್ರಶ್ನೆ ಎಲ್ಲಿದೆ?" ಎಂದು ಪ್ರಶ್ನಿಸಿದ್ದಾರೆ.
"ಲಿವ್-ಇನ್ ಸಂಬಂಧಗಳಲ್ಲಿ ಹೀಗಾಗುತ್ತದೆ. ವರ್ಷಗಳ ಕಾಲ ಅವರು ಒಟ್ಟಿಗೆ ವಾಸಿಸುತ್ತಿದ್ದರು. ಅವರು ಬೇರ್ಪಟ್ಟಾಗ, ಮಹಿಳೆ ಪುರುಷನ ವಿರುದ್ಧ ಲೈಂ*ಗಿಕ ದೌರ್ಜನ್ಯದ ದೂರು ದಾಖಲಿಸುತ್ತಾಳೆ. ಇವೆಲ್ಲವೂ ವಿವಾಹದ ಹೊರಗಿನ ಸಂಬಂಧಗಳ ವೈಪರೀತ್ಯಗಳು" ಎಂದು ನ್ಯಾಯಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ. ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಆರೋಪಿಯು 18 ವರ್ಷದ ವಿಧವೆಯನ್ನು ಭೇಟಿಯಾಗಿ ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆ ಸಮಯದಲ್ಲಿ ಆರೋಪಿಗೆ ಈಗಾಗಲೇ ವಿವಾಹವಾಗಿತ್ತು ಮತ್ತು ನಾಲ್ಕು ಹೆಂಡತಿಯರಿದ್ದರು, ಆದರೆ ಮಹಿಳೆಗೆ ಅದರ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದರು. ಅದಕ್ಕೆ ಕೋರ್ಟ್, ಮೊದಲು ಮದುವೆಯಾಗದೆ ಪುರುಷನೊಂದಿಗೆ ವಾಸಿಸಲು ಮತ್ತು ಮಗುವನ್ನು ಹೊಂದಲು ಏಕೆ ಆಯ್ಕೆ ಮಾಡಿಕೊಂಡರು ಎಂದು ಪ್ರಶ್ನಿಸಿದರು. ಆರೋಪಿಯು ಇತರರೊಂದಿಗೆ ಸಹ ಇದನ್ನು ಮಾಡಿದ್ದಾನೆ ಎಂದು ವಕೀಲರು ಹೇಳಿಕೊಂಡಾಗ, ಕೋರ್ಟ್ನಲ್ಲಿ ಸದ್ಯ ಇರುವುದು ಅರ್ಜಿದಾರರ ಕೇಸ್ ಮಾತ್ರ ಎಂದರು.
ಮಹಿಳೆಯ ಸ್ಥಿತಿಗೆ ಇದೇ ವೇಳೆ ಮರುಕ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಮಗುವಿಗೆ ಜೀವನಾಂಶವನ್ನು ಪಡೆಯಬಹುದು, ಆದರೆ ಲಿವ್-ಇನ್ ಸಂಬಂಧದ ಸ್ಥಗಿತವು ಕ್ರಿಮಿನಲ್ ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂದಿದ್ದಾರೆ. "ಅಕ್ರಮ ಸಂಬಂಧವಿರಬಹುದು, ಆದರೆ ಅಂತಹ ಸಂಬಂಧದಿಂದ ಜನಿಸಿದ ಮಗು ಅಕ್ರಮವಾಗಿರಲು ಸಾಧ್ಯವಿಲ್ಲ. ಮದುವೆ ಆಗಿದ್ದರೆ, ಆಕೆಯ ಹಕ್ಕುಗಳು ಉತ್ತಮವಾಗಿರುತ್ತಿದ್ದವು" ಎಂದರು. ಮಧ್ಯಸ್ಥಿಕೆಯ ಮೂಲಕ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳುವಂತೆಯೂ ನ್ಯಾಯಾಲಯವು ಕಕ್ಷಿದಾರರಿಗೆ ಸಲಹೆ ನೀಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ