'ಇದು ಅಹಂಕಾರದ ಹೋರಾಟ': 90 ವರ್ಷದ ವೃದ್ಧೆಗೆ 20 ವರ್ಷ ಕಾಯುವಂತೆ ಹೇಳಿದ ಬಾಂಬೆ ಹೈಕೋರ್ಟ್!

Published : Apr 29, 2026, 04:22 PM IST
Bombay high COurt

ಸಾರಾಂಶ

ವೈಯಕ್ತಿಕ ಪ್ರತಿಷ್ಠೆಗಾಗಿ 90 ವರ್ಷದ ವೃದ್ಧೆಯೊಬ್ಬರು ಹೂಡಿದ್ದ 20 ಕೋಟಿ ರೂ. ಮಾನನಷ್ಟ ಮೊಕದ್ದಮೆಯಿಂದ ಬಾಂಬೆ ಹೈಕೋರ್ಟ್ ಅಸಮಾಧಾನಗೊಂಡಿದೆ. ನ್ಯಾಯಾಂಗ ವ್ಯವಸ್ಥೆಯ ಸಮಯವನ್ನು ವ್ಯರ್ಥ ಮಾಡುವ ಇಂತಹ ಪ್ರಕರಣಗಳಿಂದಾಗಿ, ನ್ಯಾಯಾಲಯವು ವಿಚಾರಣೆಯನ್ನು 20 ವರ್ಷಗಳ ಕಾಲ ಮುಂದೂಡಿದೆ.

ಮುಂಬೈ (ಏ.29): ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾವಿರಾರು ಗಂಭೀರ ಪ್ರಕರಣಗಳು ಬಾಕಿ ಇರುವಾಗ, ವೈಯಕ್ತಿಕ ಪ್ರತಿಷ್ಠೆಗಾಗಿ ದಾಖಲಾದ ಪ್ರಕರಣವೊಂದರ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಕಿಡಿಕಾರಿದೆ. 90 ವರ್ಷದ ವೃದ್ಧೆಯೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಮುಂದಿನ 20 ವರ್ಷಗಳ ಕಾಲ ಮುಂದೂಡಿರುವ ನ್ಯಾಯಾಲಯ, "2046ರ ನಂತರ ಬನ್ನಿ" ಎಂದು ಖಡಕ್ ಆದೇಶ ನೀಡಿದೆ.

ಈ ವಿಲಕ್ಷಣ ಕಾನೂನು ಸಮರ 2017ರಲ್ಲಿ ಆರಂಭವಾಗಿತ್ತು. ತಾರಿಣಿಬೇನ್ (90) ಮತ್ತು ಧ್ವನಿ ದೇಸಾಯಿ (57) ಎಂಬುವವರು ಕಿಲ್ಕಿಲ್‌ರಾಜ್ ಭನ್ಸಾಲಿ ಮತ್ತು ಇತರರ ವಿರುದ್ಧ ಈ ಮೊಕದ್ದಮೆ ಹೂಡಿದ್ದರು. 2015ರಲ್ಲಿ 'ಶ್ಯಾಮ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ'ಯ ವಾರ್ಷಿಕ ಮಹಾಸಭೆಯಲ್ಲಿ ನಡೆದ ಕೆಲವು ಘಟನೆಗಳಿಂದ ನಮಗೆ ಮಾನಸಿಕ ಕಿರುಕುಳ ಮತ್ತು ತೊಂದರೆಯಾಗಿದೆ ಎಂದು ಆರೋಪಿಸಿದ್ದ ವೃದ್ಧೆ, ಇದಕ್ಕಾಗಿ ಬರೊಬ್ಬರಿ 20 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದರು.

ನ್ಯಾಯಾಧೀಶರ ತೀವ್ರ ಆಕ್ರೋಶ

ಈ ಪ್ರಕರಣವನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿತೇಂದ್ರ ಜೈನ್ ಅವರಿದ್ದ ಏಕಸದಸ್ಯ ಪೀಠವು ಅತ್ಯಂತ ಕಠಿಣವಾದ ಅವಲೋಕನಗಳನ್ನು ಮಾಡಿದೆ: 'ತಮ್ಮ ಜೀವನದ ಸಂಧ್ಯಾಕಾಲದಲ್ಲಿರುವ ದೂರುದಾರರ ನಡುವಿನ ಈ ಅಹಂಕಾರದ ಹೋರಾಟವು ನ್ಯಾಯಾಂಗ ವ್ಯವಸ್ಥೆಯನ್ನೇ ಜಾಮ್ ಮಾಡುತ್ತಿದೆ. ಇಂತಹ ಪ್ರಕರಣಗಳಿಂದಾಗಿ ನಿಜವಾಗಿಯೂ ಆದ್ಯತೆ ಬೇಕಿರುವ ಗಂಭೀರ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ನ್ಯಾಯಾಲಯಕ್ಕೆ ಸಾಧ್ಯವಾಗುತ್ತಿಲ್ಲ' ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು.

ವೃದ್ಧೆಯು ಕೇವಲ 'ಸೂಪರ್ ಸೀನಿಯರ್ ಸಿಟಿಜನ್' ಎಂಬ ಕಾರಣಕ್ಕೆ ಈ ಪ್ರಕರಣಕ್ಕೆ ಆದ್ಯತೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಸಂಧಾನಕ್ಕೂ ಒಪ್ಪದ ವೃದ್ಧೆ

ಈ ಹಿಂದೆ ನ್ಯಾಯಾಲಯವು ಈ ವಿವಾದವನ್ನು ಪರಸ್ಪರ ಕ್ಷಮೆ ಕೇಳುವ ಮೂಲಕ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿತ್ತು. ಆದರೆ, 90 ವರ್ಷದ ತಾರಿಣಿಬೇನ್ ಅವರು ಮಾತ್ರ ಮಾನನಷ್ಟ ಮೊಕದ್ದಮೆಯನ್ನು ಮುಂದುವರಿಸಲೇಬೇಕು ಎಂದು ಪಟ್ಟು ಹಿಡಿದಿದ್ದರು. ಈ ಹಠಮಾರಿತನವೇ ನ್ಯಾಯಾಲಯದ ಆಕ್ರೋಶಕ್ಕೆ ಕಾರಣವಾಯಿತು.

ನ್ಯಾಯಮೂರ್ತಿ ಜೈನ್ ಅವರು ತಮ್ಮ ಆದೇಶದಲ್ಲಿ, "ನಾನು ಈ ಬಗ್ಗೆ ಹೆಚ್ಚೇನೂ ಹೇಳಲು ಬಯಸುವುದಿಲ್ಲ. ಆದರೆ ಈ ಪ್ರಕರಣವನ್ನು ಮುಂದಿನ 20 ವರ್ಷಗಳವರೆಗೆ ವಿಚಾರಣೆಗೆ ಎತ್ತಿಕೊಳ್ಳಬಾರದು. 2046ರ ನಂತರದ ದಿನಾಂಕವೊಂದಕ್ಕೆ ಇದನ್ನು ಪಟ್ಟಿ ಮಾಡಿ," ಎಂದು ಆದೇಶಿಸಿದರು.

ಈ ಪ್ರಕರಣವು ಈ ಹಿಂದೆಯೂ ಅನೇಕ ಬಾರಿ ಮುಂದೂಡಲ್ಪಟ್ಟಿತ್ತು. 2019 ರಲ್ಲಿ ಸಾಕ್ಷಿಗಳ ಪಟ್ಟಿ ಸಲ್ಲಿಸಲು ಸಮಯ ನೀಡಲಾಗಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಮತ್ತೊಂದು ಪೀಠವು, "ಮುಂದಿನ ಬಾರಿ ವಕೀಲರು ಹಾಜರಾಗದಿದ್ದರೆ ಪ್ರಕರಣವನ್ನೇ ವಜಾಗೊಳಿಸಲಾಗುವುದು" ಎಂದು ಎಚ್ಚರಿಕೆ ನೀಡಿತ್ತು. ಆದರೂ ವಿವಾದ ಬಗೆಹರಿಯದ ಕಾರಣ ಈಗ ಹೈಕೋರ್ಟ್ ಈ ವಿಚಿತ್ರ ಆದೇಶ ನೀಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದಲ್ಲಿ ನೆಮ್ಮದಿಯ ನಿವೃತ್ತ ಜೀವನಕ್ಕೆ ಬೇಕು 40 ಕೋಟಿ ರೂಪಾಯಿ! ಸ್ಟಾರ್ಟ್ಅಪ್ ಸಂಸ್ಥಾಪಕನ ಲೆಕ್ಕಾಚಾರಕ್ಕೆ ಬೆಚ್ಚಿಬಿದ್ದ ನೆಟ್ಟಿಗರು
ಬೀಚ್‌ನಲ್ಲಿ ಶವವಾಗಿ ಪತ್ತೆಯಾದ 22ರ ಫಾತಿಮಾ ಕೇಸ್‌ಗೆ ಟ್ವಿಸ್ಟ್, ರೈಲಿಗೆ ತಲೆಕೊಡಲು ಹೋದ ಪತಿ ಅರೆಸ್ಟ್