ತೆಲಂಗಾಣ ಹೈಕೋರ್ಟ್‌ನ ಆದೇಶವನ್ನು ಕೆಸಿಆರ್ ಸರ್ಕಾರ ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ. ಸರ್ಕಾರದ ವತಿಯಿಂದ ಗಣರಾಜ್ಯೋತ್ಸವ ಸಂಭ್ರಮ ಆಚರಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ, ಕೆಸಿಆರ್ ಇದಕ್ಕೆ ಕ್ಯಾರೇ ಎನ್ನಲಿಲ್ಲ.
ಹೈದರಾಬಾದ್ (ಜ.26): ತೆಲಂಗಾಣದಲ್ಲಿ ಗಣರಾಜ್ಯೋತ್ಸವದಂದು ರಾಜ್ಯ ಸರ್ಕಾರ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿದ ಪ್ರಕರಣ ಮುನ್ನೆಲೆಗೆ ಬಂದಿದೆ. ತೆಲಂಗಾಣದಲ್ಲಿ ಸತತ ಎರಡನೇ ವರ್ಷವೂ ಗಣರಾಜ್ಯೋತ್ಸವದ ಸಾರ್ವಜನಿಕ ಆಚರಣೆ ಇರಲಿಲ್ಲ. ರಾಜಭವನದಲ್ಲಿ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ರಾಷ್ಟ್ರಧ್ವಜವನ್ನು ಹಾರಿಸಿದರು. ಆದರೆ ಈ ವೇಳೆ ಸಿಎಂ ಕೆ.ಚಂದ್ರಶೇಖರ್ ರಾವ್ ಉಪಸ್ಥಿತರಿರಲಿಲ್ಲ. ಸೈನಿಕ ಶಾಲೆಯ ಶಂಕುಸ್ಥಾಪನೆಯ ಕಾರಣ ನೀಡಿ ಅವರು ಸಮಾರಂಭಕ್ಕೆ ಗೈರಾಗಿದ್ದರು. ಕೊರೋನಾ ವೈರಸ್‌ನ ಕಾರಣ ನೀಡಿ ತೆಲಂಗಾಣ ಸರ್ಕಾರವು ಸತತ 2ನೇ ವರ್ಷ ರಾಜಭನವದಲ್ಲಿಯೇ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡುವಂತೆ ಮನವಿ ಮಾಡಿತ್ತು. ಆದರೆ, ಸರ್ಕಾರದ ಈ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಬುಧವಾರ ವಿಚಾರಣೆ ನಡೆಸಿದ್ದ ತೆಲಂಗಾಣ ಹೈಕೋರ್ಟ್, ಸೂಕ್ತ ಸ್ಥಳದಲ್ಲಿ ಸೂಕ್ತ ರೀತಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ ಆಚರಣೆ ಮಾಡುವುದು ಮಾತ್ರವಲ್ಲ ಪರೇಡ್‌ಅನ್ನು ಆಯೋಜನೆ ಮಾಡುವಂತೆ ಸೂಚಿಸಿತ್ತು. ಕೋರ್ಟ್‌ನ ಸ್ಪಷ್ಟ ಆದೇಶವಿದ್ದರೂ ತೆಲಂಗಾಣ ಸರ್ಕಾರ ಮಾತ್ರ ಸಿಕಂದರಾಬಾದ್‌ನಲ್ಲಿ ಗಣರಾಜ್ಯೋತ್ಸವ ಸಂಭ್ರಮವನ್ನು ಆಚರಿಸದೇ ರಾಜಭವನದಲ್ಲಿಯೇ ಈ ವ್ಯವಸ್ಥೆ ಮಾಡುವಂತೆ ಸೂಚಿಸಿತ್ತು.
ರಾಜಭವನದಲ್ಲಿ ಕಾರ್ಯಕ್ರಮ ನಡೆದರೂ, ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಗೈರಾಗಿದ್ದಕ್ಕೆ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೆಲಂಗಾಣದಲ್ಲಿ ಮುಖ್ಯಮಂತ್ರಿಯೊಬ್ಬರು ದೇಶದ ಸಂವಿಧಾನಕ್ಕೆ ಗೌರವ ನೀಡಲಿಲ್ಲ ಎನ್ನುವುದು ಇತಿಹಾಸದಲ್ಲಿ ದಾಖಲಾದಂತಾಗಿದೆ ಎಂದು ಅವರು ಹೇಳಿದ್ದಾರೆ.
ತೆಲಂಗಾಣ ಗಣರಾಜ್ಯೋತ್ಸವದ ಚಟುವಟಿಕೆಯನ್ನು ಕೀಳಾಗಿ ಕಂಡಿದೆ. ಇಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆದಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ವಿರುದ್ಧವಾಗಿ ಮುಖ್ಯಮಂತ್ರಿಗಳು ಯಾವುದೇ ಸಾರ್ವಜನಿಕ ಕಾರ್ಯಕ್ರಮ ಮಾಡಿಲ್ಲ. ರಾಜಭವನದಲ್ಲಿ ನಾನು ಮಾತ್ರವೇ ಧ್ವಜಾರೋಹಣ ಮಾಡಬೇಕು ಎಂದು ಸಿಎಂ ಬಯಸಿದ್ದರು. ಸಾರ್ವಜನಿಕರು ಇದರಲ್ಲಿ ಭಾಗಿಯಾಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ತಮಿಳಿಸೈ ಆರೋಪಿಸಿದ್ದಾರೆ.
ರಾಜಭವನದಲ್ಲಿ ಕಾರ್ಯಕ್ರಮ ನಡೆದರೂ, ಕನಿಷ್ಠ ಮುಖ್ಯಮಂತ್ರಿ ಸಮಾರಂಭಕ್ಕೆ ಆಗಮಿಸಬಹುದು ಎಂದು ನಿರೀಕ್ಷೆ ಮಾಡಿದ್ದೆ. ಏಕೆಂದರೆ ಈ ಬಾರಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಎರಡು ತಿಂಗಳ ಹಿಂದೆಯೇ ಪತ್ರ ಬರೆದಿದ್ದೆ. ಆದರೆ ಇದಕ್ಕೆ ಕೆಸಿಆರ್ ಅವರಿಂದ ಯಾವುದೇ ಉತ್ತರ ಬಂದಿರಲಿಲ್ಲ. ಎರಡು ದಿನಗಳ ಹಿಂದೆಯಷ್ಟೇ ರಾಜಭವನದಲ್ಲಿ ಕಾರ್ಯಕ್ರಮ ನಡೆಸಬೇಕು ಎಂದು ಪತ್ರ ಬರೆದಿದ್ದರು. ಆ ಪತ್ರದಲ್ಲಿ ಕೂಡ ಅವರು ನಾನು ಈ ಕಾರ್ಯಕ್ರಮಕ್ಕೆ ಹಾಜರಾಗುತ್ತೇನೆ ಎಂದು ಎಲ್ಲೂ ಹೇಳಿರಲಿಲ್ಲ. ಕೆಸಿಆರ್ ಅವರ ವರ್ತನೆಯನ್ನು ಜನ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
'ಗಣರಾಜ್ಯೋತ್ಸವ ಆಚರಣೆ ನಡೆಸಿ..' ಕೆಸಿಆರ್ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ನೀಡಿದ ತೆಲಂಗಾಣ ಹೈಕೋರ್ಟ್!
ರಾಜಭವನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ತಮಿಳಿಸೈ ಸುಂದರರಾಜನ್ ಅವರು ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿನ ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತರಚನೆಕಾರ ಚಂದ್ರ ಬೋಸ್ ಅವರನ್ನು ಸನ್ಮಾನಿಸಿದರು. ಈ ಹಾಡು ಇತ್ತೀಚೆಗೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಈ ಹಾಡು ಅದೇ ತಿಂಗಳಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿತ್ತು.
Assembly election: ಕಾಂಗ್ರೆಸ್ ಸೋಲಿಸಲು ತೆಲಂಗಾಣ ಸಿಎಂ 500 ಆಫರ್: ಖೆಡ್ಡಾಕ್ಕೆ ಬಿದ್ರಾ ಜಮೀರ್ ಅಹಮದ್
ಸಿಎಂ ಕೆ.ಚಂದ್ರಶೇಖರ್ ರಾವ್ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸದೇ, ಸಿಕಂದರಾಬಾದ್‌ನ ವೀರೂಲ ಸೈನಿಕ ಸ್ಮಾರಕ ಮೈದಾನದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಎರಡೂ ಸಮಾರಂಭಗಳು ಏಕಕಾಲದಲ್ಲಿ ನಡೆದಿವೆ. ಇತ್ತೀಚಿನ ದಿನಗಳಲ್ಲಿ ತೆಲಂಗಾಣ ಸರ್ಕಾರ ಮತ್ತು ರಾಜ್ಯಪಾಲ ತಮಿಳಿಸೈ ಸುಂದರರಾಜನ್ ನಡುವೆ ಸಾರ್ವಜನಿಕವಾಗಿಯೇ ಜಗಳ ನಡೆಯುತ್ತಿದೆ. ಇದರಿಂದಾಗಿ ಗಣರಾಜ್ಯೋತ್ಸವದಂದು ರಾಜ್ಯಪಾಲರ ಭಾಷಣವನ್ನೂ ಕೂಡ ಸರ್ಕಾರ ಕಳಿಸಿರಲಿಲ್ಲ. ಈ ಬಾರಿಯ ಬಜೆಟ್ ಅಧಿವೇಶನದಲ್ಲೂ ರಾಜ್ಯಪಾಲರು ಸದನಗಳನ್ನು ಉದ್ದೇಶಿಸಿ ಮಾತನಾಡುವುದಿಲ್ಲ.