
ತಮಿಳುನಾಡಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬಹುಮತದ ಕೊರತೆ ಇದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಇಲ್ಲದೆ ವಿಜಯ್ ಹೇಗೆ ಸಿಎಂ ಆಗ್ತಾರೆ ಎಂಬ ಚರ್ಚೆ ಜೋರಾಗಿದೆ. ಆದರೆ, 2018ರಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪನವರು ಬಳಸಿದ್ದ ಒಂದು ಫಾರ್ಮುಲಾ ಈಗ ವಿಜಯ್‌ಗೆ ದಾರಿ ದೀಪವಾಗಬಹುದು.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷ ಅತಿದೊಡ್ಡ ಪಕ್ಷವಾಗಿ ಗೆದ್ದಿದ್ದರೂ, ಸರ್ಕಾರ ರಚಿಸಲು ಪರದಾಡುತ್ತಿದೆ. ಚೆನ್ನೈನಿಂದ ದೆಹಲಿವರೆಗಿನ ರಾಜಕೀಯ ವಲಯದಲ್ಲಿ ಈಗ ಇದೇ ಬಿಸಿಬಿಸಿ ಚರ್ಚೆ. ಬಹುಮತಕ್ಕೆ ಬೇಕಾದ ಸಂಖ್ಯಾಬಲ ಇಲ್ಲದೆ ವಿಜಯ್ ಹೇಗೆ ತಾನೇ ಮುಖ್ಯಮಂತ್ರಿ ಆಗುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಕಳೆದ ಕೆಲ ದಿನಗಳಲ್ಲಿ ವಿಜಯ್ ಎರಡು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಆದರೆ ಎರಡೂ ಬಾರಿಯೂ ರಾಜ್ಯಪಾಲರು, 'ಬಹುಮತ ಸಾಬೀತುಪಡಿಸುವ ದಾಖಲೆ ತನ್ನಿ, ಆಗಲೇ ಸರ್ಕಾರ ರಚನೆಗೆ ಅವಕಾಶ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಬೇಕು. ಆದರೆ ಕಾಂಗ್ರೆಸ್ ಬೆಂಬಲದೊಂದಿಗೆ ವಿಜಯ್ ಬಣದಲ್ಲಿ ಸದ್ಯ 112 ಶಾಸಕರಿದ್ದಾರೆ. ಅಂದರೆ, ಇನ್ನೂ 6 ಶಾಸಕರ ಕೊರತೆ ಇದೆ. ಹಾಗಾದರೆ, ವಿಜಯ್ ಅವರ ಮುಖ್ಯಮಂತ್ರಿ ಕನಸು ಭಗ್ನವಾಗಲಿದೆಯೇ? ಖಂಡಿತ ಇಲ್ಲ ಎನ್ನುತ್ತಾರೆ ರಾಜಕೀಯ ತಜ್ಞರು. ಅದಕ್ಕೆ ಅವರು ನಮ್ಮ ಕರ್ನಾಟಕದ್ದೇ ಒಂದು ಉದಾಹರಣೆ ನೀಡುತ್ತಾರೆ.
ಕರ್ನಾಟಕದಲ್ಲಿ ಆಗಿದ್ದೇನು?
ರಾಜಕೀಯ ವಿಶ್ಲೇಷಕರ ಪ್ರಕಾರ, 2018ರ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಇಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆಗ ಬಿಜೆಪಿ 104 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 80 ಮತ್ತು ಜೆಡಿಎಸ್ 37 ಸ್ಥಾನಗಳನ್ನು ಗೆದ್ದಿದ್ದವು. ಅಂದಿನ ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ, ಅತಿದೊಡ್ಡ ಪಕ್ಷ ಎಂಬ ನಿಯಮದ ಅನ್ವಯ ಬಿಜೆಪಿಗೆ ಸರ್ಕಾರ ರಚಿಸಲು ಮೊದಲು ಆಹ್ವಾನ ನೀಡಿದ್ದರು.
ರಾಜ್ಯಪಾಲರ ಆಹ್ವಾನದ ಮೇರೆಗೆ, ಬಿಜೆಪಿಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಂತರ ಸುಪ್ರೀಂ ಕೋರ್ಟ್ ಆದೇಶದಂತೆ, ಅವರಿಗೆ ಬಹುಮತ ಸಾಬೀತುಪಡಿಸಲು ಸಮಯಾವಕಾಶ ನೀಡಲಾಗಿತ್ತು. ಆದರೆ, ಸದನದಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸಲು ಯಡಿಯೂರಪ್ಪ ವಿಫಲರಾದರು. ಹೀಗಾಗಿ, ಕೇವಲ ಮೂರೇ ದಿನಕ್ಕೆ ಅವರ ಸರ್ಕಾರ ಪತನಗೊಂಡಿತು. ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದವು.
ಈಗ ತಮಿಳುನಾಡಿನಲ್ಲೂ ಇದೇ ಮಾದರಿಯನ್ನು ಅನುಸರಿಸಬಹುದು. ರಾಜ್ಯಪಾಲರು ಅತಿದೊಡ್ಡ ಪಕ್ಷವಾಗಿರುವ ಟಿವಿಕೆಗೆ ಸರ್ಕಾರ ರಚಿಸಲು ಆಹ್ವಾನ ನೀಡಬಹುದು. ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ನಂತರ ಫ್ಲೋರ್ ಟೆಸ್ಟ್ ಎದುರಿಸಬಹುದು. ಒಂದು ವೇಳೆ ಅವರು ಬಹುಮತ ಸಾಬೀತುಪಡಿಸಲು ವಿಫಲರಾದರೆ, ಆಗ ಬೇರೆ ಪಕ್ಷಗಳಿಗೆ ಸರ್ಕಾರ ರಚಿಸುವ ಅವಕಾಶ ಸಿಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ