
ಇಸ್ಲಾಮಾಬಾದ್(ಮಾ.30): 26/11ರ ದಾಳಿ ನೆನಪಿಸಿಕೊಂಡರೆ ಮೈ ಜುಮ್ಮೆನಿಸುತ್ತದೆ. ಪಾಕಿಸ್ತಾನದಿಂದ ಸಮುದ್ರ ಮಾರ್ಗವಾಗಿ ಬಂದ ಉಗ್ರರು ಮುಂಬೈ ಮಹಾನಗರಿಯಲ್ಲಿ ನರಮೇಧ ನಡೆಸಿದ್ದರು. ಸಿಕ್ಕ ಸಿಕ್ಕವರೆನಲ್ಲಾ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ 10 ಉಗ್ರರು ದಾಳಿಗೆ 164 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಸೆರೆ ಸಿಕ್ಕ ಉಗ್ರ ಅಜ್ಮಲ್ ಕಸಾಬ್‌ನಿಂದ ಪಾಕಿಸ್ತಾನದ ಬಣ್ಣ ಬಯಲಾಗಿತ್ತು. ಇದೀಗ ಅಜ್ಮಲ್ ಕಸಬ್ ಪಾಕಿಸ್ತಾನದ ಪ್ರಜೆ ಎಂದು ಮತ್ತೆ ಪಾಕಿಸ್ತಾನ ಸತ್ಯ ಒಪ್ಪಿಕೊಂಡಿದೆ.
ಅಜ್ಮಲ್ ಕಸಬ್ ನಮ್ಮ ದೇಶವನು. ಆತನ ಫರೀದಾಕೋಟ್ ವಿಳಾಸವನ್ನು ಭಾರತಕ್ಕೆ ನೀಡಿದ್ದು ಅಂದಿನ ಪ್ರಧಾನಿ ನವಾಜ್ ಷರೀಫ್ ಎಂದು ಹಾಲಿ ಗೃಹ ಸಚಿವ, ಇಮ್ರಾನ್ ಖಾನ್ ಆಪ್ತ ಶೇಕ್ ರಶೀದ್ ಹೇಳಿದ್ದಾರೆ. ದಾಳಿ ಕುರಿತು ತನಿಖೆ ವೇಳೆ ನವಾಜ್ ಷರೀಫ್ ಕಸಬ್ ವಿಳಾಸವನ್ನು ಭಾರತಕ್ಕೆ ನೀಡಿದ್ದರು. ಈ ಮೂಲಕ ಕಸಬ್ ಪಾಕಿಸ್ತಾನದ ಪ್ರಜೆ ಎಂದು ಒಪ್ಪಿಕೊಂಡಿದ್ದರು. ಈ ಘಟನೆಯನ್ನು ಶೇಕ್ ರಶೀದ್ ವಿವರಿಸಿದ್ದಾರೆ. ಇಷ್ಟೇ ಅಲ್ಲ, ಕಸಬ್ ನಮ್ಮವನು ಎಂದಿದ್ದಾರೆ.
26/11 Attack: ಕಸಬ್ ಫೋನನ್ನು ಆಗಿನ ಪೊಲೀಸ್ ಕಮೀಷನರ್ ನಾಶಗೊಳಿಸಿದರು: ನಿವೃತ್ತ ಅಧಿಕಾರಿಯ ಆರೋಪ
ಇಮ್ರಾನ್ ಖಾನ್ ಸರ್ಕಾರ ಪತನದ ಹಾದಿಯಲ್ಲಿದೆ. ಇದರ ನಡುವೆ ಸತತ ಸಬೆಗಳನ್ನು ಮಾಡಲಾಗುತ್ತಿದೆ. ಹೀಗೆ ಆಯೋಜಿಸಿದ ಸಭೆಯಲ್ಲಿ ಮುಂದಿನ ಚುನಾವಣೆ ಕುರಿತು ಚರ್ಚೆ ನಡೆಸಲಾಗಿದೆ. ಇದರ ನಡುವೆ ಉಗ್ರ ಕಸಾಬ್ ಹೆಸರು ಪ್ರಸ್ತಾಪವಾಗಿದೆ. ಶೇಕ್ ರಶೀದ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ನವಾಜ್ ಷರೀಫ್ ಕಸಬ್‌ನ ಪಾಕಿಸ್ತಾನ ವಿಳಾಸ ನೀಡಿದ ಬಳಿಕ ಇದು ತಪ್ಪಾಗಿದ್ದರೆ ನನಗೆ ಶಿಕ್ಷೆ ನೀಡಿ ಎಂದಿದ್ದರು ಎಂದು ಶೇಕ್ ರಶೀದ್ ಹೇಳಿದ್ದಾರೆ.
ಶೇಕ್ ರಶೀದ್ ಮತ್ತೆ ಸತ್ಯ ಒಪ್ಪಿಕೊಂಡಿರುವುದು ಭಾರತದ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮುಜುಗರ ತಂದಿದೆ. ಕಾರಣ ಮುಂಬೈ ದಾಳಿ ವೇಳೆ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ಇದು ಆರ್‌ಎಸ್ಎಸ್ ಹಾಗೂ ಬಿಜೆಪಿ ಕೈವಾಡ ಎಂದಿತ್ತು. ಇನ್ನೊಂದು ಹೆಜ್ಜೆ ಮುಂದೆ ಹೋದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಇದು ಆರ್‌ಎಸ್ಎಸ್ ಕಳುಹಿಸಿದ ಉಗ್ರರು ಎಂದಿದ್ದು ಮಾತ್ರವಲ್ಲ, ಈ ಕುರಿತು ಪುಸ್ತಕವನ್ನೂ ಬಿಡುಗಡೆ ಮಾಡಿದ್ದರು.
ಉಗ್ರ ಕಸಬ್‌ಗೆ ಬೆಂಗಳೂರು ವಿಳಾಸ, ಹಿಂದು ಹೆಸರು!
ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಸ್ಲಿಮ್ ನಾಯಕರು, ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮುಂಬೈ ದಾಳಿಯ ಹೊಣೆಯನ್ನು ಆರ್‌ಎಸ್ಎಸ್ ಮೇಲೆ ಹೊರಿಸಲಾಗಿತ್ತು. ಆರ್‌ಎಸ್ಎಸ್ ಸಂಘಟನೆ ತರಭೇತಿ ನೀಡಿದ ಉಗ್ರರು, ಕೇಸರಿ ಭಯೋತ್ಪಾದನೆ ಎಂದು ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವರು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಆದರೆ ವಿಚಾರಣೆಯಲ್ಲಿ ಪಾಕಿಸ್ತಾನ ಲಷ್ಕರ್ ಇ ತೈಬಾ ಉಗ್ರ ಸಂಘಟನೆ ಹಾಗೂ ಪಾಕಿಸ್ತಾನ ಕೈವಾಡ ಸಾಬೀತಾಗಿತ್ತು. ಬಳಿಕ ಈ ವಿಚಾರವನ್ನು ಬಹಿರಂಗವಾಗಿ ಮಾತನಾಡದ ದಿಗ್ವಿಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಇದೀಗ ಮತ್ತೆ ಕಪಾಳಮೋಕ್ಷವಾಗಿದೆ. ಶೇಕ್ ರಶೀದ್ ಅಂದು ನವಾಜ್ ಷರೀಫ್ ಸರ್ಕಾರದಲ್ಲಿ ಪ್ರಮುಖ ನಾಯಕರಾಗಿದ್ದರು.
ಈ ದಾಳಿಯಲ್ಲಿ ಸೆರೆ ಸಿಕ್ಕ ಉಗ್ರ ಅಜ್ಮಲ್ ಕಸಬ್‌ನನ್ನು ನವೆಂಬರ್ 21, 2012ರಲ್ಲಿ ನೇಣಿಗೆ ಏರಿಸಲಾಗಿತ್ತು. ಕಸಬ್ ನೇಣಿಗೆ ಹಾಕುವ ಕುರಿತು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪಾಕಿಸ್ತಾನ ಸರ್ಕಾರಕ್ಕೆ ಪತ್ರದ ಮೂಲಕ ಮಾಹಿತಿ ನೀಡಿತ್ತು. ಆದರೆ ಪಾಕಿಸ್ತಾನ ಸರ್ಕಾರ ಈ ಪತ್ರವನ್ನು ಸ್ವೀಕರಿಸಲು ನಿರಾಕರಿಸಿತು. ಭಾರತೀಯ ರಾಯಭಾರ ಕಚೇರಿ ಫ್ಯಾಕ್ಸ್ ಮೂಲಕ ಪತ್ರ ರವಾನಿಸಿ ಶಿಕ್ಷೆ ವಿಧಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ