ಕಾಶ್ಮೀರದಲ್ಲಿ ನಡೆಯುತ್ತಿರುವ ಅಭಿವೃದ್ಧಿಯನ್ನು ಕಂಡು ಪಾಕ್ ಆಕ್ರಮಿತ ಕಾಶ್ಮೀರದ ಜನರೇ ಇತ್ತ ಬರಲಿದ್ದಾರೆ’ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾ ತಿರುಗೇಟು ನೀಡಿ ವಿವಾದ ಸೃಷ್ಟಿಸಿದ್ದಾರೆ
ಶ್ರೀನಗರ: ‘ಕಾಶ್ಮೀರದಲ್ಲಿ ನಡೆಯುತ್ತಿರುವ ಅಭಿವೃದ್ಧಿಯನ್ನು ಕಂಡು ಪಾಕ್ ಆಕ್ರಮಿತ ಕಾಶ್ಮೀರದ ಜನರೇ ಇತ್ತ ಬರಲಿದ್ದಾರೆ’ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾ ತಿರುಗೇಟು ನೀಡಿ ವಿವಾದ ಸೃಷ್ಟಿಸಿದ್ದಾರೆ. ‘ಪಾಕಿಸ್ತಾನವೇನೂ ಬಳೆ ತೊಟ್ಟಿಲ್ಲ, ಅದರ ಬಳಿ ಅಣುಬಾಂಬ್ ಇರುವುದನ್ನು ಮರೆಯಬೇಡಿ’ ಎಂದು ಫಾರೂಖ್ ಹೇಳಿದ್ದಾರೆ.
ಸೋಮವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ತಡೆಯಲು ಸಾಧ್ಯವಿಲ್ಲ. ಆದರೆ ನಾವು ಅವರ ಮೇಲೆ ಆಕ್ರಮಣ ಮಾಡುವ ಮೊದಲು ಅವರ ಬಳಿಯೂ ಅಣುಬಾಂಬ್‌ಗಳಿವೆ ಎಂಬುದನ್ನು ಮರೆಯಬಾರದು. ನಾವು ದಾಳಿ ಮಾಡಿದಾಗ ಪಾಕಿಸ್ತಾನ ಬಳೆ ತೊಟ್ಟು ಕೂರದೆ ಅಣುಬಾಂಬ್ ಪ್ರಯೋಗಿಸಿದರೆ ನಮ್ಮ ಪ್ರದೇಶ ಸರ್ವನಾಶವಾಗುತ್ತದೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು. ಫಾರೂಖ್ ಅಬ್ದುಲ್ಲಾ ಪ್ರಸ್ತುತ ಶ್ರೀನಗರದ ಸಂಸದರಾಗಿದ್ದು, ಈ ಬಾರಿ ತಮ್ಮ ಕ್ಷೇತ್ರವನ್ನು ಪುತ್ರ ಓಮರ್ ಅಬ್ದುಲ್ಲಾಗೆ ಬಿಟ್ಟುಕೊಟ್ಟಿದ್ದಾರೆ.
ಶ್ರೀರಾಮ ಹಿಂದುಗಳಿಗೆ ಮಾತ್ರವಲ್ಲ, ವಿಶ್ವಕ್ಕೆ ದೇವರು: ಫಾರೂಖ್ ಅಬ್ದುಲ್ಲಾ
ಕಸಬ್ ಕರ್ಕರೆ ಹತ್ಯೆ ಮಾಡಿಲ್ಲ: ಕಾಂಗ್ರೆಸ್ಸಿಗನ ಹೇಳಿಕೆಗೆ ತರೂರ್ ಬೆಂಬಲ
ನವದೆಹಲಿ: 2008ರಲ್ಲಿ 26/11 ಮುಂಬೈ ದಾಳಿ ವೇಳೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಬಲಿಯಾಗಿದ್ದು ಉಗ್ರ ಕಸಬ್ ಗುಂಡಿಗಲ್ಲ, ಬದಲಿಗೆ ಆರ್‌ಎಸ್‌ಎಸ್ ನಂಟಿನ ಪೊಲೀಸರಿಗೆ ಎಂಬ ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ನಾಯಕ ವಿಜಯ್ ವಡೆಟ್ಟಿವಾರ್ ಹೇಳಿಕೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲಿಸಿದ್ದಾರೆ.
ಸೋಮವಾರ ಮಾತನಾಡಿದ ಅವರು, ‘ಸಾರ್ವಜನಿಕವಾಗಿ ಚರ್ಚೆಯಲ್ಲಿರುವ ವಿಷಯದ ಕುರಿತು ವಿಧಾನಸಭೆಯ ವಿಪಕ್ಷ ನಾಯಕರು ಪ್ರಸ್ತಾಪಿಸಿದಾಗ ಆ ಕುರಿತು ತನಿಖೆ ನಡೆಸುವುದು ಅವಶ್ಯಕ. ಇದು ಅತ್ಯಂತ ಗಂಭೀರ ವಿಷಯ. ದೇಶದ ಜನರಿಗೆ ಸತ್ಯ ತಿಳಿಯುವ ಹಕ್ಕಿದೆ. ಏಕೆಂದರೆ ಮಾಜಿ ಐಜಿ ಎಸ್.ಎಂ. ಮುಶ್ರೀಫ್ ಅವರು ಕರ್ಕರೆ ದೇಹದಲ್ಲಿ ಹೊಕ್ಕ ಗುಂಡು ಪೊಲೀಸ್ ರಿವಾಲ್ವರ್‌ನಿಂದ ಸಿಡಿದಿತ್ತು ಎಂದಿದ್ದರು’ ಎಂದು ಹೇಳಿದ್ದಾರೆ.
ಕಾಶ್ಮೀರದ 7 ಪಕ್ಷಗಳ ಕೂಟಕ್ಕೆ ಫಾರೂಖ್ ಅಬ್ದುಲ್ಲಾ ಮುಖ್ಯಸ್ಥ!
ಇದೇ ವೇಳೆ, ‘ಉಗ್ರ ಕಸಬ್‌ಗೆ ಜೈಲಲ್ಲಿ ಬಿರಿಯಾನಿ ತಿನ್ನಿಸಲಾಗಿತ್ತು’ ಎಂಬ ಮುಂಬೈ ದಾಳಿ ಪ್ರಕರಣದಲ್ಲಿ ಸರ್ಕಾರಿ ವಕೀಲರಾಗಿದ್ದ ಮತ್ತು ಹಾಲಿ ಮುಂಬೈ ಮಧ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಉಜ್ವಲ್ ನಿಕ್ಕಂ ಹೇಳಿಕೆಯನ್ನೂ ತರೂರ್ ಕಟುವಾಗಿ ಟೀಕಿಸಿದ್ದಾರೆ. ‘ಅವರು (ಉಜ್ವಲ್ ನಿಕ್ಕಂ) ಈ ಸಮರ್ಥನೀಯವಲ್ಲದ ಸುಳ್ಳನ್ನು ಹೇಳಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತು. ಇದೀಗ ಅವರ ರಾಜಕೀಯ ಒಲವು ಕೂಡಾ ಬಹಿರಂಗವಾಗಿರುವುದರಿಂದ ಅವರ ಇಂಥ ನಿಲುವು ಅವರ ಇತರೆ ಯಾವುದಾದರೂ ನಿಲುವುಗಳ ಮೇಲೂ ಪ್ರಭಾವ ಬೀರಿದೆಯೇ ಎಂಬುದರ ಬಗ್ಗೆಯೂ ತನಿಖೆ ಆಗಬೇಕು ಎಂಬುದು ನಮ್ಮ ಆಗ್ರಹ’ ಎಂದು ತರೂರ್ ಹೇಳಿದ್ದಾರೆ.
ಪೂಂಛ್ ಉಗ್ರರ ಸುಳಿವಿತ್ತರೆ 20 ಲಕ್ಷ ರು. ಇನಾಮು
ಜಮ್ಮು: ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪೂಂಛ್‌ನಲ್ಲಿ ವಾಯುಪಡೆ ಯೋಧರ ಮೇಲೆ ದಾಳಿ ಮಾಡಿದ ಪಾಕಿಸ್ತಾನಿ ಉಗ್ರರ ರೇಖಾಚಿತ್ರವನ್ನು ಭದ್ರತಾ ಪಡೆ ಸೋಮವಾರ ಬಿಡುಗಡೆ ಮಾಡಿದ್ದು, ಅವರ ಸುಳಿವು ನೀಡಿದವರಿಗೆ 20 ಲಕ್ಷ ರು. ಬಹುಮಾನ ನೀಡುವುದಾಗಿ ಪ್ರಕಟಿಸಿದೆ. ಉಗ್ರರ ಪತ್ತೆಗೆ ಭದ್ರತಾ ಪಡೆ ಶೋಧ ಕಾರ್ಯ ಮುಂದುವರಿಸಿದ್ದು, ಅದರ ಭಾಗವಾಗಿ ರೇಖಾಚಿತ್ರ ಪ್ರಕಟಿಸಿ ಇನಾಮು ಘೋಷಿಸಿದೆ. ಶನಿವಾರ ಸಂಜೆ ಪೂಂಛ್‌ನ ಶಾಸಿತಾರ್ ಬಳಿ ಭಾರತೀಯ ವಾಯುಪಡೆಯ ಮೇಲೆ ಪಾಕಿಸ್ತಾನಿ ಉಗ್ರರು ಹೊಂಚು ದಾಳಿ ಮಾಡಿದ್ದು, ವಾಯುಪಡೆ ಯೋಧ ವಿಕ್ಕಿ ಪಹಾಡೆ ಹುತಾತ್ಮರಾಗಿದ್ದರು. ಇತರ ನಾಲ್ವರು ಯೋಧರು ಗಾಯಗೊಂಡಿದ್ದರು.