
ಚೆನ್ನೈ (ಆ.13): ‘ಶ್ರೀರಾಮನು ತನ್ನ ಪತ್ನಿ ಸೀತಾದೇವಿಯಿಂದ ಬೇರ್ಪಟ್ಟ ನಂತರ ಮಾನಸಿಕ ಸ್ಥಿಮಿತ (ಪ್ರಜ್ಞೆ) ಕಳೆದುಕೊಂಡಿದ್ದ’ ಎಂದು ತಮಿಳು ಕವಿ ವೈರಮುತ್ತು ಅವರು ಆಡಿದ ಮಾತುಗಳು ವಿವಾದಕ್ಕೀಡಾಗಿವೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಮ್ಮುಖದಲ್ಲೇ ಈ ಮಾತು ಹೇಳಿದ್ದಾರೆ. ಅವರ ಹೇಳಿಕೆಯನ್ನು ಬಿಜೆಪಿ ಹಾಗೂ ಹಿಂದು ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
‘ರಾಮಾಯಣ’ ಮಹಾಕಾವ್ಯದ ತಮಿಳು ಆವೃತ್ತಿಯನ್ನು ಬರೆದ ಪ್ರಾಚೀನ ಕವಿ ಕಂಬನ್ ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸಿದ ಸಭೆಯಲ್ಲಿ ಮಾತನಾಡಿದ ವೈರಮುತ್ತು, ‘ಸೀತೆಯಿಂದ ಬೇರ್ಪಟ್ಟ ನಂತರ, ರಾಮನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದೇ ತಿಳಿಯುತ್ತಿರಲಿಲ್ಲ. ಆತ ಪ್ರಜ್ಞೆಯನ್ನು ಕಳೆದುಕೊಂಡ. ಅಂತಹ ಸ್ಥಿತಿಯಲ್ಲಿ ಮಾಡಿದ ಅಪರಾಧಗಳನ್ನು ಈಗಿನ ಐಪಿಸಿ (ಭಾರತೀಯ ದಂಡ ಸಂಹಿತೆ) ಸೆಕ್ಷನ್ 84 ರ ಅಡಿಯಲ್ಲಿ ಅಪರಾಧಗಳೆಂದು ಪರಿಗಣಿಸುವುದಿಲ್ಲ. ತಮಿಳು ರಾಮಾಯಣ ಬರೆದ ಕಂಬನ್ ಅವರಿಗೆ ಈ ಕಾನೂನಿನ ಬಗ್ಗೆ ಅರವಿಲ್ಲದೇ ಇರಬಹುದು. ಆದರೆ ಅವರಿಗೆ ಸಮಾಜ ಮತ್ತು ಮಾನವ ಮನಸ್ಸು ಹೇಗಿದೆ ಎಂಬುದು ತಿಳಿದಿತ್ತು’ ಎಂದರು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಮಾಜಿ ಕೇಂದ್ರ ಸಚಿವ ಎಸ್. ಜಗದ್ರಕ್ಷಕನ್ ಈ ವೇಳೆ ಉಪಸ್ಥಿತರಿದ್ದರು. ಸುಗ್ರೀವನ ಜತೆ ಜಗಳ ಮಾಡಿಕೊಂಡಿದ್ದ ಕಿಷ್ಕಿಂದೆಯ ರಾಜ ವಾಲಿಯನ್ನು ರಾಮನು ಕೊಂದಿದ್ದನ್ನು ಉಲ್ಲೇಖಿಸಿ ಅವರು ಈ ಮಾತನ್ನು ಹೇಳಿದರು. ಈ ಸಾದೃಶ್ಯದಲ್ಲಿ ರಾಮನು ಹಿಂದಿನಿಂದ ಬಂದು ವಾಲಿಯನ್ನು ಕೊಲ್ಲುತ್ತಾನೆ. ಕೆಲವರು ಈ ರೀತಿ ಅವಿತುಕೊಂಡು ದಾಳಿ ಮಾಡಿದ್ದು ತಪ್ಪು ಎಂದು ವಾದಿಸುತ್ತಾರೆ.
ಬಿಜೆಪಿ ಗರಂ: ‘ಇಂತಹ ಹೇಳಿಕೆಗಳು ಸ್ವೀಕಾರಾರ್ಹವಲ್ಲ, ವೈರಮುತ್ತು ಅವರ ಹೇಳಿಕೆಗಳನ್ನು ಮುಖ್ಯಮಂತ್ರಿಗಳು ಒಪ್ಪುತ್ತಾರೆಯೇ?’ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಹೇಳಿದ್ದಾರೆ. ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಅವರು ವೈರಮುತ್ತು ಅವರನ್ನು ‘ಮೂರ್ಖ’ ಮತ್ತು ‘ಬುದ್ಧಿಹೀನ ವ್ಯಕ್ತಿ’ ಎಂದು ಕರೆದಿದ್ದಾರೆ.
ವೈರಮುತ್ತು ‘ಪುನರಾವರ್ತಿತ ಅಪರಾಧಿ’. ಈ ಹಿಂದೆ ಹಿಂದು ದೇವತೆ ಆಂಡಾಳ್ ಬಗ್ಗೆ ಆಡಿದ ನುಡಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದವು’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ