ತಮಿಳುನಾಡು ಹೆದ್ದಾರಿಯಲ್ಲೂ ಚಿತ್ರದುರ್ಗ ಮಾದರಿ ದುರಂತ, ಸರ್ಕಾರಿ ಬಸ್‌ ಪಂಚರ್‌ ಆಗಿ 9 ಮಂದಿ ಸಾವು!

Published : Dec 25, 2025, 11:14 AM IST
SETC Bus Accident on Chennai-Trichy Highway

ಸಾರಾಂಶ

ತಮಿಳುನಾಡಿನ ಕಡಲೂರು ಬಳಿ ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್‌ಇಟಿಸಿ ಬಸ್ಸಿನ ಟೈರ್ ಸ್ಫೋಟಗೊಂಡು ಭೀಕರ ಅಪಘಾತ ಸಂಭವಿಸಿದೆ. ಬಸ್ ಡಿವೈಡರ್ ದಾಟಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಮಗು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

ಚೆನ್ನೈ (ಡಿ.25): ರಾಜ್ಯದ ಚಿತ್ರದುರ್ಗದಲ್ಲಿ ಖಾಸಗಿ ಬಸ್‌ ದುರಂತ ವರ್ಷಾಂತ್ಯದ ಸಂಭ್ರಮವನನು ಮಂಕು ಮಾಡಿರುವ ಬೆನ್ನಲ್ಲಿಯೇ ಪಕ್ಕದ ರಾಜ್ಯ ತಮಿಳುನಾಡಿನಲ್ಲೂ ಇದೇ ರೀತಿಯ ದುರಂತ ಸಂಭವಿಸಿದ್ದು, 9 ಮಂದಿ ದಾರುಣವಾಗಗಿ ಸಾವು ಕಂಡಿದ್ದಾರೆ. ತಿರುಚಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ರಾಜ್ಯ ಎಕ್ಸ್‌ಪ್ರೆಸ್ ಸಾರಿಗೆ ನಿಗಮ (ಎಸ್‌ಇಟಿಸಿ) ಬಸ್ ಬುಧವಾರ ರಾತ್ರಿ ಕಡಲೂರು ಜಿಲ್ಲೆಯ ಎಳುತೂರ್ ಬಳಿ ಭೀಕರ ಅಪಘಾತಕ್ಕೀಡಾಗಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿ, 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಜನದಟ್ಟಣೆಯ ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಹಲವಾರು ಗಂಟೆಗಳ ಕಾಲ ಸಂಚಾರ ವ್ಯತ್ಯಯ ಉಂಟಾಯಿತು.

ಪೊಲೀಸರ ಪ್ರಕಾರ, ಎಳುತೂರ್ ಪ್ರದೇಶದ ಮೂಲಕ ಹಾದುಹೋಗುವಾಗ SETC ಬಸ್ಸಿನ ಮುಂಭಾಗದ ಟೈರ್ ಸಿಡಿದಿದ್ದು, ಇದರಿಂದಾಗಿ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಟೈರ್‌ ಪಂಚರ್‌ ಆದ ಬಳಿಕ ಡಿವೈಡರ್‌ಗೆ ಮೊದಲು ಬಸ್‌ ಢಿಕ್ಕಿ ಹೊಡೆದಿದೆ. ಬಳಿಕ ತಡೆಗೋಡೆಯನ್ನು ಭೇದಿಸಿ, ನಂತರ ಎದುರಿನ ಕ್ಯಾರೇಜ್‌ವೇಗೆ ದಾಟಿದೆ. ಅಲ್ಲಿ ಇನ್ನೊಂದು ದಿಕ್ಕಿನಿಂದ ಬರುತ್ತಿದ್ದ ಎರಡು ಕಾರುಗಳಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಕಾರ್‌ನಲ್ಲಿದ್ದ ಏಳು ಮಂದಿ ಸಾವು

ಅಪಘಾತದ ಪರಿಣಾಮವು ಭೀಕರವಾಗಿತ್ತು. ಒಂಬತ್ತು ಬಲಿಪಶುಗಳಲ್ಲಿ ಏಳು ಮಂದಿ ಎರಡು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದರು, ಎರಡೂ ಕಾರುಗಳು ಗುರುತಿಸಲಾಗದಷ್ಟು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದವು.

ಇನ್ನೂ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಗಾಯಾಳುಗಳಲ್ಲಿ ಇಬ್ಬರು ನಂತರ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ. ಮೃತರಲ್ಲಿ ನಾಲ್ವರು ಪುರುಷರು, ನಾಲ್ವರು ಮಹಿಳೆಯರು ಮತ್ತು ಒಂದು ಮಗು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರ ನಾಲ್ವರು ಜನರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪರಿಣಾಮದ ತೀವ್ರತೆಯಿಂದಾಗಿ, ಕೆಲವು ಬಲಿಪಶುಗಳ ಗುರುತು ಪತ್ತೆ ಆರಂಭದಲ್ಲಿ ವಿಳಂಬವಾಯಿತು.

ಹೆಚ್ಚಿನ ವಿವರಗಳ ಪ್ರಕಾರ, ಒಂದು ಕಾರಿನಲ್ಲಿ ಕರೂರಿನ ಆಭರಣ ಉದ್ಯಮಿ ರಾಜರಥಿನಂ (69), ಅವರ ಪತ್ನಿ ರಾಜೇಶ್ವರಿ (57) ಮತ್ತು ಅವರ ಚಾಲಕ ಜಯಕುಮಾರ್ (45) ಇದ್ದರು, ಅವರೆಲ್ಲರೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಎರಡನೇ ಕಾರಿನಲ್ಲಿ ಪುದುಕ್ಕೊಟ್ಟೈ ಜಿಲ್ಲೆಯ ಪಿಳ್ಳೈ ತಣ್ಣೀರ್ ಪಂಢಲ್ ಪ್ರದೇಶದ ನಿವಾಸಿಗಳಾದ ಮುಬಾರಕ್ ಮತ್ತು ತಾಜ್ ಬಿರ್ಕಾ ಇದ್ದರು.

ಮತ್ತೊಬ್ಬ ಬಲಿಪಶು ಸಿರಾಜುದ್ದೀನ್, ಕೆನಡಾಕ್ಕೆ ಪ್ರಯಾಣಿಸುತ್ತಿದ್ದ ಸಂಬಂಧಿಕರೊಬ್ಬರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟು ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿ, ಅವಶೇಷಗಳಿಂದ ಶವಗಳನ್ನು ಹೊರತೆಗೆದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು.

3 ಲಕ್ಷ ಪರಿಹಾರ ಘೋಷಿಸಿದ ಸ್ಟ್ಯಾಲಿನ್‌

ಈ ಅಪಘಾತದಿಂದಾಗಿ ರಸ್ತೆ ಮಧ್ಯಭಾಗ ಮತ್ತು ವಾಹನಗಳಿಗೆ ವ್ಯಾಪಕ ಹಾನಿಯಾಗಿದ್ದು, ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿದ್ದು, ಸಾಮಾನ್ಯ ಸಂಚಾರಕ್ಕೆ ಅವಕಾಶ ಸಿಗಲಿಲ್ಲ. ತಮಿಳುನಾಡಿನಾದ್ಯಂತ, ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಮಾರಕ ರಸ್ತೆ ಅಪಘಾತಗಳ ಸರಣಿಯ ನಡುವೆಯೇ ಈ ಘಟನೆ ನಡೆದಿದೆ.

ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ತಮಿಳುನಾಡು ಹೆದ್ದಾರಿಯಲ್ಲೂ ಚಿತ್ರದುರ್ಗ ಮಾದರಿ ದುರಂತ, ಸರ್ಕಾರಿ ಬಸ್‌ ಪಂಚರ್‌ ಆಗಿ 9 ಮಂದಿ ಸಾವು!
ಇಸ್ರೋ ಹೊಸ ಮೈಲುಗಲ್ಲು- 6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ